ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಾರಿಗೆ ಶುರುವಾಗಿನಿಂದ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಮೆಟ್ರೋ ನಿಲ್ದಾಣಗಳಲ್ಲಿ ನಾಮಫಲಕಗಳ ಬದಲಾವಣೆ ವಿಚಾರವಂತೂ ಪ್ರತಿ ಬಿಎಂಆರ್‌ಸಿಎಲ್ ಸಭೆಯಲ್ಲೂ ಕೇಳಿಬರುವಂತಹದ್ದು. ಇಂತಹ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಮೆಟ್ರೋದಲ್ಲಿ ಹಿಂದಿ ತೆಗೆಯಿರಿ, ಇಲ್ಲ ಎಲ್ಲಾ ಅಧಿಕೃತ 22 ಭಾಷೆಗಳನ್ನು ಬಳಸಿ ಎಂದು ತಾಕೀತು ಮಾಡಿದ್ದಾರೆ.
ಮೆಟ್ರೋ ರೈಲುಗಳಲ್ಲಿ ಮತ್ತು ಮೆಟ್ರೋ ನಿಲ್ದಾಣಗಳ ನಾಮಫಲಕಗಳಲ್ಲಿ ಹಿಂದಿ ಭಾಷೆಯನ್ನು ತೆಗೆದುಹಾಕಿ ಕೇವಲ ಕನ್ನಡ ಮತ್ತು ಇಂಗ್ಲೀಷ್ ಭಾಷೆ ಬಳಸುವಂತೆ ಕೆಡಿಎ ಒತ್ತಾಯಿಸಿದೆ. ರಾಜ್ಯ ಸರ್ಕಾರ ತ್ರಿಭಾಷಾ ನೀತಿಗೆ ಬದ್ಧವಾಗಿಲ್ಲದೇ ಇರುವಾಗ 3 ಭಾಷೆಯ ಫಲಕಗಳೇಕೆ ಎಂದು ಟಿ.ಎಸ್.ನಾಗಾಭರಣ ಪ್ರಶ್ನಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು 2 ಆಯ್ಕೆಗಳನ್ನು ಬಿಎಂಆರ್‌ಸಿಎಲ್ ಮುಂದಿಟ್ಟಿದೆ. ಒಂದು ಕೇವಲ ಕನ್ನಡ ಮತ್ತು ಇಂಗ್ಲೀಷ್ ಫಲಕಗಳನ್ನು ಬಳಸುವುದು. ಎರಡನೇಯದು ಹಿಂದಿ ಬೇಕೇಬೇಕು ಎಂದರೆ ದೇಶದ ಎಲ್ಲಾ 22 ಅಧಿಕೃತ ಭಾಷೆಗಳನ್ನು ನಾಮಫಲಕಗಳ ಬಳಸಬೇಕು ಎಂದಿದೆ.
ಹಿಂದಿಗೆ ಮಾತ್ರ ಆದ್ಯತೆ ನೀಡಿ ಉಳಿದ ಭಾಷೆಗಳಿಗೆ ಆದ್ಯತೆ ನೀಡದಿರುವುದು ತಪ್ಪು, ಇಲ್ಲಿ ಎಲ್ಲಾ ರಾಜ್ಯದ ಜನರು ವಾಸಿಸುತ್ತಾರೆ. ಅವರ ಭಾಷೆಯನ್ನೂ ಬಳಸೋಣ ಅಲ್ಲವೇ ಎಂದು ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.
ಇನ್ನು ಮೆಟ್ರೋದಲ್ಲಿ ವಿಶೇಷವಾಗಿ ಸ್ವಚ್ಛತೆ ಮತ್ತು ಭದ್ರತಾ ವಿಭಾಗಗಳಲ್ಲಿ ಕನ್ನಡಿಗರನ್ನು ಮಾತ್ರ ಉದ್ಯೋಗಕ್ಕೆ ತೆಗೆದುಕೊಳ್ಳಬೇಕು. ನಮ್ಮ ಜನರಿಗೂ ಕೆಲಸದ ಅವಶ್ಯಕತೆ ಹೆಚ್ಚಾಗಿದೆ ಎಂದು ಕೆಡಿಎ ಸಭೆಗೆ ತಿಳಿಸಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸ್ಸುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನವೆಂಬರ್ ಒಳಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ.
ಆದರೆ ಇಂತಹ ಭರವಸೆ ಹಲವು ಬಾರಿ ಬಂದಿದ್ದರೂ, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ದೇಶಾದ್ಯಂತ ತ್ರಿಭಾಷಾ ನೀತಿಗೆ ವಿರೋಧ ವ್ಯಕ್ತವಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಬಿಎಂಆರ್‌ಸಿಎಲ್ ಹೇಗೆ ಕಾರ್ಯನಿವರ್ಹಿಸುತ್ತದೆ ಎಂದು ಕಾದುನೋಡಬೇಕು.
ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಹಿಂದಿ ಹೇರಿಕೆ ಚರ್ಚೆ: ಕನಿಮೊಳಿ ಪರ ದನಿಯೆತ್ತಿದ ಎಚ್.ಡಿ ಕುಮಾರಸ್ವಾಮಿ, ಚಿದಂಬರಂ


