ಕೇರಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಎಣಿಕೆ ನಮೂನೆಗಳನ್ನು ಸಲ್ಲಿಸುವ ಗಡುವು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪ್ರಸ್ತುತ ಗಡುವಾದ ಡಿಸೆಂಬರ್ 18ರವರೆಗೆ ವಿಷಯವನ್ನು ಮುಂದೂಡಿ, ಆ ನಂತರ ಗಡುವನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯುತ್ತಿರುವುದರಿಂದ ಗಡುವನ್ನು ವಿಸ್ತರಿಸುವಂತೆ ಕೋರಿ ಕೇರಳ ಸರ್ಕಾರ ಮತ್ತು ಕೆಲ ರಾಜಕೀಯ ಪಕ್ಷಗಳು ಸಲ್ಲಿಸಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠ ಮಂಗಳವಾರ (ಡಿಸೆಂಬರ್ 9) ವಿಚಾರಣೆ ನಡೆಸಿತು.
ಚುನಾವಣಾ ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು, ಗಡುವನ್ನು ಮೊದಲು ಡಿಸೆಂಬರ್ 4 ರಿಂದ ಡಿಸೆಂಬರ್ 11 ರವರೆಗೆ ವಿಸ್ತರಿಸಲಾಗಿತ್ತು. ನಂತರ ನ್ಯಾಯಾಲಯದ ಕೊನೆಯ ಆದೇಶದ ಮೇರೆಗೆ ಗಡುವನ್ನು ಮತ್ತೆ ಡಿಸೆಂಬರ್ 18 ರವರೆಗೆ ವಿಸ್ತರಿಸಲಾಯಿತು ಎಂದು ತಿಳಿಸಿದರು.
ಸಿಪಿಐ(ಎಂ) ಕಾರ್ಯದರ್ಶಿ ಎಂ.ವಿ ಗೋವಿಂದನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ವಿ ಸುರೇಂದ್ರನಾಥ್, 20 ಲಕ್ಷಕ್ಕೂ ಹೆಚ್ಚು ಜನರನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ ಎಂದರು, ಕನಿಷ್ಠ ಎರಡು ವಾರಗಳ ಗಡುವು ವಿಸ್ತರಣೆಯನ್ನು ಕೋರಿದರು. ಇದು ರಾಜ್ಯದ ಹೊರಗಿನ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ರಜೆಯ ಸಮಯದಲ್ಲಿ ಔಪಚಾರಿಕ ಕಾರ್ಯಗಳನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.
ಕೇರಳ ರಾಜ್ಯ ಸರ್ಕಾರದ ಪರ ಹಾಜರಿಸಿದ್ದ ವಕೀಲ ಸಿ.ಕೆ. ಶಶಿ ಕೂಡ ಗಡುವು ವಿಸ್ತರಣೆಯ ಮನವಿಯನ್ನು ಬೆಂಬಲಿಸಿದರು.
ಈ ವೇಳೆ, ನಿನ್ನೆಯವರೆಗೆ ಮತದಾರರು ಸಲ್ಲಿಸಿರುವ 97.42ರಷ್ಟು ಎಣಿಕೆ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಚುನಾವಣಾ ಆಯೋಗದ ಪರ ವಕೀಲ ದ್ವಿವೇದಿ ತಿಳಿಸಿದರು. ಅಗತ್ಯವಿದ್ದರೆ, ಚುನಾವಣಾ ಆಯೋಗ ದಿನಾಂಕವನ್ನು ಮತ್ತಷ್ಟು ವಿಸ್ತರಿಸುತ್ತದೆ ಎಂದು ಹೇಳಿದರು. ಊಹಾಪೋಹಗಳ ಆಧಾರದ ಮೇಲೆ ಆದೇಶಗಳನ್ನು ನೀಡುವ ಅಗತ್ಯವಿಲ್ಲ ಎಂದರು.
ಕಳೆದ ವಿಚಾರಣೆ ವೇಳೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಕೇರಳದಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಎಣಿಕೆ ನಮೂನೆಗಳನ್ನು ಸಲ್ಲಿಸುವ ಗಡುವನ್ನು ಮತ್ತಷ್ಟು ವಿಸ್ತರಿಸಲು ಸುಪ್ರೀಂ ಕೋರ್ಟ್ ಭಾರತೀಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿತ್ತು.
ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಡಿಸೆಂಬರ್ 9 ಮತ್ತು 11 ರಂದು ನಡೆಯಲಿದ್ದು, ಡಿಸೆಂಬರ್ 13 ರಂದು ಮತ ಎಣಿಕೆ ನಡೆಯಲಿದೆ.
ಕೇರಳ ಸರ್ಕಾರ ಮತ್ತು ಇತರ ಮೂವರು ಎಸ್‌ಐಆರ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸರ್ಕಾರದ ಅರ್ಜಿಯ ಜೊತೆಗೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಂಞಾಲಿಕುಟ್ಟಿ, ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಮತ್ತು ಸಿಪಿಐ(ಎಂ) ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮಾಸ್ಟರ್ ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಪೀಠ ನೋಟಿಸ್ ಜಾರಿ ಮಾಡಿದೆ. ಸಿಪಿಐ(ಎಂ) ಕಾರ್ಯದರ್ಶಿ ಪರವಾಗಿ ಹಿರಿಯ ವಕೀಲ ರಂಜಿತ್ ಕುಮಾರ್ ಮತ್ತು ಐಯುಎಂಎಲ್ ಪರವಾಗಿ ವಕೀಲ ಹಾರಿಸ್ ಬೀರಾನ್ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದಾರೆ.


