ಮಣಿಪುರ ರಾಜಭವನಕ್ಕೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದ ಕಾರಣಕ್ಕೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ, ಆದರೆ ನಿಯಂತ್ರಣದಲ್ಲಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಮಣಿಪುರದ ರಾಜಭವನಕ್ಕೆ ನಡೆದ ಮೆರವಣಿಗೆಯ ವೇಳೆ ವಿದ್ಯಾರ್ಥಿಗಳು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದಿತ್ತು.
ರಾಜ್ಯ ಸರ್ಕಾರದ ಡಿಜಿಪಿ ಮತ್ತು ಭದ್ರತಾ ಸಲಹೆಗಾರರನ್ನು ವಜಾಗೊಳಿಸಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. “ಮಂಗಳವಾರ ಮಧ್ಯಾಹ್ನ ಇಂಫಾಲ್‌ನಲ್ಲಿ ವಿಧಿಸಲಾದ ಕರ್ಫ್ಯೂ ಇಂದು ಬೆಳಿಗ್ಗೆ ಕೂಡಾ ಜಾರಿಯಲ್ಲಿದೆ. ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಲು ಪಟ್ಟಣದಲ್ಲಿ ಪೊಲೀಸರ ಗಸ್ತು ತಿರುಗುತ್ತಿದೆ” ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಂಗಳವಾರ ಸಂಜೆ ಸರ್ಕಾರ ತಿದ್ದುಪಡಿ ಆದೇಶ ಹೊರಡಿಸಿದ್ದು, ವಿದ್ಯಾರ್ಥಿಗಳ ತೀವ್ರ ಆಂದೋಲನದ ಹಿನ್ನೆಲೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿರುವುದು ಐದು ಜಿಲ್ಲೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದೆ.
ರಾಜ್ಯದ ರಾಜಧಾನಿಯ ಖ್ವೈರಂಬಂಡ್ ಮತ್ತು ಕಾಕ್ವಾ ನವೋರೆಮ್ ಲೈಕೈ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ. ಘರ್ಷಣೆಯಲ್ಲಿ 55ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿದ್ಯಾರ್ಥಿಗಳ ಸಂಘ ಹೇಳಿಕೊಂಡಿದೆ.
ಇದನ್ನೂ ಓದಿ: ಹಿರಿಯ ನಾಯಕರಿಗೆ ಕಡಿವಾಣ ಹಾಕುವಂತೆ ರಾಹುಲ್ ಗಾಂಧಿಗೆ ಪತ್ರ ಬರೆದ ರಾಜ್ಯ ಕಾಂಗ್ರೆಸ್‌ನ ಕಿರಿಯ ನಾಯಕರು!
”ವಿದ್ಯಾರ್ಥಿಗಳ ಪ್ರತಿನಿಧಿಗಳು ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸಲು ರಾಜ್ಯಪಾಲರು ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಮಣಿಪುರದ ವಿದ್ಯಾರ್ಥಿಗಳು ಮತ್ತು ಜನರ ಹಿತದೃಷ್ಟಿಯಿಂದ ಕ್ರಮಗಳನ್ನು ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ” ಎಂದು ಮಂಗಳವಾರ ತಡರಾತ್ರಿ ರಾಜಭವನ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಏತನ್ಮಧ್ಯೆ, ಮಣಿಪುರ ರಾಜ್ಯದ ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿದ್ದು, ಅಲ್ಲಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ವಿಡಿಯೊ ನೋಡಿ | ಕಲಬುರಗಿ- ಗೌರಿಯದ್ದು ವೈಚಾರಿಕ ಕೊಲೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ರಹಮತ್ ತರೀಕೆರೆ ಮಾತುಗಳು


