ಪ್ರವಾದಿ ನಿಂದನೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸರ್ಕಾರ ಮತ್ತು ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ. ನಿಮ್ಮ ವಿಫಲತೆಯನ್ನು ಮುಚ್ಚಲು ಕಾಂಗ್ರೆಸ್ ಪಕ್ಷದ ಮೇಲೆ ಏಕೆ ಗೂಬೆ ಕೂರಿಸುತ್ತೀರಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಗೆ ಬಿ. ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದು ಪ್ರಶ್ನೆ ಮಾಡಿದ್ದಾರೆ.
ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರಿಗೆ 13 ಅಂಶಗಳನ್ನೊಳಗೊಂಡ ಪತ್ರವನ್ನು ಬರೆದಿರುವ ಸಿದ್ದರಾಮಯ್ಯ, “ಬೆಂಗಳೂರಿನ ಕೆಜೆ ಹಳ್ಳಿ ಮತ್ತು ಡಿಜಿ ಹಳ್ಳಿ ವ್ಯಾಪ್ತಿಯಲ್ಲಿ ಆಗಸ್ಟ್ 11 ರಂದು ನಡೆದ ಘಟನೆಗಳಿಗೆ ಸರ್ಕಾರದ ವೈಫಲ್ಯವೇ ನೇರ ಕಾರಣ. ಈ ಗಲಭೆಯಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಸರ್ಕಾರ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲಾಗಿದೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುತ್ತಿದೆ” ಎಂದು ಪತ್ರದಲ್ಲಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

“ಡಿಜೆ ಹಳ್ಳಿ ಘಟನೆಯ ಹೊಣೆಯನ್ನು ನೈಜವಾಗಿ ಸರ್ಕಾರವೇ ಹೊರಬೇಕು. ಇಂತಹ ವಿಚಾರವನ್ನೂ ನಿಭಾಯಿಸೋಕೆ ಆಗದಿದ್ದರೆ ಸರ್ಕಾರ ಯಾಕಿರಬೇಕು? ಪೈಗಂಬರ್ ಮುಹಮ್ಮದರ ಕುರಿತು ಅವಹೇಳನಕಾರಿ ಫೋಸ್ಟ್ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಂತಹ ಪೋಸ್ಟ್ ಹಾಕುತ್ತಿದ್ದಂತೆ ಪೊಲೀಸರು ಯಾಕೆ ಕ್ರಮತೆಗೆದುಕೊಳ್ಳಲಿಲ್ಲ? ತಕ್ಷಣ ಕ್ರಮ ತೆಗೆದುಕೊಂಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ನಾವು ದೀಪ ಹಚ್ಚುವವರ ಪರ, ಬೆಂಕಿ ಹಚ್ಚುವವರ ಪರ ಅಲ್ಲ: ಸಿದ್ದರಾಮಯ್ಯ
ಪ್ರವಾದಿ ಬಗೆಗೆ ಕೆಟ್ಟ ಚಿತ್ರ ರಚಿಸಿ ಕೊಟ್ಟವರು ಯಾರು? ಪ್ರವಾದಿ ಪೈಗಂಬರ್ ಚಿತ್ರ ಕಳಿಸಿದವರು ಯಾರು? ಇದರ ಹಿಂದೆ ದೊಡ್ಡ ಪಿತೂರಿಯಿದೆ. ಘಟನೆ ನಡೆದಿರುವುದು ಸೂಕ್ಷ್ಮ ಪ್ರದೇಶದಲ್ಲಿ. ಪೊಲೀಸ್ ಠಾಣೆಯನ್ನೇ ರಕ್ಷಿಸಿಕೊಳ್ಳಲಾಗದವರು ನೀವು? ರಾಜ್ಯದ ಜನರನ್ನ ಹೇಗೆ ರಕ್ಷಿಸುತ್ತೀರ? ಗೃಹ ಸಚಿವರನ್ನ ಒಬ್ಬ ಕೋಮುವಾದಿ ಭೇಟಿಯಾಗಿದ್ದ. ಸಚಿವರು ಅವನ ಮೇಲಿನ ಕೇಸ್ ವಾಪಸ್ ಪಡೆಯುತ್ತೇವೆಂದಿದ್ದು ಏಕೆ? ಸಮಾಜದ ಸ್ವಾಸ್ಥ್ಯವನ್ನ ನಿಮ್ಮ ಸರ್ಕಾರ ಕಾಪಾಡಲು ಸಾಧ್ಯವೇ? ಎಂದು ಸಿದ್ದರಾಮಯ್ಯ ಹಲವಾರು ಮಹತ್ವದ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಗೆ ಕಳುಹಿಸಿರುವ ಪತ್ರದ ಪೂರ್ಣಪಾಠ ಇಲ್ಲಿದೆ
ಸಂ:ವಿಪನಾ/ಪ/ /2020 ದಿನಾಂಕ: 18-08-2020
ಮಾನ್ಯ ಶ್ರೀ ಯಡಿಯೂರಪ್ಪ ರವರೆ,
ಬೆಂಗಳೂರಿನ ಕೆ.ಜೆ.ಹಳ್ಳಿ ಮತ್ತು ಡಿ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಆಗಸ್ಟ್ 11 ರಂದು ನಡೆದ ಘಟನೆಗಳಿಗೆ ಸರ್ಕಾರದ ವೈಫಲ್ಯವೇ ನೇರ ಕಾರಣ. ಗುಪ್ತಚರ ಇಲಾಖೆಯ ವೈಫಲ್ಯವೂ ಇದರಲ್ಲಿ ಎದ್ದು ಕಾಣುತ್ತಿದೆ. ಸರ್ಕಾರ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದು ಬಿಟ್ಟು ವಿರೋಧ ಪಕ್ಷವಾದ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ.
- ಡಿ.ಜೆ.ಹಳ್ಳಿಯ ಘಟನೆಯ ನೈತಿಕ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು. ಆಡಳಿತ ಕೇಂದ್ರದ ಕೈಯಳತೆ ದೂರದಲ್ಲಿರುವ ಈ ಪ್ರದೇಶದಲ್ಲಾದ ಅನಾಹುತವನ್ನು ನಿಭಾಯಿಸಲು ಆಗಲಿಲ್ಲವೆಂದರೆ ಸರ್ಕಾರ ಯಾಕಿರಬೇಕು. ಪ್ರವಾದಿಯವರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರ ಕುರಿತು ದೂರು ಬಂದ ತಕ್ಷಣ ಪೊಲೀಸರು ಕ್ರಮ ಕೈಗೊಂಡಿದ್ದರೆ ಈ ಅನಾಹುತಕ್ಕೆ ಅವಕಾಶ ಇರುತ್ತಿರಲಿಲ್ಲ.
-
ಪ್ರವಾದಿಯವರ ಬಗೆಗೆ ಕೆಟ್ಟ ಚಿತ್ರ ರಚಿಸಿ ನವೀನ್ ಎಂಬ ಹುಡುಗನಿಗೆ ಕೊಟ್ಟವರಾರು? ಆ ಚಿತ್ರಗಳು ಸೋಷಿಯಲ್ ಮೀಡಿಯಾಗಳಿಗೆ ಬಿತ್ತರಿಸಲು ಕಾರಣರಾದವರು ಯಾರ್ಯಾರು ? ಇದರ ಹಿಂದೆ ದೊಡ್ಡ ಪಿತೂರಿ ಇದ್ದಂತಿದೆ. ಈ ಕುರಿತು ಸಮರ್ಪಕವಾದ ತನಿಖೆಯಾಗಬೇಕು.
- ಪ್ರಾಮಾಣಿಕರು, ದಕ್ಷರು ಅನ್ನಿಸಿಕೊಂಡ ಹಲವು ಪೊಲೀಸ್ ಅಧಿಕಾರಿಗಳನ್ನು ‘ನಾನ್ ಎಕ್ಸಿಕ್ಯೂಟಿವ್’ ಹುದ್ದೆಗಳಲ್ಲಿ ಕೂರಿಸಿದ್ದೀರಿ. ಭ್ರಷ್ಟರು, ಅಸೂಕ್ಷ್ಮರು ಆದ ಹಲವರಿಗೆ ಆಯಕಟ್ಟಿನ ಹುದ್ದೆಗಳನ್ನು ನೀಡಲಾಗಿದೆ. ಹೀಗಾಗಿ ಸೂಕ್ಮವಾದ ಇಂಥ ಘಟನೆಗಳನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.
- ಘಟನೆ ನಡೆದಿರುವುದು ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ (ಈ ಹಿಂದೆಯೂ ಈ ಪ್ರದೇಶಗಳಲ್ಲಿ ಸಮಸ್ಯೆಗಳಾಗಿದ್ದವು) ಮತ್ತು ಘಟನೆಗೆ ಕಾರಣವಾದ ವಿಷಯವೂ ಅತ್ಯಂತ ಸೂಕ್ಷ್ಮವಾಗಿತ್ತು. ಇದನ್ನು ನಿರ್ಲಕ್ಷಿಸಲು ಕಾರಣವೇನು?
- ಶಾಸಕರ ಮನೆಯನ್ನು, ಪೊಲೀಸ್ ಠಾಣೆಯನ್ನು ರಕ್ಷಿಸಿಕೊಳ್ಳಲಾಗದ ಸರ್ಕಾರದಿಂದ ರಾಜ್ಯದ ಜನರಿಗೆ ಯಾವ ರಕ್ಷಣೆಯನ್ನು ನೀಡಲು ಸಾಧ್ಯ? ಇದರ ಜವಾಬ್ದಾರಿಯನ್ನು ಸರ್ಕಾರ ಹೊರುವುದನ್ನು, ಬಿಟ್ಟು ತಲೆಕೆಟ್ಟ ಹುಡುಗರ ಮೇಲೆ ಹೊರಿಸಿ ತಮ್ಮ ಸರ್ಕಾರ ಅತ್ಯಂತ ಸಮರ್ಥವಾಗಿದೆ ಎಂದು ಹೇಳುವುದು ಅತ್ಯಂತ ದುಷ್ಟ ಮತ್ತು ನಿರ್ಲಜ್ಜ ರಾಜಕಾರಣದ ಪರಮಾವಧಿಯ ನಿಲುವು.
ಇದನ್ನೂ ಓದಿ: ಫೇಸ್‌ಬುಕ್ ಪ್ರಚೋದನೆ ಮತ್ತು ಗಲಭೆ ಎರಡೂ ಖಂಡನೀಯ; ಸಂಯಮದಿಂದ ವರ್ತಿಸಿ: ಸಿದ್ದರಾಮಯ್ಯ ಮನವಿ
- ಗೃಹ ಸಚಿವರನ್ನು ಭೇಟಿಯಾದ ಕರಾವಳಿಯ ಕೋಮುವಾದಿಯೊಬ್ಬನಿಗೆ, ಸಚಿವರು ನಿಮ್ಮ ಮೇಲಿನ ಎಲ್ಲಾ ಪ್ರಕರಣ ವಾಪಸ್ಸು ತೆಗೆದುಕೊಳ್ಳುತ್ತೇವೆಂದು ಹೇಳುವ ಮಾತುಕತೆಯೊಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದು ನಿಜವೇ ಆಗಿದ್ದರೆ ಸಮಾಜದ ಸ್ವಾಸ್ಥ್ಯವನ್ನು ನಿಮ್ಮ ಸರ್ಕಾರ ಕಾಪಾಡಲು ಸಾಧ್ಯವೆ?

- ನೀವು ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಜನರನ್ನು ಕಮ್ಯುನಲ್ ಗೂಂಡಾಗಳೆಂದು ಗುರುತಿಸಿದ್ದೀರಿ? ಎಷ್ಟು ಜನರ ಮೇಲೆ ಪ್ರಕರಣಗಳನ್ನು ದಾಖಲಿಸಿ ಗಡಿಪಾರು ಮಾಡಿದ್ದೀರಿ? ಈ ಕಮ್ಯುನಲ್ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲಾ ಸಂಘಟನೆಗಳನ್ನು ನಿಷೇಧಿಸುವ ತಾಕತ್ತನ್ನು ನೀವು ಪ್ರದರ್ಶಿಸಲು ಸಾಧ್ಯವೆ? ನಿಮ್ಮ ಕಡತದಲ್ಲಿನ ದಾಖಲೆಗಳ ಪ್ರಕಾರ ನಿಮ್ಮದೇ ಪಕ್ಷದ ಅಂಗ ಸಂಘಟನೆಗಳು ಕಮ್ಯುನಲ್ ಚಟುವಟಿಕೆಗಳಲ್ಲಿ ತೊಡಗಿ ಅಸಂಖ್ಯಾತ ಪ್ರಕರಣಗಳಿವೆ. ಈ ಎಲ್ಲರ ಮೇಲೆಯೂ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಿ ನಾವು ಈ ವಿಷಯದಲ್ಲಿ ನಿಮ್ಮ ಜೊತೆ ಇರುತ್ತೇವೆ.
- ಹಿಂದೆ ಮುಂದೆ ನೋಡದೆ ಜನರನ್ನು ಧರ್ಮದ ಆಧಾರದ ಮೇಲೆ ದೊಂಬಿಯೆಬ್ಬಿಸಲು ಪ್ರಯತ್ನಿಸಿದ ಶೃಂಗೇರಿಯ ಜೀವರಾಜ್ ಅವರ ಮೇಲೂ ಪ್ರಕರಣ ದಾಖಲಿಸಿ ಕ್ರಮವಹಿಸಿ. ಶೃಂಗೇರಿಯಲ್ಲಿ ಆರೋಪಿ ಪತ್ತೆಯಾಗುವ ಮೊದಲೇ ಅಪರಾಧಿಗಳು ಯಾರು ಎಂದು ಬಿ.ಜೆ.ಪಿ. ತೀರ್ಮಾನಿಸಿತ್ತು. ಬಡ ತರಕಾರಿ ವ್ಯಾಪಾರಿಗಳು/ಬೀದಿ ಬದಿಯ ವ್ಯಾಪಾರಿಗಳೇ ಈ ಕೃತ್ಯ ಮಾಡಿರುವುದೆಂದು ಅವರ ತಲೆಗೆ ಅಪರಾಧವನ್ನು ಕಟ್ಟಲಾಗಿತ್ತು. ಮಸೀದಿಯಲ್ಲಿ ಸಿ.ಸಿ.ಟಿವಿಗಳು ಇರದಿದ್ದರೆ ಬಜರಂಗದಳದ ಮಾಜಿ ಕಾರ್ಯಕರ್ತನ ಬದಲಿಗೆ ಇನ್ಯಾರೋ ಇರುತ್ತಿದ್ದರು.
- ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಮಾಡಿದವರಿಂದ ನಷ್ಟ ವಸೂಲು ಮಾಡುವುದು ಒಳ್ಳೆಯ ವಿಚಾರವೇ. ಆದರೆ ಇದು ಒಂದು ಗುಂಪಿಗೆ, ಒಂದು ಘಟನೆಗೆ ಮಾತ್ರ ಸಂಬಂಧಿಸಿರಬಾರದು. ಹಾಗೆ ಮಾಡುವುದಾದರೆ ಪೂರ್ವಾನ್ವಯಗೊಳಿಸಬೇಕು. ಕಳೆದ ಮೂವತ್ತು ವರ್ಷಗಳಿಂದೀಚೆಗೆ ಕಮ್ಯುನಲ್ ಮತ್ತಿತರ ಗಲಭೆಗಳಲ್ಲಿ ಮಾಡಿರುವ ಹಾನಿಯ ನಷ್ಟವನ್ನು ಸಂಬಂಧಿಸಿದವರಿಂದ ವಸೂಲಿ ಮಾಡಬೇಕೆಂದು ಆಗ್ರಹಿಸುತ್ತೇನೆ.
- ಆಡಳಿತ ಪಕ್ಷವೊಂದು ಸತ್ಯ ಶೋಧನಾ ತಂಡ ರಚಿಸುವುದು ಪ್ರಜಾಪ್ರಭುತ್ವದ ಭೀಕರ ಅಪಹಾಸ್ಯದಂತೆ ಕಾಣುತ್ತಿದೆ. ಆಡಳಿತ ಪಕ್ಷವೊಂದು ಸತ್ಯ ಶೋಧನೆ ಮಾಡುತ್ತೇನೆಂದು ಹೊರಟರೆ ಅದು ತನಿಖೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
- ನಿಮ್ಮ ಸರ್ಕಾರಕ್ಕೆ ಪೊಲೀಸರ ಮೇಲೆ ನಂಬಿಕೆ ಇಲ್ಲವೆ? ನಿಮ್ಮ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲದಿದ್ದರೆ ಅವರಿಗೆ ಜನರ ತೆರಿಗೆಯ ಹಣದಲ್ಲಿ ಸಂಬಳ, ಸಾರಿಗೆ ಮುಂತಾದ ಸವಲತ್ತುಗಳನ್ನು ಯಾಕೆ ಕೊಡತ್ತಿದ್ದೀರಿ? ಮುಲಾಜಿಲ್ಲದೆ ಅವರನ್ನು ಮನೆಗೆ ಕಳಿಸಿ.
- ಘಟನೆಯಲ್ಲಿ ಎಸ್ಡಿಪಿಐ ಪಾತ್ರ ಇದೆ ಎಂದು ಹೇಳಲಾಗುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಯಾವ ಸಂಘಟನೆಯೇ ತಪ್ಪು ಮಾಡಿದ್ದರೂ ಸಮರ್ಪಕವಾದ ತನಿಖೆ ನಡೆಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ.
- ಈ ಘಟನೆಯ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಗಳಿಂದಲೇ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ.
ಓದಿ: ಬಿಎಸ್‌ವೈ ಪದಚ್ಯುತಿಗೆ RSS ನಾಯಕರು ಪ್ರಯತ್ನಿಸುತ್ತಿದ್ದಾರೆ: ಸಿದ್ದರಾಮಯ್ಯ


