ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ ಚುನಾವಣಾ ಆಯೋಗದಿಂದ (ಇಸಿಐ) ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ವಿಷಯದ ಕುರಿತು ಎನ್‌ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಪೀಠವು ಚುನಾವಣಾ ಆಯೋಗದ ಪರ ವಕೀಲ ಅಮಿತ್ ಶರ್ಮಾ ಅವರಲ್ಲಿ ತನ್ನ ವೆಬ್‌ಸೈಟ್‌ನಲ್ಲಿ ಮತದಾರರ ಮತದಾನದ ವಿವರಗಳನ್ನು ಹಾಕಲು ನಿಮಗೆ ಏನು ತೊಂದರೆ ಇದೆ ಎಂದು ಕೇಳಿದೆ.
ಅರ್ಜಿ ವಿಚಾರಣೆ ವೇಳೆ ಇದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ನಾವು ಸಾಕಷ್ಟು ಡೇಟಾವನ್ನು ಸಂಗ್ರಹಿಸಬೇಕಾಗಿದೆ, ಎಂದು ಚುನಾವಣಾ ಆಯೋಗದ ಪರ ವಕೀಲರು ಹೇಳಿದ್ದಾರೆ. ಅರ್ಜಿಗೆ ಉತ್ತರಿಸಲು ಚುನಾವಣಾ ಆಯೋಗಕ್ಕೆ ಆರನೇ ಹಂತದ ಚುನಾವಣೆಗಳ ಮುನ್ನಾ ದಿನವಾದ ಮೇ 24ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ.
ಎನ್‌ಜಿಒ ಎಡಿಆರ್ ಪ್ರತಿನಿಧಿಸುವ ವಕೀಲ ಪ್ರಶಾಂತ್ ಭೂಷಣ್ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡುವಂತೆ ಮನವಿ ಮಾಡಿದ್ದರು. ಕಳೆದ ವಾರ NGO ತನ್ನ 2019ರ ಸಾರ್ವಜನಿಕ ಹಿತಾಸಕ್ತಿ ದಾವೆಗಳ ಭಾಗವಾಗಿ ಈ ಕುರಿತು ಮಧ್ಯಂತರ ಅರ್ಜಿಯನ್ನು ಸಲ್ಲಿಸಿತ್ತು. ಮತದಾನದ ನಂತರದ ಎಲ್ಲಾ ಮತಗಟ್ಟೆಗಳಿಂದ ಪಡೆದ ಸ್ಪಷ್ಟವಾದ ಮಾಹಿತಿಗಳನ್ನು ತಕ್ಷಣವೇ ಅಪ್‌ಲೋಡ್ ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶನಗಳನ್ನು ನೀಡುವಂತೆ ಕೋರಲಾಗಿತ್ತು.
ಲೋಕಸಭಾ ಚುನಾವಣೆಯ ಆರಂಭಿಕ ಎರಡು ಹಂತಗಳಲ್ಲಿ ನಡೆದ ಮತದಾನದಲ್ಲಿ ಆಯಾ ಮತದಾನದ ದಿನಗಳಲ್ಲಿ ಬಹಿರಂಗಪಡಿಸಿದ ಆರಂಭಿಕ ಅಂದಾಜು ಅಂಕಿ-ಅಂಶಗಳು ಮತ್ತು ಆ ಬಳಿಕ ಚುನಾವಣಾ ಆಯೋಗ ಬಹಿರಂಗಪಡಿಸಿದ ಅಂಕಿ-ಅಂಶಗಳಲ್ಲಿನ ವ್ಯತ್ಯಾಸಗಳಿಂದ ಸಂಶಯ ಸೃಷ್ಟಿಯಾಗಿದ್ದು, ಇದರ ಭಾಗವಾಗಿ ಅರ್ಜಿಯನ್ನು ಸಲ್ಲಿಸಲಾಗಿದೆ.
ಅಪ್ಲಿಕೇಶನ್ ಪ್ರಕಾರ, ಏಪ್ರಿಲ್ 30ರಂದು ಬಿಡುಗಡೆಯಾದ ಡೇಟಾವು ಮತದಾನದ ದಿನದಂದು ಚುನಾವಣಾ ಆಯೋಗ ಘೋಷಿಸಿದ ಪ್ರಾಥಮಿಕ ಶೇಕಡಾವಾರುಗಳಿಗೆ ಹೋಲಿಸಿದರೆ ಅಂತಿಮ ಮತದಾರರ ಮತದಾನದ ಅಂಕಿಅಂಶಗಳಲ್ಲಿ ಗಮನಾರ್ಹ ಏರಿಕೆ ಅಂದರೆ ಅಂದಾಜು 5-6% ಕಂಡು ಬಂದಿದೆ. ಇದಲ್ಲದೆ ಅಂಕಿ-ಅಂಶಗಳ ಬಿಡುಗಡೆಯಲ್ಲಿನ ವಿಳಂಬವು ಸಂಶಯಕ್ಕೆ ಕಾರಣವಾಗಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR)ನ ಅರ್ಜಿಯು, VVPAT ಸ್ಲಿಪ್‌ಗಳನ್ನು, ಎಲೆಕ್ಟ್ರಾನಿಕ್ ಮತಯಂತ್ರಗಳ (EVM) ಮೂಲಕ ಚಲಾಯಿಸಿದ ಮತಗಳೊಂದಿಗೆ ಎಣಿಸುವ ಮನವಿಯ ಭಾಗವಾಗಿದೆ, ಆದರೆ ಈ ಮನವಿಯನ್ನು ಏಪ್ರಿಲ್ 26 ರಂದು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.
ಇದನ್ನು ಓದಿ: ಚುನಾವಣಾ ಪ್ರಚಾರದ ವೇಳೆ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ


