ಕಳೆದ ವರ್ಷದ ಮಾರ್ಚ್ ಮಧ್ಯಭಾಗದಲ್ಲಿ ತಬ್ಲಿಗಿಗಳು ದೆಹಲಿಯ ಮರ್ಕಜ್‌ನಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮ ಮತ್ತು ಈಗ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೂ ಹೋಲಿಸುವುದು ಸರಿಯಲ್ಲ ಎಂದು ಉತ್ತರಖಂಡ ಸಿಎಂ ತಿರತ್ ಸಿಂಗ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ಎರಡನೇ ಅಲೆಯಿಂದಾಗಿ ದಿನನಿತ್ಯದ ಪ್ರಕರಗಳು 2 ಲಕ್ಷದವರೆಗೆ ಏರುತ್ತಿರುವ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು ಸರಿಯೇ? ನಿಜಾಮುದ್ದೀನ್ ಮರ್ಕಜ್ ಮತ್ತು ಕುಂಭಮೇಳ ಎರಡು ಧಾರ್ಮಿಕ ಘಟನೆಗಳನ್ನು ಏಕೆ ಸಮೀಕರಿಸಬಾರದು ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು “ಮರ್ಕಜ್‌ನಲ್ಲಿ ಕಿರಿದಾದ ಜಾಗದಲ್ಲಿ, ಕಟ್ಟಡದ ಒಳಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಮತ್ತು ಅದರಲ್ಲಿ ವಿದೇಶಿಯರೂ ಭಾಗವಹಿಸಿದ್ದರು. ಆದರೆ ಕುಂಭಮೇಳವನ್ನು ವಿಶಾಲ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಮತ್ತು ನಮ್ಮ ಭಕ್ತರು ಮಾತ್ರ ಭಾಗವಹಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
“ಮರ್ಕಜ್ ಕಾರ್ಯಕ್ರಮ ನಡೆದಾಗ ಕೊರೊನಾದ ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ ಅಥವಾ ಯಾವುದೇ ಮಾರ್ಗಸೂಚಿಗಳಿಲ್ಲ. ಮರ್ಕಜ್‌ನಲ್ಲಿ ಪಾಲ್ಗೊಳ್ಳುವವರು ಎಷ್ಟು ದಿನ ಉಳಿದಿದ್ದಾರೆಂದು ಯಾರಿಗೂ ತಿಳಿದಿಲ್ಲ. ಈಗ ಕೋವಿಡ್ ಮತ್ತು ಅದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳ ಬಗ್ಗೆ ಹೆಚ್ಚಿನ ಅರಿವು ಇದೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕುಂಭ 12 ವರ್ಷಗಳಿಗೊಮ್ಮೆ ಬರುತ್ತದೆ ಮತ್ತು ಲಕ್ಷಾಂತರ ಜನರ ನಂಬಿಕೆ ಮತ್ತು ಭಾವನೆಗಳೊಂದಿಗೆ ಸಂಬಂಧ ಹೊಂದಿದೆ ಎಂದು ಅವರು ಕುಂಭಮೇಳ ಆಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.
“ಜನರ ಆರೋಗ್ಯವು ಆದ್ಯತೆಯಾಗಿದೆ ಆದರೆ ನಂಬಿಕೆಯ ವಿಷಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುವುದಿಲ್ಲ. ಪ್ರಕರಣಗಳು ತಡವಾಗಿ ಏರಿಕೆಯಾಗುತ್ತಿವೆ ಆದರೆ ನಾವು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ ಮತ್ತು ನಮ್ಮಲ್ಲಿ ಚೇತರಿಕೆಯ ಪ್ರಮಾಣವು ಉತ್ತಮವಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ವ್ಯವಸ್ಥೆಗಳು ಸಹ ಸಮರ್ಪಕವಾಗಿವೆ” ಎಂದು ಅವರು ಹೇಳಿದ್ದಾರೆ.
ಕುಂಭಮೇಳ ಪ್ರದೇಶದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳ ದೊಡ್ಡ ಪ್ರಮಾಣದ ವ್ಯವಸ್ಥೆಗಳನ್ನು ಮಾಡಲಾಗಿದೆ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ಅನುಸರಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಇಡೀ ಆಡಳಿತ ಯಂತ್ರಾಂಗ ಹಗಲು ರಾತ್ರಿ ಕೆಲಸ ಮಾಡುತ್ತಿವೆ ಎಂದು ತಿರತ್ ಸಿಂಗ್ ರಾವತ್ ತಿಳಿಸಿದ್ದಾರೆ.
ಇದಕ್ಕೆ ವ್ಯಾಪಕ ವಿರೋಧಗಳು ಕೇಳಿಬಂದಿದ್ದು, ಕಳೆದ ವರ್ಷ ಸಾಂಕ್ರಾಮಿಕ ಇನ್ನು ಆರಂಭಿಕ ಹಂತದಲ್ಲಿತ್ತು. ಸರ್ಕಾರಕ್ಕೆ ಅದರ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ ಮತ್ತು ಕೇವಲ 3 ಸಾವಿರ ಜನ ಅಲ್ಲಿ ಭಾಗವಹಿಸಿದ್ದರು. ಆದರೆ ಈಗ ಕೊರೊನಾ ಎಂತಹ ಅಪಾಯಕಾರಿ ಸಾಂಕ್ರಾಮಿಕ ಎಂದು ನಮಗೆ ತಿಳಿದಿದೆ, ಆದರೂ ಕುಂಭಮೇಳದಲ್ಲಿ 35 ಲಕ್ಷ ಜನ ಭಾಗವಹಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: 1.84 ಲಕ್ಷ ಕೋವಿಡ್ ಪ್ರಕರಣಗಳು ವರದಿ: ಇಂದು ಕುಂಭಮೇಳದಲ್ಲಿ ಮೂರನೇ ಅತಿದೊಡ್ಡ ಶಾಹಿ ಸ್ನಾನ!


