ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಸುರಕೋಡ ಗ್ರಾಮದಲ್ಲಿ ದಲಿತರ ಮೇಲೆ ಸಾಮೂಹಿಕವಾಗಿ ಹಲ್ಲೆ ನಡೆಸಲಾಗಿದ್ದು, 23 ಮಂದಿ ಸವರ್ಣೀಯರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮಾದಿಗ ಸಮುದಾಯದವರು ಡೊಳ್ಳು ಭಾರಿಸಿದರೆಂಬ ಕಾರಣವೊಡ್ಡಿ ಹಲ್ಲೆ ನಡೆಸಿದ್ದು ಸುರಕೊಡ ಪೊಲೀಸ್ ಠಾಣೆಯಲ್ಲಿ ವಿಠ್ಠಲ ಮಾದರ ದೂರು ನೀಡಿದ್ದಾರೆ. ಅದರ ಅನ್ವಯದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕಾಶ್ ಗುಲ್ಲಪ್ಪ, ಬಾಲಪ್ಪ ಬಡಿಗೇರ, ನವೀನ್ ರಾಯನಗೌಡ್ರ, ಮಲ್ಲಪ್ಪ ಪ್ರಭು ಚವಡಿ, ಸುನಿಲ್ ಪ್ರಭು ಚವಡಿ, ಆಕಾಶ್ ಹಾದಿಮನಿ, ಮಹೇಶ್ ಪಾಣಿಗತ್ತಿ, ಶಿವು ಸಿಂಧೆ, ಯಲ್ಲಪ್ಪ ಹಡಗಲಿ, ಈರಣ್ಣ ಸಬರದ, ಶಂಕರಪ್ಪ ಜುಮ್ಮನ್ನವರ, ಅನಿಲ್ ಹಂದಿಗೋಳ, ರಾಜು ಅಗಸರ, ಶಿವು ಹಂದಿಗೋಳ, ಮಾರುತಿ ಹವಲ್ದಾರ, ಪುಟ್ಟರಾಜ್ ಮೂಲಿಮನಿ, ಪ್ರದೀಪ್ ಮುಂಗನೂರ್, ಚಿದಾನಂದ್ ಪತ್ತಾರ್, ಗಣೇಶ್ ಮುನೇನ್‌ಕೊಪ್ಪ, ಮುತ್ತಪ್ಪ ತಿಪ್ಪನಗೌಡ್ರ, ಗಡಿಯಪ್ಪ ಮುರಿಗೌಡ್ರ, ಅಪ್ಪು ಮರಿಗೌಡ್ರ, ಹನಮಂತ ಚಿಗಾರಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದಲಿತ ಸಮುದಾಯದ ಪುರುಷರು ಹಾಗೂ ಮಹಿಳೆಯರು ಸೇರಿ ಸುಮಾರು 33 ಜನರು ಗಾಯಗೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಐಪಿಸಿ ಸೆಕ್ಷನ್ 143, 147, 148, 323, 324, 354, 504, 506, 149 ಹಾಗೂ ಎಸ್.ಸಿ., ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಠಕ್ಕೆ ಪ್ರವೇಶಿಸಿದ ನಂತರ ದ್ವೇಷ ಆರಂಭ
ಊರಿನಲ್ಲಿರುವ ಸಾರ್ವಜನಿಕ ಮಠಕ್ಕೆ ಪ್ರವೇಶ ಮಾಡಿದ್ದರಿಂದಲೇ ದಲಿತರ ಮೇಲೆ ಹಗೆ ಸಾಧಿಸಲಾಗಿದೆ. ಹಬ್ಬದ ದಿನ ಡೊಳ್ಳು ಭಾರಿಸುವುದನ್ನು ನಿಲ್ಲಿಸಲಿಲ್ಲ ಎಂಬ ನೆಪವೊಡ್ಡಿ ಹಲ್ಲೆ ನಡೆಸಲಾಗಿದೆ ಎಂದು ಸಂತ್ರಸ್ತರು ಮಾಹಿತಿ ನೀಡಿದ್ದಾರೆ.
“ನಮ್ಮೂರಿನ ಶಿವರುದ್ರ ಶಿವಯೋಗಿ ಮಠಕ್ಕೆ ದಲಿತರು ಪ್ರವೇಶ ಮಾಡುವಾಗ ಸವರ್ಣೀಯರ ವಿರೋಧ ವ್ಯಕ್ತವಾಗಿತ್ತು. ಊರಿನ ಹಿರಿಯರು ಕೂತು ಸಮಸ್ಯೆ ಬಗೆಹರಿಸಿದ್ದರು. ಆದರೆ ದಿನಾಂಕ 6-05-2022ರಂದು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದ್ಯಾವಪ್ಪ, ದುರ್ಗಮ್ಮ ದೇವರ ಜಾತ್ರೆಯ ದಿನ ಡೊಳ್ಳು ಭಾರಿಸಲು ಕರೆಸಲಾಗಿತ್ತು. ಡೊಳ್ಳು ಭಾರಿಸುತ್ತಿದ್ದ ದಲಿತರ ಮೇಲೆ ಹಾಗೂ ಬಿಡಿಸಲು ಬಂದ ದಲಿತ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ದೂರದಾರ ವಿಠ್ಠಲ್ ಮಾದರ ಹೇಳುತ್ತಾರೆ.
“ದಲಿತರ ಮೇಲಿನ ದ್ವೇಷದಿಂದಾಗಿ ಈ ಹಲ್ಲೆ ನಡೆಸಲಾಗಿದೆ. ಡೊಳ್ಳು ಬಡಿಯುವುದನ್ನು ನಿಲ್ಲಿಸಲು ನಿಮಗೆ ಹೇಳಿದರೂ ಬಡಿಯುತ್ತಿದ್ದೀರಿ ಎಂದು ಆರೋಪಿಸಿ, ಅವ್ಯಾಚ್ಯ ಪದಗಳಿಂದ ನಿಂದಿಸಿ ಏಕಾಏಕಿ ಕೈ ಹಾಗೂ ಕಟ್ಟಿಗೆಯಿಂದ ಹೊಡೆದರು. ನಮ್ಮ ಚೀರಾಟ ಕೇಳಿ ದಲಿತ ಮಹಿಳೆಯರು ಬಂದಾಗ ಮಹಿಳೆಯ ಮೇಲೂ ಹಲ್ಲೆ ನಡೆಸಿ ಅವಮಾನ ಮಾಡಿದ್ದಾರೆ. ಘಟನೆಯ ಬಳಿಕ ನರಗುಂದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲಾಗಿದೆ” ಎಂದು ವಿಠ್ಠಲ್ ದೂರಿನಲ್ಲಿ ತಿಳಿಸಿದ್ದಾರೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ದಲಿತ ಮುಖಂಡ ಮುತ್ತಣ್ಣ ಸೋಮನಕಟ್ಟೆ, “ಊರಿನಲ್ಲಿ ನಾಲ್ಕೈದು ಜಾತಿಗಳಿದ್ದು, ಸವರ್ಣೀಯ ಜಾತಿಗಳೆಲ್ಲ ಒಂದಾಗಿವೆ. ದಲಿತರನ್ನು ಒಂದು ಕಡೆ ನಿಲ್ಲಿಸಲಾಗಿದೆ. ಯಾವುದೇ ಕೆಲಸ ಕಾರ್ಯಗಳಿಗೆ ದಲಿತರನ್ನು ಕರೆಯದೆ ಸಾಮಾಜಿಕ ಬಹಿಷ್ಕಾರ ಹಾಕುವ ಮಾತುಗಳನ್ನು ಸವರ್ಣೀಯರು ಆಡುತ್ತಿದ್ದಾರೆಂದು ತಿಳಿದು ಬಂದಿದೆ. ಮತ್ತೊಂದೆಡೆ ಕೌಂಟರ್ ಕೇಸ್ ಹಾಕುವ ಪ್ರಯತ್ನಗಳನ್ನು ನಡೆಸಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
‘ನಾನುಗೌರಿ.ಕಾಂ’ಗೆ ಸಿಪಿಐ ಎನ್.ಜಿ.ಮಠಪತಿ ಪ್ರತಿಕ್ರಿಯೆ ನೀಡಿದ್ದು, “ಯಾವುದೇ ಕಾರಣಕ್ಕೂ ದಲಿತರ ಮೇಲೆ ಕೌಂಟರ್ ಕೇಸ್ ಹಾಕುವುದಿಲ್ಲ. ದಲಿತರು ಹೆದರಬೇಕಿಲ್ಲ. ಈವರೆಗೆ ಹತ್ತು ಮಂದಿಯನ್ನು ಬಂಧಿಸಲಾಗಿದೆ” ಎಂದರು.
ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಅಧ್ಯಕ್ಷರು, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿಗಳಾದ ಕರಿಯಪ್ಪ ಗುಡಿಮನಿ ಪ್ರತಿಕ್ರಿಯೆ ನೀಡಿ, “ಹಲ್ಲೆ ಮಾಡಿದವರನ್ನು ಮೊದಲು ದಸ್ತುಗಿರಿ ಮಾಡಬೇಕು. ನೊಂದ ಗಾಯಾಳುಗಳಿಗೆ ಆರ್ಥಿಕ ಭದ್ರತೆ ನೀಡಬೇಕು. ನಿಗಮಗಳ ಮೂಲಕ ಸುರುಕೊಡ ಗ್ರಾಮದ ದಲಿತ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುವ ಮೂಲಕ ಹೈನುಗಾರಿಕೆಗೆ ನೇರ ಸಾಲ ಮಂಜೂರಿ ಮಾಡಬೇಕು. ಗ್ರಾಮ ಪಂಚಾಯಿತಿಯು ಈ ದಲಿತರಿಗೆ ಉದ್ಯೋಗವನ್ನು ಒದಗಿಸಬೇಕು. ಪೊಲೀಸರು ದಲಿತರಿಗೆ ಭದ್ರತೆ ನೀಡಬೇಕು. ಊರಿನಲ್ಲಿ ಶಾಂತಿ ನೆಲಸಬೇಕಾಗಿದೆ. ಸಾಮಾಜಿಕ ಬಹಿಷ್ಕಾರ ಹಾಕಿದರೆ ಇಡೀ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗುತ್ತದೆ” ಎಂದು ಎಚ್ಚರಿಸಿದರು.
“ಸುರುಕೊಡ ಗ್ರಾಮದ ಶೋಷಿತ ಸಮುದಾಯಕ್ಕೆ ಕರ್ನಾಟಕ ಜನಶಕ್ತಿ ಹಾಗೂ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಬೆಂಬಲವಾಗಿ ನಿಲ್ಲುತ್ತದೆ” ಎಂದು ತಿಳಿಸಿದರು.



ಯಾವ ಮಶೀದಿ ಗುಡಿಗುಂಡಾರಗಳು ಮಠದೊಳಗೆ ಪ್ರವೇಶ ದಲಿತರಿಗೆ ನಿರಾಕರಿಸುತ್ತಾರೆ ಅಲಿಗೆ ಹೋಗೊದು ನೀಲಿಸಿಬೀಡಿ
ಸವರ್ಣಿಯರ ಉಸಾಬರಿ ಮೊದಲು ಬಿಡಿ. ಡೊಳ್ಳು. ತಮಟೆ. ಕುಣಿತ. ನಮ್ಮ ಜನಾಂಗಕ್ಕೆ ಮೀಸಲಿಡಿ ಬಡಿದು ನೀವೇ ಖುಷಿಪಡಿ. ಹೆಚ್ಚು ಹೆಚ್ಚು ವಿದ್ಯಾವಂತರಾಗಿ ಆರ್ಥಿಕವಾಗಿ ಸಬಲರಾಗಿ. ದೇವರು ದೆವ್ವ ಮೂಡನಂಬಿಕೆಗಳಿಂದ ದೂರ ಇರಿ.