ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ದದ ಅತ್ಯಾಚಾರ, ಹನಿಟ್ರ್ಯಾಪ್ ಮತ್ತು ಹೆಚ್‌ಐವಿ ಸೋಂಕು ಹರಡಲು ಯತ್ನಿಸಿದ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ ವರದಿಯಾಗಿದೆ.
ವರದಿಗಳ ಪ್ರಕಾರ, ಡಿಸೆಂಬರ್ 17ರಂದು 2,481 ಪುಟಗಳ ದೋಷಾರೋಪ ಪಟ್ಟಿಯನ್ನು ಜನಪ್ರತಿನಿಧಿಗಳ ವಿರುದ್ದದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಎಸ್‌ಐಟಿ ಸಲ್ಲಿಕೆ ಮಾಡಿದೆ.
ದೋಷಾರೋಪ ಪಟ್ಟಿ 146 ಸಾಕ್ಷಿಗಳ ಹೇಳಿಕೆಗಳು ಮತ್ತು 850 ದಾಖಲೆಗಳನ್ನು ಒಳಗೊಂಡಿದೆ. 146 ಸಾಕ್ಷಿಗಳ ಪೈಕಿ 8 ಮಂದಿ ಈಗಾಗಲೇ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಮುನಿರತ್ನ ಹನಿಟ್ರ್ಯಾಪ್ ಮಾಡಿ ರೆಕಾರ್ಡ್ ಮಾಡಿದ್ದಾರೆ ಎನ್ನಲಾದ ಕೆಲವು ವಿಡಿಯೋಗಳನ್ನೂ ವಶಪಡಿಸಿಕೊಂಡಿದ್ದಾರೆ. ಅವುಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಕೋವಿಡ್ ಸಮಯದಲ್ಲಿ ಪರಿಚಯ ಮಾಡಿಕೊಂಡ ಮುನಿರತ್ನ ಅವರು, ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಅದನ್ನು ವಿಡಿಯೋ ಮಾಡಿಟ್ಟುಕೊಂಡು ನನ್ನನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಅವರ ರಾಜಕೀಯ ವಿರೋಧಿಗಳನ್ನು ಹೆಚ್‌ಐವಿ ಪೀಡಿತ ಮಹಿಳೆಯರ ಮೂಲಕ ಹನಿಟ್ರ್ಯಾಪ್ ಮಾಡಲು ಸಹಾಯ ಮಾಡುವಂತೆ ನನಗೆ ಒತ್ತಡ ಹೇರಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು.
ಪ್ರಕರಣದ ತನಿಖೆಯ ವೇಳೆ ಮುನಿರತ್ನ ಅವರು ಇನ್ಸ್‌ಪೆಕ್ಟರ್ ಐಯ್ಯನರೆಡ್ಡಿ ಜೊತೆಗೂಡಿ ಮಾಜಿ ಕಂದಾಯ ಸಚಿವ ಹಾಗೂ ಹಾಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಹೆಚ್‌ಐವಿ ಹರಡಲು ಸಂಚು ರೂಪಿಸಿದ್ದರು. ಅದರೆ, ಅದು ವಿಫಲವಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ದಿ ಹಿಂದೂ ವರದಿ ತಿಳಿಸಿದೆ.
ಎಫ್‌ಐಆರ್‌ನಲ್ಲಿ ಹೆಸರಿಸಲಾದ ಎಂಟು ಮಂದಿ ಆರೋಪಿಗಳಲ್ಲಿ ಶಾಸಕ ಮುನಿರತ್ನ, ಪೊಲೀಸ್ ಇನ್ಸ್‌ಪೆಕ್ಟರ್ ಐಯ್ಯನ ರೆಡ್ಡಿ ಮತ್ತು ಮುನಿರತ್ನ ಅವರ ಇಬ್ಬರು ಸಹಚರರಾದ ಶ್ರೀನಿವಾಸ್ ಪಿ. ಮತ್ತು ಸುಧಾಕರ್ ಆರ್ ವಿರುದ್ಧ ಎಸ್‌ಐಟಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಆರೋಪಿಗಳ ವಿರುದ್ದ ಒಂದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಕ್ಕಾಗಿ ಸೆಕ್ಷನ್ 376 (2)(n), ಜೀವಕ್ಕೆ ಅಪಾಯಕಾರಿಯಾದ ಕಾಯಿಲೆಯ ಸೋಂಕನ್ನು ಹರಡಿದ್ದಕ್ಕಾಗಿ ಸೆಕ್ಷನ್ 270 ಮತ್ತು ಯಾವುದೇ ವ್ಯಕ್ತಿಯೊಬ್ಬರ ಒಪ್ಪಿಗೆಯಿಲ್ಲದೆ ಅವರ ಖಾಸಗಿ ಭಾಗದ ಚಿತ್ರವನ್ನು ಸೆರೆಹಿಡಿದಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಸಿ, ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಇ ಅಡಿ ಆರೋಪ ಹೊರಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಪ್ರಿಯಾಂಕ್ ಖರ್ಗೆ ಆಪ್ತನಿಂದ ಬೆದರಿಕೆ ಪ್ರಕರಣ : ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳ ಅಮಾನತು


