ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ಹೊಸ ವ್ಯಾಖ್ಯಾನ ಕುರಿತು ನವೆಂಬರ್ 20ರಂದು ನಿವೃತ್ತ ಸಿಜೆಐ ಬಿ. ಆರ್ ಗವಾಯಿ ನೇತೃತ್ವದ ಪೀಠ ನೀಡಿದ ತೀರ್ಪಿನ ಅನುಷ್ಠಾನವನ್ನು ಮೂವರು ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ನ ವಿಶೇಷ ರಜಾಕಾಲದ ಪೀಠವು ಸೋಮವಾರ (ಡಿ.29) ತಡೆಹಿಡಿದಿದೆ.
ಕೇಂದ್ರ ಸರ್ಕಾರದ ನೇಮಿಸಿದ ಸಮಿತಿಯ ಶಿಫಾರಸುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೇಳಿಕೆಗಳಿಗೆ ತಡೆ ನೀಡಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ ಜನವರಿ 21, 2026ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.
ಅರಾವಳಿ ಬೆಟ್ಟಗಳ ಶ್ರೇಣಿ ಕುರಿತು ಕೇಂದ್ರ ಸರ್ಕಾರದ ಸಮಿತಿ ನೀಡಿದ ಹೊಸ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿರುವುದಕ್ಕೆ ದೇಶದಾದ್ಯಂತ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ ಬಳಿಕ, ಈ ಕುರಿತು ಶನಿವಾರ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ಕೈಗೆತ್ತಿಕೊಂಡಿತ್ತು. ಸೋಮವಾರ ವಿಚಾರಣೆ ನಡೆಸಿ ಮಧ್ಯಂತರ ಆದೇಶ ನೀಡಿದೆ.
ಅರಾವಳಿ ಶ್ರೇಣಿಯ ಗುರುತಿಸುವಿಕೆ ಮತ್ತು ರಕ್ಷಣೆಯ ಸುತ್ತಲಿನ ವಿವಾದಾತ್ಮಕ ವಿಷಯವನ್ನು ಮರುಪರಿಶೀಲಿಸಲು ಬಯಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್, ಅರಾವಳಿಗಳ ಎತ್ತರ, ವ್ಯಾಪ್ತಿ ಮತ್ತು ಪರಿಸರ ಮಹತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸಮಗ್ರವಾಗಿ ಮರುಪರಿಶೀಲಿಸಲು ಡೊಮೇನ್ ತಜ್ಞರನ್ನು ಒಳಗೊಂಡಂತೆ ಉನ್ನತ-ಶಕ್ತಿಯ ತಜ್ಞರ ಸಮಿತಿಯನ್ನು ರಚಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ.
ಕೇಂದ್ರ ಸರ್ಕಾರ, ಸಂಬಂಧಪಟ್ಟ ರಾಜ್ಯಗಳು ಮತ್ತು ಅಮಿಕಸ್ ಕ್ಯೂರಿಗಳಿಗೆ ನೋಟಿಸ್ ಜಾರಿ ಮಾಡುವಾಗ, ಕಳೆದ ತಿಂಗಳು ಅನುಮೋದಿಸಲಾದ ನಿರ್ಬಂಧಿತ ಗಡಿರೇಖೆಯು ಗಣಿಗಾರಿಕೆಯಂತಹ ಚಟುವಟಿಕೆಗಳಿಗೆ ಅನುಮತಿ ನೀಡಬಹುದಾದ ಪ್ರದೇಶಗಳ ವ್ಯಾಪ್ತಿಯನ್ನು ವಿಸ್ತರಿಸುತ್ತದೆಯೇ ಎಂದು ಪರಿಶೀಲಿಸುವ ಅವಶ್ಯಕತೆಯಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿಚಾರಣೆಯ ಸಮಯದಲ್ಲಿ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು, ನ್ಯಾಯಾಲಯದ ಆದೇಶಗಳು, ಸರ್ಕಾರದ ಪಾತ್ರ ಇತ್ಯಾದಿಗಳ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆಗಳಿವೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
ಎಸ್‌ಜಿ ವಾದಗಳನ್ನು ಆಲಿಸಿದ ಸಿಜೆಐ, ಪ್ರಸ್ತಾವಿತ ತಜ್ಞರ ಸಮಿತಿಯ ಶಿಫಾರಸುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೇಳಿಕೆಗಳು ಮುಂದಿನ ಆದೇಶದವರೆಗೆ ಅಮಾನತಿನಲ್ಲಿರುತ್ತವೆ ಎಂದು ಹೇಳಿದರು.
ಪರಿಸರದ ಮೇಲಿನ ಪರಿಣಾಮ ಮತ್ತು ಹೆಚ್ಚಾಗಿ ಅಧಿಕಾರಿಗಳನ್ನು ಹೊಂದಿದ್ದ ಹಿಂದಿನ ಸಮಿತಿಯು ಮಾಡಿದ ಶಿಫಾರಸುಗಳ ಮೌಲ್ಯಮಾಪನವನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.


