ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದ ಮಾಜಿ ಸಚಿವ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸತ್ಯನಾರಾಯಣ ಇಂದು ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಸತ್ಯನಾರಾಯಣ್ ಕಾರ್ಮಿಕ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಮನ್ನಣೆ ಗಳಿಸಿದ್ದರು.
ಸರಳ ವ್ಯಕ್ತಿತ್ವ ಹೊಂದಿದ್ದ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಸಚಿವರಾಗಿದ್ದರೂ ಹಮ್ಮುಬಿಮ್ಮು ಇರಲಿಲ್ಲ. ಸಾಮಾನ್ಯರೊಂದಿಗೆ ಹೆಚ್ಚಾಗಿ ಬೆರೆಯುತ್ತಿದ್ದರು ಎಂದು ಜನ ಅವರನ್ನು ನೆನೆಪಿಸಿಕೊಳ್ಳುತ್ತಾರೆ.
ಸಚಿವರಾಗಿದ್ದಾಗ ಶಿರಾದ ಮಾರುಕಟ್ಟೆಯಲ್ಲಿ ಗಲಾಟೆ ನಡೆದಿತ್ತು. ಇದು ಶೇಂಗಾ ಗಲಾಟೆಯೆಂದೇ ಖ್ಯಾತಿ ಪಡೆದಿತ್ತು. ಈ ಸಂದರ್ಭದಲ್ಲಿ ಗಲಾಟೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಸಾಯಿ ಪ್ರಕಾಶ್ ಹತ್ಯೆಯಾಗಿದ್ದರು. ಇದು ದೊಡ್ಡ ಮಟ್ಟದ ಸುದ್ದಿಯಾಗಿತ್ತು.
ಶಿರಾ ಕ್ಷೇತ್ರದಲ್ಲಿ ಸತ್ಯಣ್ಣ ಎಂದೇ ಜನಾನುರಾಗಿಯಾಗಿದ್ದರು. ಟಿ.ಬಿ.ಜಯಚಂದ್ರ ಅವರ ವಿರುದ್ಧ ಎರಡು ಬಾರಿ ಸೋತಿದ್ದ ಸತ್ಯನಾರಾಯಣ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದೇ ಕೊನೆಯ ಚುನಾವಣೆ. ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಮತ ಯಾಚಿಸಿದ್ದರು.
ಈ ಹಿನ್ನೆಲೆಯಲ್ಲಿ ಅವರ ಪರ ಅಲೆ ಎದ್ದು ಟಿ.ಬಿ.ಜಯಚಂದ್ರ ಅವರನ್ನು ಹೆಚ್ಚು ಮತಗಳಿಂದ ಸೋಲಿಸಿದ್ದರು. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸತ್ಯನಾರಾಯಣ್ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅವರ ಆಸೆ ಕೊನೆಗೂ ಕೈಗೂಡಲಿಲ್ಲ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಿ.ಜಿ.ಆರ್.ಸಿಂಧ್ಯಾ, ಮಾಜಿ ಸಚಿವ ಕುಣಿಗಲ್ ಡಿ.ನಾಗರಾಜಯ್ಯ ಎಂ.ಪಿ.ಪ್ರಕಾಶ್ ಅವರಿಗೆ ಹೆಚ್ಚು ಆಪ್ತರಾಗಿದ್ದರು. ಜನಸ್ನೇಹಿಯಾಗಿದ್ದ ಸತ್ಯಣ್ಣ ಅಲಿಯಾಸ್ ಬಿ.ಸತ್ಯನಾರಾಣ್ ಇನ್ನಿಲ್ಲವೆಂಬ ಸುದ್ದಿ ಕ್ಷೇತ್ರದ ಜನರಿಗೆ ದುಃಖ ತರಿಸಿದೆ.
ಸತ್ಯನಾರಾಯಣ ಅವರು ರೈತರ ಪರ ವಿಶೇಷ ಕಾಳಜಿ ಹೊಂದಿದ್ದವರಾಗಿದ್ದು, ಅವರು ಹುಟ್ಟು ಹೋರಾಟಗಾರರಾಗಿದ್ದರು. ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ನೋವಾಗಿದೆ. ಮೃದು ಸ್ವಭಾವದ ಸಜ್ಜನ ವ್ಯಕ್ತಿಯಾಗಿದ್ದ ಸತ್ಯನಾರಾಯಣ ಅವರು ಅಗಲಿಕೆ ರಾಜಕೀಯ ಕ್ಷೇತ್ರ ಹಾಗೂ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಪಾಸಿಟಿವ್; ಆಸ್ಪತ್ರೆಗೆ ದಾಖಲಾದ ಸಿದ್ದರಾಮಯ್ಯ


