ಶ್ರೀಲಂಕಾದ ಮಾಜಿ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಸಲ್ಲಿಸಿದ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ ಕೆಲವೇ ಗಂಟೆಗಳ ನಂತರ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಂಸತ್ತು ಶನಿವಾರ ಸಭೆ ಸೇರಲಿದ್ದು, ಸಂವಿಧಾನದ ನಿಬಂಧನೆಗಳ ಪ್ರಕಾರ ಏಳು ದಿನಗಳಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಹೇಳಿರುವುದಾಗಿ ‘ಡೈಲಿ ಮಿರರ್ ಲಂಕಾ’ ವರದಿ ಮಾಡಿದೆ.
ಹೊಸದಾಗಿ ಚುನಾಯಿತರಾದ ಅಧ್ಯಕ್ಷರು ಹೊಸ ಪ್ರಧಾನ ಮಂತ್ರಿಯನ್ನು ನೇಮಿಸುವ ಸಾಧ್ಯತೆಯಿದೆ. ನಂತರ ಅವರು ಸಂಸತ್ತಿನಲ್ಲಿ ಅನುಮೋದನೆ ಪಡೆಯಬೇಕಾಗುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕಳೆದ ವಾರ ರಾಷ್ಟ್ರಪತಿ ನಿವಾಸ, ಪ್ರಧಾನಿ ಕಚೇರಿ ಸೇರಿದಂತೆ ಸರ್ಕಾರಿ ಕಟ್ಟಡಗಳಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಲು ಬಯಸುವುದಿಲ್ಲ ಎಂದು ಗುರುವಾರ ತೆರವು ಮಾಡಿದ್ದಾರೆ. ಇದರ ಬೆನ್ನಲ್ಲೇ ಶ್ರೀಲಂಕಾ ಸೇನಾ ಪಡೆಗಳು ಭದ್ರತೆಯತ್ತ ಗಮನ ಹರಿಸಿವೆ.
ಸುಮಾರು ಒಂದು ತಿಂಗಳಿಂದ ಶ್ರೀಲಂಕಾ ಪ್ರಜೆಗಳು ನಡೆಸುತ್ತಿರುವ ಹೋರಾಟಕ್ಕೆ ಮಣಿದಿರುವ ಗೋತಬಯ ರಾಜಪಕ್ಸೆ ಗುರುವಾರ ರಾತ್ರಿ ಇಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರಸ್ತುತ ಸಿಂಗಾಪುರದಲ್ಲಿರುವ ಗೋತಬಯ, ತಮ್ಮ ಪತ್ನಿಯೊಂದಿಗೆ ಶ್ರೀಲಂಕಾದಿಂದ ಪಲಾಯನ ಮಾಡಿದ್ದಾರೆ. ಸಿಂಗಾಪುರಕ್ಕೆ ಪ್ರಯಾಣಿಸುವ ಮೊದಲು ಮಾಲ್ಡೀವ್ಸ್‌ನಲ್ಲಿ ಒಂದು ದಿನ ತಂಗಿದ್ದರು.
ಶ್ರೀಲಂಕಾ ಪೊದುಜನ ಪೆರಮುನಾ (ಎಸ್‌ಎಲ್‌ಪಿಪಿ) ಪಕ್ಷದ ಸಂಸದ ಗೆವಿಂದು ಕುಮಾರತುಂಗ ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ಪ್ರತಿಕ್ರಿಯೆ ನೀಡಿದ್ದು, “ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ಪ್ರತಿಪಕ್ಷಗಳು ವೇಳಾಪಟ್ಟಿಯನ್ನು ಸಿದ್ಧಪಡಿಸಿವೆ” ಎಂದಿದ್ದಾರೆ.
ಭಾರತ ನೆರವು
“ಬಿಕ್ಕಟ್ಟಿನ ಸಮಯದಲ್ಲಿ ನೆರೆಯ ಶ್ರೀಲಂಕಾಕ್ಕೆ ಸಾಧ್ಯವಾದಷ್ಟು ಸಹಾಯವನ್ನು ಭಾರತ ಮಾಡುತ್ತಿದೆ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೋಲ್ಕತ್ತಾದಲ್ಲಿ ಹೇಳಿದ್ದಾರೆ.
ತುರ್ತು ಪರಿಸ್ಥಿತಿ
ಗೊಟಾಬಯ ರಾಜಪಕ್ಸೆ ದೇಶದಿಂದ ಪಲಾಯನಗೈದು ಮಾಲ್ಡೀವ್ಸ್‌ನಲ್ಲಿ ಆಶ್ರಯ ಪಡೆದ ಕೂಡಲೇ ಜುಲೈ 13 ರಂದು ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.
ಇದನ್ನೂ ಓದಿರಿ: ದೆಹಲಿ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಖ್ಯಾತ ಫ್ಯಾಕ್ಟ್‌ಚೆಕ್ಕರ್ ಮೊಹಮ್ಮದ್ ಜುಬೇರ್‌ಗೆ ಜಾಮೀನು
ಪ್ರಸ್ತುತ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಅನಿರ್ದಿಷ್ಟ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಹೇರಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಅಧ್ಯಕ್ಷ ರಾಜಪಕ್ಸೆ ಪಲಾಯನ ಮಾಡುವ ಸುದ್ದಿ ಹೊರಬಿದ್ದ ಕೂಡಲೇ ರಾಜಧಾನಿ ಕೊಲಂಬೊದಲ್ಲಿ ಮತ್ತೆ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿದ್ದವು, ಪ್ರತಿಭಟನಾಕಾರರು ಶ್ರೀಲಂಕಾದ ಪ್ರಧಾನಿ ಕಚೇರಿಯತ್ತ ಸಾಗಿದ್ದರು.
ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಕಚೇರಿ ಬಳಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿರುವ ದೃಶ್ಯಗಳು ಕಂಡುಬಂದಿವೆ.


