ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿರುವ ತಮ್ಮ ವಿರುದ್ಧದ ಎರಡು ಅತ್ಯಾಚಾರ ಪ್ರಕರಣಗಳನ್ನು ಬೇರೆ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ (ಡಿಸೆಂಬರ್ 11) ತಿರಸ್ಕರಿಸಿದೆ.
ವಿಚಾರಣಾ ನ್ಯಾಯಾಧೀಶರು ಈ ಹಿಂದೆ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ತಮ್ಮನ್ನು ದೋಷಿ ಎಂದು ಘೋಷಿಸಿದ್ದಾರೆ. ಅವರು ತಮ್ಮ ವಿರುದ್ಧ ಪಕ್ಷಪಾತದಿಂದ ನಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಪ್ರಜ್ವಲ್ ರೇವಣ್ಣ ಆತಂಕ ವ್ಯಕ್ತಪಡಿಸಿದ್ದರು. ಶಿಕ್ಷೆ ಘೋಷಣೆಯಾಗಿರುವ ಪ್ರಕರಣದ ನ್ಯಾಯಧೀಶರ ಮಾಡಿರುವ ಕೆಲ ಟಿಪ್ಪಣಿಗಳನ್ನು ಅವರು ಉಲ್ಲೇಖಿಸಿದ್ದರು.
ಪ್ರಕರಣದ ಸಾಕ್ಷ್ಯಗಳನ್ನು ಆಧರಿಸಿ ಹಾಗೂ ಕರ್ನಾಟಕ ಹೈಕೋರ್ಟ್ ನೀಡಿದ್ದ ಗಮನಾರ್ಹ ಅಭಿಪ್ರಾಯಗಳನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿಹಾಗೂ ವಿಪುಲ್ ಎಂ. ಪಂಚೋಲಿ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ತಿಳಿಸಿದೆ.
ವಿಚಾರಣಾ ನ್ಯಾಯಾಧೀಶರು ಮಾಡಿದ ಟಿಪ್ಪಣಿಗಳ ಆಧಾರದಲ್ಲಿಅವರು ಪಕ್ಷಪಾತಿಯಾಗಿದ್ದಾರೆಂದು ಹೇಳುವುದಕ್ಕೆ ಅಥವಾ ಪ್ರಕರಣವು ಪೂರ್ವ ನಿರ್ಧರಿತವಾಗಿದೆ ಎನ್ನುವುದಕ್ಕೆ ಆಧಾರವಾಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ವರ್ಗಾವಣೆ ಅರ್ಜಿಯನ್ನು ವಜಾಗೊಳಿಸಿದ ನಂತರ ಪ್ರಜ್ವಲ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ತಮ್ಮ ಮನೆಕೆಲಸದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ತಪ್ಪಿತಸ್ಥ ಎಂದು ಘೋಷಿಸಿದ್ದ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು, ಕಳೆದ ಆಗಸ್ಟ್‌ನಲ್ಲಿ ಆಜೀವ ಜೈಲು ಶಿಕ್ಷೆ ವಿಧಿಸಿದ್ದರು. ಈ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಹೈಕೋರ್ಟ್‌ನಲ್ಲಿ ಬಾಕಿ ಇದೆ.


