ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಶುಕ್ರವಾರ (ಜ.16) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ 100 ಕೋಟಿ ರೂ.ಗಳ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಮಮತಾ ಬ್ಯಾನರ್ಜಿಗೆ ಕಳುಹಿಸಲಾದ ಮಾನನಷ್ಟ ಮೊಕದ್ದಮೆ ನೋಟಿಸ್‌ಗೆ ಉತ್ತರ ಸಿಗದ ಕಾರಣ, ಅಲಿಪೋರ್ ನ್ಯಾಯಾಲಯದಲ್ಲಿರುವ ಸಿವಿಲ್ ನ್ಯಾಯಾಧೀಶರ, ಹಿರಿಯ ವಿಭಾಗದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದೇನೆ ಎಂದು ಅಧಿಕಾರಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಮಮತಾ ಬ್ಯಾನರ್ಜಿ, ನಾನು ನನ್ನ ಮಾತಿಗೆ ನಿಲ್ಲುತ್ತೇನೆ. ನಾನು ಹೇಳಿದ್ದನ್ನು ಮಾಡುತ್ತೇನೆ. ಆದರೆ ನೀವು ವಿಷಯವನ್ನು ಮರೆಮಾಚುತ್ತಿದ್ದೀರಿ. ಜನರನ್ನು ಗೊಂದಲಕ್ಕೆ ಎಳೆಯುತ್ತಿದ್ದೀರಿ. ನೀವು ನನ್ನ ಮೇಲೆ ಒಂದು ಕೊಳಕು ಆರೋಪ ಹಾಕಿದ್ದೀರಿ..ನಾನು ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿದ್ದೇನೆ ಅಂತ. ಆದರೆ ಅದು ನಿಮ್ಮ ಕಲ್ಪನೆ ಮಾತ್ರ, ನಿಜವಲ್ಲ. ನಾನು ನಿಮಗೆ ಒಂದು ನೋಟಿಸ್ ಕಳುಹಿಸಿದ್ದೆ. ಅದರಲ್ಲಿ, ನಿಮ್ಮ ಬಳಿ ಪುರಾವೆ ಇದ್ದರೆ ತೋರಿಸಿ, ಇಲ್ಲದಿದ್ದರೆ ನಾನು ಕೋರ್ಟ್‌ಗೆ ಹೋಗುತ್ತೇನೆ ಎಂದಿದ್ದೆ. ಆದರೆ ನೀವು ಏನೂ ಉತ್ತರ ಕೊಟ್ಟಿಲ್ಲ, ಮೌನವಾಗಿದ್ದೀರಿ. ಆ ಮೌನವು ನಿಮಗೆ ಯಾವುದೇ ಸಹಾಯ ಮಾಡುವುದಿಲ್ಲ. ನಿಮ್ಮ ಆರೋಪ ಸುಳ್ಳು ಎಂದು ಇದರಿಂದ ಗೊತ್ತಾಗುತ್ತದೆ. ನಾನು ನನ್ನ ಮಾತು ಪಾಲಿಸುತ್ತೇನೆ..ನಾನು ಕೋರ್ಟ್‌ನಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ” ಎಂದಿದ್ದಾರೆ.
2021ರ ವಿಧಾನಸಭಾ ಚುನಾವಣೆಗೆ ಮುನ್ನ ಅಧಿಕಾರಿ ತೃಣಮೂಲ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು.
“ನಿಮ್ಮ ಮೋಸದ ದುಸ್ಸಾಹಸಕ್ಕಾಗಿ ನಿಮ್ಮನ್ನು ನ್ಯಾಯಾಲಯಕ್ಕೆ ಎಳೆಯುವ ನನ್ನ ಮಾತನ್ನು ನಾನು ಉಳಿಸಿಕೊಂಡಿದ್ದೇನೆ ಮತ್ತು ಇಂದು ನಿಮ್ಮ ವಿರುದ್ಧ ಮೊಕದ್ದಮೆ ಹೂಡಿದ್ದೇನೆ” ಎಂದು ಅಧಿಕಾರಿ ಬರೆದಿದ್ದಾರೆ, ಅವರು ಮೊಕದ್ದಮೆ ದಾಖಲಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
“ದಯವಿಟ್ಟು ನಿಮ್ಮ ಪ್ರಬುದ್ಧ ವಕೀಲರನ್ನು ಬೇಗನೆ ಸಂಪರ್ಕಿಸಿ, ಇಲ್ಲದಿದ್ದರೆ ನೀವು ಶೀಘ್ರದಲ್ಲೇ ನನಗೆ 100 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ಪಾವತಿಸಬೇಕಾಗುತ್ತದೆ, ಅದನ್ನು ನಾನು ದತ್ತಿ ಸಂಸ್ಥೆಗೆ ದೇಣಿಗೆ ನೀಡುತ್ತೇನೆ” ಎಂದು ಮಮತಾ ಬ್ಯಾನರ್ಜಿಯ ಕಾಲೆಳೆದಿದ್ದಾರೆ.
ಈ ಹಿಂದೆ ತಮ್ಮ ವಕೀಲರ ಮೂಲಕ ಮಮತಾ ಬ್ಯಾನರ್ಜಿಗೆ ಲೀಗಲ್ ನೋಟಿಸ್ ಕಳುಹಿಸಿದ್ದ ಅಧಿಕಾರಿ, ಜನವರಿ 8 ಮತ್ತು 9 ರಂದು ಬ್ಯಾನರ್ಜಿ ಅವರು ಕಲ್ಲಿದ್ದಲು ಹಗರಣಕ್ಕೆ ತಮ್ಮನ್ನು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಾರ್ವಜನಿಕವಾಗಿ ಲಿಂಕ್ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು,
ಲೀಗಲ್ ನೋಟಿಸ್‌ನಲ್ಲಿ, ಅಧಿಕಾರಿ ಬ್ಯಾನರ್ಜಿ ಅವರ ಮೇಲೆ 72 ಗಂಟೆಗಳ ಒಳಗೆ ಆರೋಪಗಳನ್ನು ಸಾಬೀತುಪಡಿಸುವಂತೆ ಮತ್ತು ಅವರು ಹಾಗೆ ಮಾಡಲು ವಿಫಲವಾದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.


