ದೇಶದಲ್ಲಿ ಉದ್ಭವಿಸಿರುವ ಕೋವಿಡ್ ಬಿಕ್ಕಟ್ಟಿಗೆ ಮೋದಿ ಸರ್ಕಾರದ ಅಸಮರ್ಥತೆ ಮತ್ತು ನಿರ್ಲಕ್ಷ್ಯವೇ ಕಾರಣ ಎಂದು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್‌ರವರ ಪತಿ ಡಾ. ಪರಕಾಲ ಪ್ರಭಾಕರ್ ಆರೋಪಿಸಿದ್ದಾರೆ. ‘ಮಿಡ್‌ವೀಕ್ ಮ್ಯಾಟರ್ಸ್’ ಎಂಬ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಮಾತನಾಡಿರುವ ಅವರು ಕೇಂದ್ರ ಸರ್ಕಾರದ ಕೋವಿಡ್ ನಿರ್ವಹಣೆಯನ್ನು ಟೀಕಿಸಿದ್ದಾರೆ.
ಈ ಸರ್ಕಾರದ ಅಸಮರ್ಥತೆ, ಅನುಚಿತತೆ, ಹೃದಯಹೀನತೆ ಮತ್ತು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಧಾನ ಮಂತ್ರಿ ಮೋದಿಯ ಜನಪ್ರಿಯತೆ, ರಾಜಕೀಯ ಬಂಡವಾಳ ಮತ್ತು ಸಂವಹನ ಕೌಶಲ್ಯಗಳು ಕಾರಣವಾಗಿವೆ. ಆಡಳಿತ ಪಕ್ಷವು ಈಗ ಕೋವಿಡ್ ಕಾರಣಕ್ಕೆ ಎದ್ದಿರುವ ಆಕ್ರೋಶ ನಿರ್ವಹಣೆಯಲ್ಲಿ ಪ್ರವೀಣವಾಗಿದೆ. ಪಾರದರ್ಶಕ ಆಡಳಿತ ನೀಡುವಲ್ಲಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಮೊದಲ ಅಲೆಗೆ ದೇಶದ ಬಹಳಷ್ಟು ಜನ ತಮ್ಮ ಜೀವನೋಪಾಯ ಮತ್ತು ಆದಾಯವನ್ನು ಕಳೆದುಕೊಂಡಿದ್ದಾರೆ. ಬಹಳಷ್ಟು ಜನ ಭಯಭೀತರಾಗಿದ್ದಾರೆ. ಹೆಚ್ಚಿನವರು ತಮ್ಮ ಆರ್ಥಿಕ ನಷ್ಟದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಏಕೆಂದರೆ, ಅನೇಕರಿಗೆ ತಮ್ಮ ಉದ್ಯೋಗಗಳು ಮರಳಿ ಸಿಕ್ಕಿಲ್ಲ. ಸರ್ಕಾರದ ಯಾವುದೇ ಯೋಜನೆಗಳು ಅವರ ಸಹಾಯಕ್ಕೆ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಎರಡನೇ ಅಲೆ ಬಂದಿದೆ. ಇದು ತಿವ್ರ ಬಿಕ್ಕಟ್ಟು. ಆರೋಗ್ಯ ತುರ್ತು ಮತ್ತು ಯಾವುದಕ್ಕೂ ಕಡಿಮೆ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಪ್ರಕರಣಗಳ ತೀವ್ರ ಏರುವಿಕೆಯನ್ನು ನೀವೆಲ್ಲ ಗಮನಿಸಿದ್ದೀರಿ. ಆದರೆ ನೈಜ ಪ್ರಕರಣಗಳಿಗಿಂತ ಕಡಿಮೆ ವರದಿ ಮಾಡಲಾಗುತ್ತಿದೆ, ಸಾವುಗಳನ್ನು ಸಹ ಕಡಿಮೆ ತೋರಿಸಲಾಗುತ್ತಿದೆ. ಆಸ್ಪತ್ರೆಗಳ ಉಸ್ತುವಾರಿ ವೈದ್ಯರು ಪರಿಸ್ಥಿತಿ ಹೆಚ್ಚು ಗಂಭೀರವಾಗಿದೆ ಎಂದು ಖಾಸಗಿಯಾಗಿ ಹೇಳುತ್ತಾರೆ. ಸಮರ್ಪಕ ಪರೀಕ್ಷೆ ಮಾಡುವ ಸಾಮರ್ಥ್ಯವೂ ನಮಗಿಲ್ಲ. ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆಕ್ಸಿಜನ ಮತ್ತು ಔಷಧ ಸಿಗದೆ ಒದ್ದಾಡುತ್ತಿರುವ ದೃಶ್ಯಗಳು ನಮ್ಮನ್ನು ಉಸಿರುಗಟ್ಟಿಸುತ್ತಿವೆ. ಆದರೆ ನಮ್ಮ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಈ ಸಂಕಟವನ್ನು ಗಮನಿಸುವುದಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
ನಮ್ಮ ರಾಜಕೀಯ ನಾಯಕರಿಗೆ ಚುನಾವಣೆ ಮುಖ್ಯ. ಧಾರ್ಮಿಕ ಮುಖಂಡರಿಗೆ ಅವರ ಆಚರಣೆಗಳು ಮುಖ್ಯವಾಗಿದೆ. ಅವರ್ಯಾರಿಗೂ ಸಾರ್ವಜನಿಕ ಆರೋಗ್ಯ, ಜನರ ಜೀವನ ಅಷ್ಟೇನೂ ಮುಖ್ಯವಲ್ಲ. ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಯಾವುದೇ ಮಾರ್ಗಸೂಚಿಗಳನ್ನು ಪಾಲಿಸದೇ ಬೃಹತ್ ಚುನಾವಣಾ ರ್ಯಾಲಿಗಳನ್ನು ನಡೆಸುತ್ತಾರೆ. ಕುಂಭಮೇಳದಲ್ಲಿ ಲಕ್ಷಾಂತರ ಜನ ಸೇರಿ ಶಾಹಿ ಸ್ನಾನ ಮಾಡುತ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತ್ರ ತಮ್ಮ ರ್ಯಾಲಿಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರೆ, ಉಳಿದವರು ಚುನಾವಣಾ ರ್ಯಾಲಿ ನಡೆಸಿದರು. ಬಿಕ್ಕಟ್ಟಿನ ಸಮಯದಲ್ಲಿಯೂ ಚುನಾವಣಾ ರ್ಯಾಲಿಗಳು ಮತ್ತು ಕುಂಭಮೇಳವನ್ನು ಸಮರ್ಥಿಸುವ ತಜ್ಞರು, ವಿಶ್ಲೇಷಕರು ಮತ್ತು ರಾಜಕೀಯ ನಾಯಕರು ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೆಲ್ಲಾ ನೋಡುತ್ತಿರುವಾಗ ಕೋಪ, ಬೇಸರ, ಅಸಹ್ಯ ಎನಿಸುತ್ತದೆ. ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ನಮ್ಮಲ್ಲಿ ಒಟ್ಟು ಜನಸಂಖ್ಯೆಗನುಗುಣವಾಗಿ ಸೋಂಕು ಕಡಿಮೆ, ಪ್ರತಿ ಮಿಲಿಯನ್‌ಗೆ ಸಾವು ಕಡಿಮೆ ಎಂದು ಸಮರ್ಥಿಸಿಕೊಳ್ಳುವವರು ಇದ್ದಾರೆ. ಅವರು ಹೃದಯಹೀನ, ಅರ್ಥಹೀನ, ಆಯ್ದ ಹೋಲಿಕೆಗಳಲ್ಲಿ ಮುಳುಗಿದ್ದಾರೆ ಎಂದು ಕಿಡಿಕಾರಿದ್ದಾರೆ. ನಿಮ್ಮ ಈ ಹೋಲಿಕೆಯು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಮತ್ತು ಅಪಾಯದಲ್ಲಿರುವವರಿಗೆ ಏನೂ ಅಲ್ಲ ಎಂಬುದನ್ನು ಮರೆಯಬೇಡಿ ಎಂದಿದ್ದಾರೆ.
ನಮ್ಮ ದೇಶದಲ್ಲಿ ಮಕ್ಕಳು ಮತ್ತು ಗರ್ಭಿಣಿಯರನ್ನು ಹೊರತುಪಡಿಸಿ ಸುಮಾರು 70 ಕೋಟಿ ಜನರಿಗೆ ಲಸಿಕೆ ಹಾಕಬೇಕಿದೆ. ಅಂದರೆ 140 ಕೋಟಿ ಲಸಿಕೆಗಳು ಬೇಕಾಗಿವೆ. ಇದೆಲ್ಲದಕ್ಕೂ ನಾವು ಸಿದ್ದರಾಗಿದ್ದೇವೆಯೇ? ಸಿದ್ಧತೆಯ ಬಗ್ಗೆ ಏನೇ ಕೇಳಿದರೂ ಉತ್ತರಿಸುವ ಮನಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇಲ್ಲ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಜವಾಬ್ದಾರಿಯುತ ಮತ್ತು ರಚನಾತ್ಮಕ ಸಲಹೆಗಳಿಗೆ ಕೇಂದ್ರ ಆರೋಗ್ಯ ಸಚಿವರು ನೀಡಿದ ಅನೈತಿಕ ಮತ್ತು ಬೆರಗುಗೊಳಿಸುವ ಪ್ರತಿಕ್ರಿಯೆ ಸರ್ಕಾರವು ತಾನು ಜನರಿಂದ ಎಷ್ಟು ದೂರವಿದ್ದೇವೆ ಎಂಬುದನ್ನು ತಿಳಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಕಳೆದ ವರ್ಷ ಲಾಕ್‌ಡೌನ್ ಹೇರಿದಾಗ ದೇಶಾದ್ಯಂತ ವಲಸೆ ಕಾರ್ಮಿಕರ ಸುದೀರ್ಘ ಮೆರವಣಿಗೆಗಳು ಆಡಳಿತದ ಹೃದಯಹೀನತೆಯನ್ನು ಬಹಿರಂಗಪಡಿಸಿದವು. ಲಾಕ್‌ಡೌನ್ ಕೊರೊನಾ ತಡೆಯುವುದಲ್ಲ. ಅದು ಹರಡುವಿಕೆಯನ್ನು ಕಡಿಮೆ ಮಾಡುತ್ತದೆ. ಆದರೆ ಈ ಅವಧಿಯಲ್ಲಿ ಭಾರತ ಸರ್ಕಾರ ಎಷ್ಟು ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಿತು? ಎಷ್ಟು ಆಸ್ಪತ್ರೆಗಳನ್ನು, ವೆಂಟಿಲೇಟರ್ ಬೆಡ್‌ಗಳನ್ನು ನಿರ್ಮಿಸಿತು? ಅದರ ಬದಲು ನಮ್ಮ ಸರ್ಕಾರ ಚಪ್ಪಾಳೆ ಮತ್ತು ದೀಪ ಹಚ್ಚುವಲ್ಲಿ ನಿರತವಾಗಿತ್ತು ಎಂದು ಕಿಡಿಕಾರಿದ್ದಾರೆ.
ಸರ್ಕಾರದ ಆರ್ಥಿಕ ಪ್ಯಾಕೇಜ್‌ನಿಂದ ದುರ್ಬಲ ವರ್ಗಗಳಿಗೆ ಯಾವುದೇ ಗಣನೀಯ ಸಹಾಯವಾಗಿಲ್ಲ. ಸರ್ಕಾರವು ಆಕರ್ಷಕ ಹೆಡ್ಡಿಂಗ್ ಕೊಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿತ್ತು. ಇದು ಅಸಹಾಯಕ ರಾಷ್ಟ್ರದ ಮೇಲೆ ನಕಲಿ ಪ್ರಚೋದನೆಯನ್ನು ಉಂಟುಮಾಡಿತು. ಬೇಡಿಕೆಯ ಭಾಗವನ್ನು ಬಿಡಿ, ಸರಬರಾಜು ಭಾಗವನ್ನು ಸಹ ಪರಿಹರಿಸಲು ಇದು ಅಸಮರ್ಪಕವಾಗಿದೆ ಎಂದು ಅವರು ಮೋದಿಯವರ 20 ಲಕ್ಷಗಳ ಪ್ಯಾಕೇಜ್ ಅನ್ನು ಟೀಕಿಸಿದ್ದಾರೆ.
ಪ್ರಧಾನಿಯವರು ಮಾತಿನ ವೈಖರಿ, ಚಾಣಾಕ್ಷತನಗಳ ಮೂಲಕ ಜವಾಬ್ದಾರಿಯಿಂದ ನುಣುಸಿಕೊಳ್ಳುವ ಪ್ರಾವಿಣ್ಯತೆ ಪಡೆದುಕೊಂಡಿದ್ದಾರೆ. ಆದರೆ ಮಾನವೀಯ ಮತ್ತು ಸಹಾನುಭೂತಿಯ ಆಡಳಿತ, ಪಾರದರ್ಶಕತೆ, ಹೊಣೆಗಾರಿಕೆ, ಅನುಭೂತಿ ಮಾತ್ರವೇ ಉಳಿಯುತ್ತವೆ. ಇವು ಮಾತ್ರ ರಾಷ್ಟ್ರದ ಇತಿಹಾಸದಲ್ಲಿ ನಾಯಕರಿಗೆ ಸುರಕ್ಷಿತ ಮತ್ತು ಗೌರವಾನ್ವಿತ ಸ್ಥಾನವನ್ನು ಗಳಿಸಬಹುದು. ಪ್ರಧಾನಮಂತ್ರಿಯವರು ಈಗಲಾದರೂ ಸೂಕ್ತ ಮಾರ್ಗದಲ್ಲಿ ಆಡಳಿತ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅವರ ವಿಡಿಯೋ ನೋಡಿ
ಇದನ್ನೂ ಓದಿ: ದಿ ಗಾರ್ಡಿಯನ್ ಸಂಪಾದಕೀಯ: ನಿಯಂತ್ರಣ ತಪ್ಪಿದ ಸಾಂಕ್ರಾಮಿಕ ನಿರ್ವಹಣೆಗೆ ಮೋದಿಯೇ ಕಾರಣ


