ಭಾರೀ ಹಿಮಪಾತದಿಂದಾಗಿ ನೂರಾರು ಪ್ರವಾಸಿಗರು ಸಿಕ್ಕಿಂನ ಚಾಂಗು ಸರೋವರದ ಬಳಿ ಸಿಲುಕಿಕೊಂಡಿದ್ದ ಘಟನೆ ನಡೆದಿದ್ದು, ಸೇನೆಯು ರಕ್ಷಣಾ ಕಾರ್ಯಾಚರಣೆಯ ಭಾಗವಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶನಿವಾರ (ಡಿಸೆಂಬರ್ 25) ಉಂಟಾದ ಭಾರೀ ಹಿಮಪಾತದಿಂದಾಗಿ ಜವಾಹರಲಾಲ್ ನೆಹರು ರಸ್ತೆ ಮುಚ್ಚಿದ್ದರಿಂದ ನೂರಾರು ಪ್ರವಾಸಿಗರು ಚಾಂಗು ಸರೋವರದ ಬಳಿ ಸಿಲುಕಿಕೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿಮಪಾತದಲ್ಲಿ ಸಿಲುಕಿರುವವರನ್ನು ಸೇನೆಯು ರಕ್ಷಿಸಿ, ರಾತ್ರಿ ತಮ್ಮ ಶಿಬಿರದಲ್ಲಿ ಅವರಿಗೆ ಆಶ್ರಯ ನೀಡಿತ್ತು. ಹಿಮದಲ್ಲಿ ಸಿಲುಕಿದ ಪ್ರವಾಸಿಗರಲ್ಲಿ ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸುಮಾರು 250 ಜನರಿದ್ದರು ಎಂದಿದ್ದಾರೆ.
ಇದನ್ನೂ ಓದಿ: ಎಂಇಎಸ್ ನಿಷೇಧಕ್ಕೆ ಒತ್ತಡ: ಡಿಸೆಂಬರ್ 31ಕ್ಕೆ ಸಂಪೂರ್ಣ ಕರ್ನಾಟಕ ಬಂದ್
ಭಾನುವಾರ ಹವಾಮಾನ ಪರಿಸ್ಥಿತಿಗಳು ಸ್ವಲ್ಪ ಸುಧಾರಿಸಿದ್ದರಿಂದ, ಪ್ರವಾಸಿಗರನ್ನು ಸಣ್ಣ ಗುಂಪುಗಳಾಗಿ ವಿಂಗಡಿಸಿ, ಸೇನಾ ಸಿಬ್ಬಂದಿ ಕಾಲ್ನಡಿಗೆಯಲ್ಲಿ ಸುಮಾರು 40 ಕಿಮೀ ದೂರದಲ್ಲಿರುವ ಗ್ಯಾಂಗ್‌ಟಾಕ್‌ಗೆ ತಲುಪಲು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಸ್‌ಮಸ್ ರಜಾದಿನಗಳಲ್ಲಿ ನೂರಾರು ಪ್ರವಾಸಿಗರು ಭಾರತ-ಚೀನಾ ಗಡಿಯ ಸಮೀಪವಿರುವ ತ್ಸಾಂಗ್ಮೋ ಅಥವಾ ಚಾಂಗು ಸರೋವರಕ್ಕೆ ಭೇಟಿ ನೀಡುತ್ತಿರುವುದರಿಂದ ಕೊನೆಯ ವರದಿಗಳು ಬರುವವರೆಗೂ ಈಗ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳು ಸೋಮವಾರದವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.


