ಅಳುತ್ತಿದ್ದಾನೆ ದೇವರು ಕಣ್ಣಿಲ್ಲದ ಕಣ್ಣಲ್ಲಿ
ಸುಡುತ್ತಿದೆ ಹೂವು ಬೆಂಕಿಯಿಲ್ಲದ ಉರಿಯಲ್ಲಿ
ಕೆಮ್ಮಿ, ಸೀನಿದರೂ ಗೊತ್ತಾಗದ ರೋಗ
ಭಯ, ಅನುಮಾನ ಎಲ್ಲರ ಮುಖಪುಟದಲ್ಲಿ.
ನರಳುವುದಿಲ್ಲ, ಹಾಸಿಗೆ ಹಿಡಿದು ಹೊರಳುವುದಿಲ್ಲ
ಸಾವಿಗೆ ವೃದ್ದರೇ ಬೇಕಾಗಿಲ್ಲ, ಸತ್ತ ಮೇಲೆ ಸೇರುವುದಿಲ್ಲ
ಅಳುವವರು ಬರುವುದಿಲ್ಲ, ಕಾಸು ಕೊಟ್ಟರು ಸಿಗುವುದಿಲ್ಲ
ಅಬ್ಬಾ! ಎಂಥಾ ದಿನಗಳಿವು, ಹೆಣ ಹೊತ್ತವರು ಮುಸಲರು.
ನವಭಾರತದ ಅಸ್ಪೃಶ್ಯತೆ ಸಾಮಾಜಿಕ ಅಂತರ, ಮುಟ್ಟಬೇಡ
ಗಡ್ಡಧಾರಿಗಳು ಕಂಡರೆ ಮನೆಯೊಳಗೆ ಓಡು, ಬಂತು ರೋಗ
ಆರ್ಯಾವೃತ್ತದೊಳಗೆ ಜನಿಸಿದ ಸುದ್ದಿ ಎಲ್ಲರ ಕವಿಯೊಕ್ಕು
ಜಿಡ್ಡುಗಟ್ಟಿದ ಬುದ್ದಿದಾರಿದ್ರ್ಯ ಮೌಢ್ಯತೆಗೆ ಹಿಡಿದಿತ್ತು ಕನ್ನಡಿ.
ದೇಹದ ಮೇಲೆ ಗಾಯಗಳೇ ಇಲ್ಲ, ತುಪ್ಪ ಸುರಿಯುವುದಿಲ್ಲ
ನೋವು ನಿಲ್ಲುತ್ತಿಲ್ಲ, ಸ್ವಾತಂತ್ರ್ಯದ ಕನಸು ನನಸಾಗಲಿಲ್ಲ
ರೋಗದ ಮುಖದೊಳಗೆ ಕಂಡ ಮುಟ್ಟದಿರುವ ಕೆಂಡ
ಒಳಗೊಳಗೆ ನಗುತ ಯಶಮುಖದಲಿರುವ ಪಿಂಡಗಳು.
ಬೆವರ ನೆಲೆಯಲಿ ಮಹಲುಗಳೆದ್ದು ಕೂಗುತಿವೆ ಶ್ರಮಿಕಹಕ್ಕಿ
ಆಶ್ರಯ, ಅನ್ನ, ಉದ್ಯೋಗ, ಮಕ್ಕಳ ಶಿಕ್ಷಣಕೆ ದಾರಿಪಾರಿ
ಕುರಿಹಿಂಡು ನುಗ್ಗುತಿದೆ ಕತ್ತೆಕಿರುಬನ ಹಿಂದೆ-ಮುಂದೆ
ಹುಲು-ನೀರು ಗಿಡಗಂಟೆ ತೋರುವ ದೊರೆಯೇ ನೀನೆಂದು!
- ಕೆ.ಈ.ಸಿದ್ದಯ್ಯ
ಇದನ್ನೂ ಓದಿ: ತೀರ ಸೇರದ ಬದುಕು: ಮಿಸ್ರಿಯಾ.ಐ.ಪಜೀರ್ರವರ ಕವನ


