2012ರಲ್ಲಿ ಅತ್ಯಾಚಾರವೆಸಗಿದ್ದಾರೆಂಬ ಆರೋಪದಲ್ಲಿ ಬ್ರಿಟನ್‌ನ ಜೈಲಿನಲ್ಲಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರ ಮೇಲಿನ ತನಿಖೆಯನ್ನು ಕೈಬಿಡಲಾಗಿದೆ ಎಂದು ಸ್ವೀಡಿಷ್ ಪ್ರಾಸಿಕ್ಯೂಟರ್ ಮಂಗಳವಾರ ತಿಳಿಸಿದ್ದಾರೆ.
2012ರಲ್ಲಿ ಅಸ್ಸಾಂಜೆಯವರನ್ನು ಅತ್ಯಾಚಾರ ಆರೋಪದಡಿ ಬಂಧಿಸಲಾಗಿತ್ತು. ಅಸ್ಸಾಂಜೆಯವರು ಲಂಡನ್ ನ್ಯಾಯಾಲಯದಲ್ಲಿ ಜಾಮೀನು ಪಡೆದು ಹೊರಬಂದಿದ್ದರು. ಜೈಲಿನಿಂದ ಹೊರಬಂದ ಅಸ್ಸಾಂಜೆಯವರು ನ್ಯಾಯಾಂಗ ವಿಚಾರಣೆಗೆ ಬಾರದೆ ತಲೆಮರೆಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಅಸ್ಸಾಂಜೆಯವರು ಕಳೆದ ಏಳು ವರ್ಷಗಳಿಂದ ಲಂಡನ್‌ನಲ್ಲಿರುವ ಈಕ್ವೆಡಾರ್ ರಾಯಬಾರಿ ಕಚೇರಿಯಲ್ಲಿ ಆಶ್ರಯ ಪಡೆದುಕೊಂಡಿದ್ದರು.
ಯಾವಾಗ ಈಕ್ವೇಡಾರ್ ಐಎಂಎಫ್ ಜೊತೆಗೆ ಒಪ್ಪಂದ ಮಾಡಿಕೊಂಡಿತೋ ಆ ಷರತ್ತಿನ ಭಾಗವಾಗಿ ಎರಡು ತಿಂಗಳ ಹಿಂದೆಯಷ್ಟೇ ಅವರನ್ನು ರಾಯಭಾರಿ ಕಛೇರಿಯಿಂದ ಹೊರಗೆ ಕಳಿಸಲಾಗಿತ್ತು. ಹೊರಬಂದ ತಕ್ಷಣವೇ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪದಡಿ ಬಂಧಿಸಲಾಗಿದ್ದು ಸಧ್ಯಕ್ಕೆ ಆ ಕಾರಣಕ್ಕಾಗಿ ಅವರು 50 ವಾರಗಳ ಬಂಧನ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಅತ್ಯಾಚಾರ ತನಿಖೆಯ ವಿಚಾರವಾಗಿ ಸುದ್ದಿ ಗೋಷ್ಠಿ ಆಯೋಜಿಸಿ ಮಾತನಾಡಿದ ಪಬ್ಲಿಕ್ ಪ್ರಸಿಕ್ಯೂಷನ್ನ ಉಪನಿರ್ದೇಶಕ ಇವಾ-ಮೇರಿ ಪರ್ಸನ್ ಅಸ್ಸಾಂಜೆಯವರ ಮೇಲಿನ ತನಿಖೆಯನ್ನು ಕೈಬಿಡಲು ನಿರ್ಧರಿಸಲಾಗಿದೆ. ಈ ಪ್ರಕರಣ ದಾಖಲಾಗಿ ಹಲವು ವರ್ಷಗಳು ಕಳೆದಿವೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಗಣನೀಯವಾಗಿ ದುರ್ಬಲಗೊಂಡಿವೆ. ಆ ಕಾರಣಕ್ಕಾಗಿ ತನಿಖೆಯನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
ಅಸ್ಸಾಂಜೆಯವರು ವಿಶ್ವದ ಬಲಾಢ್ಯ ರಾಷ್ಟ್ರಗಳ ಅವ್ಯವಹಾರಗಳನ್ನು ತಮ್ಮ ವಿಕಿಲೀಕ್ಸ್ ಮೂಲಕ ಬೆತ್ತಲು ಮಾಡಿದುದ್ದರ ಪರಿಣಾಮವಾಗಿ ಅವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಹಿಂಸೆ ನೀಡಲಾಗುತ್ತಿದೆ ಎನ್ನುವುದು ಅವರ ಬೆಂಬಲಿಗರ ಅಭಿಪ್ರಾಯವಾಗಿದೆ. ಈಗ ನ್ಯಾಯಾಲಯದ ತೀರ್ಪು ಕೂಡ ಅದಕ್ಕೆ ಪುಷ್ಠಿ ಕೊಡುವಂತಿದೆ. ಮುಂದೆ ಈ ಪ್ರಕರಣ ಏನಾಗುತ್ತದೆ ಕಾದು ನೋಡಬೇಕಿದೆ.



ಹೋರಾಟಗಾರನೊಬ್ಬನಿಗೆ ಜಯ ಸಿಕ್ಕಿರುವುದು ಸ್ವಾಗತಾರ್ಹ. ನಮ್ಮ ದೊ.ನರಸಿಂಹಮೂರ್ತಿ ಯವರಿಗೂ ಸಹ ಆದಷ್ಟು ಬೇಗ ಜಾಮೀನು ಸಿಗಲಿ ಎಂದು ಆಶಿಸೋಣ.