ಯಾವುದೇ ಕಾರಣಕ್ಕೆ ಹಿಂದಿ ಹೇರಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಲೋಕಸಭೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅವರು ಲೋಕಸಭೆ ಶೂನ್ಯ ವೇಳೆಯಲ್ಲಿ ವಿಚಾರವನ್ನು ಪ್ರಸ್ತಾಪಿಸಿ ಹಿಂದಿ ಹೇರಿಕೆಯನ್ನು ವಿರೋಧಿಸಿದರು.
ಲೋಕಸಭೆಯಲ್ಲಿ ಮಾತನಾಡುತ್ತಾ “ಹಿಂದಿ ಭಾಷೆಯನ್ನು ಗೌರವಿಸುತ್ತೇವೆ. ಆದರೆ ನಮ್ಮ ಮಾತೃಭಾಷೆಯಾದ ಕನ್ನಡಕ್ಕೂ ಆದ್ಯತೆ ನೀಡಬೇಕು. ಹಿಂದಿ ಹೇರಿಕೆಯನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಹೇಳಿರುವ ಅವರು ಹಿಂದಿ ಭಾಷೆ ಹೇರಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಂಗೆ ಹಿಂದಿ ಬರಲ್ಲ ಹೋಗ್ರಪ್ಪ: ಹಿಂದಿ ಹೇರಿಕೆಯ ವಿರುದ್ಧ ಬಹುಭಾಷ ನಟ ಪ್ರಕಾಶ್ ರಾಜ್ ದನಿ
ಭಾರತವು ಒಕ್ಕೂಟ ವ್ಯವಸ್ಥೆ, ಇಲ್ಲಿನ ಭಾಷಾ ವೈವಿಧ್ಯತೆಯಿಂದಾಗಿ ಇಡೀ ವಿಶ್ವದಲ್ಲೇ ಒಂದು ಗುಣಮಟ್ಟದ ದೇಶವಾಗಿದೆ. ಕರ್ನಾಟಕವು ಬಹುತ್ವದ ಪರಂಪರೆ ಮತ್ತು ಸಂಪ್ರದಾಯವನ್ನು ಮೈಗೂಡಿಸಿಕೊಂಡಿದ್ದು, ಅದನ್ನು ನಾವೆಲ್ಲರೂ ಗೌರವಿಸುತ್ತಿದ್ದೇವೆ ಎಂದು ಹೇಳಿದರು.
ಹಿಂದಿ ಹೇರಿಕೆಯನ್ನು ಒಪ್ಪಲು ಸಾಧ್ಯವಿಲ್ಲ
~ಮಂಡ್ಯ ಸಂಸದೆ ಸುಮಲತಾ ಅಂಬರೀಶ್@sumalathaA pic.twitter.com/uIv96MmQkd— Naanu Gauri (@naanugauri) September 19, 2020
ಕನ್ನಡವು ಸಾವಿರಾರು ವರ್ಷಗಳ ಅತ್ಯಂತ ಪುರಾತನ ಭಾಷೆಯಾಗಿದ್ದು, ಕೇಂದ್ರ ಸರಕಾರವು ಕನ್ನಡಕ್ಕೆ `ಶಾಸ್ತ್ರೀಯ ಭಾಷೆ’ ಸ್ಥಾನಮಾನದ ಗೌರವವನ್ನು ನೀಡಿದೆ. ದೇಶದ ಗಡಿಯಾಚೆಗೆ ನಮ್ಮ ಸಂಪ್ರದಾಯ ಮತ್ತು ಪ್ರಾದೇಶಿಕ ಭಾಷೆ ವಿಸ್ತರಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಭಾರತದ ಲಕ್ಷಾಂತರ ಮಂದಿಯ ಪರವಾಗಿ ನಾನು ಇಲ್ಲಿ ಮಾತನಾಡುತ್ತಿದ್ದೇನೆ. ಹಿಂದಿ ಭಾಷೆ ಸಂವಹನಕ್ಕೆ ಪ್ರಮುಖ ಭಾಷೆಯಾಗಿದ್ದರೂ ಇದರ ಜೊತೆಗೆ ಪ್ರಾದೇಶಿಕ ಭಾಷೆಗಳಿಗೂ ಆದ್ಯತೆ ನೀಡಬೇಕು. ಹಿಂದಿ ಭಾಷೆಯನ್ನು ನಾವು ಗೌರವಿಸುತ್ತೇವೆ. ಆದರೆ, ನಮ್ಮ ಮಾತೃಭಾಷೆ ಕನ್ನಡಕ್ಕೂ ಆದ್ಯತೆ ನೀಡಬೇಕು ಎಂದು ಹೇಳಿದರು.
ಕನ್ನಡದಲ್ಲೇ `ನಾವು ಕನ್ನಡಿಗರು, ಭಾರತೀಯರು’ ಎಂದ ಸಂಸದೆ, ಈ ವಿಷಯವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರ ಸರಕಾರ ನೀತಿ-ನಿರೂಪಣೆಯಲ್ಲಿ, ಪ್ರಾದೇಶಿಕ ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ ಸೂಕ್ತ ರೀತಿಯ ಆಸ್ಥೆ ವಹಿಸಬೇಕು ಎಂದರು.
ಇದನ್ನೂ ಓದಿ: ಸೆಪ್ಟಂಬರ್ 14 ಹಿಂದಿ ದಿವಸ ಆಚರಣೆಗೆ ಕನ್ನಡಿಗರ ತೀವ್ರ ವಿರೋಧ


