Homeಅಂಕಣಗಳುತಾರಾ ದಂಪತಿಯ ಖಾಸಗಿ ಸಂಗತಿಗಳನ್ನೆ ಬಂಡವಾಳವಾಗಿರಿಸಿಕೊಂಡಿರುವ ಪತ್ರಿಕೋದ್ಯಮದ ನಡುವೆ...

ತಾರಾ ದಂಪತಿಯ ಖಾಸಗಿ ಸಂಗತಿಗಳನ್ನೆ ಬಂಡವಾಳವಾಗಿರಿಸಿಕೊಂಡಿರುವ ಪತ್ರಿಕೋದ್ಯಮದ ನಡುವೆ…

- Advertisement -
- Advertisement -

ದೇಶದ ರೈತರು ಸಂಕಷ್ಟದ ಸಮಯ ಎದುರಿಸುತ್ತಿರುವಾಗ ಮುಖ್ಯವಾಹಿನಿ ಎನ್ನಿಸಿಕೊಳ್ಳುವ ಮಾಧ್ಯಮಗಳು ಯಾವ ಸುದ್ದಿಗಾಗಿ ಹಸಿದು ಕುಳಿತಿದ್ದವೋ ಅದು 11 ಜನವರಿ 21ಕ್ಕೆ ಸಿಕ್ಕಿಬಿಟ್ಟಿತು. ತಾರಾ ದಂಪತಿಗೆ ಹುಟ್ಟಿದ ಕೂಸು ಈ ಮಾಧ್ಯಮಗಳಲ್ಲಿ ಹರ್ಷೋದ್ಘಾರ ಮೂಡಿಸಿತು. ಇರಲಿ ಜನಪ್ರಿಯ ತಾರೆಗಳ ಖಾಸಗಿ ಸಂಗತಿಗಳನ್ನು ಸಾರ್ವಜನಿಕವಾಗಿ ಈ ಮಟ್ಟಕ್ಕೆ ಬಿತ್ತರಿಸುವುದು ಪ್ರಾರಂಭವಾಗಿ ಹಲವು ದಶಕಗಳೇ ಕಳೆದಿವೆ. ಒಳ್ಳೆಯ ಪತ್ರಿಕೋದ್ಯಮಕ್ಕೆ ಹೆಸರಾದ ಮಾಧ್ಯಮಗಳು ಕೂಡ ಸ್ಟಾರ್‌ಗಳ ಮದುವೆ, ಅವರಿಗೆ ಮಗುವಾದ ಸುದ್ದಿಗಳನ್ನು ದೊಡ್ಡ ಮಟ್ಟದಲ್ಲಿ ಬಿತ್ತರಿಸುವುದನ್ನು ಉಪೇಕ್ಷಿಸಲಾರದೆ ಇರುವ ಒತ್ತಡದ ಸಂದರ್ಭಕ್ಕೆ ಬಂದು ನಾವು ನಿಂತಿದ್ದೀವಿ.

ಈ ದೇಶದಲ್ಲಿ ಅದೇ ದಿನ ಅಥವಾ ಆ ದಿನದ ಒಂದೆರಡು ದಿನಗಳ ಹಿಂದೆ ಮುಂದೆ ನಡೆದ ಘಟನೆಗಳು ಈ ಮಾಧ್ಯಮಗಳಲ್ಲಿ ದೊಡ್ಡದಾಗಿ ಚರ್ಚೆಯಾಗಬೇಕಿತ್ತು. ಓದುಗರಿಗೆ-ನೋಡುಗರಿಗೆ ಅವುಗಳ ಬಗ್ಗೆ ಇನ್‌ಫಾರ್ಮಡ್ ಒಪಿನಿಯನ್ ನೀಡಬೇಕಿದ್ದ ಮಾಧ್ಯಮಗಳು ತಮ್ಮ ಕರ್ತವ್ಯವನ್ನು ನಿಭಾಯಿಸಿದವೇ? ಹಿಂದೂ ಮಹಾಸಭಾದವರು ಮಧ್ಯಪ್ರದೇಶದಲ್ಲಿ ಗೋಡ್ಸೆ ಹೆಸರಿನಲ್ಲಿ ಕಟ್ಟಿದ ಗ್ರಂಥಾಲಯದ ಬಗ್ಗೆ ಸುದ್ದಿ ಬಂದು ಮಿಂಚಿ ಮಾಯವಾಯಿತು. ಸ್ವಾತಂತ್ರ್ಯಾನಂತರ ಮೊದಲ ವರ್ಷಗಳಲ್ಲಿ ಈ ದೇಶ ಕಂಡ ಅತಿ ದೊಡ್ಡ ಭಯೋತ್ಪಾದಕನ ಆರಾಧನೆಗೆ ತೊಡಗಿರುವ ವಿದ್ಯಮಾನದ ಬಗ್ಗೆ ಮುಖ್ಯವಾಹಿನಿ ಮಾಧ್ಯಮಗಳು ಮೂಡಿಸಿದ ಎಚ್ಚರ ಎಷ್ಟು?

ಅದೇ ದಿನ ನಕಲಿ ಸುದ್ದಿಗಳನ್ನು ಬಯಲು ಮಾಡುವ ಆಲ್ಟ್‌ನ್ಯೂಸ್ ಎಂಬ ಡಿಜಿಟಲ್ ಸುದ್ದಿತಾಣ, ಈ ಮುಖ್ಯವಾಹಿನಿ ಸುದ್ದಿಪತ್ರಿಕೆ ಮತ್ತು ಟಿವಿಗಳ ಬೇಜವಾಬ್ದಾರಿತನವನ್ನು ಬಯಲಿಗೆಳೆದಿತ್ತು. ಬಾಲಾಕೋಟ್ ವೈಮಾನಿಕ ದಾಳಿಯಲ್ಲಿ ಭಾರತ 300 ಪಾಕಿಸ್ತಾನಿ ಜನರನ್ನು ಹತ್ಯೆ ಮಾಡಿರುವ ಬಗ್ಗೆ ಪಾಕಿಸ್ತಾನದ ಮಾಜಿ ರಾಜತಾಂತ್ರಿಕರೊಬ್ಬರು ಒಪ್ಪಿಕೊಂಡಿದೆ ಎಂಬ ಸುಳ್ಳುಸುದ್ದಿಯನ್ನು ಹಲವಾರು ಮುಖ್ಯವಾಹಿನಿ ಮಾಧ್ಯಮಗಳು (ಕೆಲವು ನಂಬಿಕಸ್ಥ ಮಾಧ್ಯಮಗಳೂ ಸೇರಿದಂತೆ) ವರದಿ ಮಾಡಿದ್ದನ್ನು ಆಲ್ಟ್‌ನ್ಯೂಸ್ ವರದಿ ಮಾಡಿತ್ತು. ಕುಚೋದ್ಯದ ವಿಷಯ ಎಂದರೆ ಇಲ್ಲಿಯವರೆಗೂ ಭಾರತದ ಯಾವುದೇ ಅಧಿಕೃತ ಸಂಸ್ಥೆ ಇಂತಹ ಸಂಖ್ಯೆಯನ್ನು ಕ್ಲೇಮ್ ಮಾಡದೆ ಇರುವುದು. ಜಫರ್ ಹಿಲಾಲಿ ಎಂಬುವವರ ಒಂದು ವಿಡೀಯೋವನ್ನು ತಿರುಚಿ, ಅದನ್ನು ಆಧಾರವಾಗಿರಿಸಿಕೊಂಡು ಈ ಮಾಧ್ಯಮಗಳು ಇಂತಹ ಸುಳ್ಳುಸುದ್ದಿಯನ್ನು ಓದುಗರಿಗೆ-ವೀಕ್ಷಕರಿಗೆ ಅತಿರಂಜಿತವಾಗಿ ಉಣಬಡಿಸಿದ್ದವು. ಅವುಗಳಲ್ಲಿ ಯಾವ ಯಾವ ಮಾಧ್ಯಮಗಳು ತಾವು ಮಾಡಿದ ತಪ್ಪನ್ನು (ಬೇಜವಾಬ್ದಾರಿಯಿಂದ ಮಾಡಿದ್ದರೆ) ಒಪ್ಪಿಕೊಂಡವು?

ಅದೇ ದಿನ ಆಸ್ಟ್ರೇಲಿಯಾದ ವಿರುದ್ಧ ಮೂರನೇ ಟೆಸ್ಟ್ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿದ್ದನ್ನು ಸಂಭ್ರಮಿಸಲಾಯಿತು. ಆದರೆ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಭಾರತದ ಆಟಗಾರರ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದರ ವಿರುದ್ಧ ಮಾಧ್ಯಮಗಳು ಯಾವ ಅಭಿಪ್ರಾಯ ತಳೆದು ಜನಕ್ಕೆ ತಿಳಿಸಿದವು? ಜಾತಿ, ಧರ್ಮ ಮತ್ತು ವರ್ಣ ನಿಂದನೆಗಳು ಇಲ್ಲಿ ರಕ್ತಗತವಾಗಿ ಇರುವುದರಿಂದ ಅದು ಅಂತಹ ದೊಡ್ಡ ಸಮಸ್ಯೆಯಾಗಿ ಇಲ್ಲಿ ಕಾಣುವುದಿಲ್ಲವೇ?

PC : New Indian Express

ಇನ್ನು ಅದೇ ದಿನ ಮತ್ತು ಅದರ ಮುಂದಿನ ದಿನ ಕೃಷಿ ಕಾಯ್ದೆಗಳು ಮತ್ತು ರೈತ ಹೋರಾಟದ ಬಗ್ಗೆ ಸುಪ್ರೀಮ್ ಕೋರ್ಟ್ ತೀರ್ಪನ್ನು ನೀಡಿದೆ. ಮೂರು ಕೃಷಿ ಕಾಯ್ದೆಗಳಿಗೆ ತಾತ್ಕಾಲಿಕ ತಡೆಯನ್ನು ನೀಡಿ, ಸಮಿತಿಯೊಂದನ್ನು ರಚಿಸಿ ಅದರ ಜೊತೆಗೆ ಸಮಸ್ಯೆ ಚರ್ಚಿಸುವಂತೆ ರೈತ ಸಂಘಟನೆಗಳಿಗೆ ಹೇಳಿದೆ. ಆದರೆ ಆ ಸಮಿತಿಯಲ್ಲಿ ಇರುವ ನಾಲ್ಕೂ ಜನ ಸದಸ್ಯರು ಈ ಕೃಷಿ ಕಾಯ್ದೆಗಳ ಪ್ರಬಲ ಸಮರ್ಥಕರು. ಇದರ ಬಗ್ಗೆ ಈ ಮುಖ್ಯವಾಹಿನಿ ಮಾಧ್ಯಮಗಳು ಯಾವ ರೀತಿಯಲ್ಲಿ ಚರ್ಚಿಸಲಿವೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ ಅಲ್ಲವೇ? ಈ ಕೃಷಿ ಕಾಯ್ದೆಗಳು ಯಾವ ಬಂಡವಾಳಶಾಹಿ ಸಂಸ್ಥೆಗಳಿಗೆ ಸಹಾಯ ಮಾಡಲಿವೆ ಎಂದು ಆರೋಪಿಸಿ ರೈತರು ಪ್ರತಿಭಟಿಸುತ್ತಿದ್ದಾರೋ, ಅದರಲ್ಲಿ ಒಂದು ಕಾರ್ಪೊರೆಟ್ ಸಂಸ್ಥೆ ಹಲವು ಮಾಧ್ಯಮ ಸಂಸ್ಥೆಗಳನ್ನು ಹೊಂದಿರುವ ಒಡೆಯ. ಈ ಒಡೆಯನ ಮಾತನ್ನು ಶಿರಸಾವಹಿಸಿ ಪಾಲಿಸುವ ಕೆಲವು ಡಿಜಿಟಲ್ ಜಾಲತಾಣಗಳು ಮತ್ತು ಟಿವಿ ಚಾನೆಲ್‌ಗಳು ಕೃಷಿ ಕಾಯ್ದೆಗಳ ಪರವಾಗಿ ಒಂದು ನಕಲಿ ಸಮೀಕ್ಷೆಯನ್ನು ಮಾಡಿ, ದೇಶದ ಅತಿ ಹೆಚ್ಚು ಜನ ಕೃಷಿ ಕಾಯ್ದೆಗಳನ್ನು ಬೆಂಬಲಿಸುತ್ತಿದ್ದಾರೆ ಎಂಬ ಫಲಿತಾಂಶವನ್ನು ಪ್ರಕಟಿಸಿ, ರೈತರ ಹೋರಾಟ ಉತ್ತುಂಗದಲ್ಲಿದ್ದಾಗ, ಅದನ್ನು ತನ್ನ ಜಾಲತಾಣದ ಮುಖಪುಟಲ್ಲಿ ದಿನಗಟ್ಟಲೆ ರಾರಾಜಿಸಿಸಿತ್ತು.

ಡಿಸೆಂಬರ್ ತಿಂಗಳ ನ್ಯೂಯಾರ್ಕರ್‌ನ ಒಂದು ಸಂಚಿಕೆಯಲ್ಲಿ ’ಮರ್ಡರ್ ಇನ್ ಮಾಲ್ಟಾ’ ಎಂಬ ರಿಪೋರ್ಟಾಜ್ ಪ್ರಕಟವಾಗಿದೆ. ಮಾಲ್ಟಾ ಯುರೋಪಿನ ಒಂದು ಪುಟ್ಟ ರಾಷ್ಟ್ರ. ಅಲ್ಲಿ ನಡೆದ ಅತಿ ಡೊಡ್ಡ ಭ್ರಷ್ಟಾಚಾರದ ಬಗ್ಗೆ ಒಬ್ಬಂಟಿಯಾಗಿ ಹೋರಾಡಿ, ವರದಿಗಳನ್ನು ತನ್ನ ಬ್ಲಾಗ್‌ನಲ್ಲಿ ಬರೆದು 2017ರಲ್ಲಿ ಕೊಲೆಯಾದ ಪತ್ರಕರ್ತೆಯ ಪ್ರಕರಣದ ಬಗೆಗಿನ ವರದಿ ಅದು. ಗೌರಿಯವರು ಕೊಲೆಯಾದ ಒಂದು ತಿಂಗಳ ನಂತರವಷ್ಟೆ ಪತ್ರಕರ್ತೆ ದಾಫ್ನೆ ಕರುವಾನ ಗಲಿಝಿಯಾ ಕೊಲೆಯಾದದ್ದು. ಅಂದಿನ ಮಾಲ್ಟಾ ಪ್ರಧಾನಿ ಜೋಸೆಫ್ ಮಸ್ಕಟ್‌ನ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕೆ ಈ ಕೊಲೆಯಾದದ್ದು. ಶೆಲ್ ಕಂಪನಿಗಳ ಮೂಲಕ ಅನಧಿಕೃತ ವ್ಯವಹಾರಗಳನ್ನು ಮಾಡುವ ಸಂಸ್ಥೆಗಳ ಹಗರಣದ ’ಪನಾಮಾ ಪೇಪರ್ಸ ಭಾರತದಲ್ಲಿಯೂ ಸದ್ದಾಗಿದ್ದು ನೆನಪಿಸಿಕೊಳ್ಳಬಹುದು.

ಅದನ್ನು ತನ್ನ ಮಗನ ಸಹಾಯದಿಂದ ಬಹಿರಂಗಗೊಳಿಸಿ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿ ಹತ್ಯೆಯಾದವರು ಆಕೆ. ಭಾರತದಲ್ಲಿ ಪನಾಮ ಪೇಪರ್ಸ್ ಬಗ್ಗೆ ಆದ ಚರ್ಚೆ ಎಷ್ಟು ಎಂಬ ಪ್ರಶ್ನೆಯೇ ಈಗ ಹಾಸ್ಯಾಸ್ಪದ.
ಹಂತಕರನ್ನು ನೇಮಿಸಿ ಸಿನಿಮೀಯ ರೀತಿಯಲ್ಲಿ ಆಗುವ ಕೊಲೆಯ ತನಿಖೆಯನ್ನು ಬೇಧಿಸಲು ದಾಫ್ನೆಯವರ ಮೂವರು ಮಕ್ಕಳು ಒಂದಾಗಿ ಹೋರಾಡುವುದು ಅವರ ತಾಯಿ ಮಾಡಿದ ರೀತಿಯದ್ದೇ ಧೀರೋದ್ದಾತ ಹೋರಾಟ! ಆ ಹೋರಾಟದ ಫಲವಾಗಿ ಪ್ರಧಾನಿ ಜೋಸೆಫ್ ಮಸ್ಕಟ್ ರಾಜೀನಾಮೆ ನೀಡಬೇಕಾಗಿ ಬರುತ್ತದಲ್ಲದೆ, ಹಂತಕ ಮತ್ತು ಈ ಕೊಲೆಗೆ ಆದೇಶಿಸಿದ್ದ ಪ್ರಧಾನಿ ಕಾರ್ಯಾಲಯದ ಸಿಬ್ಬಂದಿ ಕೂಡ ಅರೆಸ್ಟ್ ಆಗುತ್ತಾರೆ.

ಕರಾಳ ದಿನಗಳಲ್ಲಿ ಇಂತಹ ಧೀರ ಮತ್ತು ದಿಟ್ಟ ಪತ್ರಿಕೋದ್ಯಮದ ಕೆಲಸಗಳು ಸ್ಫೂರ್ತಿ ತುಂಬಬಲ್ಲವೇ?


ಇದನ್ನೂ ಓದಿ: ರೈತರಿಗೆ ತಮಗೇನು ಬೇಕೆಂದು ಗೊತ್ತಿಲ್ಲ; ಅವರನ್ನು ಯಾರೋ ಪ್ರಚೋದಿಸುತ್ತಿದ್ದಾರೆ: ಹೇಮಾ ಮಾಲಿನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...