ಲಸಿಕೆ ಹೆಸರಲ್ಲಿ ಕಟ್ಟಡ ಕಾರ್ಮಿಕರ ನಿಧಿಯನ್ನು ಖಾಸಗಿ ಆಸ್ಪತ್ರೆಗೆ ನೀಡುತ್ತಿರುವ ರಾಜ್ಯ - AICCTU ಆಕ್ರೋಶ | NaanuGauri

ದೇಶದಾದ್ಯಂತ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ ನಂತರ ದೇಶದಾದ್ಯಂತ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುತ್ತಿದೆ. ಆದರೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ, ಅವರ ಶ್ರಮದಿಂದಾಗಿ ಶೇಖರಣೆಯಾದ ಕಲ್ಯಾಣ ನಿಧಿಯಿಂದ ಲಸಿಕೆ ನೀಡುವುದಕ್ಕೆ ರಾಜ್ಯ ಸರ್ಕಾರ ಹೊರಟಿದ್ದು, ಒಂದು ಡೋಸ್‌ಗೆ ರೂ.789 ಯಂತೆ ಒಟ್ಟು 15.60 ಕೋಟಿ ರೂ.ಗಳನ್ನು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಮ್‌ಗಳಿಗೆ ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.

ಕಾರ್ಮಿಕರ ಸುರಕ್ಷತೆ, ಕಲ್ಯಾಣ ಮತ್ತು ಸೇವೆಗಾಗಿ, “ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು (ಉದ್ಯೋಗ ಮತ್ತು ಸೇವಾ ನಿಯಮಗಳ ನಿಯಂತ್ರಣ) ಕಾಯಿದೆ-1996” ರ ಅಡಿಯಲ್ಲಿ “ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ”ಯನ್ನು ಸ್ಥಾಪಿಸಲಾಗಿದೆ. “ಮಂಡಳಿ ಇರುವುದು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಉದ್ಯೋಗ ಮತ್ತು ಸೇವೆಯ ಪರಿಸ್ಥಿತಿಗಳನ್ನು ನಿಯಂತ್ರಿಸಲು ಮತ್ತು ಅವರ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ ಕ್ರಮಗಳನ್ನು ಜಾರಿಗೊಳಿಸುವುದಕ್ಕಾಗಿ” ಎಂದು AICCTU ಹೇಳಿದ್ದು, ಸರ್ಕಾರದ ಕಾರ್ಯಾದೇಶ ದಿಗ್ಬ್ರಮೆ ಉಂಟುಮಾಡಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಹೆಣ್ಣು ಮಕ್ಕಳ ಆಕ್ರಂದನ ಕೇಳುತ್ತಿಲ್ಲವೇ? ದೆಹಲಿಯ ದಲಿತ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರೆ ಸುಮಾರು 30 ಲಕ್ಷ ಜನರಿದ್ದಾರೆ. ಆದರೆ ಪ್ರಸ್ತುತ ಸರ್ಕಾರ ಕೇವಲ 2 ಲಕ್ಷ ಡೋಸ್‌ಗಳಿಗೆ ಕಾರ್ಮಿಕರ ಖಾಸಗಿ ಆಸ್ಪತ್ರಗೆ ಬಿಡುಗಡೆ ಮಾಡಲಾಗಿದೆ.

ಕಾರ್ಮಿಕ ಸಂಘಟನೆ AICCTU ಯ ಪದಾದಿಕಾರಿಯೊಬ್ಬರು ನಾನುಗೌರಿ.ಕಾಂ ಜೊತೆ ಮಾತನಾಡಿ, “ಕಟ್ಟಡ ಮತ್ತು ನಿರ್ಮಾಣ ಕ್ಷೇತ್ರ ಕಾರ್ಮಿಕರಲ್ಲಿ 60% ಜನರು ಈಗಾಗಲೆ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಹೊರ ರಾಜ್ಯದಿಂದ ಬರುವ ವಲಸೆ ಕಾರ್ಮಿಕರು ಕೂಡಾ ಲಸಿಕೆ ಪಡೆದೇ ರಾಜ್ಯ ಪ್ರವೇಶಿಸುತ್ತಾರೆ. ಲಾಕ್‌ಡೌನ್‌ ಸಮಯದಲ್ಲಿ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ ನೇರವಾಗಲು ರಾಜ್ಯಕ್ಕೆ ವಿನಂತಿಸಿದಾಗ ಅದಕ್ಕೆ ಸರ್ಕಾರ ಸ್ಪಂದಿಸಿರಲಿಲ್ಲ. ಈಗ, ಕಾರ್ಮಿಕರ ನಿಧಿಯಿಂದ 400 ಆಸ್ಪತ್ರೆಗಳಿಗೆ ಹಣ ಬಿಡುಗಡೆ ಮಾಡಿದೆ. ಸರ್ಕಾರದ ಈ ನಡೆ ಖಾಸಗಿ ಆಸ್ಪತ್ರೆಗಳ ಅವರ ಹಿತ ಕಾಯಲು ಬೇಕಾಗಿಯೆ ಹೊರತು ಕಾರ್ಮಿಕರ ಹಿತ ಕಾಯಲು ಅಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕಾರ್ಮಿಕರ ಅನುಕೂಲಕ್ಕಾಗಿ ಮೀಸಲಾದ ಹಣವನ್ನು ನೇರವಾಗಿ ಆ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕಾಗುತ್ತದೆ. ಅವರ ಹೆಸರಲ್ಲಿ ಕಾರ್ಪೋರೇಟ್‌ ಆಸ್ಪತ್ರೆಗಳ ಖಾತೆಗೆ ಜಮಾ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ. ಸದರಿ ಕಾರ್ಯಾದೇಶ ಹೊರಡಿಸುವುದಕ್ಕಿಂತ ಮುಂಚೆ ಕಾರ್ಮಿಕರನ್ನು ಅಥವಾ ಕಾರ್ಮಿಕ ಸಂಘಟನೆಗಳನ್ನು ಸಂಪರ್ಕಿಸಿ ಚರ್ಚೆ ನಡೆಸಬೇಕೆನ್ನುವ ಸಾಮಾನ್ಯ ಜ್ಞಾನ ಸರ್ಕಾರ ಮತ್ತು ಆಡಳಿತ ವಲಯಕ್ಕೆ ಇಲ್ಲದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಧಿಕ್ಕರಿಸಿದಂತಿದೆ” ಎಂದು AICCTU ಹೇಳಿದೆ.

ಇದನ್ನೂ ಓದಿ: ಸರಕಾರಿ ಜಾಹೀರಾತು 100% ಕಡಿತ: ಸಿಎಎ ಪ್ರತಿಭಟನೆಗಳ ವರದಿ ಮಾಡಿದ್ದಕ್ಕೆ ಬೆಲೆ ತೆರುತ್ತಿದೆಯೇ ವಾರ್ತಾಭಾರತಿ ಕನ್ನಡ ದೈನಿಕ?

“ಆಡಳಿತ ನಡೆಸುತ್ತಿರುವ ಕಾರ್ಪೋರೇಟ್‌ ಗುಲಾಮಿ ಸರ್ಕಾರದ ನೀತಿಯಿಂದಾಗಿ ಕಾರ್ಮಿಕರ ಕಲ್ಯಾಣ ಮಂಡಳಿಯು, ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾಗಿರುವ ಹಣವನ್ನು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಮ್‌ ಅಸೋಶಿಯೇಷನ್‌ರವರ ಹಿತ ಕಾಪಾಡುವುದಕ್ಕಾಗಿ ದುರುಪಯೋಗ ಪಡಿಸಿಕೊಳ್ಳಲು ಹೊರಟಿರುವುದು ದುರದೃಷ್ಟಕರ ಸಂಗತಿ” ಎಂದು ಅದು ಹೇಳಿದೆ.

“ಕೊರೊನಾ ಎರಡನೇ ಅಲೆಯಲ್ಲಿ ಕಾರ್ಮಿಕರ ಕಾಳಜಿ ವಹಿಸದ ರಾಜ್ಯ ಸರ್ಕಾರ, ಈಗ ಕಾರ್ಮಿಕರ ಕಲ್ಯಾಣಕ್ಕಾಗಿ ಉಳಿತಾಯ ಮಾಡಿದ್ದ ಹಣವನ್ನು ಬೇಜವಾಬ್ದಾರಿಯಿಂದ ಖರ್ಚು ಮಾಡುತ್ತಿದೆ. ತಮ್ಮ ಜವಾಬ್ದಾರಿಯಿಂದ ಕಳಚಿಕೊಂಡು ಈಗ ಖಾಸಗೀ ವಲಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಸರ್ಕಾರವನ್ನು ನಾವು ಖಂಡಿಸುತ್ತೇವೆ” ಎಂದು AICCTU ತಿಳಿಸಿದೆ.
ಕಾರ್ಮಿಕ ಸಂಘಟನೆಗಳ ಅಹವಾಲುಗಳನ್ನು ಕೇಳದೆ, ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಯನ್ನು ಲೂಟಿ ಮಾಡುವುದಕ್ಕಾಗಿಯೇ ಹೊರಡಿಸಿರುವ ಕಾರ್ಯಾದೇಶವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು AICCTU ಆಗ್ರಹಿಸಿದ್ದು, “ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿರರಿಗೆ ಉಚಿತವಾಗಿ ಕೋವಿಡ್‌ ಲಸಿಕೆ ನೀಡಬೇಕೆಂದು ಮತ್ತು ಈ ಕಾರ್ಮಿಕರ ಕಲ್ಯಾಣ ನಿಧಿಯನ್ನು ಕಾರ್ಮಿಕರ ಕಲ್ಯಾಣ ಯೋಜನೆಗಳಿಗಾಗಿಯೇ ಉಪಯೋಗಿಸಬೇಕು” ಎಂದು ಅದು ಹೇಳಿದೆ.

ಇದನ್ನೂ ಓದಿ: ಕಾರ್ಮಿಕರ ದುಡಿಯುವ ಅವಧಿಯನ್ನು 10 ಗಂಟೆಗೆ ಏರಿಸಿದ ರಾಜ್ಯ ಸರ್ಕಾರ: ಕಾರ್ಮಿಕರ ಸಂಘಟನೆಗಳ ವಿರೋಧ

LEAVE A REPLY

Please enter your comment!
Please enter your name here