ಮೈತ್ರಿ ಸರ್ಕಾರವನ್ನು ಪತನಗೊಳಿಸುವ ಇರಾದೆಯಿಂದಲೇ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ನ 17 ಶಾಸಕರ ಅನರ್ಹತೆಯ ಕುರಿತಂತೆ ಸುಪ್ರೀಂ ಕೋರ್ಟ್ ಇಂದು ನೀಡಿರುವ ತೀರ್ಪು ಬಿಜೆಪಿಯೊಳಗೆ ದೊಡ್ಡ ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆಯೇ ಹೆಚ್ಚು. ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಈ ಎಲ್ಲಾ ಹದಿನೇಳು ಜನರನ್ನು ಅನರ್ಹಗೊಳಿಸಿದ್ದ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆಯಾದರು, ಈ ವಿಧಾನಸಭೆ ಅವಧಿ ಮುಗಿಯುವವರೆಗೆ ಅವರು ಸ್ಪರ್ಧಿಸುವಂತಿಲ್ಲ ಎಂದು ನಿರ್ಬಂಧ ಹೇರಿದ್ದ ಅವರ ಕ್ರಮವನ್ನು ತೊಡೆದುಹಾಕಿದೆ. ಇದರಿಂದಾಗಿ ಅನರ್ಹ ಶಾಸಕರು ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಯಾವ ತೊಡಕೂ ಇಲ್ಲದಂತಾಗಿದೆ. ಅದೇ ಸಮಯದಲ್ಲಿ, ಮರು ಆಯ್ಕೆ ಆಗುವವರೆಗೆ ಅವರು ಸರ್ಕಾರದ ಯಾವುದೇ ಸಾಂವಿಧಾನಿಕ ಹುದ್ದೆಯನ್ನು ಹೊಂದುವಂತಿಲ್ಲ ಎಂಬ ಕಟ್ಟಾಜ್ಞೆಯನ್ನೂ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಅಂದರೆ, ಈಗ ಬಿಜೆಪಿ ಮುಂದೆ ಎರಡು ಹೊಣೆಗಳಿವೆ. ಮೊದಲನೆಯದ್ದು, ಎಲ್ಲಾ ಅನರ್ಹ ಶಾಸಕರಿಗೆ ಟಿಕೇಟು ಕೊಡಲೇಬೇಕು. ಈಗಾಗಲೇ ತೀರ್ಪು ಹೊರಬೀಳುತ್ತಿದ್ದಂತೆಯೇ ದಿಲ್ಲಿಯಲ್ಲಿ ಹಿಂದಿ ಸುದ್ದಿಗಾರರು ಕೇಳಿದ “ನೀವು ಯಾವ ಪಕ್ಷದಿಂದ ಸ್ಪರ್ಧಿಸುತ್ತೀರಿ?” ಎಂಬ ಪ್ರಶ್ನೆಗೆ ಮುಂಚೂಣಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿಯವರು “ನಿಸ್ಸಂದೇಹವಾಗಿ ಬಿಜೆಪಿಯಿಂದ” ಎಂಬ ಹೇಳಿಕೆಯನ್ನು ನೀಡಿಯಾಗಿದೆ. ಇನ್ನು ಬಿಜೆಪಿ ಪಾಲಿಗಿರುವ ಎರಡನೇ ಹೊಣೆಯೆಂದರೆ, ಕೇವಲ ಟಿಕೇಟು ಕೊಡುವುದು ಮಾತ್ರವಲ್ಲ ಅವರನ್ನು ಶತಾಯಗತಾಯ ಗೆಲ್ಲಿಸಿಕೊಳ್ಳಲೇಕಿದೆ. ಇದಕ್ಕೂ ಎರಡು ಕಾರಣಗಳುಂಟು.
ಹದಿನೇಳು ಶಾಸಕರ ರಾಜೀನಾಮೆಯಿಂದ ವಿಧಾನಸಭೆಯಲ್ಲಿ ಈಗಿರುವುದು ಅಲ್ಪಮತದ ಸರ್ಕಾರ. ಕರ್ನಾಟಕ ಅಸೆಂಬ್ಲಿಯ ಮ್ಯಾಜಿಕ್ ನಂಬರ್ 113 ಅನ್ನು ದಾಟಬೇಕೆಂದರೆ ಬಿಜೆಪಿಗೆ ಈ ಉಪಚುನಾವಣೆಯಲ್ಲಿ ಕನಿಷ್ಠ ಎಂಟು ಎಂಎಲ್‌ಎಗಳನ್ನು ಗೆಲ್ಲಿಸಿಕೊಳ್ಳಲೇಬೇಕಿದೆ. ಇನ್ನು ಕೊಂಚ ಸರ್ಕಾರ ಸುಭದ್ರವಾಗಿ ಉಸಿರಾಡಬೇಕೆಂದರೆ ಸದ್ಯ ನಡೆಯುತ್ತಿರುವ ಎಲ್ಲಾ ಹದಿನೈದು (ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರ ಹೊರತುಪಡಿಸಿ) ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲೇಬೇಕಿದೆ. ಸರ್ಕಾರವನ್ನು ಉಳಿಸಿಕೊಳ್ಳಬೇಕೆಂದರೆ ಅನರ್ಹರನ್ನು ಗೆಲ್ಲಿಸಿಕೊಳ್ಳಲೇಬೇಕು. ಇದು ಒಂದು ಕಾರಣ. ಮತ್ತೊಂದು ಕಾರಣ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಉಲ್ಲೇಖದಲ್ಲಿದೆ. ಅದು, ಮರು ಆಯ್ಕೆ ಆಗುವವರೆಗೆ ಸಾಂವಿಧಾನಿಕ ಹುದ್ದೆ ಹೊಂದುವಂತಿಲ್ಲ ಎಂಬ ನಿಬಂಧನೆ!
ಹೌದು, ಅನರ್ಹ ಶಾಸಕರಲ್ಲಿ ಒಂದಿಬ್ಬರನ್ನು ಹೊರತುಪಡಿಸಿದರೆ, ಮಿಕ್ಕ ಬಹುಪಾಲು ಜನ ತಮ್ಮ ಮಾತೃಪಕ್ಷಗಳಿಗೆ ದ್ರೋಹವೆಸಗಿ ಬಿಜೆಪಿಯತ್ತ ನಡೆದದ್ದೇ, ಮಂತ್ರಿಯಾಗಬೇಕೆಂಬ ಮಹಾದಾಸೆಯಿಂದ. ಬಿಜೆಪಿ ಕೂಡಾ ಅವರನ್ನು ತನ್ನ ಸರ್ಕಾರದಲ್ಲಿ ಮಂತ್ರಿ ಮಾಡುವ ಭರವಸೆ ಕೊಟ್ಟೇ ತನ್ನತ್ತ ಸೆಳೆದುಕೊಂಡಿತ್ತೆಂಬುದನ್ನು ಹಾದಿಬೀದಿಯಲ್ಲಿ ಜನರೇ ಮಾತಾಡಿಕೊಳ್ಳುತ್ತಿದ್ದಾರೆ. ಅನರ್ಹತೆಯ ಸಮಯದಲ್ಲಿ ಸ್ಪೀಕರ್ ಹಾಕಿದ್ದ ಈ ನಿಬಂಧನೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯದೇ ಹೋಗಿದ್ದರೆ, ಅನರ್ಹರನ್ನು ಚುನಾವಣಾ ಸ್ಪರ್ಧೆಗಿಳಿಸದೆ ಎಂಎಲ್‌ಸಿ ಮಾಡಿ ಸಚಿವರನ್ನಾಗಿಸಿಯೊ ಅಥವಾ ಭರಪೂರ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿಸಿಯೊ ಅಥವಾ ಕ್ಯಾಬಿನೆಟ್ ದರ್ಜೆಯ ಪರ್ಯಾಯ ಹುದ್ದೆಗಳನ್ನು ಸೃಷ್ಟಿಸಿಯೋ ಅವರನ್ನು ಸಂತೈಸುವ ಅವಕಾಶವಿರುತ್ತಿತ್ತು. ಆದರೆ ಈಗ `ರಾಜೀನಾಮೆ ಕೊಟ್ಟರೆ ಮಂತ್ರಿ ಮಾಡುತ್ತೇವೆ’ ಎಂಬ ತನ್ನ ಮಾತನ್ನು ಈಡೇರಿಸಬೇಕೆಂದರೆ ಎಲೆಕ್ಷನ್‌ಗೆ ನಿಲ್ಲಿಸಿ, ಗೆಲ್ಲಿಸಲೇಬೇಕಿದೆ. ಇಲ್ಲವಾದರೆ ಸರ್ಕಾರ ಅಲ್ಪಮತಕ್ಕೆ ಕುಸಿಯೋದು ಮಾತ್ರವಲ್ಲ, ಅನರ್ಹರಿಗೆ ನಂಬಿಸಿ ರಾಜೀನಾಮೆ ಕೊಡಿಸಿ, ಬೇಕಂತಲೆ ಸೋಲಿಸಿ ನಂಬಿಕೆದ್ರೋಹ ಮಾಡಿದರು ಎಂಬ ಅಪಖ್ಯಾತಿಯೂ ಬಿಜೆಪಿಗೆ ತಟ್ಟಲಿದೆ.
ಬಿಜೆಪಿಯ ಅಸಲೀ ಸಂಕಟ ಇರುವುದೇ ಇಲ್ಲಿ. ಯಾಕೆಂದರೆ ಅನರ್ಹ ಶಾಸಕರಿಗೆ ಟಿಕೇಟ್ ನೀಡುವುದಕ್ಕೆ ಪಕ್ಷದೊಳಗೇ ವಿಪರೀತ ವಿರೋಧವಿದೆ. ಯಡ್ಯೂರಪ್ಪನವರಿಗೆ ಹಿನ್ನಡೆ ಮಾಡಬೇಕೆಂದು ಇಂಥಾ ವಿರೋಧ ವ್ಯಕ್ತಪಡಿಸುತ್ತಿರುವ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರ ಚಿತಾವಣೆ ಒಂದು ಕಡೆಗಾದರೆ, ಆಯಾ ಕ್ಷೇತ್ರಗಳಲ್ಲಿ ಈ ಕಳೆದ ಎಲೆಕ್ಷನ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದವರು ಟಿಕೆಟ್‌ಗೆ ಪಟ್ಟು ಹಿಡಿದು ಬಂಡಾಯವೆದ್ದಿದ್ದಾರೆ.

ಹೊಸಕೋಟೆಯಲ್ಲಿ ಬಿ.ಎನ್.ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಬಹಿರಂಗ ಪ್ರಚಾರಕ್ಕಿಳಿದಿದ್ದರೆ, ಹಿರೇಕೆರೂರಿನಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲಿರುವ ಬಿಸಿ ಪಾಟೀಲ್‌ಗೆ ಬಿಜೆಪಿಯ ಮಾಜಿ ಶಾಸಕ ಯುಬಿ ಬಣಕಾರ್ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಇನ್ನು ಕಳೆದ ಎಲೆಕ್ಷನ್‌ನಲ್ಲಿ ಸೋತರೂ ಉಪಮುಖ್ಯಮಂತ್ರಿ `ಭಾಗ್ಯ’ ಪಡೆದಿರುವ ಲಕ್ಷ್ಮಣ್ ಸವದಿ ಅಥಣಿ ಕ್ಷೇತ್ರದ ಮೇಲೆ ಕಣ್ಣಿಟ್ಟೇ ‘ನಮಗೂ ಅನರ್ಹರಿಗೂ ಯಾವುದೇ ಸಂಬಂಧವಿಲ್ಲ. ಅವರು ಯಾವ ಪಕ್ಷದಿಂದ ಬೇಕಾದರು ಸ್ಪರ್ಧಿಸಿಕೊಳ್ಳಲಿ ಟಿಕೆಟ್ ಖಾತರಿಯಿಲ್ಲ’ ಎಂಬ ಮಾತನ್ನಾಡಿದ್ದರು. ಇದು ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಬಂಡಾಯದ ಮೆಸೇಜು ರವಾನಿಸಿದೆ.
ಅತ್ತ ಯಲ್ಲಾಪುರದಲ್ಲಿ ಕಳೆದ ಸಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ವಿ.ಎಸ್. ಪಾಟೀಲರಿಗೆ ವಾಯುವ್ಯ ಸಾರಿಗೆ ಸಂಸ್ಥೆಯ ಚೇರ‍್ಮನ್ ಮಾಡಿ, ಶಿವರಾಂ ಹೆಬ್ಬಾರ್ ವಿರುದ್ಧ ಬಂಡಾಯ ಏಳದಂತೆ ಮುಂಜಾಗ್ರತೆ ವಹಿಸಲಾಗಿದೆ. ಆದರೆ `ಸುಪ್ರೀಂ ಕೋರ್ಟ್ ತೀರ್ಪು ಖಂಡಿತ ಅನರ್ಹರ ವಿರುದ್ಧ ಬರುತ್ತೆ, ಆಗ ನನಗೇ ಟಿಕೆಟ್ ಖಾಯಂ. ಒಂದೊಮ್ಮೆ ಅದು ಬಿಟ್ಟು ಹೆಬ್ಬಾರ್ ಹೆಂಡತಿ, ಮಗನಿಗೊ ಕೊಟ್ಟರೆ ಬಂಡಾಯ ಏಳೋದು ಗ್ಯಾರಂಟಿ’ ಎಂಬ ಭಿನ್ನರಾಗವನ್ನು ಚರ‍್ಮನ್‌ಗಿರಿ ಸಿಕ್ಕ ಮೇಲೂ ಪಾಟೀಲ್ ಹಾಡಿದ್ದುಂಟು. ಅಂದರೆ, ಕಳೆದ ಸಲ ಕೇವಲ 1400 ಮತಗಳ ಅಂತರದಿಂದ `ಜಸ್ಟ್ ಮಿಸ್’ ಸೋಲನಭಿಸಿದ್ದ ಪಾಟೀಲ್‌ಗೆ ಸ್ಪರ್ಧೆಗಿಳಿಯುವ ಇಂಗಿತ ಇರೋದು ಇದರಿಂದ ಖಾತ್ರಿಯಾಗುತ್ತೆ.
ಹೀಗೆ ಪ್ರತಿ ಕ್ಷೇತ್ರದಲ್ಲು ಬಿಜೆಪಿಗೆ ಬಂಡಾಯ ಎಡತಾಕುತ್ತಲೇ ಇದೆ. ಈಗಾಗಲೇ ತೀರ್ಪಿನ ಕುರಿತು ಪ್ರತಿಕ್ರಿಯಿಸುವ ಸಂದರ್ಭದಲ್ಲಿ ವರದಿಗಾರರೊಬ್ಬರು ಶರತ್ ಬಚ್ಚೇಗೌಡರ ಬಂಡಾಯದ ಕುರಿತು ಕೇಳಿದ ಪ್ರಶ್ನೆಗೆ ಕಿರಿಕಿರಿಗೊಂಡ ಯಡ್ಯೂರಪ್ಪನವರು `ಯಾರು ನಮ್ಮ ಜೊತೆ ಇದ್ದಾರೊ ಅವರ ಬಗ್ಗೆ ಮಾತ್ರ ನಾನು ಮಾತಾಡುತ್ತೇನೆ. ಬೇರೆಯವರ ಬಗ್ಗೆ ಪ್ರತಿಕ್ರಿಯಿಸಲು ಹೋಗಲ್ಲ’ ಎಂದು ಹೇಳಿದ್ದು ಬಿಜೆಪಿ ಅನುಭವಿಸುತ್ತಿರುವ ಬಂಡಾಯದ ಬೇಗುದಿಗೆ ಸಾಕ್ಷಿಯಿದ್ದಂತಿದೆ.
ಒಂದೊಮ್ಮೆ, ಸುಪ್ರೀಂ ಕೋರ್ಟ್ ಏನಾದರು `ಸ್ಪೀಕರ್ ಹೇಳಿದಂತೆ ಈ ವಿಧಾನಸಭಾ ಅವಧಿ ಮುಗಿವವರೆಗೆ ಅನರ್ಹರು ಚುನಾವಣೆಗೆ ಸ್ಪರ್ಧಿಸುವಂತೆಯೇ ಇಲ್ಲ’ ಅನ್ನೋ ತೀರ್ಪನ್ನೇನ್ನಾದರು ಕೊಟ್ಟಿದ್ದರೆ, ಬಿಜೆಪಿಗೆ ಹಾದಿ ಸಲೀಸಾಗುತ್ತಿತ್ತು. ಅದನ್ನೇ ನೆಪ ಮಾಡಿಕೊಂಡು ಯಾವ ಬಂಡಾಯವೂ ಇಲ್ಲದೆ ಚುನಾವಣೆಗೆ ತಯಾರಿ ನಡೆಸಿ ಗೆಲ್ಲಬಹುದಿತ್ತು. ಆದರೀಗ ವಿರೋಧದ ನಡುವೆಯೇ ಅನರ್ಹರಿಗೆ ಟಿಕೇಟ್ ಕೊಟ್ಟು, ಬಂಡಾಯಗಾರರ ಬಿಸಿ ಮುಟ್ಟಿಸಿಕೊಂಡು ಏಗಬೇಕಾಗಿದೆ.
ಅಂದಹಾಗೆ, ಇತ್ತೀಚೆಗೆ ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭಾ ಚುನಾವಣೆ ಜೊತೆಗೆ ಬೇರೆಬೇರೆ ಕಡೆ ನಡೆದ ಉಪಚುನಾವಣೆಗಳಲ್ಲಿ ಇದೇ ರೀತಿ ಪಕ್ಷಾಂತರ ಮಾಡಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಹಳಷ್ಟು ಮಂದಿಗೆ ಸೋಲಾಗಿದೆ. ಇದು ಕೂಡಾ, ಸುಪ್ರೀಂ ತೀರ್ಪಿನಿಂದಾಗಿ ಅನರ್ಹರನ್ನು ಕಣಕ್ಕಿಳಿಸಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಬಿಜೆಪಿಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಕೊನೇ ಮಾತು: ಉಪಚುನಾವಣೆಗೆ ಕಾಂಗ್ರೆಸ್ ಅದಾಗಲೆ ಎಂಟು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಅವೆಲ್ಲವೂ ಬಿಜೆಪಿ ಇದೀಗ ಬಂಡಾಯ ಎದುರಿಸುತ್ತಿರುವ ಕ್ಷೇತ್ರಗಳೇ ಆಗಿವೆ. ಒಂದೊಮ್ಮೆ ಕಾಂಗ್ರೆಸ್, ಬಂಡಾಯ ಬಿಜೆಪಿಗರನ್ನು ತನ್ನತ್ತ ಸೆಳೆದು ಅವರನ್ನು ಕಣಕ್ಕಿಳಿಸಿದ್ದರೂ ಬಿಜೆಪಿಗೆ ಇಷ್ಟೊಂದು ಕಷ್ಟವಿರುತ್ತಿರಲಿಲ್ಲ. ಯಾಕೆಂದರೆ ಬಿಜೆಪಿ ಮತಗಳು ಛಿದ್ರವಾಗುತ್ತಿರಲಿಲ್ಲ. ಆದರೀಗ ಬಿಜೆಪಿಯಿಂದ ಸ್ಪರ್ಧಿಸುವ ಅನರ್ಹರಿಗೆ ಬಂಡಾಯವಾಗಿ ಹಳೇ ಬಿಜೆಪಿಗರು ಕಣಕ್ಕಿಳಿದರೆ, ಅಥವಾ ರಿವರ್ಸ್ ಚುನಾವಣಾ ಪ್ರಚಾರಕ್ಕಿಳಿದರೆ ಬಿಜೆಪಿ ಮತಗಳು ಛಿದ್ರಗೊಂಡು ಬಿಜೆಪಿಗೆ ದುಬಾರಿಯಾಗಲಿವೆ.


