ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ, ಕೈ ಬೆರಳುಗಳನ್ನು ಕತ್ತರಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ದಿನಗೂಲಿ ನೌಕರ ತಂಗ ಗಣೇಶ್ ಅವರ ಮಗ, 11ನೇ ತರಗತಿಯ ವಿದ್ಯಾರ್ಥಿ ದೇವೇಂದ್ರನ್ ಸೋಮವಾರ (ಮಾ.10) ಬೆಳಿಗ್ಗೆ ಪಳಯಂಕೊಟ್ಟೈನಲ್ಲಿರುವ ತನ್ನ ಮನೆಯಿಂದ ಕಾಲೇಜಿಗೆ ಪರೀಕ್ಷೆ ಬರೆಯಲು ತೆರಳುತ್ತಿದ್ದಾಗ ಹಲ್ಲೆ ನಡೆಸಲಾಗಿದೆ ಎಂದು ವರದಿ ಹೇಳಿದೆ.
ದೇವೇಂದ್ರನ್ ಬಸ್‌ನಲ್ಲಿ ಹೋಗುತ್ತಿದ್ದಾಗ, ಒಂದು ಕ್ರಾಸಿಂಗ್ ಬಳಿ ಬಸ್ ತಡೆದ ತಂಡ, ಆತನನ್ನು ಹೊರೆಗೆಳೆದು ಎಡಗೈ ಬೆರಳುಗಳನ್ನು ಕತ್ತರಿಸಿದೆ. ಇದೇ ತಂಡ ದೇವೇಂದ್ರನ್ ಅವರ ತಂದೆ ತಂಗ ಗಣೇಶ್ ಅವರ ಮೇಲೂ ಹಲ್ಲೆ ನಡೆಸಿ, ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಾಯಗಳನ್ನು ಉಂಟು ಮಾಡಿದೆ ಎಂದು ವರದಿ ವಿವರಿಸಿದೆ.
ತಂಗ ಗಣೇಶ್ ಜಿಲ್ಲೆಯ ದಕ್ಷಿಣ ಭಾಗದಲ್ಲಿರುವ ಅರಿಯನಾಗಪುರಂ ಎಂಬ ಹಳ್ಳಿಯ ಇಟ್ಟಿಗೆ ಗೂಡುಗಳಲ್ಲಿ ದುಡಿಯುವವರು.
ಇತರ ಪ್ರಯಾಣಿಕರು ಮಧ್ಯಪ್ರವೇಶಿಸಲು ಒಟ್ಟುಗೂಡಿದಾಗ, ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ. ಹಲ್ಲೆಗೊಳಗಾದ ದೇವೇಂದ್ರನ್ ಅವರನ್ನು ಆರಂಭದಲ್ಲಿ ಶ್ರೀವೈಕುಂಡಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರ ಬೆರಳುಗಳನ್ನು ಮತ್ತೆ ಜೋಡಿಸಲು ಶಸ್ತ್ರಚಿಕಿತ್ಸೆ ನಡೆಯುತ್ತಿದೆ.
ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಅಪ್ರಾಪ್ತ ವಯಸ್ಕರನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ನಡೆದ ಕಬಡ್ಡಿ ಪಂದ್ಯದಲ್ಲಿ ಎದುರಾಳಿ ಪ್ರಬಲ ಜಾತಿಯವರ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕೆ ಪ್ರತೀಕಾರವಾಗಿ ಹಲ್ಲೆ ನಡೆಸಲಾಗಿದೆ. ದೇವೇಂದ್ರನ್ ಒಬ್ಬ ಅತ್ಯುತ್ತಮ ಕಬಡ್ಡಿ ಆಟಗಾರ ಎಂದು ಅವರ ಕುಟುಂಬ ಆರೋಪಿಸಿದೆ.
ದೇವೇಂದ್ರನ್ ಅವರ ತಂದೆ ಕೂಡ ಇದು ಜಾತಿ ವಿಷಯಕ್ಕೆ ನಡೆದ ಹಲ್ಲೆ ಎಂದಿದ್ದಾರೆ. “ಪಕ್ಕದ ಹಳ್ಳಿಯ ತೇವರ್ ಸಮುದಾಯಕ್ಕೆ ಸೇರಿದ ಮೂವರು ಪುರುಷರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಜಾತಿಗೆ ಸಂಬಂಧಿಸಿ ನಡೆದ ದಾಳಿ. ನಾವು ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದವರು” ಎಂದು ತಂಗ ಗಣೇಶ್ ಹೇಳಿದ್ದಾಗಿ ಇಂಡಿಯಾ ಟುಡೇ ವರದಿ ತಿಳಿಸಿದೆ.
ತೂತುಕುಡಿ | ದಲಿತ ಶಾಲಾ ಬಾಲಕನನ್ನು ಬಸ್ಸಿನಿಂದ ಇಳಿಸಿ ಥಳಿತ; ಕುಡುಗೋಲಿನಿಂದ ಹಲ್ಲೆ


