ತಮಿಳರ ಭಾಷಾ ಪ್ರೇಮದ ತೀವ್ರತೆಯ ಬಗ್ಗೆ ಒತ್ತಿಹೇಳಿರುವ ನಟ-ರಾಜಕಾರಣಿ ಕಮಲ್ ಹಾಸನ್, “ಭಾಷಾ ವಿಷಯಗಳನ್ನು ಲಘುವಾಗಿ ತೆಗೆದುಕೊಳ್ಳಬೇಡಿ” ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.
“ತಮಿಳರು ಒಂದು ಭಾಷೆಗಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ; ಆ ವಿಷಯಗಳೊಂದಿಗೆ ಆಟವಾಡಬೇಡಿ. ತಮಿಳರು ಹಾಗೂ ಅವರ ಮಕ್ಕಳಿಗೆ ಸಹ ಯಾವ ಭಾಷೆ ಬೇಕು ಎಂದು ತಿಳಿದಿದ್ದಾರೆ. ಅವರಿಗೆ ಯಾವ ಭಾಷೆ ಬೇಕು ಎಂದು ಆಯ್ಕೆ ಮಾಡುವ ಜ್ಞಾನವಿದೆ” ಎಂದು ಹಾಸನ್ ತಮ್ಮ ಪಕ್ಷದ ಮಕ್ಕಳ್ ನೀಧಿ ಮೈಯಂ (ಎಂಎನ್ಎಂ) ನ 8 ನೇ ಸಂಸ್ಥಾಪನಾ ದಿನದಂದು ಮಾಡಿದ ಭಾಷಣದಲ್ಲಿ ಹೇಳಿದರು.
ಹಿಂದಿಯನ್ನು ಒಳಗೊಂಡ ಹೊಸ ಶಿಕ್ಷಣ ನೀತಿ (ಎನ್ಇಪಿ) ಅಡಿಯಲ್ಲಿ ತಮಿಳುನಾಡಿನಲ್ಲಿ ತ್ರಿಭಾಷಾ ನೀತಿಯನ್ನು ಜಾರಿಗೆ ತರಲು ಸ್ಟಾಲಿನ್ ವಿರೋಧಿಸಿದ್ದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಡಿಎಂಕೆ ನಡುವೆ ತೀವ್ರ ರಾಜಕೀಯ ಘರ್ಷಣೆ ಉಂಟಾಗಿದೆ. 2024 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಇಂಡಿಯಾ ಮೈತ್ರಿಯನ್ನು ಕಮಲ್ ಅವರ ಎಂಎನ್ಎಂ ಬೆಂಬಲಿಸಿತು.
ಸಮಗ್ರ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ) ಅಡಿಯಲ್ಲಿ ₹2,152 ಕೋಟಿ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರಿ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ನಂತರ ಈ ಗಲಾಟೆ ಆರಂಭವಾಯಿತು. ತಮಿಳುನಾಡು ಎನ್‌ಇಪಿ ಅನ್ನು ಜಾರಿಗೆ ತರದಿದ್ದರೆ ಹಣವನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೇಳಿಕೆಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
“ಇದು ನಮ್ಮ ರಾಜ್ಯದ ವಿದ್ಯಾರ್ಥಿಗಳು, ರಾಜಕೀಯ ಪಕ್ಷಗಳು, ಸಾರ್ವಜನಿಕರಲ್ಲಿ ಅಪಾರ ಆತಂಕ ಮತ್ತು ಅಶಾಂತಿಯನ್ನು ಸೃಷ್ಟಿಸಿದೆ” ಎಂದು ತಮಿಳುನಾಡು ಮುಖ್ಯಮಂತ್ರಿ ಪತ್ರದಲ್ಲಿ ಬರೆದಿದ್ದಾರೆ. ಈ ವಿಷಯದಲ್ಲಿ ಪ್ರಧಾನಿ ಮೋದಿ ಅವರ ನೇರ ಹಸ್ತಕ್ಷೇಪವನ್ನು ಒತ್ತಾಯಿಸಿದರು.
ಇದನ್ನೂ ಓದಿ; ತೆಲಂಗಾಣ| ನಿಗೂಢ ಕಾಯಿಲೆಗೆ 3 ದಿನಗಳಲ್ಲಿ 2,500 ಕೋಳಿಗಳು ಸಾವು; ಆತಂಕ


