“ಧರ್ಮಸ್ಥಳ ಪ್ರಕರಣದ ಎಸ್‌ಐಟಿ ಯಾರ ಮನೆಗೆ ಭೇಟಿ ನೀಡಬೇಕು, ಯಾರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ನಾವು ಹೇಳಲು ಸಾಧ್ಯವಿಲ್ಲ. ತನಗೆ ಸಿಕ್ಕ ಮಾಹಿತಿ ಆಧರಿಸಿ ಅದು ತನಿಖೆ ನಡೆಸುತ್ತದೆ, ಎಲ್ಲಿ ಪರಿಶೀಲನೆ ಮಾಡಬೇಕೋ ಮಾಡುತ್ತದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.
ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಗೆ ಎಸ್‌ಐಟಿ ತಂಡ ಭೇಟಿ ನೀಡಿರುವ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, “ಎಸ್‌ಐಟಿ ಏನು ಮಾಡುತ್ತಿದೆ, ಯಾವ ರೀತಿ ತನಿಖೆ ನಡೆಸುತ್ತಿದೆ ಎಂದು ಸರ್ಕಾರ ಪ್ರತಿನಿತ್ಯ ಗಮನಿಸುವುದಿಲ್ಲ. ಅದು ತನ್ನ ಪರಿಮಿತಿಯಲ್ಲಿ ಏನೆಲ್ಲ ಮಾಡಬೇಕೋ ಅದನ್ನು ಮಾಡುತ್ತದೆ” ಎಂದರು.
ಧರ್ಮಸ್ಥಳ ಪ್ರಕರಣದ ತನಿಖೆ ಬಹಳ ಗಂಭೀರವಾಗಿ ನಡೆಯುತ್ತಿದೆ. ಕೋಟ್ಯಾಂತರ ಭಕ್ತಾದಿಗಳು ಧರ್ಮಸ್ಥಳದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸತ್ಯ ಹೊರಗಡೆ ಬರಲಿ ಎಂದು ಕಾಯುತ್ತಿದ್ದಾರೆ. ಹಾಗಾಗಿ, ಎಸ್‌ಐಟಿಗೆ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.
“ದೂರುದಾರ ಚಿನ್ನಯ್ಯ ಅವರ ಬಂಧನ ಆಗಿರುವುದರಿಂದ ಅವರ ಹೇಳಿಕೆಯಿಂದ ಉಂಟಾಗುವ ಪರಿಣಾಮಗಳನ್ನು ಎಸ್‌ಐಟಿ ಗಂಭೀರವಾಗಿ ಪರಿಗಣಿಸಿದೆ. ನಾವೂ ಪರಿಗಣಿಸಿದ್ದೇವೆ. ಈ ಪ್ರಕರಣ ಆದಷ್ಟು ಬೇಗ ಇತ್ಯರ್ಥವಾದರೆ ಒಳ್ಳೆಯದು ಎನ್ನುವುದು ಸರ್ಕಾರದ ಭಾವನೆ. ಹಾಗಾಗಿ, ಪ್ರಕರಣದ ತನಿಖೆಯನ್ನು ತ್ವರಿತವಾಗಿ ಮುಗಿಸಲು ಎಸ್‌ಐಟಿ ಕೂಡ ಪ್ರಯತ್ನ ಮಾಡುತ್ತಿದೆ” ಎಂದು ತಿಳಿಸಿದರು.
ಧರ್ಮಸ್ಥಳ ಪ್ರಕರಣದ ಸಂಬಂಧ ಸರ್ಕಾರ ಕ್ಷಮೆಯಾಚಿಸಬೇಕು, ಪ್ರಕರಣವನ್ನು ಎನ್‌ಐಎ ತನಿಖೆಗೆ ಕೊಡಬೇಕು ಎಂದು ಶೋಭಾ ಕರಂದ್ಲಾಜೆ, ಪ್ರಲ್ಹಾದ್ ಜೋಶಿ ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, “ಈ ಪ್ರಕರಣವನ್ನು ಎನ್‌ಐಎಗೆ ಕೊಡುವ ಅಗತ್ಯ ಇಲ್ಲ ಎಂದು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಎಸ್‌ಐಟಿಯವರು ಸಮರ್ಪಕವಾಗಿ ತನಿಖೆ ಮಾಡುತ್ತಿದ್ದಾರೆ. ಎಸ್‌ಐಟಿ ತನಿಖೆಯಲ್ಲಿ ಏನಾದರು ಲೋಪ ಕಂಡು ಬಂದರೆ ಅದು ಬೇರೆ ವಿಚಾರ. ಎಸ್‌ಐಟಿ ತನಿಖೆ ಪೂರ್ಣಗೊಳಿಸಿ ವರದಿ ಕೊಡುವವರೆಗೆ ನಾನು ಏನೂ ಹೇಳಲು ಸಾಧ್ಯವಿಲ್ಲ” ಎಂದು ಹೇಳಿದರು.
“ಎಸ್‌ಐಟಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎನ್ನಲು ನಮಗೆ ಏನಾದರು ಆಧಾರ ಬೇಕು. ಸದ್ಯಕ್ಕೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಕೊಡುವ ಅಗತ್ಯವಿಲ್ಲ. ಎಸ್‌ಐಟಿ ಅಂತಿಮ ವರದಿ ಕೊಡಲಿ. ಆ ಬಳಿಕ ಸಾಮಾನ್ಯವಾಗಿ ಪರ-ವಿರೋಧ ಚರ್ಚೆಯಾಗುತ್ತದೆ. ಆನಂತರ ಸರ್ಕಾರದ ಮಟ್ಟದಲ್ಲಿ ಏನು ತೀರ್ಮಾನ ಮಾಡಬೇಕೋ ನಾವು ಮಾಡುತ್ತೇವೆ” ಎಂದರು.
“ಆರೋಪಗಳನ್ನು ಮಾಡುವುದು ಸುಲಭ. ಅದನ್ನು ರುಜುವಾತು ಮಾಡೋದು ಕಷ್ಟ. ಯಾವ ಆಧಾರದ ಮೇಲೆ ಸರ್ಕಾರ ಈ ಪ್ರಕರಣದಲ್ಲಿ ತಪ್ಪಿತಸ್ಥ ಎನ್ನಲು ಸಾಧ್ಯ. ನಾವು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಎಸ್‌ಐಟಿ ರಚಿಸಿರುವುದೇ ತಪ್ಪು ಎಂದರೆ ಅದು ವಿರ್ಪಯಾಸ ಎನ್ನಬೇಕಷ್ಟೆ” ಎಂದು ಹೇಳಿದರು.
ಧರ್ಮಸ್ಥಳದಲ್ಲಿ ಧರ್ಮ ಸಂರಕ್ಷಣಾ ಸಮಾವೇಶ ಆಯೋಜನೆ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, “ಅದು ಅವರಿಗೆ ಬಿಟ್ಟ ವಿಚಾರ, ಅವರು ಏನು ಬೇಕಾದರು ಮಾಡಲಿ” ಎಂದರು.
“ತನಿಖೆ ತ್ವರಿತವಾಗಿ ಆಗಬೇಕು. ಹಾಗಂತ, ಮಾಡಬೇಕಾದ ಕಾರ್ಯವನ್ನು ಮಾಡದಿರಲು ಸಾಧ್ಯವಿಲ್ಲ. ತನಿಖೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಒಂದು ಕೆಮಿಕಲ್ ಅನಾಲಿಸಿಸ್ ಮಾಡಲು ಒಂದು ಕ್ರಮ ಇದೆ. ಅದನ್ನು ಬೇಗ ಮಾಡಿ ಅಂದರೆ ಆಗುವುದಿಲ್ಲ. ಎಲ್ಲಾ ಪ್ರಕ್ರಿಯೆಗಳು ಅನುಸರಿಸಬೇಕಿದೆ. ಹಾಗಾಗಿ, ಎಸ್‌ಐಟಿ ಅಗತ್ಯ ಎಲ್ಲಾ ಪ್ರಕ್ರಿಯೆಗಳನ್ನು ಮಾಡಿ, ಆದಷ್ಟು ಬೇಗ ವರದಿ ಕೊಡಲಿ ಎನ್ನುವುದು ನಮ್ಮ ಆಶಯ” ಎಂದು ಹೇಳಿದರು.
“ನಮ್ಮ ಉದ್ದೇಶ ಸತ್ಯವನ್ನು ಹೊರಗಡೆ ತರುವುದು. ನಾವು ಆ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿಯೇ ಎಸ್‌ಐಟಿ ಮಾಡಿರುವುದು. ಅದನ್ನೇ ಸರಿ ಇಲ್ಲ ಎನ್ನುವುದು ಸರಿಯಲ್ಲ” ಎಂದು ಗೃಹ ಸಚಿವರು ತಿಳಿಸಿದರು.
ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ: ಕ್ಷಮೆ ಕೇಳುತ್ತೇನೆ ಎಂದ ಡಿ.ಕೆ ಶಿವಕುಮಾರ್


