ದಶಕಗಳ ಬಳಿಕ ಇಂಗ್ಲೆಂಡ್ ನಲ್ಲಿ ಟೀಮ್ ಇಂಡಿಯಾದ ಟೆಸ್ಟ್ ಸರಣಿ ಗೆಲುವಿನ ವಾಸನೆ ಮೂಗಿನ ಹತ್ತಿರಕ್ಕೆ ಬಂದರೂ, ಅದರ ಸಿಹಿ ಮಾತ್ರ ಬಾಯಿಗೆ ತಾಗಲಿಲ್ಲ. ಕಾರಣ ಭಾರತ ತಂಡದ ಸದಸ್ಯರೊಬ್ಬರಲ್ಲಿ ಕೋವಿಡ್-19 ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಆರಂಭಕ್ಕೂ ಎರಡು ಗಂಟೆಯ ಮುನ್ನ ಪಂದ್ಯವನ್ನು ಸ್ಥಗಿತ ಗೊಳಿಸಲಾಯಿತು. ಪರಿಣಾಮ ಕೊನೆಯ ಐದನೇ ಟೆಸ್ಟ್ ಪಂದ್ಯ ಮುಂದೂಡಲ್ಪಟ್ಟಿತು.
ಈ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಮುನ್ನಡೆ ಸಾಧಿಸಲು ತಂಡದ ಸಾಂಘಿಕ ಆಟದ ಬಲ ಎದ್ದು ಕಾಣುತ್ತಿತ್ತು. ಯುವ ಆಟಗಾರರು ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಳಿಸಿಕೊಂಡ ತಮ್ಮ ಮೇಲೆ ಬಿಳಿ ಜೆರ್ಸಿ ಕಾಯಂ ಇರುವಂತೆ ಪ್ರದರ್ಶನ ನೀಡಿದ್ದರು. ಪಂದ್ಯದಲ್ಲಿ ಅನುಭವಿ ಆಟಗಾರರ ಆಟ ಆರಂಭದಲ್ಲಿ ಮಂಕಾಗಿದ್ದರೂ, ನಂತರ ಹದಕ್ಕೆ ಬಂದಿತು. ವಿರಾಟ್ ಕೊಹ್ಲಿ ಶತಕ ಬಾರಸದೇ ಇದ್ದರೂ, ರನ್ ಕಲೆ ಹಾಕಿ ಮಿಂಚಿದ್ದರು.
ಮಧ್ಯಮ ಕ್ರಮಾಂಕದ ಆಟಗಾರರು ಸಿಕ್ಕ ಅವಕಾಶವನ್ನು ಚೆನ್ನಾಗಿ ಸದುಪಯೋಗ ಪಡಿಸಿಕೊಳ್ಳಲಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಆದರೆ ವಾಸ್ತವಾಗಿ ಟೀಮ್ ಇಂಡಿಯಾದ ಟೆಸ್ಟ್ ಸ್ಪೇಷಲಿಸ್ಟ್ ಚೇತೇಶ್ವರ್ ಪೂಜರ ಹಾಗೂ ಅಂಜಿಕ್ಯ ರಹಾನೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರೂ ಸಹ ಪಂದ್ಯಗೆಲ್ಲಿಸುವಲ್ಲಿ ಇವರ ಪ್ರದರ್ಶನ ಸಾಕಾಯಿತು. ತಂಡಕ್ಕೆ ಅಗತ್ಯ ಇದ್ದಾಗ ಈ ಅನುಭವಿ ಬ್ಯಾಟ್ಸ್ ಮನ್ ಗಳು ನೆಲಕಚ್ಚಿ ನಿಂತು ಬ್ಯಾಟ್ ಮಾಡಿ ರನ್ ಮಹಲ್ ಕಟ್ಟಿದ್ದೂ ಇದೆ. ಲಾರ್ಡ್ಸ್ ಅಂಗಳದಲ್ಲಿ ಪೂಜಾರ, ರಹಾನೆ ಆಡಿದ ರೀತಿಗೆ ವಿಶ್ವವೇ ಸಲಾಂ ಎಂದಿದೆ. ಒತ್ತಡವನ್ನು ಮೆಟ್ಟಿ ನಿಂತು ರನ್ ಮಹಲ್ ಕಟ್ಟಿದ ಪರಿ ಯುವ ಆಟಗಾರರಿಗೆ ಮಾದರಿ.

ಇನ್ನು ಆರಂಭಿಕ ಸ್ಥಾನವನ್ನು ಗಟ್ಟಿ ಪಡಿಸಿಕೊಳ್ಳುವಲ್ಲಿ ರೋಹಿತ್ ಶರ್ಮಾ ಸಫಲರಾಗಿದ್ದಾರೆ ಎಂದರೆ ತಪ್ಪಾಗಲಾರದರು. ಇವರು ಮೊದಲ ಪಂದ್ಯದಿಂದಲೂ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಂಗಳದಲ್ಲಿ ಅವರ ನೆಚ್ಚಿನ ನಟರಾಜ ಶಾಟ್, ಆನ್ ಡ್ರೈವ್, ಆಫ್ ಡ್ರೈವ್ ಮನಮೋಹಕವಾಗಿದ್ದವು. ಇವರು ಸಮಯೋಚಿತ ಪ್ರದರ್ಶನ ನೀಡಿದ ಬಲದಿಂದ ಟೀಮ್ ಇಂಡಿಯಾ ಪಂದ್ಯಗಳಲ್ಲಿ ಬೃಹತ್ ಮೊತ್ತ ದಾಖಲಿಸುವಲ್ಲಿ ನೆರವಾಯಿತು. ಅದರಲ್ಲೂ ನಾಲ್ಕನೇ ಟೆಸ್ಟ್ ನಲ್ಲಿ ಒತ್ತಡವನ್ನು ಮೆಟ್ಟಿನಿಂತು ರೋಹಿತ್ ಆಡಿದ ಧಾಟಿ ನಿಜಕ್ಕೂ ಇವರಲ್ಲಿನ ಕಲಾತ್ಮಕತೆಗೆ ಹಿಡಿದ ಕೈಗನ್ನಡಿಯಾಗಿದೆ. ಹಿಟ್ ಮ್ಯಾನ್ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸರಣಿಯಲ್ಲಿ ಟೀಮ್ ಇಂಡಿಯಾದ ಪರ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಕಾಣಿಸಿಕೊಂಡರು.
ನಿಜಕ್ಕೂ ರಿಷಭ್ ಪಂತ್ ಅವರು ತಮ್ಮ ನೈಜ ಆಟವನ್ನು ಆಡುವಲ್ಲಿ ವಿಫಲರಾದಂತೆ ಕಂಡರೂ, ಅವರ ಆಟದ ಶೈಲಿ ಬದಲಿಸಿಕೊಂಡಿದ್ದು ಎದ್ದು ಕಾಣುತ್ತಿತ್ತು. ರಕ್ಷಣಾತ್ಮಕ ಆಟಕ್ಕೆ ಮಣೆ ಹಾಕಿ ದೊಡ್ಡ ಇನ್ನಿಂಗ್ಸ್ ಕಟ್ಟುವ ಕಲೆಯನ್ನು ಪಂತ್ ಕರಗತ ಮಾಡಿಕೊಳ್ಳುತ್ತಿದ್ದಾರೆ ಎಂದು ಗೋಚರಿಸುತ್ತಿತ್ತು. ಅಲ್ಲದೆ ಇವರು ವಿಕೆಟ್ ಹಿಂದೆ ಮನಮೋಹಕವಾಗಿ ಪ್ರದರ್ಶನ ನೀಡಿದರು. ಸರಣಿಯಲ್ಲಿ ಪಂತ್ ಹಲವು ಬಾರಿ ಅದ್ಭುತ ಎನ್ನುವಂತಹ ಕ್ಯಾಚ್ ಗಳನ್ನು ಪಡೆದು ಟೀಕಾಕರ ಬಾಯಿ ಮುಚ್ಚಿಸಿದ್ದಾರೆ.

ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಬಾಯಲ್ಲಿ ಸದಾ ಇರುವಂತೆ ಮಾಡಿದ ಇನ್ನೊಂದು ಹೆಸರು ಯುವ ವೇಗಿ ಶಾರ್ದೂಲ್ ಠಾಕೂರ್. ತಮ್ಮ ಬಿಗುವಿನ ದಾಳಿ ಹಾಗೂ ಬಿರುಸಿನ ಬ್ಯಾಟಿಂಗ್ ನಿಂದಲೇ ಇವರು ತಂಡಕ್ಕೆ ನೆರವಾದ ಆಟಗಾರ. ಇನ್ನೊಂದು ವಿಶೇಷ ಎಂದರೆ ಸರಣಿಯಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಗೆ ಅತಿ ಹೆಚ್ಚು ಕಾಡಿದ ಬೌಲರ್ ಗಳಲ್ಲಿ ಠಾಕೂರ್ ಗೆ ಅಗ್ರ ಸ್ಥಾನ. ಇವರ ಸ್ವಿಂಗ್ ಹಾಗೂ ಲೆಂತ್ ದಾಳಿಯನ್ನು ಗುರುತಿಸುವಲ್ಲಿ ರೂಟ್ ಎಡವಿದ್ದಾರೆ. ಇನ್ನು ತಂಡ ಸಂಕಷ್ಟದಲ್ಲಿದ್ದಾಗ ಟೆಸ್ಟ್ ಪಂದ್ಯಕ್ಕೆ ಚುಟುಕು ಪಂದ್ಯದ ಝಲಕ ನೀಡಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸೂಪರ್ ಪ್ರದರ್ಶನ ನೀಡಿ ಠಾಕೂರ್ ಅಬ್ಬರಿಸಿದರು. ಇನ್ನು ಉಮೇಶ್ ಯಾದವ್ ಸಹ ಸಿಕ್ಕ ಅವಕಾಶದಲ್ಲಿ ತಮ್ಮ ಬೌಲಿಂಗ್ ನೈಪುಣ್ಯತೆಯ ಪ್ರದರ್ಶನ ಮಾಡಿದರು.
ದಿನ ಕಳೆದಂತೆ ಟೀಮ್ ಇಂಡಿಯಾದ ಕಾಯ್ದಿರಿಸಿದ ಆಟಗಾರರ ಪಟ್ಟಿ ಬೆಳೆಯುತ್ತಾ ಹೋದರೂ, ಗುಣಮಟ್ಟದ ಆಟಗಾರರು ತಯಾರಾಗುತ್ತಿದ್ದಾರೆ. ಅಲ್ಲದೆ ಟೀಮ್ ಇಂಡಿಯಾದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ತಮ್ಮ ಕ್ಷಮತೆಯನ್ನು ಸಾಬೀತು ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಪ್ರಸ್ತುತ ಅಂತ್ಯತ ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿರುವ ಕೀರ್ತಿ ಟೀಮ್ ಇಂಡಿಯಾದ್ದಾಗಿದೆ. ಬೌನ್ಸಿ ಟ್ರ್ಯಾಕ್ ಗಳಲ್ಲಿ ಕಮಾಲ್ ಪ್ರದರ್ಶನ ನೀಡಿದ ಯುವಕರು ಇದೀಗ ಟಿ-20 ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವದ ಶ್ರೀಮಂತ ಲೀಗ್ ಯುಎಇನಲ್ಲಿ ಅನಾವರಣ ಗೊಳ್ಳಲಿದೆ. ಈ ಲೀಗ್ ನಲ್ಲಿ ಸ್ಟಾರ್ ಆಟಗಾರರು ತಮ್ಮ ತಮ್ಮ ತಂಡದ ಪರ ಭರ್ಜರಿ ಪ್ರದರ್ಶನ ನೀಡಲು ಆಂಗ್ಲರ ನಾಡು ವೇದಿಕೆ ಆಗಿದೆ ಎಂದರೆ ತಪ್ಪಾಗಲಾರದರು.
ಇದನ್ನೂ ಓದಿ: ಅಫ್ಘಾನ್: ಮಹಿಳೆಯರನ್ನು ಕ್ರಿಕೆಟ್ ಸೇರಿ ಹಲವು ಕ್ರೀಡೆಗಳಿಂದ ಹೊರಗಿಟ್ಟ ತಾಲಿಬಾನ್ ಸರ್ಕಾರ


