ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಸರ್ಕಾರ ಪತನಗೊಂಡಿದೆ. ಆದರೆ ಸರ್ಕಾರ ರಚಿಸಲು ಬಿಜೆಪಿ ಒಪ್ಪದ ಕಾರಣಕ್ಕೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿದೆ. ಈ ಪ್ರಸ್ತಾವಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದಾರೆ.
ವಿಧಾನಸಭೆಯಲ್ಲಿ ವಿಶ್ವಾಸ ಮತ ಕಳೆದುಕೊಂಡ ನಂತರ ಮುಖ್ಯಮಂತ್ರಿ ವಿ ನಾರಾಯಣಸಾಮಿ ಫೆ. 22ರಂದು ರಾಜೀನಾಮೆಯನ್ನು ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರ್‌ರಾಜನ್ ಅವರಿಗೆ ನೀಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ವಿ ಸಾಮಿನಾಥನ್, “ನಾವು ಈ ಹಂತದಲ್ಲಿ ಸರ್ಕಾರವನ್ನು ರಚಿಸಲು ಪ್ರಯತ್ನಿಸುವುದಿಲ್ಲ. ಮುಂಬರುವ ಚುನಾವಣೆಗಳಲ್ಲಿ ಜನರ ಆಶೀರ್ವಾದ ಮತ್ತು ಮೋದಿಯವರ ನಾಯಕತ್ವದೊಂದಿಗೆ, ಎನ್‌ಡಿಎ ಮೈತ್ರಿಯ ಭಾಗವಾಗಿರುವ ಎಐಎಡಿಎಂಕೆ ಜೊತೆ ಸರ್ಕಾರ ರಚಿಸಲಿದ್ದೇವೆ. ಇದು ಪುದುಚೇರಿಯ ಜನರಿಗೆ ಉಜ್ವಲ ಭವಿಷ್ಯವನ್ನು ನೀಡುತ್ತದೆ” ಎಂದು ಹೇಳಿದ್ದರು.
ಇದನ್ನೂ ಓದಿ: ’ಸಲಿಂಗ ವಿವಾಹ ಮೂಲಭೂತ ಹಕ್ಕಲ್ಲ’ – ಕೇಂದ್ರ ಸರ್ಕಾರ ಹೇಳಿಕೆ
ಈ ಸರ್ಕಾರದ ಪತನದೊಂದಿಗೆ ಕೇಂದ್ರಾಡಳಿತ ಪ್ರದೇಶದ ಇತಿಹಾಸದಲ್ಲಿ ಕೆಟ್ಟ ಅಧ್ಯಾಯ ಕೊನೆಗೊಂಡಿದೆ ಎಂದು ಬಿಜೆಪಿ ಬಣ್ಣಿಸಿದೆ.
“ಕಳೆದ ಐದು ವರ್ಷಗಳಲ್ಲಿ ಕೇಂದ್ರಾಡಳಿತದ ಹಣಕಾಸನ್ನು ಲೂಟಿ ಮಾಡಲಾಗಿದೆ. ಉದ್ಯೋಗಗಳು, ಪಡಿತರ, ಆರೋಗ್ಯ ರಕ್ಷಣೆ, ರಸ್ತೆಗಳು ಮತ್ತು ಶಿಕ್ಷಣಕ್ಕಾಗಿ ಕೇಂದ್ರವು ಕಳುಹಿಸಿದ ಹಣವನ್ನು ದುರುಪಯೋಗಪಡಿಸಲಾಗಿದೆ” ಎಂದು ಸಾಮಿನಾಥನ್ ಆರೋಪಿಸಿದ್ದಾರೆ.
“ರಾಹುಲ್ ಗಾಂಧಿಯವರ ಭೇಟಿಯ ಸಮಯದಲ್ಲಿ ಬಡ ಮಹಿಳೆಯರು ಚಂಡಮಾರುತದ ಪರಿಣಾಮದಿಂದ ಬಳಲುತ್ತಿರುವ ಬಗ್ಗೆ ದೂರು ನೀಡಿರುವುದನ್ನು ನೀವು ಕಂಡಿದ್ದೀರಿ. ಭ್ರಷ್ಟಾಚಾರ ಮತ್ತು ಶೋಷಣೆಯ ಸಂಸ್ಕೃತಿಯನ್ನು ಮಾತ್ರ ಕಾಂಗ್ರೆಸ್ ಮತ್ತು ಡಿಎಂಕೆ ನೀಡಿದೆ. ಪುದುಚೇರಿಯ ಜನರು ಮುಂಬರುವ ಚುನಾವಣೆಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಸ್ಮಾರ್ಟ್ ಸಿಟಿ ನಿರ್ಮಾಣ, ನದಿಗಳನ್ನು ಸ್ವಚ್ಚಗೊಳಿಸುವುದು ಯಾವಾಗ? ಬಿಜೆಪಿ ಉತ್ತರಿಸಲಿ: ಅಖಿಲೇಶ್


