Homeಕರ್ನಾಟಕಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಬಗೆಹರಿಯದಿರುವ ಬಡಜನರ ಭೂಮಿ-ಮನೆ ಸಮಸ್ಯೆ: ಮಾತು ತಪ್ಪಿದ ಸರ್ಕಾರ

ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಬಗೆಹರಿಯದಿರುವ ಬಡಜನರ ಭೂಮಿ-ಮನೆ ಸಮಸ್ಯೆ: ಮಾತು ತಪ್ಪಿದ ಸರ್ಕಾರ

ರಾಜ್ಯವ್ಯಾಪಿ ದೀರ್ಘಾವಧಿ ಹೋರಾಟಕ್ಕೆ ಸಿದ್ಧತೆ: ಜುಲೈ 1ರಂದು ಚಿತ್ರದುರ್ಗ ಜಿಲ್ಲೆಯ ಸಂತ್ರಸ್ತರ ಸಮಾವೇಶ

- Advertisement -

| ಸಿರಿಮನೆ ನಾಗರಾಜ್ |

ಹಳ್ಳಿ-ನಗರಗಳೆನ್ನದೆ ರಾಜ್ಯದಾದ್ಯಂತ ಬಡಜನರು ಹತ್ತಾರು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು, ಸರ್ಕಾರಿ ಭೂಮಿಯಲ್ಲಿ ಬಗರ್‍ಹುಕುಂ ಸಾಗುವಳಿ ಮಾಡಿಕೊಂಡು ಹಕ್ಕುಪತ್ರಗಳಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತ, ವಿವಿಧ ಸಂಘಟನೆಗಳಡಿ ಹೋರಾಟಗಳನ್ನು ನಡೆಸುತ್ತ ಬಂದಿದ್ದಾರೆ. ಅದರ ಫಲವಾಗಿ ಸರ್ಕಾರವು ‘ಅಕ್ರಮ-ಸಕ್ರಮ’ ಯೋಜನೆ ರೂಪಿಸಿ, ಬಗರ್‍ಹುಕುಂ ಸಾಗುವಳಿದಾರರಿಂದ 1980 ಮತ್ತು 1990ರ ದಶಕದಲ್ಲಿ ಫಾರಂ ನಂ. 50 ಮತ್ತು ಫಾರಂ ನಂ. 53ರಲ್ಲಿ ಅರ್ಜಿ ಕರೆದಿತ್ತು. ಅದೇ ರೀತಿ ಮನೆಗಳನ್ನು ಸಕ್ರಮಗೊಳಿಸಲು 94ಸಿ ಮತ್ತು 94ಸಿಸಿ ಯೋಜನೆ ರೂಪಿಸಿ ಅರ್ಜಿ ಸ್ವೀಕರಿಸಿದೆ. ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾಗಿ ಹೆಚ್ಚುಕಮ್ಮಿ ನಾಲ್ಕು ದಶಕಗಳೇ ಕಳೆದಿವೆ. ಆದರೆ ಬಡವರಿಗೆ ಜಮೀನು-ಮನೆ ಸಿಕ್ಕಿರುವ ಪ್ರಮಾಣ 1% ಕೂಡ ಇಲ್ಲ. ಬಹುತೇಕ ಅರ್ಜಿಗಳನ್ನು ನಾನಾ ನೆಪ ನೀಡಿ ತಿರಸ್ಕರಿಸಲಾಗಿದೆ ಎನ್ನುವುದು ಕಟು ವಾಸ್ತವ. ಇನ್ನೂ ಲಕ್ಷಾಂತರ ಅರ್ಜಿಗಳು ಹಾಗೇ ಉಳಿದಿವೆ. ಇಂದಿಗೂ ಈ ಸಮಸ್ಯೆ ಬಗೆಹರಿಯದೆ ಬಡವರ ಬದುಕನ್ನು ಕಿತ್ತು ತಿನ್ನುತ್ತಿದೆ.

ಈ ಸಮಸ್ಯೆಯನ್ನು ಶಾಶ್ವತವಾಗಿ, ಪರಿಣಾಮಕಾರಿಯಾಗಿ ಪರಿಹರಿಸಬೇಕೆಂದು ಹಲವು ಹೋರಾಟನಿರತ ಸಂಘಟನೆಗಳು 2016ರಲ್ಲಿ ಒಟ್ಟುಗೂಡಿ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ರೂಪಿಸಿ, 2016ರ ಜೂನ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಂದಾಯ ಮಂತ್ರಿ ಕಾಗೋಡು ತಿಮ್ಮಪ್ಪ ಇವರುಗಳಿಗೆ ವಿವರವಾದ ಮನವಿ ಪತ್ರ ಸಲ್ಲಿಸಿದಾಗ ಸಮಸ್ಯೆಯ ಪರಿಹಾರದ ಬಗ್ಗೆ ಇಬ್ಬರೂ ಗಂಭೀರವಾಗಿ ಭರವಸೆ ನೀಡಿದ್ದರು. ನಂತರ 2016ರ ಆಗಸ್ಟ್ 20ರಂದು ದೇವರಾಜ ಅರಸು ಜನ್ಮಶತಾಬ್ದಿಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಾದ್ಯಂತದ ಸಾವಿರಾರು ಜನ ಸಂತ್ರಸ್ತರ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಕಾಗೋಡರು, ಸಮಿತಿ ಮುಂದಿಟ್ಟಿದ್ದ ಎಲ್ಲ ಹಕ್ಕೊತ್ತಾಯಗಳೂ ಬಹಳ ವಾಸ್ತವಿಕ ಮತ್ತು ಸಮಂಜಸವಾಗಿದ್ದಾವೆಂದು ಹೇಳಿ, ಸರ್ಕಾರದಿಂದ ಖಂಡಿತ ಅವುಗಳನ್ನು ಬಗೆಹರಿಸುವ ಮಾತು ಕೊಟ್ಟಿದ್ದರು. ನಂತರ 2016ರ ನವೆಂಬರಿನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಸದನದಲ್ಲೇ ಈ ವಿಷಯ ಪ್ರಸ್ತಾಪವಾದಾಗ ಉತ್ತರಿಸಿದ ಮುಖ್ಯಮಂತ್ರಿಯವರು ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಕಾಗೋಡರ ಅಧ್ಯಕ್ಷತೆಯಲ್ಲಿ ಒಂದು ಉನ್ನತ ಸಮಿತಿ ರಚಿಸುವುದಾಗಿ ಸದನಕ್ಕೆ ವಾಗ್ದಾನ ಮಾಡಿದ್ದರು. ಇದೇ ರೀತಿಯ ಭರವಸೆ-ವಾಗ್ದಾನಗಳು ಮತ್ತೂ ಒಂದು ವರ್ಷ ನಡೆದವು.

ಯಾವ ಭರವಸೆಗಳೂ ಈಡೇರದೆ, ಸಮಿತಿಯು 2018ರ ಜನವರಿಯಲ್ಲಿ ಸುದೀರ್ಘ ಸತ್ಯಾಗ್ರಹ ನಡೆಸಿದಾಗ ಜನವರಿ 27ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ 1) ಭೂಮಿ-ವಸತಿ ಸಮಸ್ಯೆಗಳ ಪರಿಹಾರಕ್ಕೆ ಒಂದು ‘ಉನ್ನತ ಮಟ್ಟದ ಸಮಿತಿ’ ರಚನೆ, ಅದರಲ್ಲಿ ಭೂಮಿ-ವಸತಿ ಹೋರಾಟ ಸಮಿತಿಯ ಇಬ್ಬರು ಸದಸ್ಯರ ಸೇರ್ಪಡೆ, 2 ತಿಂಗಳಿಗೊಮ್ಮೆ ಅದರ ಸಭೆ ನಡೆಯಬೇಕು; 2) ಫಾರಂ ನಂ. 50-53ರಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಹೋದ ಬಗರ್‍ಹುಕುಂ ಸಾಗುವಳಿದಾರರಿಗೆ ಪುನಃ ಅರ್ಜಿ ಸಲ್ಲಿಸಲು ಅವಕಾಶ ನೀಡಿ, ‘ಕಟ್ ಆಫ್’ ತಾರೀಕನ್ನು ವಿಸ್ತರಿಸಿ ಕಾಯ್ದೆ ತಿದ್ದುಪಡಿ – ಈ ಎರಡು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅದರಂತೆ ಉನ್ನತ ಮಟ್ಟದ ಸಮಿತಿ ರಚನೆಯಾಗಿ, 2018ರ ಫೆಬ್ರವರಿ ಮತ್ತು ಏಪ್ರಿಲ್‍ನಲ್ಲಿ ಎರಡು ಸಭೆಗಳೂ ನಡೆದವು.

ನಂತರ 2018ರ ಮೇ ತಿಂಗಳಲ್ಲಿ ಚುನಾವಣೆ ನಡೆದು ಹೊಸ ಸರ್ಕಾರ ರಚನೆಯಾಯಿತು. ಹೊಸದಾಗಿ ಎಲ್ಲಾ ತಾಲೂಕುಗಳಲ್ಲಿ ಶಾಸಕರ ಅಧ್ಯಕ್ಷತೆಯ ‘ಭೂ ಮಂಜೂರಾತಿ ಸಮಿತಿ’ಗಳ ರಚನೆಯಾಗಬೇಕಿತ್ತು. ಆದರೆ ಈವರೆಗೂ ಅದು ಆಗಿಲ್ಲ. ಈ ಕುರಿತು ಕಂದಾಯ ಮಂತ್ರಿ ದೇಶಪಾಂಡೆಯವರು ಕೊಟ್ಟ ಭರವಸೆಯೂ ಈಡೇರಿಲ್ಲ. ಅತ್ತ ಉನ್ನತ ಮಟ್ಟದ ಸಮಿತಿಯೂ 2018ರ ಸೆಪ್ಟೆಂಬರಿನಲ್ಲಿ ಒಮ್ಮೆ ಬಹಳ ಒತ್ತಾಯಪೂರ್ವಕವಾಗಿ ಸಭೆ ಸೇರಿದ್ದು ಬಿಟ್ಟರೆ ನಂತರದ ಈ 10 ತಿಂಗಳಲ್ಲಿ ಸಭೆ ಸೇರಿಲ್ಲ. ಅದರ ಅಧ್ಯಕ್ಷರಾಗಿದ್ದ ಅಭಿವೃದ್ಧಿ ಆಯುಕ್ತರು – ಶ್ರೀಮತಿ ವಂದಿತಾ ಶರ್ಮ – ಅದರ ಅಧ್ಯಕ್ಷ ಪದವಿಯಿಂದ ಹಿಂದೆ ಸರಿದು ಬೇರೊಬ್ಬ ಅಧಿಕಾರಿಯನ್ನು ಅಧ್ಯಕ್ಷರಾಗಿ ಸರ್ಕಾರ ನೇಮಿಸಿದೆ. ಆದರೆ ಒಟ್ಟಾರೆ ಆ ಸಮಿತಿಯಿಂದ ಬಡವರಿಗೆ ದೊರಕಿರುವ ಫಲ ಏನೇನೂ ಇಲ್ಲ.

ಕಳೆದ ಸರ್ಕಾರದ ಅವಧಿಯಲ್ಲಿ ಫಾರಂ 50-53 ಮತ್ತು 94ಸಿ/ಸಿಸಿ ಅರ್ಜಿಗಳ ಮಂಜೂರಾತಿ ಪ್ರಕ್ರಿಯೆ ಕೆಲವು ತಾಲೂಕುಗಳಲ್ಲಾದರೂ, ಸ್ವಲ್ಪ ಮಟ್ಟಿಗಾದರೂ ನಡೆದಿತ್ತು. ಒಂದು ವೇಳೆ ಶಾಸಕರು ಭೂ ಮಂಜೂರಾತಿ ಸಮಿತಿ ಸಭೆಗೆ ಹಾಜರಾಗದಿದ್ದಲ್ಲಿ, ಅದರ ಕಾರ್ಯದರ್ಶಿಯಾದ ತಹಸೀಲ್ದಾರರೇ ಇನ್ನೊಬ್ಬ ಸದಸ್ಯರ ಉಪಸ್ಥಿತಿಯಲ್ಲಿ ಅರ್ಜಿಗಳನ್ನು ಇತ್ಯರ್ಥ ಮಾಡಬೇಕು ಹಾಗೂ ಪ್ರತಿ ಶನಿವಾರ ತಪ್ಪದೆ ಈ ಸಭೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂಬುದಾಗಿ ಅಂದಿನ ಕಂದಾಯ ಮಂತ್ರಿ ಕಾಗೋಡು ತಿಮ್ಮಪ್ಪನವರು ‘ಕಟ್ಟುನಿಟ್ಟಾದ ಆದೇಶ’ವನ್ನೂ ಮಾಡಿದ್ದರು. ಆದರೂ ಈ ಎರಡು-ಎರಡೂವರೆ ವರ್ಷಗಳಲ್ಲಿ ಫಲಿತಾಂಶವೇನೂ ತೃಪ್ತಿಕರವಾಗಿಲ್ಲ.

‘ಬಡವರ ಯಾವುದೇ ಬಗರ್‍ಹುಕುಂ ಭೂಮಿ ಅಥವಾ ಮನೆಯಿಂದ ಪರ್ಯಾಯ ನೀಡದೆ ಯಾವ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ’ ಎಂಬುದಾಗಿ ಸರ್ಕಾರ ಕೊಟ್ಟಿದ್ದ ಅಲಿಖಿತ ಭರವಸೆ ಹುಸಿಯಾಗಿ, ರಾಜ್ಯದಾದ್ಯಂತ ಅರಣ್ಯ ಮತ್ತು ಕಂದಾಯ ಅಧಿಕಾರಿಗಳು ಸುರಿವ ಮಳೆ-ಚಳಿ-ಬಿಸಿಲೆಂದು ನೋಡದೆ ನಿರ್ದಯವಾಗಿ ಬಡಜನರನ್ನು ನೆಲೆ ತಪ್ಪಿಸಿ ಬೀದಿಪಾಲು ಮಾಡುವುದು, ಅವರು ಮಾಡಿದ ಬಿತ್ತನೆಯನ್ನು, ಕೊಯ್ಲಿಗೆ ಬಂದ ಫಸಲನ್ನು ನಾಶಪಡಿಸಿ ಭೂಮಿಯನ್ನು ವಶಪಡಿಸಿಕೊಳ್ಳುವುದು ನಿರಂತರವಾಗಿ ನಡೆಯುತ್ತಲೇ ಇದೆ.

ಸ್ವಾತಂತ್ರ್ಯ ಬಂದು ಏಳು ದಶಕ ಕಳೆದಿದ್ದರೂ ಬಗೆಹರಿಯದಿರುವ ಬಡಜನರ ಭೂಮಿ-ವಸತಿ ಸಮಸ್ಯೆಯನ್ನು ಸಮಗ್ರವಾಗಿ ಪರಿಹರಿಸುವುದಾಗಿ ಮೂರು ವರ್ಷದ ಹಿಂದೆ ಸದನಕ್ಕೆ ಕೊಟ್ಟ ಮಾತು ತಪ್ಪಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಇದೇ ಆಗಸ್ಟ್ 14-15ರ ಮಧ್ಯ ರಾತ್ರಿಯಿಂದ ಬಡಜನರ ಭೂಮಿ ಮತ್ತು ಮನೆಯ ಸ್ವಾತಂತ್ರ್ಯಕ್ಕಾಗಿ ವಿನೂತನ ‘ಸ್ವಾತಂತ್ರ್ಯ ಹೋರಾಟ’ವನ್ನು ಆರಂಭಿಸಬೇಕೆಂದೂ ನಿರ್ಣಯವಾಗಿದೆ. ಅದರ ಭಾಗವಾಗಿ ಜುಲೈ 1ರಂದು ಚಿತ್ರದುರ್ಗ ಜಿಲ್ಲೆಯ ಸಂತ್ರಸ್ತರ ಸಮಾವೇಶ ನಡೆಯುತ್ತಿದೆ.

ಚಿತ್ರದುರ್ಗ ಜಿಲ್ಲೆಯಲ್ಲೂ ಒಂದು ಲಕ್ಷಕ್ಕೂ ಹೆಚ್ಚಿನ ದಲಿತ-ಆದಿವಾಸಿ, ಇನ್ನಿತರೆ ಹಿಂದುಳಿದ ಬಡ ಭೂರಹಿತ ಕುಟುಂಬಗಳ ಜನರು ತುಂಡು ಭೂಮಿ ತಮಗಾಗುವುದೆಂದು ಕಾಯುತ್ತಾ ಅದರ ಮೇಲೆ ಕನಸು ಕಟ್ಟುತ್ತಲೇ ಎರಡು-ಮೂರು ತಲೆಮಾರುಗಳನ್ನು ಕಳೆದಿದ್ದಾರೆ. ಕಂದಾಯ, ಅರಣ್ಯ, ಗೋಮಾಳ, ಅಮೃತ್‍ಮಹಲ್ ಕಾವಲು, ಹುಲ್ಲುಬನ್ನಿ ಮುಂತಾದ ಹೆಸರಿನ ಸರ್ಕಾರಿ ಭೂಮಿಗಳಲ್ಲಿ ಕಲ್ಲುಬಂಡೆ, ಮುಳ್ಳುಕಡ್ಡಿ ತೆಗೆದು ಹಸನುಗೊಳಿಸಿ ಬದುಕನ್ನು ಕಟ್ಟಿಕೊಂಡಿದ್ದ ಅದೆಷ್ಟೋ ಜೀವಗಳು ಭೂಮಿಯ ಕನಸು ಕಾಣುತ್ತಲೇ ಪರಲೋಕ ವಾಸಿಗಳಾಗಿವೆ. ಇವರ ಕೈಯಲ್ಲಿದ್ದ ಹರುಕು-ಮುರುಕು ಕಾಗದ ಪತ್ರಗಳನ್ನು ಹಿಡಿದ ಇವರ ವಂಶದ ಕುಡಿಗಳು ತಾಲ್ಲೂಕು, ಜಿಲ್ಲಾಧಿಕಾರಿ ಕಚೇರಿ, ಅರಣ್ಯ ಇಲಾಖೆಗಳ ಮೆಟ್ಟಿಲುಗಳನ್ನು ಹೆಜ್ಜೆ ಗುರುತು ಬೀಳುವಷ್ಟು ಮೆಟ್ಟಿದ್ದರೂ ಭೂಮಿ ಎಂಬುದು ಮರಿಚಿಕೆಯಾಗಿಯೇ ಉಳಿದುಕೊಂಡಿದೆ. ಭೂಮಿ ಇಂದು ಸಿಕ್ಕೀತು, ನಾಳೆ ಸಿಕ್ಕೀತು ಎಂಬ ಭರವಸೆ ಮಾತ್ರದಿಂದಲೇ ಭೂಮಿಗಾಗಿ ಹಸಿದ ಜೀವಗಳು ಹೋರಾಟವನ್ನು ಮಾಡುತ್ತಲೇ ಬರುತ್ತಿದ್ದಾರೆ. ದಶಕಗಳ ಕಾಲದ ಜನರ ಹಸಿವಿನ ಈ ಹೋರಾಟ ಕೆಲ ರಾಜಕಾರಣಿಗಳಿಗೆ ಚುನಾವಣೆ ಸಂಧರ್ಭದಲ್ಲಿ ಭರವಸೆಯ ಅಸ್ತ್ರವಾಗಿದೆ. ಅಧಿಕಾರಿಗಳು “ಫೈಲುಗಳ ಪರಿಶೀಲನೆ”ಯಲ್ಲೇ ಕಾಲ ಕಳೆದು ತಮ್ಮ ಅವಧಿ ಮುಗಿಸಿರುವ ನಿದರ್ಶನಗಳು ಸಾಕಷ್ಟಿವೆ. ಜನರ ನೋವಿಗೆ ಸ್ಪಂದಿಸುವ ಕೆಲ ರಾಜಕಾರಣಿಗಳು ಅಧಿಕಾರಿಗಳು ನಮ್ಮ ನಡುವೆ ಇದ್ದರೂ ಸಾಂತ್ವನದ ಮಾತುಗಳ ಗಡಿ ದಾಟಿಲ್ಲ.

ಜಿಲ್ಲೆಯ ಆರು ತಾಲ್ಲೂಕುಗಳಲ್ಲಿನ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರಕ್ಕಾಗಿ 5573 ಅರ್ಜಿ ಸಲ್ಲಿಕೆಯಾಗಿದ್ದು ಈ ಪೈಕಿ 358 ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ದೊರಕಿದೆ. 614 ಅರ್ಜಿಗಳನ್ನು ಹಕ್ಕು ಮಾನ್ಯತೆ ಪ್ರಕ್ರಿಯೆಗೆ ಒಳಪಡಿಸದೆ ನಿಯಮ ಮೀರಿ ವಿನಾಕಾರಣ ಬಾಕಿ ಉಳಿಸಿಕೊಳ್ಳಲಾಗಿದೆ. 4612 ಅರ್ಜಿಗಳನ್ನು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳೇ ತಿರಸ್ಕರಿಸಿಬಿಟ್ಟಿದ್ದಾರೆ. ಇದು ಅರಣ್ಯ ಹಕ್ಕು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ, ಹಾಗೆ ತಿರಸ್ಕರಿಸಲು ಸದರಿ ಅಧಿಕಾರಗಳಿಗೆ ಕಾಯ್ದೆ ಅನ್ವಯ ಯಾವುದೇ ಅಧಿಕಾರ ಇರುವುದಿಲ್ಲ. ಅದೇ ರೀತಿ ಕಾಯ್ದೆಯಲ್ಲಿಲ್ಲದೆ ‘ಗಡುವು’ ನಿಗದಿಗೊಳಿಸುವ ಮೂಲಕ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಸುಮಾರು 10,000 ಕಟುಂಬಗಳಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನಿರಾಕರಿಸಲಾಗಿದೆ.

ಮತ್ತೊಂದೆಡೆ ವಿವಿಧ ಬಗೆಯ ಕಂದಾಯ ಭೂಮಿಯಲ್ಲಿ ಸಾಗುವಳಿದಾರರು 1990-91ರಲ್ಲಿ ಫಾರಂ 50ರಲ್ಲಿ 52,222 ಅರ್ಜಿ ಸಲ್ಲಿದ್ದರೆ, 1998-99ರಲ್ಲಿ ಫಾರಂ 53ರಲ್ಲಿ 60,742 ಅರ್ಜಿಗಳು ಸಲ್ಲಿಸಲಾಗಿದೆ. ಒಟ್ಟು 1,12,964 ಅರ್ಜಿಗಳಲ್ಲಿ 40,842 ಅರ್ಜಿಗಳನ್ನು ಪರಿಶೀಲಿಸದೇ ವಿನಾಕಾರಣ ತಿರಸ್ಕರಿಸಲಾಗಿದೆ. 6800 ಅರ್ಜಿದಾರರಿಗೆ ಭೂಮಿ ಮಂಜೂರಾಗಿದ್ದರೂ ಸಾಗುವಳಿ ಚೀಟಿಗಳನ್ನು ವಿತರಿಸಿಲ್ಲ. ಸುಮಾರು 12,000 ಸಾಗುವಳಿದಾರರಿಗೆ ಸಾಗುವಳಿ ಚೀಟಿಗಳನ್ನು ವಿತರಿಸಿದ್ದರೂ ಖಾತೆ ಮಾಡಿಕೊಡದೆ ಸರ್ಕಾರಿ ಸೌಲಭ್ಯಗಳಿಂದ ವಂಚಿಸಲಾಗುತ್ತಿದೆ. 53,322 ಅರ್ಜಿಗಳನ್ನು ಯಾವುದೇ ಪರಿಶೀಲನಾ ಪ್ರಕ್ರಿಯೆಗೆ ಒಳಪಡಿಸದೆ ಬಾಕಿ ಉಳಿಸಲಾಗಿದೆ. ಆದರೆ ಜಿಲ್ಲಾಡಳಿತವು ಹೀಗೆ ಪರಿಶೀಲನೆಗೆ ಒಳಪಡಿಸದಿರರುವ ಅರ್ಜಿಗಳ ಲೆಕ್ಕವನ್ನು ಕೇವಲ 7,700 ಎಂದು ಪ್ರಕಟಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಈಗ ಹೊಸದಾಗಿ 2018ರಲ್ಲಿ ಫಾರಂ ನಂ. 57ರಲ್ಲಿ ಸುಮಾರು 30ರಿಂದ 40 ಸಾವಿರ ಅರ್ಜಿಗಳು ಸಲ್ಲಿಕೆಯಾಗಿರುವ ಅಂದಾಜಿದೆ. ಅಂದರೆ ಜಿಲ್ಲೆಯಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯಲ್ಲಿನ ಬಗರ್‍ಹುಕುಂ ಸಾಗುವಳಿಯೇ ಸುಮಾರು 1,00,000 ಅರ್ಜಿದಾರರ ಕುಟುಂಬಗಳಿಗೆ ಏಕೈಕ ಜೀವನಾಧಾರವಾಗಿದೆ.

ಹೀಗೆ ಬಡವರು ಎರಡು-ಮೂರು ತಲೆಮಾರುಗಳಿಂದ ಸಾಗುವಳಿ ಮಾಡುತ್ತಿರುವ ಭೂಮಿಗೆ ಮಂಜೂರಾತಿ ನೀಡದ, ಮಂಜೂರಾತಿ ನೀಡಿದರೂ ಹಕ್ಕುಪತ್ರಗಳನ್ನು ಕೊಟ್ಟು ಭೂ ದಾಖಲೆಗಳಲ್ಲಿ ನಮೂದಿಸದ ಸರ್ಕಾರ ಮತ್ತು ಜಿಲ್ಲಾಡಳಿತಗಳು ದೊಡ್ಡ ದೊಡ್ಡ ಖಾಸಗಿ ಕಂಪನಿಗಳಿಗೆ ಕಡಿಮೆ ಬೆಲೆಯಲ್ಲಿ ಭೂಮಿ ಮಾರಾಟ ಮಾಡುವುದರಲ್ಲಿ ಇಲ್ಲವೆ ದಶಕಗಟ್ಟಲೆಯ ದೀರ್ಘಾವಧಿ ಗುತ್ತಿಗೆಗೆ ನೀಡುವುದರಲ್ಲಿ ತೀವ್ರ ಆಸಕ್ತವಾಗಿವೆ. ಅರ್ಜಿ ಸಲ್ಲಿಸಿ 50 ವರ್ಷಗಳು ಕಳೆದರೂ ಭೂಮಿ ಮಂಜೂರು ಮಾಡುವ ಬದಲಿಗೆ ಈ ಬಡವರನ್ನು ಭೂ ಕಬಳಿಕೆ ಕೇಸುಗಳ ಸುಳಿಯಲ್ಲಿ ಸಿಕ್ಕಿಸಿದ್ದಾರೆ. ಹಾಗೆಯೇ ವಸತಿಗಾಗಿ ಅರ್ಜಿ ಸಲ್ಲಿಸಿದವರೂ ಲಕ್ಷದ ಲೆಕ್ಕದಲ್ಲಿದ್ದು ಅವರ ಸಮಸ್ಯೆ ಪರಿಹಾರಕ್ಕೂ ಜಿಲ್ಲಾಡಳಿತವೇ ಹೊಣೆಯಾಗಿದೆ. ಅರಣ್ಯ ಮತ್ತು ಕಂದಾಯ ಅಧಿಕಾರಿಗಳ ಭ್ರಷ್ಟತನ, ನಿರಂತರ ಕಿರುಕುಳ, ದೌರ್ಜನ್ಯ, ನಿರ್ಲಕ್ಷ್ಯಗಳಿಂದ ಬೇಸತ್ತಿದ್ದಾರೆ, ರೋಸಿ ಹೋಗಿದ್ದಾರೆ.
ಹಸಿದವರ, ನೊಂದವರ, ವಂಚಿತರ ಈ ಹೋರಾಟಕ್ಕೆ ಸ್ಪಂದಿಸಿ ಸರ್ಕಾರ ಸಮಗ್ರ ಕಾರ್ಯಕ್ರಮವೊಂದನ್ನು ರೂಪಿಸಿ ಕಾರ್ಯಗತಗೊಳಿಸದೆ ಹೋದರೆ ಮುಂಬರುವ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಾಣುತ್ತಿವೆ. ಈ ಮಾನವೀಯ ಪ್ರಯತ್ನಕ್ಕೆ ಸಹೃದಯರೆಲ್ಲರೂ ಕೈಗೂಡಿಸುವ ಅಗತ್ಯವಿದೆ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial