ಡಿಸೆಂಬರ್ 2ರ ಶುಕ್ರವಾರದಂದು ಕೆಂಗೇರಿ ಮತ್ತು ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಥಳೀಯರು ಚಿರತೆಗಳನ್ನು ಗುರುತಿಸಿದ ನಂತರ ಮುಂಜಾಗೃತೆ ಕ್ರಮಗಳನ್ನು ಸೂಚಿಸಲಾಗಿದೆ.
ಇತ್ತೀಚೆಗಷ್ಟೇ ಕೆಂಗೇರಿ, ಕುಂಬಳಗೋಡು, ದೇವನಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಾಲ್ಕು ಚಿರತೆಗಳು ಕಾಣಿಸಿಕೊಂಡಿದ್ದವು. ಬೆಂಗಳೂರು ಹೊರವಲಯದ ಕನಕಪುರ ಬಳಿಯ ಕೋಡಿಪಾಳ್ಯದಲ್ಲಿ ಚಿರತೆ ದಾಳಿಗೆ ತುತ್ತಾದ ಜಿಂಕೆಯ ಕಳೇಬರವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದೇವನಹಳ್ಳಿಯ ಚಿಕ್ಕಜಾಲದ ಬಳಿ ಐಟಿಸಿ ಕಂಪನಿ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕರ್ನಾಟಕ ಅರಣ್ಯ ಇಲಾಖೆಯ ಐವರು ಅಧಿಕಾರಿಗಳ ತಂಡವು ಈ ಪ್ರದೇಶದಲ್ಲಿ ಹುಡುಕಾಟ ನಡೆಸಿದೆ. ಆದರೆ ಚಿರತೆ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.
ಬೆಂಗಳೂರಿಗೆ ಸಮೀಪದಲ್ಲಿರುವ ತುರಹಳ್ಳಿ ಮೀಸಲು ಅರಣ್ಯದಿಂದ ಚಿರತೆಗಳು ಜನವಸತಿ ಪ್ರದೇಶಗಳಿಗೆ ಕಾಲಿಡುತ್ತಿರುವ ಆತಂಕ ಎದುರಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಈ ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಿಸಿದ್ದು, ಬೆಳಗಿನ ವಾಕಿಂಗ್ ಮಾಡುವವರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ಭಯ ಆವರಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ತರಬನಹಳ್ಳಿಯಲ್ಲಿರುವ ಖಾಸಗಿ ಕಾರ್ಖಾನೆಯೊಂದರ ಆವರಣದಲ್ಲಿ ಬೀಡು ಬಿಟ್ಟಿರುವ ಚಿರತೆಗಳನ್ನು ಹಿಡಿಯಲು ಬೋನು ಇರಿಸಲಾಗಿದೆ.
Video: Residents in parts of north and south #Bengaluru went into a tizzy on Thursday after four leopards were sighted prowling along main roads. pic.twitter.com/VdzKuIbY5c
— TOI Bengaluru (@TOIBengaluru) December 2, 2022
ಕಳೆದೆರಡು ದಿನಗಳಿಂದ ಹಲವಾರು ಬಾರಿ ಚಿರತೆ ಕಾಣಿಸಿಕೊಂಡಿದೆ. ಆದಾಗ್ಯೂ, ಈ ಪ್ರದೇಶದಲ್ಲಿ ಚಿರತೆಗಳು ನೈಸರ್ಗಿಕವಾಗಿ ಕಂಡುಬರುತ್ತವೆ. ಹೀಗಾಗಿ ಭಯಪಡುವ ಅಗತ್ಯವಿಲ್ಲ ಎಂದು ವನ್ಯಜೀವಿ ತಜ್ಞರು ಹೇಳುತ್ತಿದ್ದಾರೆ.
ರಾತ್ರಿ ವೇಳೆ ಒಂಟಿಯಾಗಿ ಹೊರಗೆ ಹೋಗದಂತೆ ಅಧಿಕಾರಿಗಳು ಮತ್ತು ವನ್ಯಜೀವಿ ತಜ್ಞರು ಜನರಿಗೆ ಸಲಹೆ ನೀಡಿದ್ದಾರೆ. ಮೀಸಲು ಅರಣ್ಯದಿಂದ ದೂರವಿರಲು, ಮೊಬೈಲ್‌ನಲ್ಲಿ ಹಾಡುಗಳನ್ನು ಪ್ಲೇ ಮಾಡದಿರಲು ಮತ್ತು ರಾತ್ರಿ ವೇಳೆ ಪ್ರಯಾಣಿಸುವಾಗ ಜೋರಾಗಿ ಮಾತನಾಡಿಕೊಂಡು ತೆರಳಲು ಸೂಚಿಸಲಾಗಿದೆ.
ಚಿರತೆ ದಾಳಿಗೆ ಯುವತಿ ಬಲಿ
ಚಿರತೆ ದಾಳಿಗೆ ಒಳಗಾಗಿದ್ದ ಮೈಸೂರು ಜಿಲ್ಲೆಯ ಟಿ.ನರಸೀಪುರ ಸಮೀಪದ ಸಾಕೆಬ್ಬೆಹುಂಡಿ ನಿವಾಸಿ, 22 ವರ್ಷದ ಮೇಘನಾ ಕೊನೆಯುಸಿರೆಳೆದಿದ್ದಾರೆ. ಗುರುವಾರ ತನ್ನ ನಿವಾಸದ ಬಳಿ ವಿಶ್ರಾಂತಿ ಪಡೆಯಲು ತೆರಳಿದ್ದ ಮೇಘನಾ ಮೇಲೆ ಚಿರತೆ ದಾಳಿ ನಡೆಸಿತ್ತು. ಮುಖ ಮತ್ತು ಕುತ್ತಿಗೆ ಭಾಗಕ್ಕೆ ಗಾಯ ಮಾಡಿ ಪರಾರಿಯಾಗಿತ್ತು. ಈಗ ಯುವತಿ ಸಾವಿಗೀಡಾಗಿರುವ ಘಟನೆಯಿಂದ ಗ್ರಾಮದ ಜನತೆ ಆತಂಕಗೊಂಡಿದ್ದಾರೆ.
ಗ್ರಾಮದ ನಿವಾಸಿ ರಮೇಶ್ ನಾಯಕ ಅವರು ಊರಿನ ಹೊರಗೆ ಅಂದರೆ, ಗ್ರಾಮದೇವತೆ ದೇವಸ್ಥಾನದ ಬಳಿ ಮನೆ ಮಾಡಿಕೊಂಡಿದ್ದರು. ಗುರುವಾರ ಸಂಜೆ 6.30ರ ವೇಳೆ ಗ್ರಾಮಕ್ಕೆ ಬಂದಿದ್ದ ಯುವತಿ ಮೇಲೆ ಚಿರತೆ ದಾಳಿ ಮಾಡಿತ್ತು. ಮೇಘನಾರನ್ನು ತಿ.ನರಸೀಪುರ ಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಶಾಸಕ ಎಂ.ಅಶ್ವಿನ್ ಕುಮಾರ್ ಆಸ್ಪತ್ರೆಗೆ ಆಗಮಿಸಿ ಪೋಷಕರಿಗ ಸಾಂತ್ವನ ಹೇಳಿದ್ದಾರೆ. ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿಸಿದ್ದಾರೆ.


