ತಮಿಳುನಾಡಿನ ಪುದುಕೋಟೈ ಜಿಲ್ಲೆಯ ಆಲಂಗುಡಿ ಬಳಿಯ ವಡಕಾಡು ಗ್ರಾಮದಲ್ಲಿ ಸೋಮವಾರ (ಮೇ 5, 2025) ರಾತ್ರಿ ಮುತ್ತುಮಾರಿಯಮ್ಮನ್ ದೇವಸ್ಥಾನ ಉತ್ಸವದ ಸಂದರ್ಭದಲ್ಲಿ ಅತ್ಯಂತ ಹಿಂದುಳಿದ ವರ್ಗ (ಎಂಬಿಸಿ) ಮತ್ತು ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದೆ.
ಗ್ರಾಮದ ಪೆಟ್ರೋಲ್ ಪಂಪ್‌ನಲ್ಲಿ ಶುರುವಾದ ಎರಡು ಸಮುದಾಯಗಳ ಯುವಕರ ನಡುವಿನ ವಾಗ್ವಾದ, ಬಳಿಕ ಎರಡು ಸಮುದಾಯಗಳ ನಡುವಿನ ಘರ್ಷಣೆಯಾಗಿ ಮಾರ್ಪಟ್ಟಿದೆ. ಗಲಾಟೆಯಲ್ಲಿ ಎರಡೂ ಕಡೆಯ ಹಲವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಗಲಾಟೆ ವೇಳೆ ದಲಿತ ಕುಟುಂಬಕ್ಕೆ ಸೇರಿದ ಗುಡಿಸಲು ಮತ್ತು ದ್ವಿಚಕ್ರ ವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಗುಡಿಸಲು ಹೊತ್ತಿ ಉರಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಘರ್ಷಣೆಗೆ ಸಂಬಂಧಿಸಿದಂತೆ ಆಲಂಗುಡಿ ಪೊಲೀಸರು ಎರಡೂ ಸಮುದಾಯಗಳ 14 ಮಂದಿಯನ್ನು ಬಂಧಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಲಂಗುಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುದುಕೋಟೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗುಪ್ತಾ ಮತ್ತು ತಮಿಳುನಾಡು ಕಾನೂನು ಸಚಿವ ಎಸ್. ರೆಗುಪತಿ ಸೋಮವಾರ (ಮೇ 5) ರಾತ್ರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಮುಂಜಾಗೃತ ಕ್ರಮವಾಗಿ ವಡಕಾಡುವಿನಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮಂಗಳವಾರ (ಮೇ 6, 2025) ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪುದುಕೋಟೈ ಜಿಲ್ಲಾ ಪೊಲೀಸರು, ಮದ್ಯದ ಅಮಲಿನಲ್ಲಿದ್ದ ಎರಡೂ ಸಮುದಾಯಗಳ ಯುವಕರ ನಡುವೆ ಪೆಟ್ರೋಲ್ ಬಂಕ್‌ನಲ್ಲಿ ಶುರುವಾದ ಮಾತಿನ ಚಕಮಕಿ ತಾರಕಕ್ಕೇರಿ ಊರಿನಲ್ಲಿ ಘರ್ಷಣೆಗೆ ಕಾರಣವಾಗಿದೆ. ಘಟನೆಯಲ್ಲಿ ಒಂದು ಗುಡಿಸಲಿಗೆ ಬೆಂಕಿ ಹಚ್ಚಲಾಗಿದೆ ಮತ್ತು ಸರ್ಕಾರಿ ಬಸ್ಸಿನ ಕಿಟಕಿಗೆ ಹಾನಿಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆ. ಆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಪ್ರಥಮ ಬಾರಿ ಮುರ್ಷಿದಾಬಾದ್‌ಗೆ ಭೇಟಿ: ಬಿಎಸ್ಎಫ್ ಗುಂಡು ಹಾರಿಸದ್ದಿದ್ದರೆ ಗಲಭೆ ನಡೆಯುತ್ತಿರಲಿಲ್ಲ; ಮಮತಾ ಬ್ಯಾನರ್ಜಿ