ಅಪ್ರಾಪ್ತೆಯೊಬ್ಬರು ಪತ್ರವೊಂದರಲ್ಲಿ ’ಹೆಣ್ಣು ತಾಯಿಯ ಗರ್ಭ ಮತ್ತು ಸಮಾಧಿಯಲ್ಲಿ ಮಾತ್ರ ಸುರಕ್ಷಿತವಾಗಿರುತ್ತಾಳೆ’ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ಚೆನ್ನೈ ನಗರದ ಹೊರವಲಯದಲ್ಲಿರುವ ಮಂಗಾಡು ಎಂಬಲ್ಲಿ ನಡೆದಿದೆ.
ಮಂಗಾಡು ಗ್ರಾಮದ ಚೆನ್ನೈನ ಪೂನಮಲ್ಲಿ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಅಪ್ರಾಪ್ತೆಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ಪೋಕ್ಸೋ ಕಾಯ್ದೆ ಅಡಿಯಲ್ಲಿ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಶನಿವಾರ (ಡಿ.18) ರಂದು ಆಕೆಯ ತಾಯಿ ಮಾರುಕಟ್ಟೆಗೆ ಹೋಗಿದ್ದ ಸಮಯದಲ್ಲಿ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿದ್ದರು.
“ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಬಂಧ ಹೊಂದಿರುವುದಾಗಿ ಯುವಕ ಒಪ್ಪಿಕೊಂಡಿದ್ದಾನೆ. ಕಳೆದ ಎರಡು ವಾರಗಳಿಂದ ಆಕೆಗೆ ಕಿರುಕುಳ ನೀಡಿ ಚಿತ್ರಹಿಂಸೆ ನೀಡುತ್ತಿದ್ದನು. ಇಬ್ಬರ ನಡುವೆ ಅಶ್ಲೀಲ ಸಂದೇಶಗಳು ಮತ್ತು ಛಾಯಾಚಿತ್ರಗಳು ವಿನಿಮಯವಾಗಿರುವುದು ಪತ್ತೆಯಾಗಿದೆ. ಇದಕ್ಕಿಂತ ಮೊದಲ ಎಂಟು ತಿಂಗಳಿನಿಂದ ಅವರು ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದರು” ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರನ್ನು NDTV ಉಲ್ಲೇಖಿಸಿದೆ.
ಇದನ್ನೂ ಓದಿ: ಚೆನ್ನೈ: ಪತ್ನಿಯ ಸಹಾಯದಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಸ್ವಯಂ ಘೋಷಿತ ದೇವಮಾನವನ ಬಂಧನ
“ಹೆಣ್ಣು ತಾಯಿಯ ಗರ್ಭ ಮತ್ತು ಸಮಾಧಿಯಲ್ಲಿ ಮಾತ್ರ ಸುರಕ್ಷಿತವಾಗಿರುತ್ತಾಳೆ. ಹೆಣ್ಣು ಮಕ್ಕಳಿಗೆ ಶಾಲೆಯು ಸುರಕ್ಷಿತವಾಗಿಲ್ಲ ಮತ್ತು ಶಿಕ್ಷಕರನ್ನು ನಂಬಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಮತ್ತು ಪುತ್ರರಿಗೆ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುವುದನ್ನು ಕಲಿಸಬೇಕು” ಎಂದು ವಿದ್ಯಾರ್ಥಿನಿ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ. ಜೊತೆಗೆ ಮಾನಸಿಕ ಹಿಂಸೆಯಿಂದ ತಾನು ಓದಲು, ನಿದ್ದೆ ಮಾಡಲು ಸಹ ಸಾಧ್ಯವಾಗಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
ಲೈಂಗಿಕ ಕಿರುಕುಳವನ್ನು ನಿಲ್ಲಿಸಿ. ನನಗೆ ನ್ಯಾಯ ಕೊಡಿಸಿ ಎಂದಿರುವ ಮೃತ ಸಂತ್ರಸ್ತೆ, ಲೈಂಗಿಕ ದೌರ್ಜನ್ಯವು ಸಂಬಂಧಿಕರು, ಶಿಕ್ಷಕರು ಮತ್ತು ಎಲ್ಲರಿಂದಲೂ ನಡೆಯಬಹುದು ಎಂದಿದ್ದಾರೆ.
ಮೂರು ವರ್ಷಗಳ ಹಿಂದೆ ಬಾಲಕಿ 8ನೇ ತರಗತಿ ಓದುತ್ತಿದ್ದಾಗ ಇದೇ ಯುವಕ ಆಕೆಯ ಶಾಲೆಯಲ್ಲಿ 11ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಬಳಿಕ ಸಂತ್ರಸ್ತೆ ಬಾಲಕಿಯರ ಕಾಲೇಜಿಗೆ ತೆರಳಿದ್ದರು. ಆದರೆ ಇಬ್ಬರು Instagram ನಲ್ಲಿ ಮತ್ತೆ ಸ್ನೇಹಿತರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆಕೆಯ ಆತ್ಮಹತ್ಯೆ ಪತ್ರದ ಆಧಾರದ ಮೇಲೆ ಬಾಲಕಿಗೆ ಇನ್ನಷ್ಟು ಮಂದಿ ಕಿರುಕುಳ ನೀಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ – 104)


