ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಮಧ್ಯಂತರ (ಜ.29) ತಡೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಹೊಸ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಸಂಬಂಧ ಕೇಂದ್ರ ಸರ್ಕಾರ ಮತ್ತು ಯುಜಿಸಿಗೆ ಮಾರ್ಚ್ 19ರಂದು ಹಿಂದಿರುಗಿಸಬಹುದಾದ ನೋಟಿಸ್ ಜಾರಿ ಮಾಡಿದೆ.
ಜಾತಿ ತಾರತಮ್ಯದ ದೂರುಗಳನ್ನು ಪರಿಶೀಲಿಸಲು ಮತ್ತು ಸಮಾನತೆಯನ್ನು ಉತ್ತೇಜಿಸಲು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಸಮಾನತೆಯ ಸಮಿತಿ (Equity Committees)ರಚಿಸುವುದನ್ನು ಕಡ್ಡಾಯಗೊಳಿಸುವ ಹೊಸ ನಿಯಮಗಳನ್ನು 2026ರ ಜನವರಿ 13ರಂದು ಜಾರಿಗೆ ಬಂದಿವೆ. ಇದು 2012ರ ನಿಯಮಗಳನ್ನು ಬದಲಾಯಿಸುತ್ತವೆ, ಅದು ಹೆಚ್ಚಾಗಿ ಸಲಹಾ ಸ್ವರೂಪದ್ದಾಗಿತ್ತು.
ಸಮಾನತೆಯ ಸಮಿತಿಗಳಲ್ಲಿ ಇತರ ಹಿಂದುಳಿದ ವರ್ಗಗಳು (ಒಬಿಸಿ), ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ), ಅಂಗವಿಕಲ ವ್ಯಕ್ತಿಗಳು ಮತ್ತು ಮಹಿಳೆಯರು ಇರಬೇಕು ಎಂದು ಹೊಸ ನಿಯಮಗಳು ಹೇಳುತ್ತದೆ.
ಅವುಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಮೃತ್ಯುಂಜಯ್ ತಿವಾರಿ, ವಕೀಲ ವಿನೀತ್ ಜಿಂದಾಲ್ ಮತ್ತು ರಾಹುಲ್ ದಿವಾನ್ ಎಂಬವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
“ಯುಜಿಸಿಯ ಹೊಸ ನಿಯಮಗಳು ತಾರತಮ್ಯ ಒಂದು ಕಡೆಯಿಂದ ಮಾತ್ರ ನಡೆಯುತ್ತದೆ ಎಂಬ ಅಸಾಧ್ಯವಾದ ಊಹೆ ಮೇಲೆ ನಿಂತಿವೆ. ಅಂದರೆ, ತಾರತಮ್ಯ ಎಂದರೆ ಕೇವಲ ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳ ವಿರುದ್ಧ ಸಾಮಾನ್ಯ ವರ್ಗದವರು ಮಾಡುವುದು ಎಂದು ಭಾವಿಸಲಾಗಿದೆ. ಹೊಸ ನಿಯಮಗಳ ರಚನೆ ಮತ್ತು ಅನುಷ್ಠಾನದದಲ್ಲಿ ಕಾನೂನಾತ್ಮಕ ಸಂತ್ರಸ್ತ ಸ್ಥಾನವನ್ನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗದವರಿಗೆ ಮಾತ್ರ ನೀಡಲಾಗಿದೆ. ಇದರಿಂದ ಸಾಮಾನ್ಯ ಅಥವಾ ಪ್ರಬಲ ಜಾತಿಯ ವಿದ್ಯಾರ್ಥಿಗಳು ಜಾತಿಯ ಕಾರಣದಿಂದ ಎದುರಿಸುವ ಯಾವುದೇ ತಾರತಮ್ಯಕ್ಕೆ ರಕ್ಷಣೆ ಇಲ್ಲದಂತಾಗಿದೆ. ‘ಸುಳ್ಳು ದೂರುಗಳ’ ವಿರುದ್ದದ ಕ್ರಮಗಳ ಕುರಿತು ಸ್ಪಷ್ಟವಾಗಿ ತಿಳಿಸದೆ ಪಕ್ಷಪಾತ ಮಾಡುವ ಮೂಲಕ ‘ಸಾಮಾನ್ಯ ವರ್ಗದ’ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕೂಡ ಹೊಸ ನಿಯಮಗಳ ಕುರಿತು ಅತೃಪ್ತಿ ವ್ಯಕ್ತಪಡಿಸಿದೆ. ಅದು ಪ್ರಾಥಮಿಕವಾಗಿ ‘ಅಸ್ಪಷ್ಟ’ ಮತ್ತು ‘ದುರುಪಯೋಗವಾಗಬಹುದು ಎಂದು ಅಭಿಪ್ರಾಯಪಟ್ಟಿದೆ. ಖ್ಯಾತ ನ್ಯಾಯಶಾಸ್ತ್ರಜ್ಞರನ್ನು ಒಳಗೊಂಡ ಸಮಿತಿಯು ನಿಯಮಗಳನ್ನು ಪುನರ್ ಪರಿಶೀಲಿಸಬೇಕು ಎಂದು ಹೇಳಿದೆ ಎಂಬುವುದಾಗಿ ಲೈವ್ ಲಾ ವರದಿ ಮಾಡಿದೆ.
ವಿಚಾರಣೆಯ ಸಮಯದಲ್ಲಿ, ಪೀಠವು ನಿಯಮಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಸಮಸ್ಯೆಗಳನ್ನು ಮೌಖಿಕವಾಗಿ ಎತ್ತಿ ತೋರಿಸಿದೆ.
- ಈ ನಿಬಂಧನೆಗಳು ಅಸ್ಪಷ್ಟವಾಗಿದ್ದು, ದುರುಪಯೋಗವಾಗುವ ಸಾಧ್ಯತೆ ಇದೆ.
- ತಾರತಮ್ಯದ ವ್ಯಾಖ್ಯಾನದಲ್ಲಿ ಎಲ್ಲಾ ರೀತಿಯ ತಾರತಮ್ಯಗಳು ಒಳಗೊಂಡಿರುವಾಗ ‘ಜಾತಿ ಆಧಾರಿತ ತಾರತಮ್ಯ’ವನ್ನು ಪ್ರತ್ಯೇಕವಾಗಿ ಏಕೆ ವ್ಯಾಖ್ಯಾನಿಸಲಾಗಿದೆ?
- ರ‍್ಯಾಗಿಂಗ್ ಅನ್ನು ಏಕೆ ನಿಯಮಗಳಿಂದ ಹೊರಗಿಡಲಾಗಿದೆ?
ನಿಯಮಾವಳಿಯನ್ನು ಪುನರ್ ಪರಿಶೀಲಿಸುವಂತೆ ಸೂಚಿಸುತ್ತಾ ಸಿಜೆಐ ಸೂರ್ಯಕಾಂತ್ ಅವರು, “ಸಾಲಿಸಿಟರ್ ಜನರಲ್ (ಎಸ್‌ಜಿ) ಅವರೇ ನಿಮ್ಮ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಇಂದು ನಾವು ಯಾವುದೇ ಅಧಿಕೃತ ಆದೇಶವನ್ನು ಹೊರಡಿಸಲು ಬಯಸುವುದಿಲ್ಲ… ಬದಲಾಗಿ, ಪ್ರಖ್ಯಾತ ನ್ಯಾಯಶಾಸ್ತ್ರಜ್ಞರನ್ನು ಒಳಗೊಂಡ ಒಂದು ಸಮಿತಿ ರಚನೆಯಾಗಬೇಕು. ಇದರಲ್ಲಿ 2-3 ತಜ್ಞರಿರಲಿ. ಅವರು ಸಾಮಾಜಿಕ ಮೌಲ್ಯಗಳು ಮತ್ತು ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಂತಿರಬೇಕು. ನಾವು ಈ ನಿಯಮಗಳನ್ನು ರೂಪಿಸಿದರೆ ಇಡೀ ಸಮಾಜವು ಹೇಗೆ ಬೆಳೆಯಬೇಕು ಮತ್ತು ಕ್ಯಾಂಪಸ್‌ನಿಂದ ಹೊರಗೆ ಜನರು ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಅವರು ಆಳವಾಗಿ ಯೋಚಿಸಬೇಕು” ಎಂದು ಹೇಳಿದ್ದಾರೆ.


