ಕಳೆದ ವರ್ಷದ (2024) ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ನಡೆಸಿದ ಜಾತಿ ಜನಗಣತಿಯ ಪ್ರಕಾರ, ರಾಜ್ಯದ ಒಟ್ಟು ಜನಸಂಖ್ಯೆಯ ಶೇಖಡ 56.33ರಷ್ಟು ಹಿಂದುಳಿದ ಜಾತಿಗಳಿಗೆ ಸೇರಿದ ಜನರು ಇದ್ದಾರೆ ಎಂದು ತೆಲಂಗಾಣದ ಸಚಿವ ಉತ್ತಮ್ ಕುಮಾರ್ ರೆಡ್ಡಿ ಬಹಿರಂಗಪಡಿಸಿದ್ದಾರೆ.
ಹಿಂದುಳಿದ ಜಾತಿಗಳಲ್ಲಿ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯ ಜನರು ಒಳಗೊಂಡಿದ್ದಾರೆ.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಮತ್ತು ಜಾತಿ ಸಮೀಕ್ಷೆಯ ಪ್ರಕಾರ, ತೆಲಂಗಾಣದ ಜನಸಂಖ್ಯೆಯಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಶೇಖಡ 46.25ರಷ್ಟು ಹಿಂದುಳಿದ ಜಾತಿಯವರು ಇದ್ದಾರೆ. ಹಿಂದುಳಿದ ಮುಸ್ಲಿಮರ ಜನಸಂಖ್ಯೆ ಶೇಖಡ 10.08ರಷ್ಟಿದೆ.
ಜನಗಣತಿಯ ಪ್ರಕಾರ ತೆಲಂಗಾಣದ ಜಾತಿವಾರು ಜನಸಂಖ್ಯೆ
ಪರಿಶಿಷ್ಟ ಜಾತಿಗಳು – 61,84,319 (17.43%)
ಪರಿಶಿಷ್ಟ ಪಂಗಡಗಳು- 37,05,929 (10.45%)
ಹಿಂದುಳಿದ ಜಾತಿಗಳು (ಮುಸ್ಲಿಮರನ್ನು ಹೊರತುಪಡಿಸಿ) – 1,64,09,179 (46.25%)
ಹಿಂದುಳಿದ ಜಾತಿಯ ಮುಸ್ಲಿಮರು – 35,76,588 (10.08%)
ಇತರೆ ಜಾತಿಯ ಮುಸ್ಲಿಮರು – 8,80,424 (2.48%)
ಇತರೆ ಜಾತಿಗಳು (ಮುಸ್ಲಿಮರನ್ನು ಹೊರತುಪಡಿಸಿ) – 13.31%
ಮುಸ್ಲಿಮರು (ಒಟ್ಟು) – 12.56%
ಇತರೆ ಜಾತಿಗಳು (ಒಟ್ಟು) – 15.79%
ತೆಲಂಗಾಣದಲ್ಲಿ ಕನಿಷ್ಠ 162 ಸಮುದಾಯಗಳನ್ನು ಹಿಂದುಳಿದ ಜಾತಿಗಳೆಂದು ವರ್ಗೀಕರಿಸಲಾಗಿದೆ. ಅವುಗಳನ್ನು ಎ, ಬಿ, ಸಿ, ಡಿ, ಇ ಎಂದು ಐದು ಗುಂಪುಗಳಾಗಿ ಉಪ ವರ್ಗೀಕರಣ ಮಾಡಲಾಗಿದೆ. ಇದರಲ್ಲಿ ಗುಂಪು ಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯವರನ್ನು ಒಳಗೊಂಡಿದೆ ಮತ್ತು ಗುಂಪು ಇ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಯ ಮುಸ್ಲಿಮರನ್ನು ಒಳಗೊಂಡಿದೆ.
2023ರ ತೆಲಂಗಾಣ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಜಾತಿ ಸಮೀಕ್ಷೆಯೂ ಒಂದು. ಶಿಕ್ಷಣ, ಉದ್ಯೋಗ ಮತ್ತು ಕಲ್ಯಾಣ ಯೋಜನೆಗಳಲ್ಲಿ ಹಿಂದುಳಿದಿರುವ ಸಮುದಾಯಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ವಿಸ್ತರಿಸುವುದಾಗಿಯೂ ಕಾಂಗ್ರೆಸ್ ಹೇಳಿತ್ತು. ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳ ಮೀಸಲಾತಿಯನ್ನು ಶೇಖಡ 23 ರಿಂದ ಶೇಖಡ 42ಕ್ಕೆ ಹೆಚ್ಚಿಸುವುದಾಗಿ ಮತ್ತು ಸರ್ಕಾರಿ ನಾಗರಿಕ ನಿರ್ಮಾಣ ಮತ್ತು ನಿರ್ವಹಣಾ ಒಪ್ಪಂದಗಳಲ್ಲಿ ಶೇಖಡ 42 ಹಿಂದುಳಿದ ಜಾತಿಗಳ ಮೀಸಲಾತಿಯನ್ನು ಜಾರಿಗೆ ತರುವುದಾಗಿಯೂ ಪಕ್ಷ ಭರವಸೆ ನೀಡಿತ್ತು.


