ವಿಧಾನ ಮಂಡಲ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಭಾಷಣ ಮಾಡಿದ್ದಾರೆ. ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸಭಾತ್ಯಾಗ ಮಾಡಿ, ಇದು ಸಂಸದೀಯ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ, ಪ್ರಜಾಪ್ರಭುತ್ವ ಸಂಸದೀಯ ಮೌಲ್ಯಗಳ ರಕ್ಷಣೆ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕರೆಸಿ, ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಸೇರಿಸಿ ವಿಧಾನಸಭೆಯಲ್ಲಿ ಭಾಷಣ ಮಾಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಲೋಕಸಭೆ ಸ್ಪೀಕರ್, ವಿಧಾನಸಭೆ ಸ್ಪೀಕರ್ ಹಾಗೂ ವಿಧಾನ ಪರಿಷತ್ ಸಭಾಧ್ಯಕ್ಷರ ಭಾಷಣ ನಿಗದಿಯಾಗಿದೆ.ಇದನ್ನೂ ನೋಡಿ: ವಿಧಾನಸಭೆ ಅಧಿವೇಶನದ ಲೈವ್ ನಾನುಗೌರಿ.ಕಾಂ ಫೇಸ್‌ಬುಕ್‌ನಲ್ಲಿ ನೋಡಿ
ಸ್ಪೀಕರ್ ಕರೆಸಿ ವಿಧಾನಸಭೆಯಲ್ಲಿ ಮಾತನಾಡಿಸುತ್ತಿರುವ ಸಂಬಂಧ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಹಾಗೂ ಜಸ್ಟೀಸ್ ನಾಗಮೋಹನ ದಾಸ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಒಕ್ಕೂಟ ವ್ಯವಸ್ಥೆಗೆ ಮಾರಕ: ಪ್ರೊ.ರವಿವರ್ಮಕುಮಾರ್
“ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ವಿಧಾನಸಭೆಗಿಂತ ಲೋಕಸಭೆ ಶ್ರೇಷ್ಠವಾದದ್ದೇನಲ್ಲ. ಸಂವಿಧಾನಿಕ ಹುದ್ದೆಗಳಾದ ರಾಷ್ಟ್ರಪತಿ, ಉಪರಾಷ್ಟ್ರಪತಿಗಳು ಖಂಡಿತವಾಗಿಯೂ ದೇಶದ ಮುಖ್ಯಸ್ಥರಾಗಿರುತ್ತಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿಯವರು ಹೇಳುವಂತಹದ್ದನ್ನು ಲೋಕಸಭಾ ಸ್ಪೀಕರ್ ಹೇಳಲು ಬರುವುದಿಲ್ಲ. ಆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಒಕ್ಕೂಟ ವ್ಯವಸ್ಥೆಗೆ ಮಾರಕ” ಎಂದು ಪ್ರೊ.ರವಿವರ್ಮಕುಮಾರ್ ಅಭಿಪ್ರಾಯಪಟ್ಟರು.
“ಒಕ್ಕೂಟ ವ್ಯವಸ್ಥೆಯಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಎರಡಕ್ಕೂ ನಿರ್ದಿಷ್ಟ ಸ್ಥಾನಮಾನಗಳಿವೆ. ಯಾವುದು ಮತ್ತೊಂದಕ್ಕಿಂತ ಶ್ರೇಷ್ಠ ಅಲ್ಲ. ವಿಧಾನಸಭೆ ಮಾಡಿದ ಕಾನೂನನ್ನು ಲೋಕಸಭೆಯಲ್ಲಿ ಅಪೀಲ್ ಮಾಡಲು ಆಗುವುದಿಲ್ಲ. ಇಡೀ ದೇಶದ ಮಟ್ಟದಲ್ಲಿ ಶಾಸನ ರಚಿಸುವ ಅಧಿಕಾರ ಲೋಕಸಭೆಗಿದೆ. ರಾಜ್ಯ ಮಟ್ಟದಲ್ಲಿ ಶಾಸನ ರಚಿಸುವ ಅಧಿಕಾರ ವಿಧಾನಸಭೆಗಿದೆ. ವಿಧಾನಸಭೆಗೆ ಇರುವ ಅಧಿಕಾರ, ಲೋಕಸಭೆಗೆ ಇರುವುದಿಲ್ಲ. ಆದ್ದರಿಂದ ಲೋಕಸಭೆಯ ಸ್ಪೀಕರ್ ಅವರನ್ನು ಕರೆಸಿ ಅಧಿವೇಶನ ನಡೆಸಲಾಗದು. ಅದರಲ್ಲೂ ಮೇಲ್ಮನೆಯನ್ನು ‘ಹಿರಿಯರ ಸದನ’ ಎಂದು ಕರೆಯಲಾಗುತ್ತದೆ. ಅಲ್ಲಿ ಪ್ರತಿಭಾನ್ವಿತರಿರುತ್ತಾರೆ, ವೃತ್ತಿಗಳ, ಕ್ಷೇತ್ರಗಳ ಪ್ರತಿನಿಧಿಗಳು ಇರುತ್ತಾರೆ. ಅಲ್ಲಿಗೆ ಲೋಕಸಭೆ ಸ್ಪೀಕರ್ ಅವರನ್ನು ಕರೆಸುವುದು ಗಂಭೀರವಾದ ಲೋಪ” ಎನ್ನುತ್ತಾರೆ ರವಿವರ್ಮಕುಮಾರ್.
ಸಭಾಧ್ಯಕ್ಷರನ್ನು ಹೊರತುಪಡಿಸಿ ರಾಜ್ಯಕ್ಕೆ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರಷ್ಟೇ ಕೂರಬಹುದಾದ ಆಸನದಲ್ಲಿ ಲೋಕಸಭಾಧ್ಯಕ್ಷರನ್ನು ಕೂರಿಸುವುದು ಸಂವಿಧಾನ ವಿರೋಧಿ ಮಾತ್ರವಲ್ಲ, ವಿಧಾನಸಭೆಯ ಪಾವಿತ್ರ್ಯ ನಾಶ ಕೂಡಾ ಆಗಿದೆ.
ಈ ಪಾಪದ ಫಲವನ್ನು @BJP4Karnataka ಹೊರಬೇಕಾಗುತ್ತದೆ.
3/5#BJPAgainstDemocracy— Siddaramaiah (@siddaramaiah) September 24, 2021
ಅತಿಕ್ರಮಣ ಮಾಡುವಂತಿಲ್ಲ: ಜಸ್ಟೀಸ್ ದಾಸ್
ಜಸ್ಟೀಸ್ ನಾಗಮೋಹನ ದಾಸ್ ಅವರು ಮಾತನಾಡಿ, “ರಾಷ್ಟ್ರಪತಿಗಳು ಉಭಯ ಸದನಗಳಲ್ಲಿ ಮಾತನಾಡಬಹುದು. ಅಲ್ಲದೆ ಅಖಿಲ ಭಾರತ ಮುಖ್ಯಮಂತ್ರಿಗಳ ಸಮಾವೇಶ, ಅಖಿಲ ಭಾರತ ಸ್ಪೀಕರ್‌ಗಳ ಸಮಾವೇಶಗಳು ನಡೆಯುತ್ತವೆ. ಹೀಗಿರುವಾಗ ಕೆಲವೊಂದು ವಿಚಾರಗಳಲ್ಲಿ ಲೋಕಸಭಾ ಸ್ಪೀಕರ್ ಕೆಲವು ಸಲಹೆ ನೀಡುವುದು ಸ್ವಾಗತಾರ್ಹ. ಆದರೆ ವಿಧಾನಸಭೆ, ವಿಧಾನ ಪರಿಷತ್‌ನ ಸ್ವಾತಂತ್ರದಲ್ಲಿ ಅವರು ಅತಿಕ್ರಮಣ ಮಾಡುವಂತಿಲ್ಲ” ಎಂದರು.
“ವಿಧಾನಸಭೆಯು ಎಷ್ಟು ಸಮಯ, ಎಷ್ಟು ದಿನ ನಡೆಯಬೇಕು, ಯಾವ ಅಜೆಂಡಾವನ್ನೇ ಎತ್ತಿಕೊಳ್ಳಬೇಕು ಎಂದು ಸೂಚಿಸಿದ್ದಲ್ಲದೆ ಸಿಸಿ ಕ್ಯಾಮೆರಾದಲ್ಲಿ ಅಧಿವೇಶನವನ್ನು ರೆಕಾರ್ಡ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹಿಂದೊಮ್ಮೆ ಆದೇಶಿಸಿತ್ತು. ಆಗ ಅಂದಿನ ಲೋಕಸಭೆ ಸ್ಪೀಕರ್, ಎಲ್ಲ ಸ್ಪೀಕರ್‌ಗಳ ಅಧಿವೇಶನ ಮಾಡಿ, ‘ಇದು ನಮ್ಮ ಸ್ವಾತಂತ್ರದ ಮೇಲೆ ನ್ಯಾಯಾಂಗದ ಅತಿಕ್ರಮಣ’ ಎಂದು ಸಭೆ ನಡೆಸಿದ್ದರು. ಸುಪ್ರೀಂಕೋರ್ಟ್ ಇದನ್ನು ಮಾಡಬಾರದು ಎಂದು ತೀರ್ಮಾನಿಸಲಾಗಿತ್ತು” ಎನ್ನುತ್ತಾರೆ ಜಸ್ಟೀಸ್ ದಾಸ್.
ಹಿಂದೆ ರಾಜ್ಯಪಾಲರ ನೇತೃತ್ವದಲ್ಲಿ ಕೋವಿಡ್ ವಿಚಾರದ ಸರ್ವಪಕ್ಷ ಸಭೆ ನಡೆಸಿದ್ದಲ್ಲದೆ ಈಗ
ಲೋಕಸಭೆ ಸ್ಪೀಕರ್ ಅವರನ್ನು ಸದನಕ್ಕೆ ಕರೆತರುವ ಮೂಲಕ @BJP4Karnataka ಸರ್ಕಾರ ಒಕ್ಕೂಟ ವ್ಯವಸ್ಥೆಯ ಘನತೆಗೆ, ಸದನದ ಗೌರವಕ್ಕೆ ಚ್ಯುತಿ ತಂದಿದೆ.ಪ್ರಜಾಪ್ರಭುತ್ವ, ಸಂವಿಧಾನವನ್ನು ಅಣಕಿಸಲೆಂದೇ ಅನೈತಿಕ ಮಾರ್ಗದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ.
— Karnataka Congress (@INCKarnataka) September 24, 2021
“ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ, ಸಮವರ್ತ ಪಟ್ಟಿಯನ್ನು ನಮ್ಮ ಸಂವಿಧಾನ ಒಳಗೊಂಡಿದೆ. ಕೇಂದ್ರ ಪಟ್ಟಿಯಲ್ಲಿ ಇರುವ ವಿಚಾರಗಳ ಕುರಿತು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಕಾನೂನು ರೂಪಿಸಬಹುದು. ಆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಅಧಿಕಾರ ಇರುವುದಿಲ್ಲ. ರಾಜ್ಯ ಸರ್ಕಾರದ ಪಟ್ಟಿಯಲ್ಲಿ ಯಾವ ವಿಷಯಗಳಲ್ಲಿ ಕಾನೂನು ಮಾಡಬಹುದು ಎಂದು ತಿಳಿಸಲಾಗಿದೆ. ಅದನ್ನು ರಾಜ್ಯ ಸರ್ಕಾರವೇ ಮಾಡಬೇಕು. ಸಮವರ್ತಿ ಪಟ್ಟಿ ಎಂದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಸೇರಿ ಮಾಡುವ ಕಾನೂನುಗಳಾಗಿವೆ. ಎಪಿಎಂಸಿ ಕಾಯ್ದೆ ರಾಜ್ಯ ಪಟ್ಟಿಯಲ್ಲಿದೆ, ಕೃಷಿ ಸಂಬಂಧಿತ ಕಾಯ್ದೆಗಳು ರಾಜ್ಯ ಪಟ್ಟಿಯಲ್ಲಿದೆ. ಇವುಗಳನ್ನು ಕೇಂದ್ರ ಸರ್ಕಾರ ಬಿಲ್‌ಗಳನ್ನು ಪಾಸ್ ಮಾಡಿದೆ. ಸುಪ್ರೀಂಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಲಾಗಿದೆ” ಎಂದು ತಿಳಿಸಿದರು.
ಪತ್ರಕರ್ತ ಪಿ.ಸಾಯಿನಾಥ್ ಅವರನ್ನು ಪಾರ್ಲಿಮೆಂಟ್ ಸದಸ್ಯರು, ಒಮ್ಮೆ ಪಾರ್ಲಿಮೆಂಟ್ ಹಾಲ್‌ಗೆ ಕರೆಸಿ ಉಪನ್ಯಾಸ ಕೊಡಿ ಎಂದಿದ್ದರು. ಹೋಗಿದ್ದ ಸಾಯಿನಾಥ್ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ನಮ್ಮ ಪ್ರಧಾನಿಯವರು ಬೇರೆ ದೇಶದ ಪಾರ್ಲಿಮೆಂಟ್ ಸದಸ್ಯರ ಮುಂದೆ ಭಾಷಣ ಮಾಡುತ್ತಾರೆ, ಬೇರೆ ದೇಶದವರು ಬಂದು ನಮ್ಮ ದೇಶದವರ ಮುಂದೆ ಉಪನ್ಯಾಸ ನೀಡುತ್ತಾರೆ. ಈ ರೀತಿಯಲ್ಲಿ ಕಾರ್ಯಕ್ರಮ ನಡೆಸಿದರೆ ಲೋಪವಾಗದು. ಆದರೆ ಇಲ್ಲಿನ ‘ಬಿಸಿನೆಸ್ ಆಫ್ ದಿ ಹೌಸ್’ನಲ್ಲಿ ಲೋಕಸಭೆಯ ಸ್ಪೀಕರ್ ತಲೆಹಾಕುವಂತಿಲ್ಲ. ವಿಧಾನಸಭೆ, ವಿಧಾನ ಪರಿಷತ್‌ನ ನಡಾವಳಿಗಳ ಒಳಗೆ ಪ್ರವೇಶಿಸದಿದ್ದರೆ ಅದು ಸ್ವಾಗತಾರ್ಹ. ಜೊತೆಗೆ ವಿರೋಧ ಪಕ್ಷಗಳ ಒಪ್ಪಿಗೆ ಅಗತ್ಯವಿರುತ್ತದೆ ಎನ್ನುತ್ತಾರೆ ಜಸ್ಟೀಸ್ ನಾಗಮೋಹನ ದಾಸ್.
“ಈ ಕಾರ್ಯಕ್ರಮ ವಿಚಾರವಾಗಿ ಸರ್ಕಾರ ವಿರೋಧ ಪಕ್ಷದ ನಾಯಕರ ಜತೆ ಚರ್ಚೆ ಮಾಡಿಲ್ಲ. ಆದರೂ ಆಹ್ವಾನ ಪತ್ರಿಕೆ ಹಂಚುತ್ತಿದ್ದಾರೆ. ಈ ಸಭೆ ಮೂಲಕ ನಿಮ್ಮ ಸರ್ಕಾರದ ಅವಧಿಯಲ್ಲಿ ಸಂಸದೀಯ ಮೌಲ್ಯ ಕುಸಿಯುತ್ತಿದೆ ಎಂದು ನೀವು ಒಪ್ಪಿಕೊಳ್ಳುತ್ತಿದ್ದೀರಿ. ಈ ಕಾರ್ಯಕ್ರಮ ನಡೆಸುವುದಾದರೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಡಿ, ನಮ್ಮ ಅಭ್ಯಂತರವಿಲ್ಲ. ಆಹ್ವಾನ ಕೊಟ್ಟರೆ ನಾವೂ ಬರುತ್ತೇವೆ” ಎಂದು ಕೆಪಿಸಿಸಿ ಅಧ್ಯಕ್ಷ, ಶಾಸಕ ಡಿ.ಕೆ.ಶಿವಕುಮಾರ್ ಹೇಳಿದ್ದರು.
ಇದನ್ನೂ ಓದಿ: ವಿಧಾನಸಭೆ ಜಂಟಿ ಅಧಿವೇಶನದಲ್ಲಿ ಲೋಕಸಭೆ ಸ್ಪೀಕರ್ ಭಾಷಣ!: ಬಹಿಷ್ಕಾರದ ಎಚ್ಚರಿಕೆ ನೀಡಿದ ಕಾಂಗ್ರೆಸ್


