ಹೋರಾಟಗಾರ ಶಾರ್ಜೀಲ್ ಇಮಾಮ್ ಬಿಹಾರ ವಿಧಾನಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಅವರ ವಕೀಲ ಅಹ್ಮದ್ ಇಬ್ರಾಹಿಂ ತಿಳಿಸಿರುವುದಾಗಿ scroll.in ವರದಿ ಮಾಡಿದೆ.
ಶಾರ್ಜೀಲ್ ಕಿಶನ್‌ಗಂಜ್ ಜಿಲ್ಲೆಯ ಬಹದ್ದೂರ್‌ಗಂಜ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
2020ರಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು, ನಂತರ ಬಿಹಾರದ ಪ್ರಸ್ತುತ ಪ್ರತಿಪಕ್ಷ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸೇರಿರುವ ಮೊಹಮ್ಮದ್ ಅನ್ಜರ್ ನಯೀಮಿ ಬಹದ್ದೂರ್‌ಗಂಜ್ ಕ್ಷೇತ್ರದ ಈಗಿನ ಶಾಸಕರಾಗಿದ್ದಾರೆ.
ಬಿಹಾರದಲ್ಲಿ ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆಯಿದೆ.
ಶಾರ್ಜೀಲ್ ಇಮಾಮ್ ಐದು ವರ್ಷಕ್ಕೂ ಹೆಚ್ಚು ಸಮಯದಿಂದ ಜೈಲಿನಲ್ಲಿದ್ದಾರೆ. ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಪ್ರಸ್ತಾವಿತ ರಾಷ್ಟ್ರೀಯ ನಾಗರಿಕರ ನೋಂದಣಿಯ( ಎನ್‌ಆರ್‌ಸಿ) ವಿರುದ್ಧದ ಪ್ರತಿಭಟನೆಗಳ ಸಂದರ್ಭ, 2019ರ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ಮತ್ತು 2020ರ ಜನವರಿಯಲ್ಲಿ ಅಲಿಘರ್, ಅಸನ್ಸೋಲ್ ಮತ್ತು ಚಕ್‌ಬಂದ್‌ನಲ್ಲಿ ಮಾಡಿದ ಭಾಷಣಗಳಿಗೆ ಸಂಬಂಧಿಸಿದಂತೆ ಇಮಾನ್ ಅವರನ್ನು ಜನವರಿ 2020ರಲ್ಲಿ ಬಂಧಿಸಲಾಗಿದೆ.
ಪೊಲೀಸ್ ಆರೋಪಪಟ್ಟಿಯು, ಇಮಾಮ್ ಅವರ ಭಾಷಣಗಳು ಮುಸ್ಲಿಂ ಸಮುದಾಯದ ಜನರನ್ನು ಪ್ರಚೋದಿಸುವಂತಿದ್ದವು, ಇದು ಗಲಭೆಗಳಿಗೆ ಕಾರಣವಾಯಿತು ಎಂದು ಆರೋಪಿಸಿದೆ.
ಫೆಬ್ರವರಿ 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಬಲಿಗರು ಮತ್ತು ಅದನ್ನು ವಿರೋಧಿಸುವವರ ನಡುವೆ ಘರ್ಷಣೆಗಳು ನಡೆದಿತ್ತು. ಈ ಹಿಂಸಾಚಾರದಲ್ಲಿ 53 ಜನರು ಸಾವನ್ನಪ್ಪಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು.
ಈ ಹಿಂಸಾಚಾರವು ನರೇಂದ್ರ ಮೋದಿ ಸರ್ಕಾರವನ್ನು ಕೆಡವುವ ದೊಡ್ಡ ಪಿತೂರಿಯ ಭಾಗವಾಗಿ ಮಾಡಲಾಗಿದೆ. ವಿವಾದಾತ್ಮಕ ಪೌರತ್ವ ಕಾನೂನಿನ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸಿದವರೇ ಈ ಸಂಚು ರೂಪಿಸಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಇಮಾಮ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ. ದೇಶದ್ರೋಹ; ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸದ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು; ರಾಷ್ಟ್ರೀಯ ಏಕೀಕರಣಕ್ಕೆ ವಿರುದ್ದವಾದ ಪೂರ್ವಾಗ್ರಹ ಪೀಡಿತ ಹೇಳಿಕೆಗಳು ಮತ್ತು ವರ್ಗಗಳ ನಡುವೆ ದ್ವೇಷ ಅಥವಾ ಕೆಟ್ಟ ಭಾವನೆಯನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ವಿಭಾಗಗಳ ಅಡಿಯಲ್ಲಿಯೂ ಅವರ ವಿರುದ್ಧ ಆರೋಪ ಹೊರಿಸಲಾಗಿದೆ.
ಇಮಾಮ್‌ಗೆ ಕೆಲ ಪ್ರಕರಣಗಳಲ್ಲಿ ಜಾಮೀನು ದೊರೆತಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಜಾಮೀನು ಸಿಗದ ಕಾರಣ ಅವರು ಜೈಲಿನಲ್ಲೇ ಉಳಿಯುವಂತಾಗಿದೆ. ಹಲವು ವರ್ಷಗಳು ಕಳೆದರೂ ಅವರ ವಿರುದ್ದ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ಆರಂಭಗೊಂಡಿಲ್ಲ. ಪದೇ ಪದೇ ಜಾಮೀನು ಕೋರಿ ಅರ್ಜಿ ಸಲ್ಲಿಸಿದರೂ ಮುಂದೂಡಿಕೆಯಾಗುತ್ತಿದೆ.
ಕಾರ್ಗಿಲ್ ಯೋಧನ ಕುಟುಂಬಕ್ಕೆ ಭಾರತೀಯ ಪೌರತ್ವ ಸಾಬೀತುಪಡಿಸಲು ಒತ್ತಾಯ: ವರದಿ


