Homeಮುಖಪುಟಲಂಕೇಶರ ಒಡನಾಟ–ಕವಿ ಮೂಡ್ನಾಕೂಡು ಚಿನ್ನಸ್ವಾಮಿಯವರ ಆತ್ಮಕತೆ ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’

ಲಂಕೇಶರ ಒಡನಾಟ–ಕವಿ ಮೂಡ್ನಾಕೂಡು ಚಿನ್ನಸ್ವಾಮಿಯವರ ಆತ್ಮಕತೆ ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’

ಪವರ್ ಎಂದರೆ ಏನು ಎಂಬುದನ್ನು ಲಂಕೇಶರನ್ನು ನೋಡಿಯೇ ನಾನು ಅರ್ಥ ಮಾಡಿಕೊಂಡದ್ದು. ಅದು ರಾಜಕೀಯ ಬಲವೂ ಅಲ್ಲ, ಹಣಬಲವೂ ಅಲ್ಲ. ಅದು ಜ್ಞಾನದ ಬಲ. ನೈತಿಕತೆಯ ಬಲ.

- Advertisement -
- Advertisement -

90 ರ ದಶಕದಲ್ಲಿ ನನ್ನ ಬಿಡುವಿನ ಸಮಯವೆಲ್ಲವೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಒಡನಾಟದಲ್ಲಿಯೆ ಕಳೆದುಹೋಗುತ್ತಿತ್ತು. ಕಛೇರಿ ಮುಗಿದ ನಂತರ ನಾನು ನೇರವಾಗಿ ಮನೆಗೆ ಹೋದದ್ದು ಕಡಿಮೆ. ಸೀದಾ ನನ್ನ ದಾರಿ ರವೀಂದ್ರ ಕಲಾಕ್ಷೇತ್ರಕ್ಕೆ ಸಾಗುತ್ತಿತ್ತು. ಕವಿಗಳು, ಲೇಖಕರು, ನಾಟಕದವರು ಅಲ್ಲಿ ಸದಾ ಹಾಜರಿರುತ್ತಿದ್ದರು. ಒಮ್ಮೊಮ್ಮೆ ಅಲ್ಲಿ ಸಿಜಿಕೆಯವರು ಟೀ ಕುಡಿಯುತ್ತಾ, ಮುಷ್ಟಿಯಲ್ಲಿ ಸಿಗರೇಟು ಊದುತ್ತಾ ನಮ್ಮಂಥ ಯುವಕರನ್ನು ಉತ್ಸಾಹದಿಂದ ಬರಮಾಡಿಕೊಳ್ಳುತ್ತಿದ್ದರು. ನಾನು ಯಾವುದೇ ಸಾಹಿತ್ಯ ಕಾರ್ಯಕ್ರಮದಲ್ಲಿ ಹಾಜರಿರುತ್ತಿದ್ದೆ. ಬೆಂಗಳೂರಿನಲ್ಲಿ ನಡೆಯುವ ಕವಿಗೋಷ್ಠಿಗಳಲ್ಲಿ ಸಾಮಾನ್ಯವಾಗಿ ನನ್ನ ಹೆಸರಿರುತ್ತಿತ್ತು. ಒಮ್ಮೆ ಯವನಿಕಾ ಸಭಾಂಗಣದಲ್ಲಿ ಸಾಹಿತ್ಯ ಅಕಾಡೆಮಿ ಆಯೋಜಿಸಿದ ಕಾರ್ಯಕ್ರಮವೆಂದು ಕಾಣುತ್ತದೆ. ಕವಿಗೋಷ್ಠಿಯಿತ್ತು. ಸಭಾಂಗಣದ ಮುಂಭಾಗದಲ್ಲಿ ಸಾಹಿತ್ಯ ಲೋಕದ ಅನೇಕ ದಿಗ್ಗಜರು ಕುಳಿತಿದ್ದರು. ಅವರಲ್ಲಿ ಲಂಕೇಶ್ ಕೂಡ ಒಬ್ಬರು. ನಾನು ಅಂದು ‘ಗೋಧೂಳಿ’ ಎಂಬ ಕವಿತೆಯನ್ನು ವಾಚಿಸಿದೆ. ಗೋಷ್ಠಿ ಮುಗಿದಮೇಲೆ ಚಹಾ ವಿರಾಮವಿತ್ತು. ಲಂಕೇಶರು ಹೊರಗಡೆ ಚಹಾ ಸೇವಿಸುತ್ತಾ, ಸಿಗರೇಟು ಎಳೆಯುತ್ತಾ, ಗೆಳೆಯರೊಂದಿಗೆ ಹರಟುತ್ತಾ ನಿಂತಿದ್ದರು. ಅವರನ್ನು ಮಾತನಾಡಿಸಲು ಯಾರಿಗಾದರೂ ಸ್ವಲ್ಪ ಭಯವಿದ್ದೇ ಇರುತ್ತಿತ್ತು. ದೂರದಲ್ಲಿ ನಿಂತಿದ್ದ ನನ್ನನ್ನು ಸನ್ನೆ ಮಾಡಿ ಕರೆದರು. ಹತ್ತಿರ ಹೋದೆ. ‘ನಿಮ್ಮ ಪದ್ಯ ಚೆನ್ನಾಗಿದೆ ಕಣ್ರೀ, ಪತ್ರಿಕೆಗೆ ಕಳಿಸಿ’ ಅಂದರು. ಆಗ ನಾನು ಉಬ್ಬಿಹೋಗಿದ್ದೆ. ಆ ನೆಪದಲ್ಲಿ ಬಸವನಗುಡಿಯಲ್ಲಿದ್ದ ಲಂಕೇಶ್ ಪತ್ರಿಕೆ ಕಛೇರಿಗೆ ಹೋಗಿ ಕವಿತೆ ಕೊಟ್ಟು ಬಂದಿದ್ದೆ. ಆ ಘಟನೆಯ ಮುಖಾಂತರ ಲಂಕೇಶ್ ಬಳಗಕ್ಕೆ ನಾನೂ ಪ್ರವೇಶ ಪಡೆದೆ. ಆ ನಂತರವೂ ನಿಯತವಾಗಿ ನನ್ನ ಕವಿತೆಗಳು ಅಲ್ಲಿ ಪ್ರಕಟಗೊಂಡವು.

ಲಂಕೇಶ್ ಪತ್ರಿಕೆ ಕಛೇರಿ ಕೇವಲ ಅವರ ಆಡಳಿತ ಕಛೇರಿಯಾಗಿರಲಿಲ್ಲ. ಅದೊಂದು ಮುಕ್ತ ಸಾಂಸ್ಕøತಿಕ ಕೇಂದ್ರವಾಗಿತ್ತು. ಹೊಸಬರಿಗೆ ಪ್ರವೇಶವಿದ್ದರೂ ಮೇಷ್ಟ್ರು ಬಹಳ ಚೂಸಿಯಾಗಿರುತ್ತಿದ್ದರು. ಶೂದ್ರ ಶ್ರೀನಿವಾಸ, ಡಿ. ಆರ್. ನಾಗರಾಜ್, ಕಿ. ರಂ. ನಾಗರಾಜ, ರಾಮಚಂದ್ರ ಶರ್ಮ, ಜಿ. ಕೆ. ಗೋವಿಂದರಾವ್, ನಟರಾಜ ಹುಳಿಯಾರ್, ಶ್ರೀನಿವಾಸ ಗೌಡ, ಸಿ. ಎಸ್ ದ್ವಾರಕಾನಾಥ್, ಬಸವರಾಜೇ ಅರಸ್ ಮುಂತಾದವರು ಲಂಕೇಶರಿಗೆ ಬಹಳ ಆತ್ಮೀಯರಾಗಿದ್ದರು. ನಾನು ಅವರ ಆತ್ಮೀಯ ಬಳಗವನ್ನು ಸೇರಿಕೊಳ್ಳುವುದು ತಡವಾಗಲಿಲ್ಲ. ಆ ಬಳಗವು ಬಸವರಾಜು ಅವರಿಗೆ ಮಾತ್ರ ತಿಳಿದಿತ್ತು. ಅದಕ್ಕೆ ಲಂಕೇಶ್ ‘ದುಷ್ಟಕೂಟ’ವೆಂದು ನಾಮಕರಣ ಮಾಡಿದ್ದರು. ಲಂಕೇಶರ ಭೇಟಿಗಾಗಿ ಬಂದ ಯಾರಿಗೂ ಅಷ್ಟು ಸುಲಭವಾಗಿ ಅವರ ಚೇಂಬರಿಗೆ ಪ್ರವೇಶ ಸಿಗುತ್ತಿರಲಿಲ್ಲ. ಬಸವರಾಜು ಒಳಗೆ ಹೋಗಿ ಅಪ್ಪಣೆ ಪಡೆದೇ ಕಳಿಸಬೇಕಾಗಿತ್ತು. ನಾನು ಹೋದಾಗ ಆ ವಿಶೇಷ ಅಪ್ಪಣೆ ಬೇಕಾಗಿರಲಿಲ್ಲ. ನನಗೆ ನೇರ ಪ್ರವೇಶವಿತ್ತು. ಒಮ್ಮೊಮ್ಮೆ ಅವರು ಸಿನಿಮಾ ನೋಡುತ್ತಿರುವಾಗಲೂ ಬಸವರಾಜು ನೀವು ಹೋಗಿ ಎನ್ನುತ್ತಿದ್ದರು. ನಾನು ಮೆಲ್ಲಗೆ ಒಳಹೊಕ್ಕು ಜೊತೆಯಲ್ಲಿ ಸಿನಿಮಾ ನೋಡಿದ್ದಿದೆ. ಅವರು ಕೇವಲ ಮನರಂಜನೆಗಾಗಿ ಸಿನಿಮಾ ನೋಡುತ್ತಿರಲಿಲ್ಲ. ನೋಡಿದ ಮೇಲೆ ಅದನ್ನು ಕುರಿತು ಚರ್ಚಿಸುತ್ತಿದ್ದರು. ಜಗತ್ತಿನ ಹಲವು ಕ್ಲಾಸಿಕ್ಸ್ ಸಿನಿಮಾಗಳನ್ನು ತರಿಸಿ ನೋಡುತ್ತಿದ್ದರು. ಪ್ರತಿ ಗುರುವಾರ ಸಂಜೆ ತಮ್ಮ ಪತ್ರಕರ್ತರೊಡನೆ ವಾರದ ಸಭೆ ನಡೆಸುತ್ತಿದ್ದರು. ಅಕಸ್ಮಾತ್ ನಾನು ಅಲ್ಲಿಗೆ ಧಾವಿಸಿದರೆ ‘ಬಾ ಬಾ ನೀನು ಹಾರ್ಮ್‍ಲೆಸ್ ಫೆಲೊ, ಕೂತ್ಕೋ’ ಅನ್ನುತ್ತಿದ್ದರು. ಸ್ವಭಾವತಃ ನಾನು ಹೆಚ್ಚು ಮಾತಾಡಿದವನಲ್ಲ. ಅವರ ಮುಂದೆ ಕುಳಿತಾಗ, ಅವರ ಮಾತು ಕೇಳಿಸಿಕೊಳ್ಳುತ್ತಿರುವಾಗ ಬೌದ್ಧಿಕವಾಗಿ ನಾವು ಅವರಿಗೆ ಎಟಕುವವರಲ್ಲ ಎಂದು ನನಗಂತೂ ಮನವರಿಕೆಯಾಗಿತ್ತು. ಅವರ ಓದಿನ ಹರವು ಬಹಳ ವಿಸ್ತಾರವಾದದ್ದು. ಡಿ. ಆರ್. ಎನ್. ಕೂಡ ಲಂಕೇಶರೊಡನೆ ಮಾತಾಡುವಾಗ ನಾನು ಸ್ವಲ್ಪ ಕೇರ್ಫುಲ್ ಆಗಿರ್ತೀನಿ ಎಂದು ಹೇಳುತ್ತಿದ್ದರು. ಆದರೂ ಸೃಜನಶೀಲರನ್ನು ಅದರಲ್ಲೂ ಕೆಳವರ್ಗದವರನ್ನು, ಮುಸ್ಲಿಮರು ದಲಿತರನ್ನು ವಿಶೇಷವಾಗಿ ಪ್ರೀತಿಸುತ್ತಿದ್ದರು. ನಮ್ಮನ್ನು ಅವಕಾಶವಂಚಿತರು ಎಂದು ದೃಢವಾಗಿ ನಂಬಿದ್ದವರು ಅವರು.

ಲಂಕೇಶ್ ತಮ್ಮ ಕಛೇರಿಯಲ್ಲಿ ‘ಸಂವೇದನೆ’ ಎಂಬ ವೇದಿಕೆಯನ್ನು ಹುಟ್ಟುಹಾಕಿದ್ದರು. ಪ್ರತಿ ತಿಂಗಳ ಒಂದು ಶನಿವಾರ ಅಲ್ಲಿ ಸಂವಾದ ಕಾರ್ಯಕ್ರಮ ನಡೆಯುತ್ತಿತ್ತು. ಆ ಕಾರ್ಯಕ್ರಮಕ್ಕೆ ನಾನು ತಪ್ಪದೇ ಹಾಜರಾಗುತ್ತಿದ್ದೆ. ಅಂಥ ಒಂದು ದಿನ ವೇದಿಕೆಯ ಮೇಲೆ ಲಂಕೇಶ್ ಅವರ ಜೊತೆಗೆ ಅನಂತಮೂರ್ತಿಯವರು ಇದ್ದರು. ಚರ್ಚೆ ಸ್ವಾರಸ್ಯಕರವಾಗಿತ್ತು. ಒಂದು ಹಂತದಲ್ಲಿ ಅನಂತಮೂರ್ತಿ ‘ನಾನು ಬೈಬಲ್ ಓದುವಾಗ ಮೂವ್ ಆಗ್ತೀನಿ, ಭಗವದ್ಗೀತೆ ಓದುವಾಗ ಮೂವ್ ಆಗ್ತೀನಿ’ ಅಂತ ಮಾತು ಮುಂದುವರೆಸಿದ್ದರು. ಲಂಕೇಶ್ ಗೆ ಎಂಥಾ ಸಿಟ್ಟು ಬಂದಿತ್ತೆಂದರೆ, ತಕ್ಷಣ, ‘ರೀ ನಿಲ್ಸ್ರೀ ಸಾಕು, ಬೈಬಲ್ ಓದುವಾಗ್ಲೂ ಮೂವ್ ಆಗ್ತೀರಾ, ಭಗವದ್ಗೀತೆ ಓದುವಾಗ್ಲೂ ಮೂವ್ ಆಗ್ತೀರಾ. ಎಷ್ಟು ಸುಳ್ ಹೇಳ್ತೀರಾ, ಭಗವದ್ಗೀತೆ ಒಂದ್ ಥರ್ಡ್ ರೇಟ್ ಟೆಕ್ಷ್ಟ್’ ಎಂದುಬಿಟ್ಟರು. ಇವರು ಸಮಜಾಯಿಸಿ ಕೊಡಲು ಶುರುಮಾಡಿದರು, ಅವರು ಕೇಳುವ ಮೂಡ್ನಲ್ಲಿ ಇರಲಿಲ್ಲ. ಆ ಕಿತ್ತಾಟದಲ್ಲಿ ಸಭೆ ಮುಗಿಯಿತು. ಅನಂತಮೂರ್ತಿ ಸಭೆ ಮುಗಿಯುತ್ತಿದ್ದ ಹಾಗೆ ಎದ್ದು ಹೊರಟುಬಿಟ್ಟರು.

ಸುಬ್ಬು ಹೊಲೆಯಾರ್ ಅವರನ್ನು ಕಂಡರೆ ಲಂಕೇಶರಿಗೆ ಅಚ್ಚುಮೆಚ್ಚು. ಸುಬ್ಬು ವಾರದಲ್ಲೊಮ್ಮೆಯಾದರೂ ಅವರನ್ನು ಭೇಟಿ ಮಾಡಲೇಬೇಕಾಗಿತ್ತು. ಆ ಕಿರಿಯ ಸ್ನೇಹಿತನ ಮೇಲೆ ಅದೆಷ್ಟು ಪ್ರೀತಿಯೆಂದರೆ ತಿಂಡಿ ತರಿಸಿ ತಿನ್ನಿಸಿ, ಹೋಗುವಾಗ ಆಟೋಗಾಗಿ ಕಾಸು ಕೊಟ್ಟು ಕಳುಹಿಸುತ್ತಿದ್ದರು. ನಾನು ಅವರನ್ನು ನೋಡಲು ಹೋಗುವುದು ತಡವಾದರೆ ಸುಬ್ಬುವಿನ ಮೂಲಕ ಬುಲಾವ್ ಬರುತ್ತಿತ್ತು. ಎಲ್ಲಯ್ಯಾ ಅವನು ಚಿನ್ನಸ್ವಾಮಿ ಕಾಣಲೇ ಇಲ್ಲ ಅನ್ನುತ್ತಿದ್ದರಂತೆ. ಅವರ ‘ಮರೆಯುವ ಮುನ್ನ’ ಅಂಕಣದಲ್ಲಿ ಲೆಕ್ಕಾಧಿಕಾರಿ ಎಂದು ಸ್ವಲ್ಪ ಕೀಟಲೆ ಮಾಡಿ ನನ್ನ ಬಗ್ಗೆ ಬರೆದಿದ್ದದ್ದು ನೆನಪಿದೆ.

ಒಂದು ದಿನ ಹೀಗಾಯಿತು. ತಿಂಗಳ ಕಾರ್ಯಕ್ರಮ ಮುಗಿದಮೇಲೆ ಎಲ್ಲರೂ ಹೊರಡುತ್ತಿದ್ದರು. ಲಂಕೇಶ್ ತಮ್ಮ ಕೊಠಡಿಯ ಬಾಗಿಲ ಬಳಿ ನಿಂತಿದ್ದರು. ನಾನೂ ಜರಗನಹಳ್ಳಿ ಶಿವಶಂಕರ್ ಮತ್ತಿತರರೊಡನೆ ಹೊರಟಿದ್ದೆ. ಲಂಕೇಶ್ ನನ್ನನ್ನು ನೋಡಿದವರೆ ‘ನೀನಿರು’ ಎಂದರು. ಸಂಜೆ ಎಂಟರ ನಂತರ ಅವರ ಕಛೇರಿಯಲ್ಲಿ ಆಪ್ತ ಬಳಗದೊಂದಿಗೆ ಗುಂಡುಪಾರ್ಟಿ ಇದ್ದೇ ಇರುತ್ತಿತ್ತು. ನಾನು ಭಯದಿಂದಲೇ ಹೋಗಿ ಕುಳಿತೆ. ಮೇಲೆ ಹೆಸರಿಸಿದ ಅನೇಕ ಗೆಳೆಯರು ಅಲ್ಲಿ ಉಪಸ್ಥಿತರಿದ್ದರು. ಲಂಕೇಶರ ಸಹಾಯಕ ಗಿರಿ ಎಲ್ಲರ ಮುಂದೆ ಗಾಜಿನ ಲೋಟಗಳನ್ನು ತಂದಿಟ್ಟ. ವಾಡಿಕೆಯಂತೆ ತುಂಬಿದ ಆರ್. ಸಿ. ವಿಸ್ಕಿ ಬಾಟೆಲಿನಲ್ಲಿ ಎಲ್ಲರ ಲೋಟಗಳಿಗೂ ಪೆಗ್ ಅಳತೆಯಲ್ಲಿ ಹುಯ್ಯುತ್ತಿದ್ದ. ಅವನು ನನ್ನ ಲೋಟಕ್ಕೆ ಹಾಕಲು ಬಂದಾಗ ಲಂಕೇಶ್ ‘ಹೇಯ್ ಬೇಡ ಇರು’ ಎಂದರು. ಎಲ್ಲರೂ ನನ್ನ ಮುಖ ನೋಡುತ್ತಿದ್ದರು. ತಕ್ಷಣ ಅವರ ಮೇಜಿನ ಕೆಳ ಡ್ರಾಯರ್ ನಿಂದ ಒಂದು ಸ್ಕಾಚ್ ಬಾಟಲನ್ನು ತೆಗೆದು ಅವರೇ ನನ್ನ ಗ್ಲಾಸಿಗೆ ಒಂದು ಪೆಗ್ ಸುರಿದರು. ತಮ್ಮ ಗ್ಲಾಸಿಗೂ ಒಂದು ಪೆಗ್ ಹಾಕಿಕೊಂಡರು. ಮಿಕ್ಕೆಲ್ಲರಿಗೂ ಅಸೂಯೆ ಕಾಡಿರಬೇಕು. ಒಬ್ಬರು, ‘ಇದು ಬಹಳ ಅನ್ಯಾಯ’ ಎಂದರು. ಲಂಕೇಶರ ಪ್ರವೃತ್ತಿಯೇ ಹಾಗೆ. ಎಲ್ಲವೂ ನೇರ, ನಿಷ್ಠುರ. ನಾನು ಲೋಟಕ್ಕೆ ಮುಕ್ಕಾಲು ತುಂಬುವಷ್ಟು ನೀರು ಹಾಕಿದೆ. ‘ಫುಲ್ ನೀರು ಹಾಕು, ಆರೋಗ್ಯಕ್ಕೆ ಒಳ್ಳೇದು’ ಎಂದರು. ಅಂದು ನಾನು ಅದೃಷ್ಟಶಾಲಿಯಾಗಿದ್ದೆ. ಅವರಲ್ಲಿ ಹೋಗಲು ಯಾಕೆ ಸಹಲೇಖಕರಿಗೆ ಭಯ ಇತ್ತೆಂದರೆ ಈ ಕಾರಣಕ್ಕೆ. ಅವರು ಎಲ್ಲರನ್ನೂ ಎಲ್ಲವನ್ನು ಗಮನಿಸುತ್ತಿದ್ದರು. ನೇರವಾಗಿ ಗದರಿಸುವ ಸ್ವಭಾವ ಅವರದು.

ಪವರ್ ಎಂದರೆ ಏನು ಎಂಬುದನ್ನು ಲಂಕೇಶರನ್ನು ನೋಡಿಯೇ ನಾನು ಅರ್ಥ ಮಾಡಿಕೊಂಡದ್ದು. ಅದು ರಾಜಕೀಯ ಬಲವೂ ಅಲ್ಲ, ಹಣಬಲವೂ ಅಲ್ಲ. ಅದು ಜ್ಞಾನದ ಬಲ. ನೈತಿಕತೆಯ ಬಲ. ಇಲ್ಲಿ ಕುಡಿಯುವುದು, ಇಸ್ಪೀಟು ಆಡುವುದು ನೈತಿಕತೆಯೇ ಎಂದು ಸಂಪ್ರದಾಯಸ್ಥರು ಗೊಣಗಬಹುದು. ಇತರರನ್ನು ನೋಯಿಸದಿರುವವನು, ದುರ್ಬಲರಿಗೆ ಸಹಾಯ ಮಾಡುವವನು, ತನ್ನ ವ್ಯವಹಾರಗಳಲ್ಲಿ ಪ್ರಾಮಾಣಿಕವಾಗಿರುವವನು ನೈತಿಕಬಲವನ್ನು ಪಡೆಯುತ್ತಾನೆ. ನೈತಿಕತೆಯ ಒತ್ತಾಸೆಯಿಲ್ಲದಿದ್ದರೆ ಜ್ಞಾನ ಕೆಲಸಮಾಡುವುದಿಲ್ಲ. ನನ್ನ ಪ್ರಕಾರ ನೈತಿಕತೆ + ಜ್ಞಾನ = ವಿಸ್ಡಮ್. ವಿಸ್ಡಮ್ ಪದಕ್ಕೆ ಸಂವಾದಿಯಾಗಿ ವಿವೇಕ ಎಂದು ಸಾಮಾನ್ಯವಾಗಿ ಬಳಸುತ್ತಾರೆ. ಇದನ್ನು ಯಾಕೆ ಹೇಳಿದೆನೆಂದರೆ ಜೆ. ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದ ಕಾಲವದು. ಮಾರ್ಚ್, 8 ಲಂಕೇಶರ ಹುಟ್ಟುಹಬ್ಬ. ಮಧ್ಯಾಹ್ನದ ಸಮಯವಿರಬಹುದು. ಪ್ರತಿ ಹುಟ್ಟುಹಬ್ಬದ ದಿನದಂದು ಬನ್ನೇರುಘಟ್ಟ ರಸ್ತೆಯಲ್ಲಿದ್ದ ಅವರ ತೋಟದಲ್ಲಿ ದೊಡ್ಡ ಕಾರ್ಯಕ್ರಮವಿರುತ್ತಿತ್ತು. ಸಾಮಾನ್ಯವಾಗಿ ಅಂದು ಅವರ ಯಾವುದಾದರೂ ಒಂದು ಪುಸ್ತಕ ಬಿಡುಗಡೆಯಾಗುತ್ತಿತ್ತು. ನಾವು ಕೆಲವರು ಖಾಯಂ ಅತಿಥಿಗಳು. ಅಲ್ಲಿಗೆ ಹೋಗಲೆಂದು ಕಛೇರಿಗೆ ಬಂದ ನಾನು ಅವರ ಕೊಠಡಿಯ ಒಳಗೆ ಹೋಗಿ ಕುಳಿತೆ. ಛೇಂಬರಿನಲ್ಲಿ ಇನ್ನೊಬ್ಬರಿದ್ದರು, ಅವರು ಯಾರೆಂದು ನೆನಪಿಗೆ ಬರುತ್ತಿಲ್ಲ. ಒಂದು ಫೋನ್ ರಿಂಗಾಯಿತು. ಯಥಾಪ್ರಕಾರ ಬಸವರಾಜು ಫೋನ್ ತೆಗೆದುಕೊಂಡು ಜೆ. ಎಚ್. ಪಟೇಲರು ಲೈನಿನಲ್ಲಿದ್ದಾರೆ ಎಂದರು. ಲಂಕೇಶ್ ‘ಏನಂತೆ, ಹುಟ್ಟುಹಬ್ಬದ ವಿಷ್ ಮಾಡೋಕ್ ತಾನೆ, ತಲುಪಿದೆ ಅಂತ ಹೇಳಿಬಿಡು’ ಅಂದವರೆ ಫೋನನ್ನು ಕೆಳಗಿಟ್ಟರು. ಪಟೇಲರ ಫೋನ್ ಸ್ವೀಕರಿಸಲಿಲ್ಲ. ನಾನು ದಂಗುಬಡಿದವನಂತೆ ಕೂತಿದ್ದೆ. ಒಬ್ಬ ಮುಖ್ಯಮಂತ್ರಿಯ ಪೋನ್ ಅನ್ನು ತಿರಸ್ಕರಿಸುವುದಿದೆಯಲ್ಲ, ಅದು ಯಾವ ಬಲವಿರಬಹುದು? ಪತ್ರಿಕೆ ಲಂಕೇಶರ ಅಸ್ತ್ರವಾಗಿತ್ತು. ಒಂದು ಸರ್ಕಾರವನ್ನು ಬೀಳಿಸುವಷ್ಟು ಶಕ್ತಿಶಾಲಿಯಾಗಿತ್ತು. ಒಂದಷ್ಟು ಯುವಕರಿಗೆ ಸರಿದಾರಿಯಲ್ಲಿ ನಡೆಯುವ, ಮಾರ್ಗದರ್ಶನ ಮಾಡುವ ಶಕ್ತಿಯಿತ್ತು. ಲಂಕೇಶರನ್ನು ಕಂಡಿರದ ಇವತ್ತಿನ ಯುವಸಮುದಾಯ ಅವರನ್ನು ನೆನೆಯುತ್ತಿರುವುದು ಅವರ ಆ ಬಲಕ್ಕೆ (ಪವರ್) ಸಾಕ್ಷಿಯಾಗಿದೆ.

ಒಮ್ಮೆ ನಾನು ಗದುಗಿನಲ್ಲಿ ಕೆಲಸ ಮಾಡುತ್ತಿರುವಾಗ ಯಾವುದೋ ಸಭೆಯ ನಿಮಿತ್ತ ಬೆಂಗಳೂರಿಗೆ ಬಂದಿದ್ದೆ. ಲಂಕೇಶರನ್ನು ಮಾತಾಡಿಸಿ ಹೋಗೋಣವೆಂದುಕೊಂಡು ಅವರ ಕಛೇರಿಗೆ ಹೋದೆ. ಸಂಜೆ ಐದರ ಸಮಯವಿರಬಹುದು. ಕೆಳಮಹಡಿಯ ರೂಮಿನಲ್ಲಿ ಅವರ ಖಾಯಂ ಗೆಳೆಯರೊಂದಿಗೆ ಇಸ್ಪೀಟಿನಲ್ಲಿ ಮಗ್ನರಾಗಿದ್ದರು. ಬಸವರಾಜು ಕನಿಕರ ತೋರಿ, ಅಲ್ಲೇ ಹೋಗಿ ವಿಷ್ ಮಾಡಿ ಬನ್ನಿ ಸರ್ ಎಂದರು. ನಾನು ಅಲ್ಲಿಗೆ ಹೋದೆ. ಸರ್, ಹೀಗೆ ಬೆಂಗ್ಳೂರಿಗೆ ಬಂದಿದ್ದೆ, ಮಾತಾಡಿಸಿ ಹೋಗೋಣ ಅನ್ನಿಸ್ತು ಬಂದೆ, ಅಂದೆ. ಲಂಕೇಶ್ ಎಲೆಗಳನ್ನು ಮಡಚಿಟ್ಟು ಆಟ ಬಿಟ್ಟು ಮೇಲೆದ್ದರು. ರಾಮಚಂದ್ರ ಶರ್ಮರಿಗೆ ಬಹಳ ಸಿಟ್ಟು ಬಂತು. ಇದು ಮೋಸ ಎಂದು ಕೈ ಹಿಡಿದೆಳೆದು ಕೂರಿಸುತ್ತಿದ್ದರು. ಆಟದಲ್ಲಿ ಇವರು ಯಾವ ಹಂತದಲ್ಲಿದ್ದರು, ಸೋಲುತ್ತಿದ್ದರೋ, ಗೆಲುವನ್ನು ಬಿಟ್ಟುಕೊಟ್ಟರೋ ನನಗೆ ತಿಳಿಯುವಂತಿರಲಿಲ್ಲ. ಏ, ಇರಯ್ಯಾ ಚಿನ್ನಸ್ವಾಮಿ ಗದಗಿನಿಂದ ಬಂದಿದಾನೆ, ಮುಗಿಸ್ಕೊಂಡ್ ಮೇಲೆ ಬಾ ಎಂದು ಎದ್ದು ಬಂದೇಬಿಟ್ಟರು. ಚೇಂಬರಿನಲ್ಲಿ ಸ್ವಲ್ಪಹೊತ್ತು ಮಾತಾಡಿಸಿ ಬೀಳ್ಕೊಟ್ಟರು. ಇದು ವಯಸ್ಸಿನ ಅಂತರವಿಲ್ಲದೆ ತಮಗೆ ಇಷ್ಟವಾದವರನ್ನು ನಡೆಸಿಕೊಳ್ಳುತ್ತಿದ್ದ ಅವರ ರೀತಿ.

ಶೂದ್ರ ಶ್ರೀನಿವಾಸ ಮತ್ತು ಲಂಕೇಶರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದ ಕಾಲ. ಲಂಕೇಶ್ ಅಕ್ಷರ ಹೊಸಕಾವ್ಯವನ್ನು ಪರಿಷ್ಕರಿಸುತ್ತಿದ್ದರು. ಶೂದ್ರ ನನಗೆ ಕರೆಮಾಡಿ ನಿಮ್ಮ ಕವಿತೆಗಳನ್ನು ಲಂಕೇಶರಿಗೆ ತಲುಪಿಸಿಬಿಡಿ ಎಂದರು. ನಾನು ಸ್ವಲ್ಪ ಉಮೇದಿನಿಂದಲೇ ಎರಡು ಕವಿತೆಗಳನ್ನು ತೆಗೆದುಕೊಂಡು ಹೋಗಿ, ‘ಪದ್ಯಗಳನ್ನು ಕೊಡಲು ಶೂದ್ರ ಹೇಳಿದರು’ ಎಂದುಬಿಟ್ಟೆ. ತಕ್ಷಣ ಸಿಡಿಮಿಡಿಗೊಂಡ ಅವರು ಶೂದ್ರ ಯಾಕೆ ಹೇಳಬೇಕು? ಅಲ್ಲಿ ಇಟ್ಟು ಹೋಗು ಎಂದರು. ಕವಿತೆಗಳನ್ನು ಅವರು ಪ್ರಕಟಿಸಲಿಲ್ಲ. ಅವರು ‘ಮೂಡಿ’ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಯಾರಿಗೆ ಯಾವಾಗ ರೇಗುತ್ತಾರೋ, ಮೆಚ್ಚುತ್ತಾರೋ ತಿಳಿಯದಾಗಿತ್ತು. ಮತ್ತೊಮ್ಮೆ ತೋಟದಲ್ಲಿ ಅವರ ವಿಸ್ಕಿಗೆ ನೀರು ಹಾಕಲು ಹೋಗಿ ಹೀಗೇ ಬೈಸಿಕೊಂಡಿದ್ದೆ. ನಂತರ ಅವರೇ ಬೆನ್ನು ಸವರಿ ‘ಮುಸ್ಸಂಜೆಯ ಕಥಾ ಪ್ರಸಂಗ’ವನ್ನು ಹಸ್ತಾಕ್ಷರದೊಂದಿಗೆ ಕೈಗಿತ್ತಿದ್ದರು.

ಯು.ಆರ್. ಅನಂತಮೂರ್ತಿಯವರಿಗೆ 60 ತುಂಬಿತ್ತು. ಆ ದಿನ ಸ್ನೇಹಿತರು ಒಂದು ಕಡೆ ಸೇರಬೇಕೆಂದು ತೀರ್ಮಾನವಾಯಿತು. ಲಂಕೇಶ್ ಮತ್ತು ಅನಂತಮೂರ್ತಿ ಇಬ್ಬರನ್ನೂ ಇಷ್ಟಪಡುವ ಅಭಿಮಾನೀ ಬಳಗವೊಂದಿತ್ತು. ಅವರೆಲ್ಲರೂ ಪ್ರಗತಿಪರರೆಂದು ಗುರುತಿಸಿಕೊಂಡವರೆ. ಕಪ್ಪಣ್ಣನವರು ರೇಸ್ ಕೋರ್ಸ್ ಕ್ಲಬ್ಬಿನಲ್ಲಿ ಪಾರ್ಟಿ ಆರ್ಗನೈಸ್ ಮಾಡಿದ್ದರು. ಮೇಲೆ ಹೆಸರಿಸಿದ ಎಲ್ಲ ಗೆಳೆಯರೂ ಅಲ್ಲಿದ್ದರು. ಅನಂತಮೂರ್ತಿಯವರಿಗೆ ಅಭಿನಂದನೆಗಳ ಸುರಿಮಳೆಯಾಯಿತು. ಲಂಕೇಶ್ ಯುವಕವಿಗಳಾದ ನಮಗೆ ಎಲ್ಲರೂ ಇಲ್ಲೇ ಒಂದೊಂದು ಪದ್ಯ ಬರೆದು ಓದಿ ಎಂದರು. ನಾವು ಪದ್ಯ ಬರೆಯುವುದರಲ್ಲಿ ಮಗ್ನರಾಗಿದ್ದೆವು. ಲಂಕೇಶ್ ಮತ್ತು ಅನಂತಮೂರ್ತಿ ಸಂವಾದದಲ್ಲಿ ತೊಡಗಿದ್ದರು. ನಿಧನಿಧಾನವಾಗಿ ಅದು ವಾಗ್ವಾದಕ್ಕೆ ತಿರುಗುತ್ತಿತ್ತು. ಪ್ರತಿಭಾ ನಂದಕುಮಾರ್ ಒಬ್ಬರು ಬೇಗ ಬರೆದು ಮುಗಿಸಿ ಕವಿತೆ ಓದಿದರೆಂದು ಕಾಣುತ್ತದೆ. ಅಷ್ಟು ಹೊತ್ತಿಗೆ ಇವರ ವಾಗ್ವಾದ ಕಲಹವಾಗಿ ಲಂಕೇಶ್ ಕೋಪದಿಂದ ಸಿಡುಕುತ್ತಿದ್ದರು. ಏನು ಮಾತಾಯಿತೆಂದು ನಮಗ್ಯಾರಿಗೂ ತಿಳಿಯಲಿಲ್ಲ. ಅನಂತಮೂರ್ತಿ ಏಕಾಏಕಿ ಎದ್ದವರೆ ಹೊರಗೆ ನಡೆದುಬಿಟ್ಟರು. ಮತ್ತೆ ಅವರು ಒಂದುಗೂಡಲಿಲ್ಲ. ಮ್ಲಾನವದನರಾದ ನಾವು ಒಬ್ಬೊಬ್ಬರಾಗಿ ಹೊರನಡೆದೆವು. ಬಹುತೇಕರು ಲಂಕೇಶರನ್ನೆ ದೂರುತ್ತಿದ್ದುದು ಕೇಳಿಸುತ್ತಿತ್ತು.

ಮತ್ತೊಮ್ಮೆ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅನೇಕ ಬಾಧೆಗಳು ಅವರನ್ನು ಪೀಡಿಸುತ್ತಿದ್ದವು. ಒಂದು ಕಣ್ಣು ಕಾಣಿಸುತ್ತಿರಲಿಲ್ಲ. ನಾನು ಭೇಟಿಯಾಗಲೆಂದು ಹೋಗಿದ್ದೆ. ವಿಶೇಷ ವಾರ್ಡ್‍ನಲ್ಲಿ ಶುಶ್ರೂಷೆ ಪಡೆಯುತ್ತಿದ್ದರು. ಅವರ ಇಬ್ಬರು ಹೆಣ್ಣುಮಕ್ಕಳು ಜೊತೆಯಲ್ಲಿದ್ದರು. ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ನನಗೆ ಪರಿಚಯವಿದ್ದ ಗೌರಿಯವರ ಮುಖ ನೋಡಿ ಸನ್ನೆ ಮಾಡಿದೆ. ಅವರು ಹೇಳಿದರೆಂದು ಕಾಣುತ್ತದೆ ‘ಒಳಗೆ ಕರಿ’ ಎಂದರಂತೆ. ನಾನು ಹೋದೆ. ಅವರ ಹೊಟ್ಟೆ ಎಷ್ಟು ಮೇಲಕ್ಕೆ ಉಬ್ಬಿತ್ತು ಎಂದರೆ ನನಗೆ ಗಾಬರಿಯಾಯಿತು. ನನ್ನನ್ನು ನೋಡಿ ಹುಸಿನಕ್ಕರು. ಬೇಗ ಹುಷಾರಾಗಿ ಎಂದು ಹೇಳಿ ಬಂದುಬಿಟ್ಟೆ. ಅದೇ ನನ್ನ ಕೊನೆಯ ಭೇಟಿಯಾಯಿತು.

(ಬೆಂಗಳೂರಿನ ಅಂಕಿತ ಪ್ರಕಾಶನ ಮೂಡ್ನಾಕೂಡು ಚಿನ್ನಸ್ವಾಮಿಯವರ ಆತ್ಮಕತೆ ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಪುಸ್ತಕವನ್ನು ಪ್ರಕಟಿಸಿದ್ದು, ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ. ಇದು ಪ್ರಕಟಪೂರ್ವ ಹಸ್ತಪ್ರತಿಯಿಂದ ಆಯ್ದ ಅಧ್ಯಾಯ)

ಇದನ್ನು ಓದಿ: ’ಲಂಕೇಶ್ ಮೋಹಕ ರೂಪಕಗಳ ನಡುವೆ’: ಪುಸ್ತಕ ಪರಿಚಯ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...