ಹಿರಿಯ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅವರ ಅಮಾನತು ರದ್ದುಪಡಿಸಿರುವ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಆದೇಶವನ್ನು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಬುಧವಾರ(ಜು.2) ಪ್ರಶ್ನಿಸಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು ಪ್ರಕರಣವನ್ನು ನ್ಯಾಯಮೂರ್ತಿಗಳಾದ ಎಸ್ ಜಿ ಪಂಡಿತ್ ಮತ್ತುಟಿ ಎಂ.ನದಾಫ್ ಅವರ ವಿಭಾಗೀಯ ಪೀಠದ ಮುಂದೆ ಉಲ್ಲೇಖಿಸಿ, ತುರ್ತಾಗಿ ಅರ್ಜಿ ವಿಚಾರಣೆ ನಡೆಸಬೇಕು ಎಂದು ಕೋರಿದರು.
ಆಗ ಪೀಠವು ಅರ್ಜಿಯಲ್ಲಿನ ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಸರ್ಕಾರಕ್ಕೆ ಸೂಚಿಸಿ, ನಾಳೆ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಪೊಲೀಸ್ ಮಹಾನಿರ್ದೇಶಕರ ವರದಿ ಆಧರಿಸಿ, ಮೇಲ್ನೋಟಕ್ಕೆ ಕರ್ತವ್ಯ ಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸಿಎಟಿಗೆ ಮುಚ್ಚಿದ ಲಕೋಟೆಯಲ್ಲಿ ಜೂನ್ 3 ಮತ್ತು 4ರಂದು ನಡೆದಿರುವ ಘಟನೆಯ ಮಾಹಿತಿಯನ್ನು ಸಲ್ಲಿಕೆ ಮಾಡಲಾಗಿದೆ. ಅದನ್ನು ಪರಿಗಣಿಸದೇ ಆದೇಶ ಮಾಡಿದೆ. ಮ್ಯಾಜಿಸ್ಟೀರಿಯಲ್ ತನಿಖೆ ಮತ್ತು ನ್ಯಾಯಾಂಗ ತನಿಖಾ ಆಯೋಗ ರಚಿಸಿರುವುದನ್ನು ಸಿಎಟಿಯು ತಪ್ಪಾಗಿ ಅರ್ಥೈಸಿದ್ದು, ಸರ್ಕಾರವು ಕಾಲ್ತುಳಿತಕ್ಕೆ ಯಾರು ಕಾರಣ ಎಂಬುದನ್ನು ಇನ್ನಷ್ಟೇ ಪತ್ತೆಹಚ್ಚಬೇಕಿದೆ ಎಂಬುವುದಾಗಿ ಹೇಳಿದೆ ಎಂದು ನಿರ್ಧಾರಕ್ಕೆ ಬಂದಿದೆ ಎಂದು ಸಿಎಟಿ ಆದೇಶಕ್ಕೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಘಟನೆಯ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದು, ಕೇಂದ್ರ ಸರ್ಕಾರವು ವಿಕಾಸ್ ಕುಮಾರ್ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಿದೆ. ಇದು ಸಿಎಟಿಯಲ್ಲಿ ತೀರ್ಪು ಕಾಯ್ದಿರಿಸಿದ ಬಳಿಕ ನಡೆದಿರುವ ಘಟನೆಯಾಗಿದ್ದು, ಅದನ್ನು ಮೆಮೊದ ಮೂಲಕ ಸಿಎಟಿ ಗಮನಕ್ಕೆ ತರಲಾಗಿತ್ತು. ಇದನ್ನೂ ಸಿಎಟಿಯು ಪರಿಗಣಿಸಿಲ್ಲ. ಈ ಹಂತದಲ್ಲಿ ಅಧಿಕಾರಿಗಳ ಅಮಾನತನ್ನು ತೆರವು ಮಾಡುವುದರಿಂದ ತನಿಖೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಸಾಕ್ಷಿಗಳ ಪರಿಶೀಲನೆಗೆ ಸಮಸ್ಯೆ ಉಂಟು ಮಾಡಲಿದ್ದು, ಸಾಕ್ಷ್ಯ ತಿರುಚುವ ಸಾಧ್ಯತೆ ಇರುತ್ತದೆ. ಹೀಗಾಗಿ, ಅಧಿಕಾರಿಗಳನ್ನು ಸೇವೆಯಿಂದ ಹೊರಗಿಡುವುದು ಅಗತ್ಯವಾಗಿದೆ ಎಂದು ಎಜಿ ಪೀಠಕ್ಕೆ ವಿವರಿಸಿದ್ದಾರೆ.
ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು. ಈ ದುರಂತಕ್ಕೆ ಹೊಣೆಮಾಡಿ ಸರ್ಕಾರ ಅಮಾನತು ಮಾಡಿದ ಪೊಲೀಸ್ ಅಧಿಕಾರಿಗಳಲ್ಲಿ ವಿಕಾಸ್ ಕುಮಾರ್ ಕೂಡ ಒಬ್ಬರು.
ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಭದ್ರತಾ ಉಸ್ತುವಾರಿ ವಹಿಸಿದ್ದ ವಿಕಾಸ್ ಕುಮಾರ್ ಅವರನ್ನು ಬೇಜವ್ದಾರಿಯ ಕಾರಣ ನೀಡಿ ಸರ್ಕಾರ ಅಮಾನತು ಮಾಡಿತ್ತು.
ಇದನ್ನು ಪ್ರಶ್ನಿಸಿ ವಿಕಾಸ್ ಕುಮಾರ್ ಸಿಎಟಿ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಕೆ ಶ್ರೀವಾತ್ಸವ ಮತ್ತು ಸಂತೋಷ್ ಮೆಹ್ರಾ ಅವರಿದ್ದ ಪೀಠ ಸರ್ಕಾರದ ಆದೇಶ ರದ್ದುಗೊಳಿಸಿ ಆದೇಶಿಸಿದೆ. ಅಲ್ಲದೆ, ಅವರನ್ನು ಮೂಲಸ್ಥಾನಕ್ಕೆ ಮರು ನೇಮಿಸಲು ಮತ್ತು ಹಿಂದಿನ ಎಲ್ಲಾ ಭತ್ಯೆ, ಸೌಲಭ್ಯ ಒದಗಿಸಲು ಸೂಚಿಸಿದೆ.
Courtesy : barandbench.com
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅಮಾನತು ರದ್ದುಗೊಳಿಸಿದ ಸಿಎಟಿ


