“ಅಂತರರಾಷ್ಟ್ರೀಯ ಗಣ್ಯರ ವಿರುದ್ಧ ಕೇಂದ್ರ ಸರ್ಕಾರವೂ ಸಚಿನ್ ತೆಂಡೂಲ್ಕರ್ ಅವರನ್ನು ಕಣಕ್ಕಿಳಿಸಿದೆ” ಎಂದು ಆರ್‌ಜೆಡಿಯ ನಾಯಕ ನಾಯಕ ಶಿವಾನಂದ್ ತಿವಾರಿ ಶುಕ್ರವಾರ ಆರೋಪಿಸಿದ್ದಾರೆ. ರೈತ ಹೋರಾಟವನ್ನು ಬೆಂಬಲಿಸಿ ಖ್ಯಾತ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಮತ್ತು ಪಾಪ್ ಸಿಂಗರ್ ರಿಹಾನ್ನ ಟ್ವೀಟ್ ಮಾಡಿದ್ದರು.
ಇದನ್ನು ಖಂಡಿಸಿ ಕ್ರಿಕೆಟರ್‌ಗಳಾದ ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ, ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್, ಕಂಗನಾ ರಣಾವತ್ ಸೇರಿ ಮುಂತಾದವರು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆರ್‌ಜೆಡಿಯ ರಾಷ್ಟ್ರೀಯ ಉಪಾಧ್ಯಕ್ಷರಾದ ಶಿವಾನಂದ ತಿವಾರಿ, “ಸಚಿನ್ ಅಂಥವರಿಂದ ಹೇಳಿಕೆಗಳನ್ನು ಕೊಡಿಸುವ ಮೂಲಕ ರೈತರ ಹೋರಾಟಕ್ಕೆ ಜಗತ್ತು ಕುರುಡಾಗಿರಬೇಕು ಎಂದು ಕೇಂದ್ರ ಬಯಸುತ್ತಿದೆಯೇ” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದೇನು?
“ರೈತರಿಗೆ ಟ್ವಿಟರ್ ಬಗ್ಗೆ ಗೊತ್ತಿಲ್ಲ. ಟ್ವಿಟರ್ ರಾಜಕೀಯ ಇತ್ತೀಚೆಗೆ ಪ್ರಾರಂಭವಾಗಿದೆ. ಎಲ್ಲರೂ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಗ್ರೇಟಾ ಥನ್‌ಬರ್ಗ್ ಅಥವಾ ರಿಹಾನ್ನಾ ಬಗ್ಗೆ ರೈತರಿಗೆ ಏನು ಗೊತ್ತು? ನೀವು ಅವರ ವಿರುದ್ಧ ಸಚಿನ್ ತೆಂಡೂಲ್ಕರ್ ಅವರನ್ನು ಕಣಕ್ಕಿಳಿಸಿದ್ದೀರಿ” ಎಂದು ತಿವಾರಿ ವಾಗ್ದಾಳಿ ನಡೆಸಿದ್ದಾರೆ.
ತಿವಾರಿ ಅವರ ಹೇಳಿಕೆಯು ಬಿಹಾರದ ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಜೆಡಿಯುವನ್ನು ಕೆರಳಿಸಿದ್ದು, ತಿವಾರಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.
ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ದೆಹಲಿ ಪೊಲೀಸರು ಘರ್ಷಣೆ ನಡೆಸಿದ ನಂತರ ಅಲ್ಲಿ ಇಂಟರ್ನೆಟ್ ಕಡಿತಗೊಳಿಸಿರುವುದನ್ನು ಉಲ್ಲೇಖಿಸಿ ಸಿಎನ್‌ಎನ್ ಹೋರಾಟದ ಬಗ್ಗೆ ವರದಿ ಮಾಡಿತ್ತು. ಇದನ್ನು ತನ್ನ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದ ಪಾಪ್ ತಾರೆ ರಿಹಾನ್ನಾ “ರೈತ ಹೋರಾಟದ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ” ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ಮುಂಬರುವ ಉಪಚುನಾವಣೆಗಳಲ್ಲಿಯೂ ಗೆಲ್ಲುವುದಷ್ಟೇ ಅಲ್ಲ…! – ಸಿದ್ದುಗೆ ಸವಾಲ್ ಹಾಕಿದ ಬಿಎಸ್‌ವೈ
ರಿಹಾನ್ನಾ ಟ್ವೀಟ್ ಮಾಡಿದ ನಂತರ ಹೋರಾಟವು ಜಾಗತಿಕವಾಗಿ ಸದ್ದು ಮಾಡಿದ್ದು ಹಲವಾರು, ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ರೈತ ಹೋರಾಟದ ಪರವಾಗಿ ಟ್ವೀಟ್ ಮಾಡಿದ್ದರು. ಇದರಿಂದ ಅಸಮಧಾನಗೊಂಡಿದ್ದ ಕೇಂದ್ರ ಸರ್ಕಾರ ರೈತರ ಸಮಸ್ಯೆಯು ದೇಶದ ಆಂತರಿಕ ವಿಷಯ, ವಿದೇಶಿಯರು ತಲೆ ಹಾಕಬಾರದು ಎಂದು ಹೇಳಿತ್ತು. ಜೊತೆಗೆ ರೈತರನ್ನು ಬೆಂಬಲಿಸಿದ ಹ್ಯಾಶ್‌ಟ್ಯಾಗ್‌ಗಳ ವಿರುದ್ದ ಕೆಲವು ಹ್ಯಾಶ್‌ಟ್ಯಾಗ್‌ಗಳನ್ನು ನೀಡಿತ್ತು. ಇದನ್ನು ಅನುಸರಿಸಿ ಭಾರತೀಯ ಸೆಲೆಬ್ರಿಟಿಗಳು ಸರ್ಕಾರದ ಪರ ಬ್ಯಾಟ್ ಬೀಸಿದ್ದರು.
ಈ ಮಧ್ಯೆ ರೈತ ಹೋರಾಟದ ಪರವಾಗಿ ಮಾತನಾಡಿದ್ದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್, ತನ್ನ ಟ್ವೀಟ್ ಒಂದರಲ್ಲಿ ಹೋರಾಟಕ್ಕೆ ಹೇಗೆ ಬೆಂಬಲಿಸಬಹುದು ಎಂಬ ಟೂಲ್‌ಕಿಟ್ ಅನ್ನು ಹಂಚಿಕೊಂಡಿದ್ದರು. ಇದೀಗ ಪೊಲೀಸರು ಈ ಟೂಲ್‌ಕಿಟ್ ಅನ್ನು ರಚಿಸಿದವರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
ಗ್ರೇಟಾ ಅವರನ್ನು ಬೆಂಬಲಿಸಿ ಸೆಲಬ್ರಿಟಿಗಳಾದ ಸೋನಾಕ್ಷಿ ಸಿನ್ಹಾ, ತಾಪ್ಸಿ ಪನ್ನು, ರಮ್ಯಾ, ಮನೋಜ್ ತಿವಾರಿ, ರೋಹಿತ್ ಶರ್ಮಾ ಮುಂತಾದವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್‌ನಲ್ಲಿರುವವರಿಗಿಂತ ಗಟ್ಟಿಯಾದ ಬೆನ್ನುಮೂಳೆಯಿದೆ – ಗ್ರೇಟಾ ಬಗ್ಗೆ ನಟಿ ರಮ್ಯಾ ಟ್ವೀಟ್


