ಅಪರೂಪದ ವಿದ್ಯಮಾನವೊಂದರಲ್ಲಿ ಮೊಟ್ಟ ಮೊದಲ ಬಾರಿಗೆ ಇವಿಎಂ ಯಂತ್ರಗಳನ್ನು ತರಿಸಿಕೊಂಡ ಸುಪ್ರೀಂ ಕೋರ್ಟ್, ತನ್ನ ಆವರಣದೊಳಗೇ ರಿಜಿಸ್ಟ್ರಾರ್ ಮೂಲಕ ಮರು ಮತಎಣಿಕೆ ನಡೆಸಿ, ಹರಿಯಾಣದ ಗ್ರಾಮ ಪಂಚಾಯತ್ ಒಂದರ ‘ಸರ್ಪಂಚ್’ ಚುನಾವಣೆಯ ಫಲಿತಾಂಶವನ್ನೇ ರದ್ದುಗೊಳಿಸಿದೆ.
ಮರು ಮತ ಎಣಿಕೆಯಲ್ಲಿ ಚುನಾವಣೆಯಲ್ಲಿ ಸೋತಿದ್ದರು ಎನ್ನಲಾಗಿದ್ದ ಅಭ್ಯರ್ಥಿ 51 ಹೆಚ್ಚು ಮತಗಳನ್ನು ಪಡೆದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಚುನಾವಣಾ ನ್ಯಾಯಮಂಡಳಿಯ ಅಂತಿಮ ತೀರ್ಪಿಗೆ ಒಳಪಟ್ಟು, ಪಾಣಿಪತ್‌ನ ಉಪ ಆಯುಕ್ತ ಹಾಗೂ ಚುನಾವಣಾ ಅಧಿಕಾರಿಗೆ ಸೋತ ಅಭ್ಯರ್ಥಿ (ಅರ್ಜಿದಾರ) ಯನ್ನು ಗ್ರಾಮ ಪಂಚಾಯತ್‌ನ ಚುನಾಯಿತ ‘ಸರ್ಪಂಚ್’ ಎಂದು ಘೋಷಿಸುವ ಅಧಿಸೂಚನೆಯನ್ನು 2 ದಿನಗಳಲ್ಲಿ ಹೊರಡಿಸುವಂತೆ ನಿರ್ದೇಶಿಸಿದೆ.
ಅರ್ಜಿದಾರರು ಸದರಿ ಹುದ್ದೆಯನ್ನು ತಕ್ಷಣವೇ ವಹಿಸಿಕೊಳ್ಳಲು ಮತ್ತು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅರ್ಹರಾಗಿರುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
“ಈ ನ್ಯಾಯಾಲಯದ ರಿಜಿಸ್ಟ್ರಾರ್ (ಒಎಸ್‌ಡಿ) ಸಲ್ಲಿಸಿದ ವರದಿಯನ್ನು ಪ್ರಾಥಮಿಕವಾಗಿ ಅನುಮಾನಿಸಲು ಯಾವುದೇ ಕಾರಣಗಳಿಲ್ಲ. ವಿಶೇಷವಾಗಿ ಸಂಪೂರ್ಣ ಮರುಎಣಿಕೆಯನ್ನು ಸರಿಯಾಗಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಮತ್ತು ಅದರ ಫಲಿತಾಂಶಕ್ಕೆ ಪಕ್ಷಗಳ ಪ್ರತಿನಿಧಿಗಳು ಸಹಿ ಮಾಡಿದ್ದಾರೆ. ಮೇಲ್ಮನವಿದಾರರು 22.11.2022ರಂದು ನಡೆದ ಚುನಾವಣೆಯಲ್ಲಿ ಹರಿಯಾಣದ ಪಾಣಿಪತ್ ಜಿಲ್ಲೆಯ ಬುವಾನಾ ಲಖು ಗ್ರಾಮ ಪಂಚಾಯತ್‌ನ ಚುನಾಯಿತ ಸರ್ಪಂಚ್ ಎಂದು ಘೋಷಿಸಲು ಅರ್ಹರು ಎಂದು ನಾವು ತೃಪ್ತರಾಗಿದ್ದೇವೆ” ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠ ಆದೇಶಿಸಿದೆ.
ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿ ಕಾಂತ್ ಅವರು, ಪ್ರತಿವಾದಿ ನಂ.1 (ಈ ಹಿಂದೆ ಆಯ್ಕೆಯಾಗಿದ್ದ ಅಭ್ಯರ್ಥಿ) ಅನ್ನು ದೂಷಿಸುವಂತಿಲ್ಲ. “ಈ ಎಲ್ಲಾ ಪ್ರಮಾದಗಳು ಕೇವಲ ಒಂದು ಮತಗಟ್ಟೆಯಲ್ಲಿ ಮಾತ್ರ ಸಂಭವಿಸಿವೆ. ಚುನಾವಣಾಧಿಕಾರಿ/ಎಣಿಕೆ ಅಧಿಕಾರಿ ಸಂಪೂರ್ಣ ಅವ್ಯವಸ್ಥೆ ಸೃಷ್ಟಿಸಿದ್ದಾರೆ. ಅವರೇ ಪ್ರಮಾದ ಎಸಗಿದ್ದಾರೆ. ಈ ರೀತಿಯ ವಿಷಯಗಳಲ್ಲಿ, ಒಂದೇ ಪರಿಹಾರವೆಂದರೆ, ಮರು ಎಣಿಕೆ ನಡೆಸುವುದು. ಹೈಕೋರ್ಟ್ ಮರುಎಣಿಕೆ ನಿರಾಕರಿಸಲು 15 ಪುಟಗಳ ವಿವರಣೆ ನೀಡುತ್ತದೆ ಎಂದು ನಾವು ಎಂದಿಗೂ ಭಾವಿಸಿರಲಿಲ್ಲ” ಎಂದು ಹೇಳಿದ್ದಾರೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಪ್ರಕರಣವು 2022ರಲ್ಲಿ ಹರಿಯಾಣದ ಪಾಣಿಪತ್‌ನಲ್ಲಿ ನಡೆದ ಸರ್ಪಂಚ್ ಚುನಾವಣೆಗೆ ಸಂಬಂಧಿಸಿದೆ. ಆರಂಭದಲ್ಲಿ, ಪ್ರತಿವಾದಿ ನಂ.1-ಕುಲದೀಪ್ ಸಿಂಗ್ ಅವರನ್ನು ಚುನಾಯಿತರೆಂದು ಘೋಷಿಸಲಾಗಿತ್ತು. ಆದಾಗ್ಯೂ, ಅದೇ ದಿನ, ಚುನಾವಣಾಧಿಕಾರಿಯು ಒಂದು ಬೂತ್‌ನಲ್ಲಿ ಫಲಿತಾಂಶವನ್ನು ಸಿದ್ಧಪಡಿಸುವಲ್ಲಿನ ದೋಷದಿಂದಾಗಿ, ಸ್ವಯಂಪ್ರೇರಿತವಾಗಿ ಮತಗಳ ಮರುಎಣಿಕೆಗೆ ಆದೇಶಿಸಿದರು. ಫಲಿತಾಂಶವನ್ನು ಮರು ಎಣಿಕೆ ನಡೆಸಿದ ನಂತರ, ಅರ್ಜಿದಾರರಾದ ಮೋಹಿತ್ ಕುಮಾರ್ ಅವರನ್ನು ಚುನಾಯಿತರೆಂದು ಘೋಷಿಸಲಾಗಿತ್ತು.
ಇದರಿಂದ ಬೇಸತ್ತ ಕುಲದೀಪ್ ಸಿಂಗ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಕುಲದೀಪ್ ಸಿಂಗ್ ಪರವಾಗಿ ತೀರ್ಪು ನೀಡಿತ್ತು. ಅಭ್ಯರ್ಥಿಯೊಬ್ಬರು ಆಯ್ಕೆಯಾದ ನಂತರ, ಮತಗಳ ಮರು ಎಣಿಕೆಯ ಮೂಲಕ ಫಲಿತಾಂಶವನ್ನು ಸ್ವಯಂಪ್ರೇರಿತವಾಗಿ ಬದಲಾಯಿಸಲು ಸಾಧ್ಯವಿಲ್ಲ. ನೊಂದ ಪಕ್ಷಕ್ಕೆ ಲಭ್ಯವಿರುವ ಸೂಕ್ತ ಪರಿಹಾರವೆಂದರೆ ಚುನಾವಣಾ ತಕರಾರು ಅರ್ಜಿಯನ್ನು ಸಲ್ಲಿಸುವುದು ಎಂದು ಹೈಕೋರ್ಟ್ ಹೇಳಿತ್ತು. ಈ ದೃಷ್ಟಿಕೋನದಿಂದ, ಹೈಕೋರ್ಟ್ ಮೋಹಿತ್ ಕುಮಾರ್ ಅವರ ಆಯ್ಕೆಯನ್ನು ರದ್ದುಗೊಳಿಸಿ, ಕುಲದೀಪ್ ಸಿಂಗ್ ಅವರನ್ನು ಚುನಾಯಿತ ‘ಸರ್ಪಂಚ್’ ಎಂದು ಘೋಷಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
ತರುವಾಯ, ಮೋಹಿತ್ ಕುಮಾರ್ ಚುನಾವಣಾ ತರಕಾರು ಅರ್ಜಿಯನ್ನು ಸಲ್ಲಿಸಿದ್ದರು. ಅದಕ್ಕೆ, ಕುಲದೀಪ್ ಸಿಂಗ್ ಮಿತಿಯ ಆಧಾರದ ಮೇಲೆ ಪ್ರಾಥಮಿಕ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದರು. ಬಳಿಕ ಈ ವಿಷಯವು ಸುಪ್ರೀಂ ಕೋರ್ಟ್ ತಲುಪಿತ್ತು. ಸುಪ್ರೀಂ ಕೋರ್ಟ್ ಕುಲದೀಪ್ ಸಿಂಗ್ ಅವರ ಆಕ್ಷೇಪಣೆಯನ್ನು ತಿರಸ್ಕರಿಸಿತ್ತು ಮತ್ತು ನಾಲ್ಕು ತಿಂಗಳೊಳಗೆ ಪ್ರಕರಣವನ್ನು ನಿರ್ಧರಿಸುವಂತೆ ಚುನಾವಣಾ ನ್ಯಾಯಮಂಡಳಿಗೆ ನಿರ್ದೇಶಿಸಿತ್ತು.
ಈ ವರ್ಷದ ಏಪ್ರಿಲ್‌ನಲ್ಲಿ, ಚುನಾವಣಾ ನ್ಯಾಯಮಂಡಳಿಯು ಒಂದು ಮತಗಟ್ಟೆಯ (ಬೂತ್ ಸಂಖ್ಯೆ 69) ಮತಗಳ ಮರು ಎಣಿಕೆ ಅಗತ್ಯವೆಂದು ತೀರ್ಪು ನೀಡಿತ್ತು. ಉಪ ಆಯುಕ್ತ ಹಾಗೂ ಚುನಾವಣಾ ಅಧಿಕಾರಿಗೆ ಮತಗಳನ್ನು ಮರು ಎಣಿಕೆ ಮಾಡುವಂತೆ ನಿರ್ದೇಶಿಸಲಾಗಿತ್ತು. ಆದಾಗ್ಯೂ, ಕುಲದೀಪ್ ಸಿಂಗ್ ಅವರ ಮೇಲ್ಮನವಿಯ ಮೇರೆಗೆ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಇದರಿಂದ ಬೇಸತ್ತ ಮೋಹಿತ್ ಕುಮಾರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಜುಲೈನಲ್ಲಿ, ಸುಪ್ರೀಂ ಕೋರ್ಟ್ ಸಂಬಂಧಪಟ್ಟ ಇವಿಎಂಗಳನ್ನು ನಾಮನಿರ್ದೇಶಿತ ರಿಜಿಸ್ಟ್ರಾರ್ ಮುಂದೆ ಹಾಜರುಪಡಿಸಲು ಆದೇಶಿಸಿತ್ತು. ಅವರು ಬೂತ್ ಸಂಖ್ಯೆ 69 ಕ್ಕೆ ಮಾತ್ರವಲ್ಲದೆ ಎಲ್ಲಾ ಬೂತ್‌ಗಳಿಗೂ ಮತಗಳ ಮರುಎಣಿಕೆ ಮಾಡಬೇಕಾಗಿತ್ತು. ಮರುಎಣಿಕೆಯನ್ನು ವೀಡಿಯೊ ರೆಕಾರ್ಡ್ ಮಾಡಲು ಮತ್ತು ಪಕ್ಷಗಳ ಏಜೆಂಟರು ಹಾಜರಿರಲು ಅನುಮತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು. ಅವರು 5 ಬೂತ್‌ಗಳ ಮತಗಳ ಮರುಎಣಿಕೆಯನ್ನು ನಡೆಸಿದ್ದರು. ಪರಿಷ್ಕೃತ ಫಲಿತಾಂಶದಲ್ಲಿ ಮೋಹಿತ್ ಕುಮಾರ್, ಕುಲದೀಪ್ ಸಿಂಗ್ ಗಿಂತ 51 ಮತಗಳನ್ನು ಹೆಚ್ಚು ಪಡೆದಿದ್ದಾರೆ ಎಂದು ರಿಜಿಸ್ಟ್ರಾರ್ ವರದಿ ಕೊಟ್ಟಿದ್ದರು.
ಆಗಸ್ಟ್ 11ರಂದು, ನ್ಯಾಯಾಲಯವು ಚುನಾವಣಾ ಫಲಿತಾಂಶಗಳನ್ನು ರದ್ದುಗೊಳಿಸಲು ಮತ್ತು ಅರ್ಜಿದಾರರನ್ನು ಚುನಾಯಿತ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ವಿಚಾರಣೆಯನ್ನು ಮುಕ್ತಾಯಗೊಳಿಸಲು ನಿರ್ಧರಿಸಿತ್ತು. ಈ ನಡುವೆ, ಪ್ರತಿವಾದಿ ನಂ.1 ನ್ಯಾಯಮಂಡಳಿಯ ಮುಂದೆ ಕೆಲವು ಇತರ ವಿಷಯಗಳು ಇನ್ನೂ ಇತ್ಯರ್ಥವಾಗಬೇಕಿದೆ ಎಂದು ವಾದಿಸಿದ್ದರಿಂದ, ಪಕ್ಷಗಳು ತಮ್ಮ ಸಮಸ್ಯೆಗಳು, ಯಾವುದಾದರೂ ಇದ್ದರೆ, ನ್ಯಾಯಮಂಡಳಿಯ ಮುಂದೆ ವಿವರಿಸಲು ಸ್ವಾತಂತ್ರ್ಯ ಹೊಂದಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅದೇ ಸಮಯದಲ್ಲಿ, ಮತಗಳ ಮರುಎಣಿಕೆಯ ವಿಷಯಕ್ಕೆ ಸಂಬಂಧಿಸಿದಂತೆ, ನ್ಯಾಯಮಂಡಳಿಯು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್‌ರ ವರದಿಯನ್ನು ಅಂತಿಮ ಮತ್ತು ನಿರ್ಣಾಯಕವೆಂದು ಸ್ವೀಕರಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೈಕೋರ್ಟ್ ಆದೇಶವನ್ನು ಬದಿಗಿಟ್ಟು, ಅರ್ಜಿದಾರರು ಸರ್ಪಂಚ್ ಆಗಿ ಘೋಷಿಸುವುದು ನ್ಯಾಯಮಂಡಳಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದಿದೆ.
ಗುಜರಾತ್| ಮೀಸೆ ಬಿಟ್ಟಿದ್ದಕ್ಕೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ತಲೆಮರೆಸಿಕೊಂಡ ಐವರು


