ಒಕ್ಕೂಟ ಸರ್ಕಾರವು ರೈತರ ಬಗ್ಗೆ ನಿರಾಸಕ್ತಿ ತೋರುತ್ತಿದೆ ಮತ್ತು ತನ್ನ “ಸೂಟ್-ಬೂಟ್ ಗೆಳೆಯರ” ಬಗ್ಗೆ ಅನುಭೂತಿ ಹೊಂದಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಭಾನುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚಂಪಾರನ್ ಹೋರಾಟದಂತಹ ಪರಿಸ್ಥಿತಿಯನ್ನು ಭಾರತವು ಎದುರಿಸುತ್ತಿದೆ ಎಂದು ಬರೆದಿದ್ದಾರೆ.
ರಾಹುಲ್ ಗಾಂಧಿ ತಮ್ಮ ಟ್ವೀಟ್‌ನಲ್ಲಿ, “ದೇಶವು ಮತ್ತೊಮ್ಮೆ ಚಂಪಾರನ್ ನಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಆಗ, ಬ್ರಿಟಿಷ್ ಕಂಪನಿ ಬಲಶಾಲಿಯಾಗಿದ್ದು, ಈಗ ಮೋದಿ ಮತ್ತು ಸ್ನೇಹಿತರ ಕಂಪೆನಿಗಳು ಬಲಶಾಲಿಗಳಾಗಿದ್ದಾರೆ. ಆದರೆ ಪ್ರತಿ ಆಂದೋಲನ ಮಾಡುತ್ತಿರುವ ಪ್ರತಿಯೊಬ್ಬ ರೈತ ಹಾಗೂ ಕಾರ್ಮಿಕರು ಸತ್ಯಾಗ್ರಹಿಯಾಗಿದ್ದು, ಅವರು ತಮ್ಮ ಹಕ್ಕುಗಳನ್ನು ಪಡೆದೇ ತೀರುತ್ತಾರೆ” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆಯ 190ನೇ ಜನ್ಮದಿನ: ಗಣ್ಯರ ಶುಭಾಶಯ
देश एक बार फिर चंपारन जैसी त्रासदी झेलने जा रहा है।
तब अंग्रेज कम्पनी बहादुर था, अब मोदी-मित्र कम्पनी बहादुर हैं।
लेकिन आंदोलन का हर एक किसान-मज़दूर सत्याग्रही है जो अपना अधिकार लेकर ही रहेगा।
— Rahul Gandhi (@RahulGandhi) January 3, 2021
ಒಕ್ಕೂಟ ಸರ್ಕಾರದ ಸಚಿವರು ಬುಧವಾರ ಪ್ರತಿಭಟನಾ ನಿರತ ರೈತ ಮುಖಂಡರೊಂದಿಗೆ ಆರನೇ ಸುತ್ತಿನ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರ ಅಭಿಪ್ರಾಯಗಳು ವ್ಯಕ್ತವಾಗಿದೆ.
ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಗೌರಭ್ ವಲ್ಲಭ್, ಗಡಿಯಲ್ಲಿ ರೈತರು ಹುತಾತ್ಮರಾಗುತ್ತಿದ್ದಾರೆ. ಕೊರೆಯುವ ಚಳಿಯ ಬಗ್ಗೆ ತಿಳಿದು, ರೈತರ ಬೇಡಿಕೆಗಳನ್ನು ತುರ್ತಾಗಿ ಪರಿಹರಿಸಬೇಕು ಮತ್ತು ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
“ಒಂದು ಕಡೆ, ಪ್ರತಿಭಟನಾ ನಿರತ ರೈತರ ಅವಸ್ಥೆ ಮತ್ತು ಅವರ ಬೇಡಿಕೆಗಳ ಬಗ್ಗೆ ಸಂಪೂರ್ಣ ಅಸೂಕ್ಷ್ಮತೆ ಮತ್ತೊಂದೆಡೆ ಬಿಜೆಪಿ ಸರ್ಕಾರದ ಆಪ್ತ ಸ್ನೇಹಿತರು ತಮ್ಮ ವ್ಯವಹಾರದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಬಲ್ಯವನ್ನು ವಿಸ್ತರಿಸಲು ಸಂಪೂರ್ಣ ಅನುಭೂತಿ ಮತ್ತು ಆಶೀರ್ವಾದಗಳನ್ನು ಪಡೆಯುತ್ತಿದ್ದಾರೆ” ವಲ್ಲಭ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಬಿರುಕು: ಯತ್ನಾಳ್ ವಿರುದ್ಧ ರಾಷ್ಟ್ರ ನಾಯಕರಿಗೆ ದೂರು ನೀಡಿದ ಸಿಎಂ ಬೆಂಬಲಿಗರು!
“ರೈತರು ತಮ್ಮ ಪ್ರತಿಭಟನೆಗೆ ಪ್ರತಿಯಾಗಿ ಸುಳ್ಳು ಭರವಸೆಗಳನ್ನು ಮಾತ್ರ ಪಡೆಯುತ್ತಿದ್ದಾರೆ, ಆದರೆ ಸರ್ಕಾರದ ಸ್ನೇಹಿತರು ತಮ್ಮ ಜೇಬುಗಳನ್ನು ತುಂಬಲು ಒಪ್ಪಂದಗಳ ಮೇಲೆ ಒಪ್ಪಂದಗಳನ್ನು ಪಡೆಯುತ್ತಿದ್ದಾರೆ. ರೈತರು ಪ್ರತಿಭಟನೆ ಮುಂದುವರಿಸುತ್ತಿರುವುದರ ಹೊರತಾಗಿಯೂ, ಇದೆಲ್ಲ ನಡೆಯುತ್ತಿದೆ. ಇದು ಗಂಭೀರ ಕಳವಳಕಾರಿ ಸಂಗತಿಯಾಗಿದೆ. ಸರ್ಕಾರವು ದೇಶವನ್ನು ಮರುಳು ಮಾಡುತ್ತಿದೆ” ಎಂದು ಅವರು ಹೇಳಿದರು.
ಆಹಾರ ಧಾನ್ಯವನ್ನು ಶೇಖರಿಸಿಡಲು ಅದಾನಿ ಆಗ್ರೋ ಲಾಜಿಸ್ಟಿಕ್ಸ್ ಲಿಮಿಟೆಡ್‌ಗೆ 30 ವರ್ಷಗಳ ಅವಧಿಯ ಒಪ್ಪಂದವನ್ನು ನೀಡಲಾಗಿದೆ. ಈ ಮೂಲಕ ಅವರ ಸೇವೆಗಳನ್ನು ಪಡೆಯುತ್ತೇವೆಂದು ಅವರಿಗೆ ಭರವಸೆ ನೀಡಲಾಗಿದೆ. ಆದರೆ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಭರವಸೆಯನ್ನು ಸರ್ಕಾರ ನೀಡುತ್ತಿಲ್ಲ ಎಂದು ಅವರು ಸೂಚಿಸಿದ್ದಾರೆ.
ರೈತರ ಹೋರಾಟ 37 ನೇ ದಿನಕ್ಕೆ ಕಾಲಿಟ್ಟಿದೆ. ಆರನೇ ಸುತ್ತಿನ ಮಾತುಕತೆಯಲ್ಲಿ ವಿದ್ಯುತ್ ತಿದ್ದುಪಡಿ ಕಾಯ್ದೆ ಮತ್ತು ವಾಯುಮಾಲಿನ್ಯ ಕಾಯ್ದೆಯನ್ನು ಪರಿಶೀಲನೆ ನಡೆಸಲಿದೆ ಎಂದು ಒಕ್ಕೂಟ ಸರ್ಕಾರ ಹೇಳಿದೆ. ಆದರೆ ರೈತರ ಪ್ರಮುಖ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆ ಮತ್ತು ಮೂರು ಕೃಷಿ ಕಾಯ್ದೆಗಳ ಬಗ್ಗೆ ತನ್ನ ಹಠಮಾರಿ ಧೋರಣೆಯಿಂದ ಒಕ್ಕೂಟ ಸರ್ಕಾರ ಹಿಂದೆ ಸರಿದಿಲ್ಲ. ರೈತರು ತಮ್ಮ ಪಟ್ಟನ್ನು ಬಿಗಿಗೊಳಿಸಿದ್ದು, ಕೃಷಿಕಾನೂನನ್ನು ರದ್ದುಪಡಿಸದೆ ಯಾವುದೇ ಕಾರಣಕ್ಕೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಘೋಷಿಸಿದ್ದಾರೆ. ಒಕ್ಕೂಟ ಸರ್ಕಾರ ಏಳನೇ ಸುತ್ತಿನ ಮಾತುಕತೆಗೆ ರೈತರನ್ನು ಸೋಮವಾರ ಆಹ್ವಾನಿಸಿದೆ.
ಇದನ್ನೂ ಓದಿ: ಬಿಜೆಪಿ ಮೇಲೆ ನಂಬಿಕೆಯಿಲ್ಲ, ಕೊರೊನಾ ಲಸಿಕೆ ತೆಗೆದುಕೊಳ್ಳುವುದಿಲ್ಲ: ಅಖಿಲೇಶ್ ಯಾದವ್


