Homeಕರ್ನಾಟಕಬಿಜೆಪಿಯೊಂದಿಗೆ ಅಂತರ ಕಾಯ್ದುಕೊಳ್ಳುವಂತೆ ಕಾಂಗ್ರೆಸ್ ಮಾದಿಗ ನಾಯಕರಿಗೆ ಸುಧಾಮ್‌ ದಾಸ್‌ ಮನವಿ

ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಳ್ಳುವಂತೆ ಕಾಂಗ್ರೆಸ್ ಮಾದಿಗ ನಾಯಕರಿಗೆ ಸುಧಾಮ್‌ ದಾಸ್‌ ಮನವಿ

- Advertisement -
- Advertisement -

ಒಳ ಮೀಸಲಾತಿ ವಿಚಾರದಲ್ಲಿ ಭಾರತೀಯ ಜನತಾ ಪಕ್ಷದೊಂದಿಗೆ ಅಂತರ ಕಾಯ್ದುಕೊಳ್ಳುವಂತೆ ಕಾಂಗ್ರೆಸ್ ಪಕ್ಷದ ಎಡಗೈ (ಮಾದಿಗ) ನಾಯಕರಿಗೆ ವಿಧಾನ ಪರಿಷತ್ ಸದಸ್ಯ ಹೆಚ್‌.ಪಿ. ಸುಧಾಮ್‌ ದಾಸ್‌ ಮನವಿ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯೂಎಸ್‌) ಮೀಸಲಾತಿ ಸಂಬಂಧ ಸಂವಿಧಾನ ತಿದ್ದುಪಡಿಗಾಗಿ ಸರ್ಜಿಕಲ್‌ ಸ್ಟ್ರೈಕ್‌ ಮಾದರಿ ಕಾರ್ಯಾಚರಣೆ ನಡೆಸಿ, ಒಳಮೀಸಲಾತಿ ಕುರಿತ ತಿದ್ದುಪಡಿಯನ್ನು ಅಲಕ್ಷಿಸುವ ಮೂಲಕ ಪರಿಶಿಷ್ಟ ಸಮುದಾಯಕ್ಕೆ ದ್ರೋಹ ಬಗೆದಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ)  ಅಂತರ ಕಾಯ್ದುಕೊಳ್ಳಲು ಎಡಗೈ ಸಮುದಾಯದ ಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದೇನೆ” ಎಂದು ಹೇಳಿದ್ದಾರೆ.

“ಪರಿಶಿಷ್ಟರ ಒಳಮೀಸಲಾತಿ ಕುರಿತ ಸರ್ಕಾರದ ದಿನಾ೦ಕ:25.08.2025ರ ಅಧಿಸೂಚನೆ ಮೂಲಕ ಎಡಗೈ ಸಮುದಾಯದ ಮೂರೂವರೆ ದಶಕದ ಹೋರಾಟಕ್ಕೆ ಜಯ ಒದಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನಾಯಕತ್ವದ ಸರ್ಕಾರಕ್ಕೆ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಈ ಹೋರಾಟದ ಫಲವಾಗಿ ದೊರಕಿರುವ ಮೀಸಲಾತಿಯ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಮುದಾಯ ಸದಸ್ಯರೆಲ್ಲರಿಗೂ ಸೂಕ್ತ ಮಾರ್ಗದರ್ಶನ ಒದಗಿಸುವ ಮಹತ್ವದ ಜವಾಬ್ದಾರಿ ಈ ಹೋರಾಟದ ಪ್ರತಿಯೊಂದು ಹಂತದಲ್ಲಿಯೂ ಪ್ರಮುಖ ಪಾತ್ರ ವಹಿಸಿರುವ ಮುಖಂಡರುಗಳ ಹೆಗಲ ಮೇಲಿದೆ. ಈ ಜವಾಬ್ದಾರಿ ನಿರ್ವಹಿಸಲು ತತ್‌ಕ್ಷಣವೇ ಕಾರ್ಯಪ್ರವೃತ್ತರಾಗಬೇಕಾದ ಅವಶ್ಯಕತೆ ಇರುವ ಕಾರಣ ಸಮುದಾಯದ ಪ್ರಮುಖ ಮುಖಂಡರುಗಳು, ವಿಷಯ ತಜ್ಞರು ಹಾಗೂ ವಿಶ್ವವಿದ್ಯಾನಿಲಯಗಳ ಸಮುದಾಯ ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆಗೆ ಈ ಜವಾಬ್ದಾರಿ ಹೊರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ವಿವರಿಸಿದ್ದಾರೆ.

“ಇದೇ ಸಂದರ್ಭದಲ್ಲಿ ಸಮುದಾಯದ ಎಲ್ಲ ಪ್ರತಿನಿಧಿಗಳು ಅದರಲ್ಲಿಯೂ ಪ್ರಮುಖವಾಗಿ ಕಾಂಗ್ರೆಸ್‌ ಪಕ್ಷದೊಂದಿಗೆ ಗುರುತಿಸಿಕೊಂಡಿರುವವರು ಕೇವಲ ಬಿಜೆಪಿ ಪಕ್ಷದ ಪ್ರತಿನಿದಿಗಳೊಂದಿಗೆ ಅಂತರ ಕಾಯ್ದುಕೊಳ್ಳುವುದಷ್ಟೇ ಅಲ್ಲದೇ, ರಾಜಕೀಯ ಲಾಭಕ್ಕಾಗಿ ರಾಜ್ಯದಲ್ಲಿ ಪರಿಶಿಷ್ಟ ಸಮುದಾಯವನ್ನು ಒಡೆದು ಎಡಗೈ ಸಮುದಾಯದ ಬೆಂಬಲ ಗಿಟ್ಟಿಸಿ ಆ ಸಮುದಾಯಕ್ಕೆ ಬಗೆದ ದ್ರೋಹ ಕುರಿತಂತೆ ಎಡಗೈ ಸಮುದಾಯವನ್ನು ಜಾಗೃತಗೊಳಿಸಬೇಕಾದ ಅವಶ್ಯಕತೆ ಇದೆ” ಎಂದು ಸುಧಾಮ ದಾಸ್ ಕಿವಿಮಾತು ಹೇಳಿದ್ದಾರೆ.

“ಜಸ್ಟಿಸ್‌ ಸಂತೋಷ್‌ ಹೆಗ್ಡೆ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಇ.ಚೆನ್ನಯ್ಯ V/s ಆಂಧ್ರಪ್ರದೇಶ ಸರ್ಕಾರ ಪ್ರಕರಣದಲ್ಲಿ ಒಳಮೀಸಲಾತಿಗೆ ದೊಡ್ಡ ತಡೆಗೋಡೆ ಒಡ್ಡಿತ್ತು. ಇದರ ನಿವಾರಣೆಗಾಗಿ ಮಾರ್ಗೋಪಾಯ ಒದಗಿಸುವ ಸಲುವಾಗಿ ಸೃಷ್ಟಿಯಾಗಿದ್ದ ಜಸ್ಟಿಸ್‌ ಉಷಾ ಮೆಹ್ರಾ ಆಯೋಗವು ಓಳಮೀಸಲಾತಿ ಕುರಿತ ಕಾನೂನು ಅಡಚಣೆ ನಿವಾರಣೆಗೆ ಎರಡು ಮಾರ್ಗೋಪಾಯಗಳನ್ನು ತನ್ನ ವರದಿಯಲ್ಲಿ ಒದಗಿಸಿತ್ತು. ಮೊದಲ ಆಯ್ಕೆಯೆಂದರೆ ಒಳಮೀಸಲಾತಿ ಅಳವಡಿಕೆಗೆ ಸಂವಿಧಾನ ತಿದ್ದುಪಡಿ ಅಥವಾ ಎರಡನೇ ಆಯ್ಕೆ ಏಳು ಸದಸ್ಯರ ಸಂವಿಧಾನಿಕ ಪೀಠದ ಮೂಲಕ ಒಳಮೀಸಲಾತಿ ಪರವಾದ ತೀರ್ಪು ಪಡೆಯಲು ಪ್ರಯತ್ನಿಸುವುದು.  2008ನೇ ಇಸವಿಯ ಆಯೋಗವು, ಅಂದಿನ ಯುಪಿಎ ಸರ್ಕಾರದ ಸಮಾಜಿಕ ನ್ಯಾಯ ಖಾತೆಯ ಸಚಿವೆ ಮೀರಾಕುಮಾರ್‌ ರವರಿಗೆ ಈ ವರದಿ ಸಲ್ಲಿಸಿದ್ದರೂ ಅಂದಿನ ಸರ್ಕಾರಕ್ಕೆ ಸಾಂವಿಧಾನ ತಿದ್ದುಪಡಿಗೆ ಅವಶ್ಯವಿದ್ದ ಸದಸ್ಯರ ಬೆ೦ಬಲ ಉಭಯ ಸದನದಲ್ಲಿರದ ಕಾರಣ ಈ ಆಯ್ಕೆ ಕಾರ್ಯರೂಪಕ್ಕೆ ಬರಲಿಲ್ಲ” ಎಂದು ಹೇಳಿದ್ದಾರೆ.

“ಆದರೆ, 2014ರಲ್ಲಿ ಬೃಹತ್‌ ಬೆಂಬಲದೊಂದಿಗೆ ಅಧಿಕಾರಕ್ಕೆ ಬ೦ದ ಬಿಜೆಪಿ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮೂಲಕ ಮೀಸಲಾತಿ ಒದಗಿಸಲು ಪ್ರಾಮುಖ್ಯತೆ ನೀಡಿದ್ದು ದಶಕಗಳಿಂದ ಒಳಮೀಸಲಾತಿಗಾಗಿ ಹೋರಾಟಮಾಡುತ್ತಿದ್ದ ಪರಿಶಿಷ್ಟರಿಗಲ್ಲ. ಬದಲಾಗಿ ಮೀಸಲಾತಿಗಾಗಿ ಒಂದೇ ಒಂದು ಅರ್ಜಿ ಸಹಾ ಸಲ್ಲಿಸದ ಸಾಮಾಜಿಕವಾಗಿ ಮೇಲ್ಜರ್ಗಕ್ಕೆ ಸೇರಿದವರಿಗೆ ಇಡಬ್ಲ್ಯೂಎಸ್‌ ಕ್ಯಾಟಗರಿ ಎಂದು ಹೆಸರಿಸಿ ಜನವರಿ 08, 2019ರಂದು ಲೋಕಸಭಾ ಕಲಾಪ ಪಟ್ಟಿಯಲ್ಲೂ ಇರದ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿ, ಅದೇ ಮಾರ್ಗ, ಅದೇ ವೇಗದಲ್ಲಿ ಜನವರಿ 9ರಂದು ರಾಜ್ಯಸಭೆಯಲ್ಲಿಯೂ ಒಪ್ಪಿಗೆ ಪಡೆದು ಜನವರಿ 12ರ ಮಧ್ಯರಾತ್ರಿ ಅಂದಿನ ರಾಷ್ಟ್ರಪತಿ ಅಂಕಿತ ಪಡೆಯುವ ಮೂಲಕ ಸರ್ಜಿಕಲ್‌ ಸ್ಟ್ರೈಕ್‌ ಮಾದರಿ ಕಾರ್ಯಾಚರಣೆ ನಡೆಸಿ ತಿದ್ದುಪಡಿ ಜಾರಿಗೊಳಿಸಿತು. ಆದರೆ, ಅದೇ ಬಿಜೆಪಿ ಸರ್ಕಾರದ ಸಮಾಜಿಕ ನ್ಯಾಯ ಖಾತೆಯ ಸಚಿವಾರಾಗಿದ್ದ, ಇದೇ ರಾಜ್ಯದ ಎ. ನಾರಾಯಣಸ್ವಾಮಿಯವರು 2022ರಲ್ಲಿ ಸಂಸತ್‌ನಲ್ಲಿ ಪರಿಶಿಷ್ಟರ ಮೀಸಲಾತಿ ಕುರಿತು ಪ್ರಶ್ನೆಗೆ ನೀಡಿದ ಉತ್ತರದಲ್ಲಿ, ಸರ್ಕಾರದ ಮುಂದೆ ಒಳಮೀಸಲಾತಿ ಸ೦ಬ೦ಧ ತಿದ್ದುಪಡಿಗೆ ಯಾವುದೇ ಪ್ರಸ್ತಾವ ಇಲ್ಲ ಎ೦ಬ ಉತ್ತರ ನೀಡಿ, ಖುದ್ದು ಸಮಾಜಿಕ ನ್ಯಾಯ ಖಾತೆ ಸಚಿವರಾಗಿದ್ದರೂ ಒಳಮೀಸಲಾತಿ ಜಾರಿಗೆ ತಾವು ಯಾವುದೇ ಆಸಕ್ತಿ ವಹಿಸಿಲ್ಲ ಎ೦ಬುದನ್ನು ಅಧಿಕೃತವಾಗಿ ಜಾಹಿರುಪಡಿಸಿದ್ದರು” ಎಂದು ಅವರು ವಿವರಣೆ ನೀಡಿದ್ದಾರೆ.

“ಅಲ್ಲದೇ, ಬಿಜೆಪಿ ಪಕ್ಷದ ಸಂಸದ ಗೋವಿಂದ ಕಾರಜೋಳರೊಡನೆ ಸೇರಿ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬ೦ದ ದಿನದಿಂದ ಕಾಂಗ್ರೆಸ್‌ ಒಳಮೀಸಲಾತಿ ವಿರೋಧಿ ಎಂಬಂತೆ ತೀವ್ರತರದಲ್ಲಿ ರಾಜ್ಯವ್ಯಾಪಿ ಅಪಪ್ರಚಾರ ನಡೆಸಿದ್ದು ಇನ್ನೂ ಎಡಗೈ ಸಮುದಾಯದ ಮನದಲ್ಲಿ ಹಸಿರಾಗಿರುವಾಗಲೇ ಒಳಮೀಸಲಾತಿ ಜಾರಿಗೆ ನಮ್ಮ ಪಕ್ಷದ ಸರ್ಕಾರ ಅಧಿಸೂಚನೆ ಹೊರಡಿಸಿದ ನ೦ತರ ನಮ್ಮ ಸಚಿವರಾದ ಕೆ.ಹೆಚ್‌ ಮುನಿಯಪ್ಪ ಹಾಗೂ ಆರ್‌.ಬಿ. ತಿಮ್ಮಾಪುರ್‌ ರವರು ನಮ್ಮ ಸಮುದಾಯಕ್ಕೆ ದ್ರೋಹ ಬಗೆದ ಹಾಗೂ ಪರಿಶಿಷ್ಟರ ಒಳಮೀಸಲಾತಿ ಕುರಿತಂತೆ ನಮ್ಮ ಪಕ್ಷದ ವಿರುದ್ಧ ನಿರಂತರ ಅಪಪ್ರಚಾರ ಮಾಡಿರುವ ಎ.ನಾರಾಯಣಸ್ವಾಮಿ ಹಾಗೂ ಗೋವಿಂದ ಕಾರ ಜೋಳರೊಡನೆ ನಮ್ಮ ಸಮುದಾಯದ ಸದಸ್ಯರೊಂದಿಗೆ ಇದೇ ಆಗಸ್ಟ್‌ 31ರಂದು ಸಭೆ ಆಯೋಜಿಸಿರುವುದು ಸಾಮಾಜಿಕ ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದಿದ್ದು, ಸಮುದಾಯದ ಹಾಗೂ ಪಕ್ಷದ ಹಿತದೃಷ್ಟಿಯಿಂದ ಈ ಸಭೆಯಿಂದ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವವರನ್ನು ದೂರವಿಡಲು ನಮ್ಮ ಪಕ್ಷದ ಸಚಿವರಿಗೆ ಈ ಮೂಲಕ ಆಗ್ರಹ ಪೂರ್ವಕ ಮನವಿ ಮಾಡುತ್ತಿದ್ದೇನೆ” ಎಂದು ಆಗ್ರಹಿಸಿದ್ದಾರೆ.

ಧರ್ಮಸ್ಥಳದಲ್ಲಿ ಮಹಿಳೆಯರ ಹತ್ಯೆ ಮತ್ತು ನಾಪತ್ತೆ ಪ್ರಕರಣಗಳು: ನ್ಯಾಯಕ್ಕಾಗಿ ಮಹಿಳಾ ಆಯೋಗಕ್ಕೆ ‘ಕೊಂದವರು ಯಾರು’ ಆಂದೋಲನದಿಂದ ಹಕ್ಕೊತ್ತಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -