ಎಂಟು ವರ್ಷದ ದಲಿತ ಬಾಲಕನ ಮೇಲೆ ಹಲ್ಲೆ ನಡೆಸಿ, ಆತನ ಪ್ಯಾಂಟ್‌ನಲ್ಲಿ ಚೇಳು ಬಿಟ್ಟಿದ್ದಕ್ಕಾಗಿ ಹಿಮಾಚಲ ಪ್ರದೇಶದ ಶಿಮ್ಲಾದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಸೇರಿದಂತೆ ಮೂವರು ಶಿಕ್ಷಕರ ವಿರುದ್ಧ ಭಾನುವಾರ ಪ್ರಕರಣ ದಾಖಲಿಸಲಾಗಿದೆ ಎಂದು ‘ಸ್ಕ್ರೋಲ್.ಇನ್’ ವರದಿ ಮಾಡಿದೆ.
ರೋಹ್ರು ಉಪವಿಭಾಗದ ಖಡ್ಡಪಾನಿ ಪ್ರದೇಶದ ಸರ್ಕಾರಿ ಪ್ರಾಥಮಿಕ ಶಾಲೆಯ 1 ನೇ ತರಗತಿಯ ವಿದ್ಯಾರ್ಥಿಯ ಮೇಲೆ ಮುಖ್ಯೋಪಾಧ್ಯಾಯ ದೇವೇಂದ್ರ, ಶಿಕ್ಷಕರಾದ ಬಾಬು ರಾಮ್ ಮತ್ತು ಕೃತಿಕಾ ಠಾಕೂರ್ ಸುಮಾರು ಒಂದು ವರ್ಷದಿಂದ ಆಗಾಗ್ಗೆ ದೈಹಿಕ ಹಲ್ಲೆ ನಡೆಸುತ್ತಿದ್ದರು ಎಂದು ಬಾಲಕನ ತಂದೆ ಸಲ್ಲಿಸಿದ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಪದೇ ಪದೇ ಹೊಡೆಯುವುದರಿಂದ ಮಗುವಿನ ಕಿವಿಯಲ್ಲಿ ರಕ್ತಸ್ರಾವವಾಗುತ್ತಿತ್ತು, ಕಿವಿಯೋಲೆಗೆ ಹಾನಿಯಾಗಿತ್ತು ಎಂದು ತಂದೆ ಆರೋಪಿಸಿದ್ದಾರೆ.
ಶಿಕ್ಷಕರು ಒಮ್ಮೆ ಬಾಲಕನನ್ನು ಶಾಲೆಯ ಶೌಚಾಲಯಕ್ಕೆ ಕರೆದೊಯ್ದು ಪ್ಯಾಂಟ್‌ನಲ್ಲಿ ಚೇಳು ಬಿಟ್ಟಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ತಪ್ಪು ಬಂಧನ, ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು, ಕ್ರಿಮಿನಲ್ ಬೆದರಿಕೆ ಮತ್ತು ಸಾಮಾನ್ಯ ಉದ್ದೇಶವನ್ನು ಮುಂದುವರಿಸುವ ಕ್ರಿಮಿನಲ್ ಕೃತ್ಯಗಳಿಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಿಕ್ಷಕರ ವಿರುದ್ಧ ಬಾಲ ನ್ಯಾಯ ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿಯೂ ಆರೋಪ ಹೊರಿಸಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.
ಶಿಕ್ಷಕರು ತಮ್ಮ ಮಗನನ್ನು ಬೆದರಿಸಿ, ಹಲ್ಲೆ ಬಗ್ಗೆ ಮಾತನಾಡಿದರೆ ಬಂಧಿಸುವುದಾಗಿ ಎಚ್ಚರಿಸಿದ್ದಾರೆ ಎಂದು ತಂದೆ ಆರೋಪಿಸಿದ್ದಾರೆ. ಅವರು ನನ್ನ ಮಗನನನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಂದೆ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶಾಲೆಯಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಅವರು ಆರೋಪಿಸಿದ್ದಾರೆ, ನೇಪಾಳಿ ಮತ್ತು ದಲಿತ ವಿದ್ಯಾರ್ಥಿಗಳನ್ನು ಊಟದ ಸಮಯದಲ್ಲಿ ಮೇಲ್ಜಾತಿಯ ವಿದ್ಯಾರ್ಥಿಗಳಿಂದ ಪ್ರತ್ಯೇಕವಾಗಿ ಕೂರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಗುಜರಾತ್ ಮರ್ಯಾದೆಗೇಡು ಹತ್ಯೆ: ಅಂತರ್ಜಾತಿ ವಿವಾಹವಾಗಿದ್ದ ದಲಿತ ಯುವಕನ ತಂದೆ ಕೊಲೆ


