ಶನಿವಾರ ರಾತ್ರಿ ರಾಜ್ಯ ಸರ್ಕಾರ ಹೊರಡಿಸಿದ ವರ್ಗಾವಣೆ ಆದೇಶದಲ್ಲಿ, ನಾಲ್ಕು ದಿನಗಳಿಂದ ಸುದ್ದಿಯಲ್ಲಿದ್ದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಇಬ್ಬರನ್ನೂ ಬೇರೆ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ.
ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆ (ಮುಜರಾಯಿ) ಆಯುಕ್ತ ಹುದ್ದೆಗೆ, ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಆಡಳಿತ ವಿಭಾಗದ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಡಾ. ಬಗಾದಿ ಗೌತಮ್ ಈಗ ರೋಹಿಣಿ ಅವರ ವರ್ಗಾವಣೆಯಿಂದ ತೆರವಾದ ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ನೇಮಕಗೊಂಡಿದ್ದಾರೆ.
ಶಿಲ್ಪಾ ನಾಗ್ ವರ್ಗಾವಣೆಯಿಂದ ತೆರವಾದ ಮೈಸೂರು ಮಹಾನಗರ ಪಾಲಿಕೆ ಹುದ್ದೆಗೆ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ವ್ಯವಸ್ಥಾಪಕ ಲಕ್ಷ್ಮಿಕಾಂತರೆಡ್ಡಿ ಅವರನ್ನು ನೇಮಿಸಲಾಗಿದೆ.
ಮೈಸೂರು ಮಹಾನಗರ ಪಾಲಿಕೆಯ ಸಿಎಸ್‍ಆರ್ (ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ) ನಿಧಿಯ ಕುರಿತಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಶಿಲ್ಪಾ ನಾಗ್ ಮಾಧ್ಯಮಗಳ ಎದುರು ಅಳುವ ಮೂಲಕ ರಾಜೀನಾಮೆಗೆ ಮುಂದಾಗಿದ್ದರು. ಅವರು ನೀಡಿದ ರಾಜಿನಾಮೆ ಈಗ ಅಂಗೀಕಾರವಾಗಿಲ್ಲ.
ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರೋಹಿಣಿ ಮತ್ತು ಶಿಲ್ಪಾ ನಾಗ್ ಅವರ ವಿಷಯ ಭಾರಿ ಚರ್ಚೆಗೆ ಕಾರಣವಾಗಿತ್ತು. ಜಾಲತಾಣಗಳಲ್ಲಿ ಕೆಲವರು ರೋಹಿಣಿ ಪರ ಮತ್ತು ಕೆಲವರು ಶಿಲ್ಪಾ ಅವರ ಪರ ಅಭಿಯಾನ ನಡೆಸಿದ್ದರು.
ಈಗ ಸರ್ಕಾರ ಇಬ್ಬರೂ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಈ ಹಿಂದೆಯೂ ರೋಹಿಣಿ ಸಿಂಧೂರಿ ಅವರನ್ನು ಮುಜರಾಯಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಈಗ ಮರಳಿ ಅವರನ್ನು ಅದೇ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ರಾಜೇಂದ್ರ ಚೋಳನ್ ಅವರನ್ನು ಬೆಸ್ಕಾಂ ನಿರ್ದೇಶಕ ಮತ್ತು ಬಿಬಿಎಂಪಿಯ ಆರೋಗ್ಯ ಮತ್ತು ಐಟಿ ವಿಭಾಗದ ವಿಶೇಷ ಆಯುಕ್ತ ಹುದ್ದೆಗೆ ಹಾಗೂ ದಯಾನಂದ ಕೆ.ಎ ಅವರನ್ನು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ; ಸಂಸದ ಪ್ರತಾಪ್ ಸಿಂಹ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ: ಡಿಸಿ ರೋಹಿಣಿ ಸಿಂಧೂರಿ


