ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ)ದಿಂದ ಬಂಧಿಸಲ್ಪಟ್ಟ ಇಬ್ಬರ ವಿರುದ್ಧದ ಆರೋಪಗಳನ್ನು ಸೋಮವಾರ ಖುಲಾಸೆಗೊಳಿಸಿರುವ ಮುಂಬೈ ವಿಶೇಷ ನ್ಯಾಯಾಲಯವು, ಜಾರಿ ನಿರ್ದೇಶನಾಲಯವನ್ನು “ಸೇಡಿನ ದೂರುದಾರ” ಎಂದು ಕರೆದಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಓಂಕಾರ್ ರಿಯಲ್ಟರ್ಸ್ ಗ್ರೂಪ್ ಪ್ರವರ್ತಕರಾದ ಬಾಬುಲಾಲ್ ವರ್ಮಾ ಮತ್ತು ಕಮಲ್ ಕಿಶೋರ್ ಗುಪ್ತಾ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ನಿಗದಿತ ಅಪರಾಧ ಇಲ್ಲದೆ ವಿಚಾರಣೆಯನ್ನು ಮುಂದುವರಿಸಲು ಸಾಧ್ಯವಿಲ್ಲ, ಹಾಗೆ ಮಾಡುವುದು ವ್ಯರ್ಥ ಕೆಲಸವಲ್ಲದೆ ಬೇರೇನೂ ಅಲ್ಲ ಎಂದು ಕೋರ್ಟ್ ಹೇಳಿದೆ. ನ್ಯಾಯಾಲಯವು ಈ ಹಿಂದೆ ಆಗಸ್ಟ್ 8 ರಂದು ಇದೇ ಆಧಾರದ ಮೇಲೆ ಅವರಿಗೆ ಜಾಮೀನು ನೀಡಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮೋಸದ ಆದಾಯದ ಆರೋಪಗಳ ತನಿಖೆಗೆ ಮಾತ್ರ ಕಾಯಿದೆಯಡಿಯಲ್ಲಿ ಜಾರಿ ನಿರ್ದೇಶನಾಲಯವು ದೂರು ದಾಖಲಿಸಬಹುದು. ಆದಾಗ್ಯೂ, ಈ ಆದಾಯವನ್ನು ವ್ಯಕ್ತಿಯು ಮಾಡಿದ ಪ್ರತ್ಯೇಕ ಕ್ರಿಮಿನಲ್ ಅಪರಾಧಕ್ಕೆ (ನಿಗದಿತ ಅಪರಾಧ) ಲಿಂಕ್ ಮಾಡಬೇಕು ಎಂದು ಹೇಳಿದೆ.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಗೆ ಇಡಿ ಸಮನ್ಸ್: ‘ಮೋದಿಶಾಹಿ’ ಅಧೋಗತಿಗೆ ತಲುಪುತ್ತಿದೆ ಎಂದ ಕಾಂಗ್ರೆಸ್
“ಇತ್ತೀಚಿನ ಕಾನೂನನ್ನು ಕಡೆಗಣಿಸಿ, ನ್ಯಾಯಾಂಗ ಬಂಧನವನ್ನು ಮುಂದುವರಿಸುವ ಮೂಲಕ ಆರೋಪಿಗಳನ್ನು ಅವಮಾನಿಸಲು ಇಡಿ [ಜಾರಿ ನಿರ್ದೇಶನಾಲಯ] ಯಂತಹ ‘ಸೇಡಿನ ದೂರುದಾರ’ರೊಂದಿಗೆ ಕೈಜೋಡಿಸಲು ಸಾಧ್ಯವಿಲ್ಲ ಎಂದು ಈ ನ್ಯಾಯಾಲಯವು ತೀವ್ರವಾಗಿ ಭಾವಿಸುತ್ತದೆ” ಎಂದು ವಿಶೇಷ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಹೇಳಿದ್ದಾರೆ.
ಮುಂಬೈ ರಿಯಲ್ ಎಸ್ಟೇಟ್ ಗ್ರೂಪ್‌ಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಮಾ ಮತ್ತು ಗುಪ್ತಾ ಅವರನ್ನು ಜನವರಿ 2021 ರಲ್ಲಿ ಬಂಧಿಸಲಾಗಿತ್ತು. ಜಿಮ್ಖಾನಾ ಮತ್ತು ಅದರ ನಿರ್ದೇಶಕರನ್ನು ವಂಚಿಸಿದ ಆರೋಪದ ಮೇಲೆ 2020 ರಲ್ಲಿ ಔರಂಗಾಬಾದ್‌ನಲ್ಲಿ ದಾಖಲಾದ ಎಫ್‌ಐಆರ್ ಅನ್ನು ಆಧರಿಸಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಕ್ರಮ ಕೈಗೊಂಡಿತ್ತು.
ಔರಂಗಾಬಾದ್ ಪೊಲೀಸರು ಪ್ರಕರಣದ ಮುಕ್ತಾಯ ವರದಿಯನ್ನು ಸಲ್ಲಿಸಿದ್ದು, ಇಬ್ಬರ ವಿರುದ್ಧ ಆರೋಪ ಹೊರಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ತಿಳಿಸಿದ್ದಾರೆ. ಫೆಬ್ರವರಿ 2021 ರಲ್ಲಿ, ನಗರದ ಸ್ಥಳೀಯ ನ್ಯಾಯಾಲಯವು ವರದಿಯನ್ನು ಗಮನಕ್ಕೆ ತೆಗೆದುಕೊಂಡು ತನಿಖೆಯ ಮುಕ್ತಾಯವನ್ನು ಒಪ್ಪಿಕೊಂಡಿತ್ತು.
ಇದನ್ನೂ ಓದಿ: ಯಂಗ್ ಇಂಡಿಯನ್ ಕಚೇರಿಗೆ ಇಡಿ ಸೀಲ್: ‘ನೀವು ಏನು ಬೇಕಾದರೂ ಮಾಡಿ; ಮೋದಿಗೆ ಹೆದರುವುದಿಲ್ಲ’ ಎಂದ ರಾಹುಲ್ ಗಾಂಧಿ
ಆದಾಗ್ಯೂ, ವರ್ಮಾ ಮತ್ತು ಗುಪ್ತಾ ಅವರ ನ್ಯಾಯಾಂಗ ಬಂಧನವನ್ನು ಕಾಲಕಾಲಕ್ಕೆ ವಿಸ್ತರಿಸಲಾಗಿತ್ತಯ. ಕಳೆದ ತಿಂಗಳ ಆರಂಭದಲ್ಲಿ ಅವರು ನ್ಯಾಯಾಂಗ ಬಂಧನದ ವಿಸ್ತರಣೆಯನ್ನು ವಿರೋಧಿಸಿ ವಿಶೇಷ ನ್ಯಾಯಾಲಯಕ್ಕೆ ತೆರಳಿದ್ದರು. ಸೋಮವಾರದ ವಿಚಾರಣೆಯ ಸಂದರ್ಭದಲ್ಲಿ, ಜಾರಿ ನಿರ್ದೇಶನಾಲಯವು ‘ವಿಲಕ್ಷಣ ಮತ್ತು ವಿಚಿತ್ರವಾಗಿ’ ಕಸ್ಟಡಿ ವಿಸ್ತರಣೆಯನ್ನು ಕೋರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.


