ನಾಟಕೀಯ ಬೆಳವಣಿಗೆಗಳಲ್ಲಿ ಇತ್ತೀಚೆಗೆ ತಾನೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದಲ್ಲದೇ ಅವರ ಬೆಂಗಾವಲು ತಡೆದ ಘಟನೆ ದಾಖಲಾಗಿದೆ.
ಅವರು ನಿನ್ನೆ ಭೋಪಾಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಕಮಲಾ ಪಾರ್ಕ್ ಪ್ರದೇಶದಲ್ಲಿ ಅವರ ಬೆಂಗಾವಲು ತಡೆಯಲು ಯತ್ನಿಸಲಾಗಿದ್ದು, ಧಿಕ್ಕಾರದ ಘೋಷಣೆಗಳನ್ನು ಕೂಗಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕನಿಷ್ಠ 30 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ನಡುವೆ ತಮ್ಮ ಪಕ್ಷದ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕಪ್ಪು ಧ್ವಜ ತೋರಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಒತ್ತಾಯಿಸಿದ್ದಾರೆ.
“ರಾಜ್ಯದಲ್ಲಿ ಯಾವ ರೀತಿಯ ಪರಿಸ್ಥಿತಿ ಇದೆ ಎಂದು ನೀವು ಸರಳವಾಗಿ ಊಹಿಸಬಹುದು. ಬಹುಮತವನ್ನು ಕಳೆದುಕೊಂಡಿರುವ ಸರ್ಕಾರದ ಎಂಜಿನಿಯರಿಂಗ್ ದಾಳಿ ಇದಾಗಿದೆ. ನಾನು ಈ ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ ಮತ್ತು ಸಿಂಧಿಯಾ ಮೇಲಿನ ಈ ದಾಳಿಗೆ ಕಾರಣರಾದವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮತ್ತು ಆಡಳಿತಕ್ಕೆ ಮನವಿ ಮಾಡುತ್ತೇನೆ” ಎಂದು ಚೌಹಾಣ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದ ಅವರು “ಮಾರಣಾಂತಿಕ ದಾಳಿಯಲ್ಲಿ” ಸಿಂಧಿಯಾ ಅವರ ವಾಹನವನ್ನು ನಿಲ್ಲಿಸಲಾಗಿದೆ ಮತ್ತು ಕಲ್ಲುಗಳನ್ನು ಎಸೆಯಲಾಗಿದೆ ಎಂದು ಚೌಹಾನ್ ದೂರಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿ ಪಕ್ಷದ ಭೋಪಾಲ್ ಜಿಲ್ಲಾ ಘಟಕದ ಅಧ್ಯಕ್ಷ ವಿಕಾಸ್ ವಿರಾನಿ ನೇತೃತ್ವದ ಬಿಜೆಪಿ ಕಾರ್ಯಕರ್ತರು ಶೈಮಾ ಹಿಲ್ಸ್ ಪೊಲೀಸ್ ಠಾಣೆ ಹೊರಗೆ ಪ್ರತಿಭಟನೆ ನಡೆಸಿದರು.


