ದಲಿತ ಕುಟುಂಬದ ಗುಡಿಸಲಿಗೆ ಸವರ್ಣಿಯರು ಬೆಂಕಿ ಇಟ್ಟಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ವ್ಯಾಪ್ತಿಯ ಎಮ್ಮೆದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಹಳೆ ವೈಷಮ್ಯದಿಂದಾಗಿ ದಲಿತರ ಗುಡಿಸಲಿಗೆ ಬೆಂಕಿ ಇಟ್ಟಿದ್ದಾರೆ ಎನ್ನಲಾಗಿದ್ದು ಚೋಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಡಿಸಲಿನಲ್ಲಿದ್ದ ಅಡಿಕೆ, ತೆಂಗು, ರಾಗಿ ಹಾಗೂ ಒಡವೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.
ಎಮ್ಮೆದೊಡ್ಡಿ ಗ್ರಾಮದ ಸವರ್ಣಿಯರಾದ ಲಿಂಗಮೂರ್ತಿ ಹಾಗೂ ರಾಜ್‌ಕುಮಾರ್ ಅವರ ಜಮೀನು ದಲಿತರಾದ ವೆಂಕಟೇಶ್ ಬಿನ್ ಗಂಗಯ್ಯ ಎಂಬವರ ಜಮೀನಿನ ಪಕ್ಕದಲ್ಲಿ ಇದೆ. ರಾಜಕುಮಾರ್ ಅವರ ಜಮೀನಿನಲ್ಲಿ ಬಾಳೇಕಾಯಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ವೆಂಕಟೇಶ್ ಅವರ ಮೇಲೆ ಗಲಾಟೆ ಮಾಡಲಾಗಿತ್ತು. ಅಲ್ಲದೆ ಸವರ್ಣಿಯರು ಚೇಳೂರು ಠಾಣೆಯಲ್ಲಿ ದೂರು ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ವೆಂಕಟೇಶ್ ಅವರಿಗೆ ತಿಳಿಸಲಾಗಿತ್ತು. ಆರೋಗ್ಯ ಸರಿ ಇಲ್ಲದ ಕಾರಣ ವೆಂಕಟೇಶ್ ಅವರು ಠಾಣೆಗೆ ಹಾಜರಾಗಿರಲಿಲ್ಲ. ಇದರಿಂದ ಕೋಪಗೊಂಡ ಸವರ್ಣಿಯರು ಶುಕ್ರವಾರ ಸಂಜೆ 6 ಗಂಟೆ ಸಮಯದಲ್ಲಿ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ಹಿಂದೂಗಳ ಕಣ್ಣಿಗೆ ದಲಿತರು ಮನುಷ್ಯರಂತೆ ಕಾಣುವುದೆಂದು? – ಡಿ.ಉಮಾಪತಿ


