ಬೆಂಗಳೂರು: ಹವ್ಯಕ ಸಮುದಾಯವು ಸಾಕಷ್ಟು ಅಳಿವಿನ ಹಂಚಿನಲ್ಲಿದೆ. ಇದು ತನ್ನ ಉಳಿವಿಗಾಗಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಅಗತ್ಯವಿದೆ. ಎರಡರ ನಂತರದ ಮಕ್ಕಳ ಜವಾಬ್ದಾರಿಯನ್ನು ನಮ್ಮ ಮಠ ವಹಿಸಿಕೊಳ್ಳಲಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಈ ಹಿಂದೆ ಕಂಚಿ ಪರಮಾಚಾರ್ಯರು ಹವ್ಯಕರು ಹೆಚ್ಚಿನ ಮಕ್ಕಳನ್ನು ಹೊಂದಿದವರಿಗೆ ‘ವೀರ ಮಾತಾ’ ಎಂಬ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದರು. ನಾವು ಈಗ ಮೂರು ಮಕ್ಕಳನ್ನು ಹೊಂದಿದವರನ್ನು ಸನ್ಮಾನಿಸುತ್ತೇವೆ ಎಂದರು.
ಹೆತ್ತವರಿಗೆ ಮೂರನೇ ಹಾಗೂ ಅದಕ್ಕಿಂತ ಹೆಚ್ಚಿನ ಮಕ್ಕಳು ಬೇಡವಾದರೆ, ಮಕ್ಕಳನ್ನು ಹೆತ್ತು ಮಠಕ್ಕೆ ನೀಡಬಹುದಾಗಿದೆ. ಮಠವೇ ಅವರ ವಿದ್ಯಾಭ್ಯಾಸ ಮತ್ತು ಉದ್ಯೋಗದ ಜವಾಬ್ದಾರಿ ಹೊರಲಿದೆ ಎಂದು ಹೇಳಿದರು.
ಹವ್ಯಕ ಸಮುದಾಯದವರಲ್ಲಿ ಮದುವೆ, ಮಕ್ಕಳು ಬೇಡ ಎನ್ನುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಮಕ್ಕಳೆಂದರೇ ಖುಷಿ, ದೇವರು ಎಂಬ ಭಾವನೆ, ಈಗ ಹೊರೆ ಎಂಬಂತಾಗಿದೆ. ಎರಡು ಮಕ್ಕಳನ್ನು ಹೊಂದಿದರೂ ಸಮಾಜವನ್ನು ಸರಿತೂಗಿಸಲು ಸಾಧ್ಯವಿಲ್ಲ. ಮಕ್ಕಳು ಸಂಪತ್ತು ಅನ್ನುವುದನ್ನು ಅರಿತುಕೊಳ್ಳಬೇಕು. ಹಿಂದೆ ಅಪರೂಪದ ಭಾರತದ ಗೋ ತಳಿ ಉಳಿಸುವ ಅಭಿಯಾನ ಮಾಡಲಾಗಿತ್ತು. ಈಗ ಅಪರೂಪದ ಹವ್ಯಕ ತಳಿ ಉಳಿಸುವ ಅಭಿಯಾನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಮ್ಮೇಳನದ ಗೌರವಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಉಪಸ್ಥಿತರಿದ್ದರು.


