Homeಕರೋನಾ ತಲ್ಲಣದಿ ಗಾರ್ಡಿಯನ್ ಸಂಪಾದಕೀಯ: ನಿಯಂತ್ರಣ ತಪ್ಪಿದ ಸಾಂಕ್ರಾಮಿಕ ನಿರ್ವಹಣೆಗೆ ಮೋದಿಯೇ ಕಾರಣ

ದಿ ಗಾರ್ಡಿಯನ್ ಸಂಪಾದಕೀಯ: ನಿಯಂತ್ರಣ ತಪ್ಪಿದ ಸಾಂಕ್ರಾಮಿಕ ನಿರ್ವಹಣೆಗೆ ಮೋದಿಯೇ ಕಾರಣ

ಭಾರತದ ಪ್ರಧಾನ ಮಂತ್ರಿಯ ಅತಿಯಾದ ಆತ್ಮವಿಶ್ವಾಸವು ದೇಶದ ವಿನಾಶಕಾರಿ ಕೋವಿಡ್ ಉಲ್ಬಣಕ್ಕೆ ಕಾರಣವಾಗಿದೆ.

- Advertisement -
- Advertisement -

ಭಾರತದಲ್ಲಿ ಎರಡನೇ ಕೋವಿಡ್ ಸಾಂಕ್ರಾಮಿಕ ಅಲೆ ಅಪ್ಪಳಿಸಿದ್ದು ದೇಶಾದ್ಯಂತ ಸಮರ್ಪಕ ವೈದ್ಯಕೀಯ ವ್ಯವಸ್ಥೆ ಇಲ್ಲದೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಕೋವಿಡ್ ಬಂದು 15 ತಿಂಗಳಾದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸಿದೆ. ಈ ಕುರಿತು ಪ್ರಸಿದ್ಧ ಪತ್ರಿಕೆ ದಿ ಗಾರ್ಡಿಯನ್‌ನ ಏಪ್ರಿಲ್ 24ರ ಸಂಪಾದಕೀಯವನ್ನು ನಾನುಗೌರಿ ಓದುಗರಿಗಾಗಿ ಅನುವಾದಿಸಿ ಪ್ರಕಟಿಸುತ್ತಿದ್ದೇವೆ.

ಅತಿಯಾದ ರಾಜಕೀಯ ಆತ್ಮವಿಶ್ವಾಸವು ಈ ವಾರ ಭಾರತದಲ್ಲಿ ಸಾಂಕ್ರಾಮಿಕದ ವಾಸ್ತವತೆಗೆ ಮುಖಾಮುಖಿಯಾಗಿದೆ. ಮಾರ್ಚ್ ಆರಂಭದಲ್ಲಿ, ನರೇಂದ್ರ ಮೋದಿಯವರ ಹಿಂದೂ ರಾಷ್ಟ್ರೀಯವಾದಿ ಸರ್ಕಾರವು ದೇಶವು ಕೋವಿಡ್‌ನ ಅಂತಿಮ ಆಟದಲ್ಲಿದೆ (‘ಎಂಡ್‌ಗೇಮ್”ನಲ್ಲಿದೆ ) ಎಂದು ಹೇಳಿಕೊಂಡಿತ್ತು. ಆದರೆ ಭಾರತ ಈಗ ಜೀವಂತ ನರಕದಲ್ಲಿದೆ.

ಬಿ 1.617 ಹೆಸರಿನ ಹೊಸ “ದ್ವಿ ರೂಪಾಂತರಿ” (double mutant) ತಳಿಯ ವಿನಾಶಕಾರಿ ಕೊರೋನಾ ವೈರಸ್ ಎರಡನೇ ಅಲೆಯಲ್ಲಿ ಈಗ ಹೊರಹೊಮ್ಮಿದೆ. ಇದರ ಪರಿಣಾಮವಾಗಿ ಆಸ್ಪತ್ರೆಗಳು ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆಯಿಂದ ಬಳಲುತ್ತಿವೆ. ಶವಾಗಾರಗಳು, ಚಿತಾಗಾರಗಳು ಮತ್ತು ಸ್ಮಶಾನಗಳು ತುಂಬಿ ತುಳುಕುತ್ತಿರುವ ಪರಿಣಾಮ ಶವಗಳು ಮನೆಯಲ್ಲಿಯೇ ಕೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸತ್ತವರನ್ನು ಬೀದಿಗಳಲ್ಲಿ ಬಿಡಲಾಗುವ ಅಪಾಯವನ್ನು ಕಂಡುಬಂದಿದೆ.

ಶುಕ್ರವಾರ ಭಾರತವು 3,32,730 ಹೊಸ ಕೋವಿಡ್‌ಸೋಂಕುಗಳನ್ನು ದಾಖಲಿಸಿದೆ, ಇದು ಸತತ ಎರಡನೇ ದಿನವೂ ವಿಶ್ವದಾದ್ಯಂತದ ಪ್ರಕರಣಗಳಲ್ಲಿ ಅತಿ ಹೆಚ್ಚಾಗಿದೆ. ಹಿಂದಿನ 24 ಗಂಟೆಗಳಲ್ಲಿ 2,200 ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ. ಬಹುಪಾಲು ದೇಶಗಳು ಭಾರತದಿಂದ ವಿಮಾನಗಳನ್ನು ನಿಷೇಧಿಸಿವೆ, ಅಲ್ಲಿಗೆ ಪ್ರಯಾಣಿಸುವುದನ್ನು ತಪ್ಪಿಸಲು ಸೂಚಿಸಿವೆ ಅಥವಾ ಸಂದರ್ಶಕರು ವಾಪಸಾಗುವುದನ್ನು ತಡೆಗಟ್ಟುವಂತೆ ಒತ್ತಾಯಿಸಿವೆ.

ಇನ್ನೂ ಆರು ವಾರಗಳ ಹಿಂದೆ, ಜನಸಂಖ್ಯೆಯ ಶೇ.1 ಜನರಿಗೂ ಸಹ ಲಸಿಕೆ ನೀಡದ ಮೋದಿ, (ಈಗ ಅದು ಶೇ. 8ಕ್ಕೆ ಏರಿದೆ) ದೇಶವು “ವಿಶ್ವದ ಔಷಧಾಲಯ” ಎಂದು ಘೋಷಿಸಿದ್ದರು. ಸಾಂಕ್ರಾಮಿಕ ಪೂರ್ವದ ಜೀವನವು ಪುನರಾರಂಭಗೊಳ್ಳಬಹುದೆಂದು ಸಂಕೇತ ನೀಡಿದ್ದರು. ಸಾವಿರಾರು ಜನರು ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಹಾಜರಾದ ನಂತರ ಮತ್ತು ಕುಂಭಮೇಳ ಉತ್ಸವದ ಸಂದರ್ಭದಲ್ಲಿ ಲಕ್ಷಾಂತರ ಹಿಂದೂಗಳು ಗಂಗೆಯಲ್ಲಿ ಸ್ನಾನ ಮಾಡಿದಾಗ ಸೂಪರ್‌ ಸ್ಪ್ರೆಡಿಂಗ್ ಸಂಭವಿಸಿತು.

ಸಾಂಕ್ರಾಮಿಕ ಉಲ್ಬಣಗೊಂಡಾಗ ಡೊನಾಲ್ಡ್ ಟ್ರಂಪ್ ಅವರಂತೆ ಶ್ರೀ ಮೋದಿ ಅವರು ಪ್ರಚಾರವನ್ನು ಬಿಡುವುದಿಲ್ಲ. ಭಾರತವು ಏಪ್ರಿಲ್‌ನಲ್ಲಿ ಐದು ರಾಜ್ಯ ಚುನಾವಣೆಗಳೊಂದಿಗೆ ಮುಂದುವರಿಯಿತು, ಮತ್ತು ಮಾಸ್ಕ್ ಇಲ್ಲದೆ ಶ್ರೀ ಡೋನಾಲ್ಡ್ ಟ್ರಂಪ್ ಅವರಂತೆಯೇ ಮೋದಿ ಕೂಡ ಚುನಾವಣಾ ರ‍್ಯಾಲಿಗಳನ್ನು ನಡೆಸಿದರು. ಏಪ್ರಿಲ್‌ನಲ್ಲಿ 4 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಚುನಾವಣೆಗಳಲ್ಲಿ ಮಾಸ್ಕ್ ಧರಿಸದ ಮೋದಿ ಬೃಹತ್ ಚುನಾವಣಾ ರ‍್ಯಾಲಿಗಳನ್ನು ನಡೆಸಿದರು. ಮೋದಿಯವರ ಭಾರತೀಯ ಅಸಾಧಾರಣವಾದದ ಬ್ರ‍್ಯಾಂಡ್ ತೃಪ್ತಿಯನ್ನು ಬೆಳೆಸಿದೆ. ರಾಷ್ಟ್ರೀಯ ಶ್ರೇಷ್ಠತೆಯ ಕಲ್ಪನೆ, ಊಹೆಯು ಸನ್ನದ್ಧತೆಯ ಕೊರತೆಗೆ ಕಾರಣವಾಗಿದೆ- ಮುಖ್ಯವಾಗಿ ಲಸಿಕೆ ಉತ್ಪಾದನೆಯಲ್ಲಿ ಇದನ್ನು ಕಾಣಬಹುದಾಗಿದೆ.

ಜಾಗತಿಕ ಔಷಧ ತಯಾರಿಕೆಯಲ್ಲಿ ಭಾರತವು ಮುನ್ನೆಲೆಯಲ್ಲಿ ಇರಲು ಪಶ್ಚಿಮವು ಪ್ರೋತ್ಸಾಹಿಸಿತ್ತು, ಆದರೆ ಈ ವಾರ ಜರ್ಮನಿಯ ಚಾನ್ಸೆಲ್ಲರ್ ಏಂಜೆಲಾ ಮರ್ಕೆಲ್ ಇದು ಒಂದು ತಪ್ಪು ನಿರ್ಧಾರವಾಗಿತ್ತೇನೋ ಎಂದಿದ್ದಾರೆ. ಚೀನಾ ಮತ್ತು ಅಮೆರಿಕ ಈಗ ಭಾರತಕ್ಕಿಂತ ಹೆಚ್ಚು ಕೋವಿಡ್ -19 ಲಸಿಕೆಗಳನ್ನು ತಯಾರಿಸುತ್ತಿವೆ, ರಫ್ತು ನಿಯಂತ್ರಣವನ್ನು ಸರಾಗಗೊಳಿಸುವಂತೆ ವಾಷಿಂಗ್ಟನ್‌ಗೆ ಇನ್ನೂ ಮನವರಿಕೆ ಮಾಡಲಾಗದ ಮೋದಿ ಸರ್ಕಾರವು, ಅನಿವಾರ್ಯದಲ್ಲಿ ರಷ್ಯಾದಿಂದ ಲಸಿಕೆಗಳನ್ನು ಆಮದು ಮಾಡಿಕೊಳ್ಳುವ ಒತ್ತಡಕ್ಕೆ ಸಿಲುಕಬೇಕಾಗಿತು.

ಭಾರತದ ಪ್ರಧಾನ ಮಂತ್ರಿ ತಮ್ಮ ಪ್ರವೃತ್ತಿಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಬಳಲುತ್ತಿದ್ದಾರೆ ಮತ್ತು ಪೂಹ್-ಪೂಹ್ (ಹೊಗಳುಭಟ್ಟ) ತಜ್ಞರ ಸಲಹೆಗಳನ್ನು ಆಶ್ರಯಿಸಿದ್ದಾರೆ. ಈ ವಾರ ಕೋವಿಡ್ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗುವ ಮುನ್ನ ಸರ್ಕಾರಕ್ಕೆ ಸಲಹೆ ನೀಡುವ ‘ಧೈರ್ಯ’ ಮಾಡಿದ ಕಾರಣಕ್ಕೆ ಮೋದಿಯವರ ಸಚಿವರು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮೇಲೆ ಮುಗಿಬಿದ್ದಿದ್ದರು.

ಕಳೆದ ವರ್ಷ, ಮೋದಿ ಭಾರತದ ಶತಕೋಟಿ ಜನರ ಮೇಲೆ ಹಠಾತ್ ಲಾಕ್‌ಡೌನ್ ಹೇರಿದರು. ಪೂರ್ವ ಸೂಚನೆಗಳನ್ನೂ ನೀಡದೇ ಹೀಗೆ ದೇಶವನ್ನು ಸ್ಥಗಿತಗೊಳಿಸಿದ್ದು ದೇಶದ ಉನ್ನತ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಸಲಹೆಗೆ ವಿರುದ್ಧವಾಗಿತ್ತು. ಆದರೆ ಮೋದಿಯವರ ನಾಟಕೀಯ ಸನ್ನೆಗಳ ಅಭಿರುಚಿಗೆ ಅದು ಸರಿಹೊಂದಿತ್ತು. ಹೆಚ್ಚಿನ ಪ್ರಮಾಣದ ಯುವ ಜನಸಂಖ್ಯೆಯ ಕಾರಣಕ್ಕೆ ಕೋವಿಡ್ -19 ಕಾರಣಕ್ಕೆ ಮರಣ ಹೊಂದಿದ ಭಾರತೀಯರ ಪ್ರಮಾಣವು ಇತರ ದೇಶಗಳಿಗಿಂತ ಕಡಿಮೆ ಇದೆ.. ಕೋವಿಡ್ ಸಾವುಗಳ ಸಂಖ್ಯೆಯನ್ನು ಕಡಿಮೆ ತೋರಿಸಿದ ಅನುಮಾನಗಳು ಇದ್ದರೂ, ಭಾರತೀಯರು ವೈರಸ್‌ನಿಂದ ಹೆಚ್ಚು ರೋಗನಿರೋಧಕರಾಗಿದ್ದಾರೆ ಎಂಬ ಆಧಾರರಹಿತ ಪ್ರಜ್ಞೆ ಹರಡಿತು. ಮೋದಿಯವರು ಅದನ್ನು ಪ್ರಶ್ನಿಸಲಿಲ್ಲ.

ಮೊದಲ ಅಲೆಯಲ್ಲಿ ಕೋವಿಡ್ ಭಾರತದ ನಗರಗಳ ಮೇಲೆ ದಾಳಿ ನಡೆಸಿತು. ಆದರೆ ಈಗ ಅದು ದೇಶದ ಬಹುಪಾಲು ಜನರು ವಾಸಿಸುವ ಗ್ರಾಮೀಣ ಪ್ರದೇಶಗಳಿಗೆ ಚಲಿಸುತ್ತಿದೆ. ಅನೇಕ ದೇಶಗಳು ಕಠಿಣವಾಗಿ ಅನುಭವಿಸಿದಂತೆ, ಭಾರತದ ಸಾವಿನ ಸಂಖ್ಯೆ ಹೆಚ್ಚಳವನ್ನು ತಪ್ಪಿಸಬಹುದಿತ್ತು. ಆದರೆ ಈಗಿನ ದುರಂತ ಸೊಕ್ಕಿನ ಮತ್ತು ಅಸಮರ್ಥ ಸರ್ಕಾರದ ಫಲಿತಾಂಶವಾಗಿದೆ. ಭಾರತವು ಒಂದು ದೊಡ್ಡ, ಸಂಕೀರ್ಣ ಮತ್ತು ವೈವಿಧ್ಯಮಯ ದೇಶವಾಗಿದ್ದು, ಸಾಮಾನ್ಯ ದಿನಗಳಲ್ಲೇ ಆಡಳಿತ ನಡೆಸುವುದು ಕಷ್ಟಕರ. ಈಗ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅದು ಇನ್ನೂ ಸವಾಲಿನದ್ದು. ಈಗ ಭಾರತವು ಒಂದೇ ಹೊತ್ತಿಗೆ ಕೊರೋನಾ ವೈರಸ್ ಮತ್ತು ಭಯದ ನೆರಳಲ್ಲಿ ಬದುಕುತ್ತಿದೆ. ಜೈವಿಕ ಮತ್ತು ಸಾಮಾಜಿಕ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಜನರ ಭೀತಿಯನ್ನು ತಗ್ಗಿಸಲು ವಿಶ್ವಾಸಾರ್ಹ ಧೈರ್ಯ ಬೇಕು. ಜನರು ಮಾಸ್ಕ್ ಧರಿಸುವ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಮೋದಿಯವರು ತಾವು ನಿರ್ಮಿಸಿದ ಅವ್ಯವಸ್ಥೆಯನ್ನು ನಿವಾರಿಸಲು ರಾಜ್ಯ ಸರ್ಕಾರಗಳ ಮೇಲೆ ಹೊಣೆ ಹಾಕಿದ್ದಾರೆ. ಅಗಾಧವಾದ ಆರ್ಥಿಕ ಸಂಕಷ್ಟಗಳಿಗೆ ಕಾರಣವಾದ ತಪ್ಪುಗಳನ್ನು ಮೋದಿ ಒಪ್ಪಿಕೊಳ್ಳಬೇಕು ಮತ್ತು ಈಗ ಆ ತಪ್ಪುಗಳನ್ನು ತಿದ್ದುಪಡಿ ಮಾಡಲು ಯತ್ನಿಸಬೇಕು. ನಿರ್ಬಂಧಗಳನ್ನು ಹೇಗೆ ಎತ್ತಿಹಿಡಿಯುವುದು ಎಂಬುದರ ಕುರಿತು ಅವರು ತಜ್ಞರೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳಬೇಕು; ಸರ್ಕಾರಿ ವಿತರಣೆ ಜನರನ್ನು ತಲುಪುವಂತೆ ಮಾಡುವ ವಿಧಾನವನ್ನು ಚರ್ಚಿಸಿ ಕಾರ್ಯರೂಪಕ್ಕೆ ತರಬೇಕು. ಏಕತೆ ಅಗತ್ಯವಿರುವ ಈ ಕ್ಲಿಷ್ಟಕರ ಸಂದರ್ಭದಲ್ಲಿ ವಿಭಜಿಸುವ ಪಂಥೀಯ ಸಿದ್ಧಾಂತವನ್ನು ಕೈ ಬಿಡಬೇಕು. ವಿನಾಶಕಾರಿ ಸಾರ್ವಜನಿಕ ಆರೋಗ್ಯ ಫಲಿತಾಂಶಕ್ಕೆ ಕಾರಣವಾದ ಅಸಾಧಾರಣವಾದಿ ದೃಷ್ಟಿಕೋನಗಳೊಂದಿಗೆ ಮುಂದುವರಿದರೆ ಭವಿಷ್ಯದ ಇತಿಹಾಸಕಾರರು ಮೋದಿಯನ್ನು ಕಠಿಣವಾಗಿ ಖಂಡಿಸುತ್ತಾರೆ.


ಇದನ್ನೂ ಓದಿ: ಒಂದು ಬ್ಯಾಕ್ಟೀರಿಯಾ ಭಾರತೀಯರನ್ನು ರಾಜಕೀಯಗೊಳಿಸಿತು, ಒಂದು ವೈರಸ್ ಮೋದಿಯಿಂದ ರಾಜಕೀಯ ಬೆಲೆ ಬೇಡುತ್ತಿದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ಪೂಹ್-ಪೂಹ್ ರೋಗಿ ಇಡೀ ಭಾರತವನ್ನು ವಿನಾಶದ ಅಂಚಿಗೆ ತಳ್ಳುವ ವರೆಗೆ ನಿಲ್ಲುವುದಿಲ್ಲ.

LEAVE A REPLY

Please enter your comment!
Please enter your name here

- Advertisment -

Must Read

ಸ್ವಪಕ್ಷದ ಅಭ್ಯರ್ಥಿ ವಿರುದ್ದ ಪುತ್ರನನ್ನು ಕಣಕ್ಕಿಳಿಸಿದ ಬಿಜೆಪಿ ಶಾಸಕ

0
ಫತೇಪುರ್ ಸಿಕ್ರಿ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದ್ದು , ಪಕ್ಷದ ಸ್ಥಳೀಯ ಶಾಸಕ ಬಾಬುಲಾಲ್ ಚೌಧರಿ ಅವರು ಪಕ್ಷದ ಅಭ್ಯರ್ಥಿ ಮತ್ತು ಹಾಲಿ ಸಂಸದ ರಾಜ್‌ಕುಮಾರ್ ಚಹಾರ್...