370 ನೇ ವಿಧಿ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಆರ್.ಎಸ್.ಎಸ್ ನಿಕಟವರ್ತಿ ವಕೀಲ ಮನೋಹರಲಾಲ್ ಶರ್ಮಾಗೆ “ಯಾವ ರೀತಿಯ ಅರ್ಜಿ ಇದು” ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ತರಾಟೆಗೆ ತೆಗೆದುಕೊಂಡಿದ್ದಾರೆ.
370 ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ಧುಗೊಳಿಸಿರುವ ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗಿತ್ತಿಕೊಂಡಿದೆ. ಮೊದಲೇ ಸಲ್ಲಿಸಿದ್ದ ಶರ್ಮಾ ಅರ್ಜಿಯನ್ನು ನೋಡಿದ ಮುಖ್ಯ ನ್ಯಾಯಮೂರ್ತಿಗಳು ‘ಈ ಅರ್ಜಿಗೆ ಯಾವುದೇ ಅರ್ಥವಿಲ್ಲ; ಎಂದು ಹೇಳಿದ್ದಾರೆ.
ವಕೀಲ ಮನೋಹರಲಾಲ್ ಶರ್ಮಾ ಉಳಿದ ಅರ್ಜಿಗಳನ್ನು ಸಹ ಗಂಭೀರವಾಗಿ ಪರಿಗಣಿಸದಂತೆ ಮಾಡಲು ಬೇಕಂತಲೇ ಈ ಅರ್ಜಿ ಸಲ್ಲಿಸಿದ್ದಾರೆ ಎಂದು ಹಲವರು ಆರೋಪ ಮಾಡಿದ್ದರು. ಏಕೆಂದರೆ ಈತ ಸರ್ಕಾರದ ನಿರ್ಧಾರದ ಪರವಾಗಿದ್ದರೂ ಸಹ ವಿಷಯಾಂತರ ಮಾಡಲು ಸುಮ್ಮನೆ ತಾನೇ ಮೊದಲಾಗಿ ಅದನ್ನು ವಿರೋಧಿಸುವ ರೀತಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಲೈವ್ ಲಾ ದಲ್ಲಿ ಕೆಲವರು ದೂರಿದ್ದರು.
ಇದನ್ನು ಓದಿ: 370ನೇ ವಿದಿ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಆರೆಸ್ಸೆಸ್ ವಕೀಲನಿಂದಲೇ ಅರ್ಜಿ: ಅಮಿತ್ ಶಾರ ಹೊಸ ನಾಟಕ
“ಇದು ಯಾವ ರೀತಿಯ ಅರ್ಜಿಯಾಗಿದೆ? ನೀವು ಏನು ಸವಾಲು ಮಾಡುತ್ತಿದ್ದೀರಿ, ನಿಮ್ಮ ಮನವಿಗಳು ಯಾವುವು” ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಶರ್ಮಾ ಅವರನ್ನು ಕೇಳಿದ್ದಾರೆ. ಅಲ್ಲದೇ “ನಾನು ನಿಮ್ಮ ಅರ್ಜಿಯನ್ನು ಅರ್ಧ ಘಂಟೆ ಓದಿದ್ದೇನೆ. ನನಗೆ ಅದು ಅರ್ಥವಾಗಲಿಲ್ಲ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರದ ಆರ್ಟಿಕಲ್ 370 ರದ್ದತಿಯ ಕುರಿತು ಇತರ ಏಳು ಅರ್ಜಿಗಳಿವೆ. “ಈ ರೀತಿಯ ವಿಷಯದಲ್ಲಿ ನೀವು ದೋಷಯುಕ್ತ ಅರ್ಜಿಯನ್ನು ಏಕೆ ಸಲ್ಲಿಸಿದ್ದೀರಿ? ಆರು ಅರ್ಜಿಗಳಿವೆ ಎಂದು ರಿಜಿಸ್ಟ್ರಾರ್ ಹೇಳುತ್ತಾರೆ. ನಿಮ್ಮಿಂದಾಗಿ ಜನರು ಈ ರೀತಿಯ ದೋಷಯುಕ್ತ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ.” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಮತ್ತು ಅರ್ಜಿದಾರ ಮನೋಹರಲಾಲ್ ಶರ್ಮಾರವರು ಮತ್ತೆ ತಿದ್ದುಪಡಿ ಮಾಡಿದ ಅರ್ಜಿಯನ್ನು ಸಲ್ಲಿಸುವುದಾಗಿ ಹೇಳಿದ್ದಾರೆ. ಮನೋಹರ್ ಲಾಲ್ ಶರ್ಮಾ ದೆಹಲಿ ಅತ್ಯಾಚಾರ ಪ್ರಕರಣದಲ್ಲಿಯೂ ಸಹ ಅತ್ಯಾಚಾರಿ ಆರೋಪಿಗಳ ಪರವಾಗಿ ವಾದಿಸಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ.
ಇದೇ ಸಂದರ್ಭದಲ್ಲಿ ಮಾಧ್ಯಮಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವಂತೆ ಕೋರಿ ಕಾಶ್ಮೀರ ಟೈಮ್ಸ್ ಸಂಪಾದಕರಾದ ಭಾಸಿಯಾ ರವರು ಸಲ್ಲಿಸಿರುವ ಮತ್ತೊಂದು ಅರ್ಜಿಯನ್ನು ವಿಚಾರಣೆ ನಡೆಸಬೇಕಿದೆ. ವಿಚಾರಣೆಯನ್ನು ಮುಂದೂಡಿದ ಮುಖ್ಯ ನ್ಯಾಯಮೂರ್ತಿ, ಮಾಧ್ಯಮ ನಿರ್ಬಂಧಗಳ ಕುರಿತು ಅರ್ಜಿಯನ್ನು ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ ಮತ್ತು “ಈ ವಿಷಯಕ್ಕೆ ಸ್ವಲ್ಪ ಹೆಚ್ಚು ಸಮಯವನ್ನು ನೀಡಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ “ಕಾಶ್ಮೀರ ಟೈಮ್ಸ್ ಪತ್ರಿಕೆಯನ್ನು ಜಮ್ಮುವಿನಿಂದ ಮಾತ್ರ ಪ್ರಕಟಿಸಲಾಗಿದೆ. ನಾವು ಶ್ರೀನಗರದಿಂದ ಪ್ರಕಟಿಸಲಾಗುತ್ತಿಲ್ಲ. ದಿನದಿಂದ ದಿನಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ ಮತ್ತು ನಿರ್ಬಂಧಗಳನ್ನು ಕ್ರಮೇಣ ತೆಗೆದುಹಾಕಲಾಗುತ್ತಿದೆ.” ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ.
ನಿರ್ಬಂಧಗಳನ್ನು ತೆಗೆದುಹಾಕಬೇಕೆಂದು ವಾದಿಸುತ್ತಿರುವ ವಕೀಲ ವೃಂದಾ ಗ್ರೋವರ್ “ಏನಾಗುತ್ತಿದೆ ಎಂಬುದರ ಬಗ್ಗೆ ಮಾಧ್ಯಮಗಳ ಮೂಲಕ ಜನರಿಗೆ ತಿಳಿಸಬೇಕಿದೆ. ಆಗ ಮಾತ್ರ ಪತ್ರಿಕೆ ಜನರಿಗೆ ಸಹಾಯ ಮಾಡಿದಂತಾಗುತ್ತದೆ. ಫೋನ್ ಮತ್ತು ಇಂಟರ್ ನೆಟ್ ಯಾವಾಗಿನಿಂದ ಕಾರ್ಯನಿರ್ವಹಿಸುತ್ತವೆ” ಎಂದು ಕೇಳಿದ್ದಾರೆ.
“ಇಂದು ಸಂಜೆ ಫೋನ್ ಸಂಪರ್ಕಗಳನ್ನು ಪುನಃಸ್ಥಾಪಿಸಲಾಗುವುದು ಎಂದು ಮಾಧ್ಯಮಗಳು ಹೇಳುತ್ತಿವೆ ಕಾಯಿರಿ.” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.


