Homeಮುಖಪುಟಹೋರಾಟ ತೀವ್ರಗೊಳಿಸಲು ಗಟ್ಟಿ ನಿರ್ಧಾರ: ಮೇ ತಿಂಗಳಿನಲ್ಲಿ ಪಾರ್ಲಿಮೆಂಟ್ ಚಲೋಗೆ ರೈತರ ಕರೆ

ಹೋರಾಟ ತೀವ್ರಗೊಳಿಸಲು ಗಟ್ಟಿ ನಿರ್ಧಾರ: ಮೇ ತಿಂಗಳಿನಲ್ಲಿ ಪಾರ್ಲಿಮೆಂಟ್ ಚಲೋಗೆ ರೈತರ ಕರೆ

- Advertisement -
- Advertisement -

ಕೇಂದ್ರ ಸರ್ಕಾರದ ವಿವಾದಿತ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಮತ್ತು ಎಂಎಸ್‌ಪಿ ಖಾತ್ರಿಗಾಗಿ ಹೊಸ ಕಾನೂನು ತರಬೇಕೆಂದು ಕಳೆದ 4 ತಿಂಗಳಿಂದ ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವ ರೈತರು ತಮ್ಮ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಫೆಬ್ರವರಿ 1 ರಂದು ಕೇಂದ್ರ ಬಜೆಟ್ ದಿನ ನಡೆಸಬೇಕಿದ್ದ ಪಾರ್ಲಿಮೆಂಟ್ ಚಲೋ ಜನವರಿ 26ರ ಅಹಿತಕರ ಘಟನೆಗಳಿಂದ ಮುಂದೂಡಲ್ಪಟ್ಟಿತ್ತು. ಈಗ ಅದನ್ನು ಮೇ ತಿಂಗಳಿನಲ್ಲಿ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ತೀರ್ಮಾನಿಸಿದೆ.

130ಕ್ಕೂ ಹೆಚ್ಚು ದಿನಗಳಿಂದ ದೆಹಲಿಯ ರೈತ ಹೋರಾಟ ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಮೇ ತಿಂಗಳಿನಲ್ಲಿ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಘೋಷಣೆ ಆದ ನಂತರ ಸಂಸತ್ತಿಗೆ ಪಾದಾಯಾತ್ರೆ ನಡೆಸಲು ಕರೆ ನೀಡಿದೆ. ಆ ಮೂಲಕ ಕೇಂದ್ರ ಸರ್ಕಾರ ತನ್ನ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಡ ಹೇರಲು ಮುಂದಾಗಿದೆ.

ಜನವರಿ 25 ರಂದು ಸಂಯುಕ್ತಾ ಕಿಸಾನ್ ಮೋರ್ಚಾದ ಸಂಚಾಲಕ ಡಾ. ದರ್ಶನ್ ಪಾಲ್ ಮಾತನಾಡಿ ”ಫೆಬ್ರವರಿ 01 ರಂದು ದೆಹಲಿಯ ವಿವಿಧ ಭಾಗಗಳಿಂದ ರೈತರು ಪಾರ್ಲಿಮೆಂಟ್ ಕಡೆಗೆ ಪಾದಯಾತ್ರೆ ನಡೆಸುತ್ತೇವೆ. ಕರಾಳ ಕಾನೂನುಗಳು ರದ್ದಾಗುವವರೆಗೂ ಹೋರಾಟ ಮುಂದುವರೆಯಲಿದೆ” ಎಂದು ತಿಳಿಸಿದ್ದರು. ಆದರೆ ಜನವರಿ 26ರ ಕಿಸಾನ್ ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಘಟನೆಗಳಿಂದಾಗಿ ಫೆಬ್ರವರಿ 1ರ ಪಾರ್ಲಿಮೆಂಟ್ ಚಲೋ ಹೋರಾಟವನ್ನು ಮುಂದೂಡಲಾಗಿತ್ತು.

ತದನಂತರ ರೈತ ಮುಖಂಡರು ತಮ್ಮ ಗಮನವನ್ನು ದೇಶದೆಲ್ಲೆಡೆ ನಡೆಯುತ್ತಿರುವ ರೈತ ಮಹಾಪಂಚಾಯತ್‌ಗಳ ಕಡೆ ಹರಿಸಿದ್ದರು. ಹರಿಯಾಣ, ಉತ್ತರಪ್ರದೇಶ, ಪಂಜಾಬ್, ರಾಜಸ್ಥಾನ, ಉತ್ತರಖಂಡ, ತೆಲಂಗಾಣ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತ ಮಹಾಪಂಚಾಯತ್‌ಗಳು ನಡೆದು ರೈತ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ಘೋಷಿಸಿದ್ದವು. ಇಂದು ಕೂಡ ಕರ್ನಾಟಕದ ಬೆಳಗಾವಿಯಲ್ಲಿ ರೈತ ಮಹಾಪಂಚಾಯತ್ ನಡೆಯುತ್ತಿದೆ.

ಇದುವರೆಗೂ ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವೆ 11 ಸುತ್ತಿನ ಮಾತುಕತೆಗಳು ನಡೆದಿವೆಯಾದರೂ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರ ಕಾಯ್ದೆಗಳನ್ನು ಒಂದೂವರೆ ವರ್ಷ ತಡೆಹಿಡಿಯುವುದಾಗಿ ಹೇಳಿದರೆ ರೈತರು ಕಾಯ್ದೆಗಳ ಸಂಪೂರ್ಣ ರದ್ದತಿಗೆ ಒತ್ತಾಯಿಸಿದ್ದಾರೆ. ಜೊತೆಗೆ ಎಂಎಸ್‌ಪಿ ಖಾತ್ರಿಗೊಳಿಸುವ ಕಾಯ್ದೆ ಜಾರಿಗಾಗಿ ರೈತರು ಆಗ್ರಹಿಸಿದ್ದಾರೆ.

ಹೋರಾಟ ನಿರತ ರೈತರು ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಮತ ನೀಡದಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಮೇ 02ಕ್ಕೆ ಫಲಿತಾಂಶ ಘೋಷಣೆಯಾಗಲಿದ್ದು ನಂತರ ರೈತ ಹೋರಾಟ ಮತ್ತೆ ದೇಶದ ಗಮನಸೆಳೆಯಲಿದೆ ಎನ್ನಲಾಗಿದೆ.


ಇದನ್ನೂ ಓದಿ: ಬಜೆಟ್ ದಿನ ರೈತರಿಂದ ಪಾರ್ಲಿಮೆಂಟ್ ಚಲೋ : ಸಂಸತ್ತಿಗೆ ಪಾದಯಾತ್ರೆ ನಡೆಸಲು ನಿರ್ಧಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...