ಮಹಾರಾಷ್ಟ್ರದಲ್ಲಿ ಆಡಳಿತರೂಢ ಶಿವಸೇನೆ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ವಾಕ್ಸಮರ ಮುಂದುವರೆದಿದೆ. ಅಗತ್ಯಬಿದ್ದರೆ ಶಿವಸೇನಾ ಭವನ ಕೆಡವುತ್ತೇವೆ ಎಂಬ ಬಿಜೆಪಿ ಶಾಸಕನ ಹೇಳಿಕೆ ಹೊಸ ವಿವಾದವೆಬ್ಬಿಸಿದ್ದು ಭಾರೀ ಕೋಲಾಹಲಕ್ಕೆ ಕಾರಣವಾಗಿದೆ.
ಸೆಂಟ್ರಲ್ ಮುಂಬೈನಲ್ಲಿರುವ ಶಿವಸೇನೆ ಪಕ್ಷದ ಮುಖ್ಯ ಕಚೇರಿಯನ್ನು ಅಗತ್ಯಬಿದ್ದರೆ ಕೆಡವುತ್ತೇವೆ ಎಂದು ಬಿಜೆಪಿ ಶಾಸಕ ಪ್ರಸಾದ್ ಲಾಡ್ ಹೇಳಿಕೆ ನೀಡಿದ್ದರು. ಭಾರೀ ವಿರೋಧ ವ್ಯಕ್ತವಾದ ನಂತರ ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡು ವಿಷಾಧ ವ್ಯಕ್ತಪಡಿಸಿದ್ದರು. ಮಾಧ್ಯಮಗಳು ತನ್ನ ಹೇಳಿಕೆಯನ್ನು ತಿರುಚಿವೆ ಎಂದು ಸ್ಪಷ್ಟೀಕರಣ ನೀಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ “ಬೆದರಿಕೆಗಳನ್ನು ಸಹಿಸಲಾಗುವುದಿಲ್ಲ. ಅದಕ್ಕೆ ತಕ್ಕುದಾದ ರೀತಿಯಲ್ಲಿಯೇ ಪ್ರತಿಕ್ರಿಯೆ ನೀಡುತ್ತೇವೆ. ಕಪಾಳಕ್ಕೆ ಹೊಡೆದರೆ ಭಯಬೀಳುವುದಿಲ್ಲ. ಬದಲಿಗೆ ಅವರು ತಿರುಗಿ ಏಳಲಾರದ ರೀತಿ ಹೊಡೆಯುತ್ತೇವೆ” ಎಂದು ದಬಾಂಗ್ ಚಿತ್ರದ ಸಂಭಾಷಣೆಯನ್ನು ಉಲ್ಲೇಖಿಸಿದ್ದಾರೆ.
ಶಿವಸೇನಾ ಭವನದ ಮೇಲೆ ದಾಳಿ ಮಾಡಲು ಬಿಜೆಪಿ ಎಂದಿಗೂ ಯೋಚಿಸುವುದಿಲ್ಲ. ಈ ರೀತಿ ಹೇಳಿಕೆ ನೀಡುವ ಜನರು ಬಿಜೆಪಿಯವರಲ್ಲ. ಅವರು ಹೊರಗಿನವರು, ರಫ್ತು-ಆಮದು ಆದವರು. ಈ ಜನರು ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಕೆಳಗಿಳಿಸುತ್ತಾರೆ. ನಾವು ಈ ಕ್ಷಮೆಯನ್ನು ಸ್ವೀಕರಿಸುವುದಿಲ್ಲ ಎಂದು ಶಿವಸೇನಾ ವಕ್ತಾರ ಮತ್ತು ಸಂಸದ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ’ಬೇಹುಗಾರಿಕೆಯ ಜೇಮ್ಸ್ ಬಾಂಡ್’ ಎಂದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ


